Archive for July 3rd, 2008
ಬೀಡಿ ಬಂಡಲ್ಲಿನ ಶ್ಯಾಮ ಮತ್ತೆ ಸಿಕ್ಕಿದ್ದ!
ಅವನು ಮತ್ತೆ ಸಿಕ್ಕಿದ್ದ. ಏಳು ವರ್ಷಗಳ ಬಳಿಕ.
ಇವತ್ತು ಮೈಸೂರಿನಲ್ಲಿ ಬಂದ್ ಬಿಸಿ ನಿಧಾನವಾಗಿ ಏರುತ್ತಿತ್ತು.ಬಸ್ಸುಗಳು ಒಂದೊಂದಾಗಿ ನಿಲ್ದಾಣದಲ್ಲಿ ನಿಲ್ಲಲು ಶುರು ಮಾಡಿದ್ದವು. ಇಂತಹ ಇಕ್ಕಟ್ಟಿನಲ್ಲಿ ಆಫೀಸಿಗೆ ಹೋಗುವುದು ಹ್ಯಾಗಪ್ಪ ಅಂತ ಯೋಚಿಸುತ್ತಾ ನಿಂತಿರುವಾಗ, ಯಾರೋ ಹೆಗಲ ಮೇಲೆ ಕೈ ಹಾಕಿದಂತಾಗಿ ಹಿಂದಕ್ಕೆ ತಿರುಗಿದೆ. ನನ್ನ ವಯಸ್ಸಿನವನೇ ಆದ ಹುಡುಗ ನಗುತ್ತಾ ನಿಂತಿದ್ದ. ಚೆನ್ನಾಗಿ ಪರಿಚಯವೇ ಇರುವ ಮುಖ. ಆದರೂ ಅವನ ನೆನೆಪಾಗುತ್ತಿಲ್ಲ. ಹೀಗೆ ಯೋಚಿಸುತ್ತಲೇ ನಾನು ಪೇಚಿಗೆ ಸಿಲುಕಿದ್ದೆ. ಅವನು ಮತ್ತೊಮ್ಮೆ ನಕ್ಕ. ಗುರುತು ಸಿಕ್ಕಲಿಲ್ಲವಾ ಗುರು ಅಂದ. ನಾನು ಮತ್ತೇನನ್ನೂ ಹೇಳಬೇಕು, ಅಷ್ಟರಲ್ಲೆ ‘ನಾನು ಶ್ಯಾಮ’ ಅಂದ!
ಶ್ಯಾಮ…ಆರೇಳು ವರ್ಷಗಳ ಹಿಂದೆ ನನಗೆ ಮತ್ತು ನನ್ನ ಪುಡಾರಿ ಬಳಗಕ್ಕೆ ಕಾಸಿನ ಖಜಾನೆಯಾಗಿದ್ದಾತ. ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಆಗಿದ್ದವ. ಆವತ್ತು ಹೇಳದೇ ಕೇಳದೆ ಹೊರಟುಹೋಗಿದ್ದವನು, ಇವತ್ತು ಇಲ್ಲಿ ಹೀಗೆ ಸಿಕ್ಕಿದ್ದ.
ನಮ್ಮೂರಿನಲ್ಲಿ ಸುಮಾರು ವರ್ಷಗಳಿಂದ ಒಂದು ಬಿಸಿಎಂ ಹಾಸ್ಟೆಲ್ ಇದೆ.ನಾನು ಐದನೇ ಕ್ಲಾಸಿನಲ್ಲಿರುವಾಗ, ಈ ಹಾಸ್ಟೆಲ್ಲಿಗೆ ವಿದ್ಯಾರ್ಥಿಗಳ ಕೊರತೆ ಇದೆ ಅಂತ ಒಂದೇ ಊರಿನವರಾದ ನಮ್ಮನ್ನೆಲ್ಲ ಇಲ್ಲಿಗೆ ಸೇರಿಸಿಕೊಂಡಿದ್ದರು. ಅದೇ ಊರಾದ್ದರಿಂದ ನಮಗೆ, ಮನೆ ಮತ್ತು ಹಾಸ್ಟೆಲ್ಲಿನ ನಡುವೆ ಅಷ್ಟೇನು ವ್ಯತ್ಯಾಸ ಇರಲಿಲ್ಲ. ಹಾಸ್ಟೆಲ್ ಮೇ ಖಾನಾ, ಘರ್ ಮೇ ಸೋನಾ…ಎನ್ನುವಂತಿದ್ದೆ. ಒಂದೆರಡು ವರ್ಷ ಕಳೆಯಿತು. ನಾನು ಓದಿನಲ್ಲಿ ಒಂದಿಷ್ಟು ಮುಂದಿದ್ದರಿಂದ ಹೆಚ್ಚಿನ ಮನ್ನಣೆ ದೊರೆಯುತ್ತಿತ್ತು. ನನ್ನ ವಯಸ್ಸಿನ ಹುಡುಗರೆಲ್ಲರೂ ನನ್ನ ಸಂಗಡಕ್ಕೆ ಬಂದರು. ಒಂದರ್ಥದಲ್ಲಿ ನಾನೇ ಅಘೋಷಿತ ನಾಯಕನಾದೆ. ದಿನ ಕಳೆದಂತೆಲ್ಲ ನಮ್ಮ ಪಾರುಪತ್ಯೆ ಹೆಚ್ಚಾಗುತ್ತಾ ಹೋಯಿತು.
ನಾನು ಎಂಟನೇ ಕ್ಲಾಸಿನಲ್ಲಿದ್ದ ಸಂದರ್ಭ, ಕೊಳ್ಳೇಗಾಲದಿಂದ ಒಬ್ಬ ಹುಡುಗ ನಮ್ಮ ಹಾಸ್ಟೆಲ್ಲಿಗೆ ಬಂದು ಸೇರಿದ. ಅವನೇ ಈ ಶ್ಯಾಮ. ನಮ್ಮೂರಿನ ಅಂಗಡಿ ಮಾಲೀಕರೊಬ್ಬರ ಸಂಬಂಧಿ. ನನಗಿಂತ ಒಂದು ಕ್ಲಾಸು ದೊಡ್ಡವ. ಬಂದ ಹೊಸತರಲ್ಲಿ ನಮ್ಮ ಜೊತೆಗೇ ಇರುತ್ತಿದ್ದ. ನಮ್ಮ ಬೀದಿಯಲ್ಲೇ ಅವರ ಸಂಬಂಧಿಕರ ಮನೆ ಇದ್ದಿದ್ದರಿಂದ, ನಾವು ಬೆಳಿಗ್ಗೆ, ಸಾಯಂಕಾಲ ಮನೆಗೆ ಹೋಗುವಾಗ ಜೊತೆಗೆ ಬರುತ್ತಿದ್ದ. ಬಿಡುವಿನ ಸಮಯದಲ್ಲಿ ಅವನ ಸಂಬಂಧಿಕರ ಅಂಗಡಿಯಲ್ಲಿ ಕೂರುತ್ತಿದ್ದ. ನಮಗೆ ಇನ್ನಷ್ಟು ಹತ್ತಿರವಾದ.
ಹೀಗಿರುವ ಶ್ಯಾಮ ಬರುತ್ತಾ ಬರುತ್ತಾ ನಮ್ಮ ಜೊತೆ ಸೇರುವುದನ್ನು ಕಡಿಮೆ ಮಾಡಿದ. ಹಾಸ್ಟೆಲ್ಲಿನಲ್ಲಿ ಅವನ ಜನಪ್ರಿಯತೆ ಹೆಚ್ಚಾಯಿತು. ತನ್ನದೇ ಬಳಗ ಕಟ್ಟಿಕೊಂಡ. ಅವರಿಗೆಲ್ಲ ಸಂಜೆ ಟೀ ಕುಡಿಸುವುದು, ಬಜ್ಜಿ ಕೊಡಿಸಲು ಶುರು ಮಾಡಿದ. ಕಡೆಗೆ ಚಿಲ್ಲರೆ ಕಾಸನ್ನು ಹಂಚುತ್ತಿದ್ದ. ನಮಗೋ ಇದೆಲ್ಲವನ್ನೂ ಕಂಡು ಹೊಟ್ಟೆ ಉರಿ. ಇಷ್ಟು ದುಡ್ಡು ಎಲ್ಲಿಂದ ತರುತ್ತಾನೆ ಅಂತ ಸಂಶಯ. ಕಡೆಗೆ ಇವನನ್ನು ಹಿಂಬಾಲಿಸುವ ತೀರ್ಮಾನ ಕೈಗೊಂಡೆವು. ನಮ್ಮ ಕೇರಿಯ ಹೊರ ಭಾಗದಲ್ಲಿರುವ, ನನ್ನ ಸಹಪಾಠಿಯ ಮಾವನ ಅಂಗಡಿಯ ಹತ್ತಿರ ಈ ಶ್ಯಾಮ ಆಗಾಗ್ಗೆ ಹೋಗಿ ಬರುತ್ತಿದ್ದ. ದಿನ ಕಳೆದಂತೆ ನಮ್ಮ ಸಂಶಯ, ಕೋಪ ಎರಡೂ ಹೆಚ್ಚಾಯಿತು. ಕಡೆಗೊಂದು ದಿನ ಅವನ ಡ್ರಾಯರ್ ಒಡೆದು ‘ಸತ್ಯಾಂಶವನ್ನು’ ಹೊರಗೆಡವಲು ತೀರ್ಮಾನಿಸಿದೆವು.
ಒಂದು ಭಾನುವಾರ ಮಧ್ಯಾಹ್ನ, ಯಾವ ಹುಡುಗರು ಇಲ್ಲದಿದ್ದನ್ನು ಖಾತ್ರಿ ಮಾಡಿಕೊಂಡು ಅವನ ರೂಮು ಹೊಕ್ಕು, ಗುದ್ದಲಿಯಿಂದ ಡ್ರಾಯರ್ ನ ಬೀಗ ಮೀಟಿದೆವು. ಆಗ ಒಳಗೆ ಕಂಡಿದ್ದು ಒಂದಿಷ್ಟು ಬೀಡಿ ಬಂಡಲ್ಲುಗಳು! ಇವನು ಕದ್ದು ಸೇದುವುದಕ್ಕೆ ಇಷ್ಟೊಂದು ಬೀಡಿಯಾ ಅಂದುಕೊಂಡೆವು. ಆದರೆ ಅದು ಕದ್ದು ಸೇದಲಿಕ್ಕಲ್ಲ, ಕದ್ದು ತಂದು ಸಂಗ್ರಹಿಸಿದ್ದಾಗಿತ್ತು.
ಮಾರನೇ ದಿನ ಗಸಗಸೆ ಮರದ ಬಳಿ ಶ್ಯಾಮನನ್ನು ನಿಲ್ಲಿಸಿ, ನಾವು ಸುತ್ತ ನಿಂತು ‘ತನಿಖೆ’ ಆರಂಭಿಸಿದೆವು. ನಿಜ ಹೇಳದಿದ್ದರೆ ವಾರ್ಡನ್ ಗೆ ಹಿಡಿದುಕೊಡುತ್ತೇವೆ ಅಂತ ಹೆದರಿಸಿದೆವು. ಶ್ಯಾಮ ಮೊದಮೊದಲು ಕೊಸರಾಡಿದನಾದರೂ, ಆಮೇಲೆ ಸತ್ಯ ಒಪ್ಪಿಕೊಂಡ.ಅದನ್ನು ತನ್ನ ಸಂಬಂಧಿಕರ ಮನೆಯಿಂದ ಕದ್ದು ತರುತ್ತಿರುದಾಗಿಯೂ,ಹೀಗೆ ತಂದದ್ದನ್ನು ನಮ್ಮ ಸಹಪಾಠಿಯ ಮಾವನ ಅಂಗಡಿಗೆ ಅರ್ಥ ರೇಟಿಗೆ ಮಾರುತ್ತಿರುವುದಾಗಿಯೂ ಹೇಳಿದ.
ನಮ್ಮಲ್ಲಿ ಒಂದಿಬ್ಬರು ಇದನ್ನೇ ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಉಪಾಯ ನೀಡಿದರು. ಅದರಂತೆ ಶ್ಯಾಮ ತಾನು ಬಂಡಲ್ ಗಟ್ಟಲೆ ಬೀಡಿ ಕದಿಯುವುದನ್ನು ಮುಂದುವರಿಸಬಹುದೆಂದು, ಅದಕ್ಕೆ ಪ್ರತಿಯಾಗಿ ನಮ್ಮ ‘ಸಂಘ’ಕ್ಕೆ ಇಂತಿಷ್ಟು ಮಾಮೂಲಿ ನೀಡಬೇಕೆಂದು ಒಪ್ಪಂದವಾಯಿತು. ಶ್ಯಾಮನ ದಿಸೆಯಿಂದ ನಮ್ಮ ಮೋಜು ಇನ್ನಷ್ಟು ಹೆಚ್ಚಾಗುತ್ತಾ ಹೋಯಿತು. ಕ್ರಿಕೆಟ್ ಮ್ಯಾಚಿಗೆ ಬೆಟ್ಟಿಂಗು ಕಟ್ಟಲು ಹಣ ಇಲ್ಲದಿದ್ದಾಗಲೆಲ್ಲ ಈ ಶ್ಯಾಮನ ಬಳಿ ಸಾಲ ಪಡೆದದ್ದು ಉಂಟು. ಆದರೆ ಹಾಗೇ ಈಸಿಕೊಂಡ ಸಾಲವನ್ನು ವಾವಸ್ಸು ಕೊಟ್ಟದ್ದು ಮಾತ್ರ ನೆನಪಿಲ್ಲ.
ಹೀಗೆ ಕಾಲ ಸಾಗುತ್ತಿತ್ತು. ಇನ್ನೊಂದೆಡೆ ಅಂಗಡಿಯಲ್ಲಿ ಬೀಡಿ ಬಂಡಲ್ಲುಗಳು ಕಾಣೆಯಾಗುತ್ತಿರುವ ಕುರಿತು ಶ್ಯಾಮನ ಸಂಬಂಧಿಕರಿಗೆ ಅನುಮಾನ ಶುರುವಾಯಿತು. ಅವರೊಂದು ಉಪಾಯ ಹೂಡಿದರು. ಎಲ್ಲ ಬಂಡಲ್ಲುಗಳ ಮೇಲೆ ತಮ್ಮ ಅಂಗಡಿಯ ಹೆಸರು ಮತ್ತು ಬಂಡಲ್ಲಿನ ನಂಬರನ್ನು ಬರೆದಿಟ್ಟರು. ಅದೊಂದು ದಿನ ನಮ್ಮ ಮತ್ತು ಶ್ಯಾಮನ ಅದೃಷ್ಟ ಕೆಟ್ಟಿತ್ತು. ಬೀಡಿ ಬಂಡಲ್ಲು ಕದ್ದ ಶ್ಯಾಮ ಅದನ್ನು ತನ್ನ ಅಂಗಿಯೊಳಗೆ ಅವಿತಿಟ್ಟುಕೊಂಡು, ನೇರ ಇನ್ನೊಂದು ಅಂಗಡಿಗೆ ನಡೆದ. ಅಂಗಡಿಯಾತ ಸೈಕಲನ್ನೇರಿ ಶ್ಯಾಮನನ್ನು ಹಿಂಬಾಲಿಸಿದ. ಅಲ್ಲಿ ಕದ್ದುತಂದ ಬಂಡಲ್ಲಿಗೆ ಬೆಲೆ ಕಟ್ಟುತ್ತಿದ್ದ ಸಂದರ್ಭ ಶ್ಯಾಮ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ.
ಬೀಡಿ ಕದ್ದು ಮಾರುತ್ತಿದ್ದ ಶ್ಯಾಮ, ಮತ್ತದನ್ನು ಕೊಂಡುಕೊಳ್ಳುತ್ತಿದ್ದ ನನ್ನ ಸಹಪಾಠಿಯನ್ನು ಮಾರನೇ ದಿನ ಶಾಲೆಗೆ ಕರೆತಂದರು. ಅಲ್ಲಿ ಪ್ರಿನ್ಸಿಪಾಲರ ಎದುರು ಇಬ್ಬರನ್ನು ಬಡಿದರು. ಇತ್ತ ಎಲ್ಲಿ ಶ್ಯಾಮ ನಮ್ಮ ಹೆಸರನ್ನೆಲ್ಲ ಹೇಳಿ ಬಿಡುವನೋ ಎಂದು ನಾವು ಹೆದರಿದ್ದೆವು. ಆದರೆ ಹಾಗಾಗಲಿಲ್ಲ. ಅವನು ನಮ್ಮ ಯಾರ ಹೆಸರನ್ನು ಅಪ್ಪಿ ತಪ್ಪಿಯೂ ಹೇಳಲಿಲ್ಲ. ಕಡೆಗೊಂದು ದಿನ ರಾತ್ರಿ ಶ್ಯಾಮನ ತಂದೆ ತಾಯಿ ಬಂದು ಅವನನ್ನು ಊರಿಗೆ ಕರೆದೊಯ್ದುರು. ಬೆಳಿಗ್ಗೆ ಸ್ಕೂಲಿಗೆ ಬಂದ ಮೇಲಷ್ಟೆ ಅವನು ಊರು ಬಿಟ್ಟದ್ದು ಗೊತ್ತಾದದ್ದು. ನಮ್ಮಂದಿಲೇ ಒಂದು ಹುಡುಗನ ಭವಿಷ್ಯ ಹಾಳಾಯಿತಲ್ಲ ಎಂಬ ಕೊರಗು ಆಗಾಗ್ಗೆ ಕಾಡುತ್ತಿತ್ತು.
ಇಂತಿಪ್ಪ ಶ್ಯಾಮ ಇವತ್ತು ಇದ್ದಕ್ಕಿದ್ದ ಹಾಗೆ ಸಿಕ್ಕು, ಹೆಗಲ ಮೇಲೆ ಕೈ ಇಟ್ಟಾಗ ಒಮ್ಮೆ ಮೈ ಜುಮ್ಮೆಂದಿತು. ಹಳೆಯ ಆಟಗಳೆಲ್ಲ ಮತ್ತೆ ನೆನಪಾಯಿತು. ಅವನನ್ನು ಒಂದಿಷ್ಟು ಮಾತನಾಡಿಸಿ, ಮತ್ತೆ ಇಲ್ಲಿ ಬಂದು ಅದೆನ್ನೆಲ್ಲ ಟೈಪಿಸುತ್ತಾ ಕುಳಿತಿದ್ದೇನೆ. ಮನಸ್ಸಿನಲ್ಲಿ ಇದ್ದದ್ದನೆಲ್ಲ ಒಂದಿಷ್ಟು ಬಿಡದೇ ಒದರುತ್ತಿದ್ದೇನೆ. ಮನಸ್ಸು ಹಗುರವಾಗುತ್ತಿದೆ….
7 comments July 3, 2008