Archive for July 8th, 2008
ನಮಗೆ ಭಾಷೆಗಿಂತ ಭವಿಷ್ಯ ಮುಖ್ಯ
ಒಂದೆರಡು ದಿನಗಳ ಹಿಂದಷ್ಟೆ ಭಾಷಾ ಮಾಧ್ಯಮದ ಬಗ್ಗೆ ಹೈಕೋರ್ಟ್ ನೀಡಿದ ತೀರ್ಪಿನ ಕುರಿತು ಗುಡುಗುತ್ತಿದ್ದ ಮಾಧ್ಯಮಗಳು ತಟ್ಟನೆ ತಣ್ಣಗಾಗಿವೆ. ಶಾಸಕರ ಪಕ್ಷಾಂತರದ ಸುದ್ದಿಯಲ್ಲಿ ಭಾಷೆಯ ವಿಚಾರ ತಂಗಳಾಗಿದೆ. ಕನ್ನಡಕ್ಕೆ ಮರಣದಂಡನೆ, ಸಿರಿಗನ್ನಡಂ ಗಲ್ಲಿಗೆ ಅನ್ನುವ ಪ್ರಚೋದನಾಕಾರಿ ಶೀರ್ಷಿಕೆಗಳೆಲ್ಲ ಒಂದೇ ದಿನದಲ್ಲಿ ಅರ್ಥ ಕಳೆದುಕೊಂಡಿವೆ. ಬೀದಿಗಿಳಿದು ಪ್ರತಿಭಟಿಸುತ್ತೇವೆ ಎಂದಿದ್ದ ಬುದ್ದಿಜೀವಿಗಳ ಬಳಗ ಅಕ್ಷರಶಃ ಕಣ್ಮರೆಯಾಗಿದೆ.
ಹೀಗೆ ನಾಡು-ನುಡಿ , ನೆಲ-ಜಲದ ವಿಷಯ ಬಂದಾಗಲೆಲ್ಲ ತಮ್ಮ ಬೇಳೆಯನ್ನು ಆದಷ್ಟು ಬೇಯಿಸಿಕೊಳ್ಳುವ ಒಂದಿಷ್ಟು ಪತ್ರಿಕೆಗಳಿಗೆ, ರಾಜಕೀಯ ಪಕ್ಷಗಳಿಗೆ, ಹಾಲಿ, ಭಾವೀ ಮತ್ತು ಮಾಜಿ ರಾಜಕಾರಣಿಗಳಿಗೆ ಹಾಗೂ ಕನ್ನಡವನ್ನು ತಾವೇ ಗುತ್ತಿಗೆಗೆ ಪಡೆದವರಂತೆ ಹೋರಾಟ, ಪ್ರತಿಭಟನೆಯ ಬೆದರಿಕೆ ಹಾಕುವ ಒಂದಿಷ್ಟು ಸಂಘಟನೆಗಳಿಗೆ ಹಾಗೂ ‘ಬುದ್ದಿ’ ಜೀವಿಗಳಿಗೆ ಭಾಷೆಯ ಕುರಿತು ನಿಜವಾದ ಕಾಳಜಿ ಎಷ್ಟಿದೆ? ಅವರೇನೋ ಪ್ರತಿಭಟನೆ ಹೋರಾಟ ಅಂತೆಲ್ಲ ಗಲಾಟೆ ಎಬ್ಬಿಸಿ ಸುಮ್ಮನಾಗಿ ಬಿಡುತ್ತಾರೆ. ಅದಕ್ಕೆಲ್ಲ ಸಿಕ್ಕಿ ಸಾಯುವವರು ಮಾತ್ರ ಸಾಮಾನ್ಯ ಜನ.
ಇಷ್ಟೆಲ್ಲ ಮಾತನಾಡುವ ಬಹುತೇಕ ಜನರ ಮಕ್ಕಳು ಓದುತ್ತಿರುವುದು ಮಾತ್ರ ಸೆಂಟ್ರಲ್ ಸ್ಕೂಲು ಮತ್ತು ಕಾನ್ವೆಂಟುಗಳಲ್ಲಿ. ಇನ್ನೊಂದೆಡೆ ಈಗಲೂ ನಮ್ಮ ಹಳ್ಳಿಗಳ ಎಷ್ಟೋ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವ ಮೇಷ್ಟ್ರುಗಳಿಲ್ಲ. ನನ್ನಂಥವರು ಓದಿದ್ದು ಅಂತಹ ಶಾಲೆಗಳಲ್ಲೇ. ಎಬಿಸಿಡಿ ಕಲಿಯುವ ಹೊತ್ತಿಗೆ ಏಳನೇ ಕ್ಲಾಸು ದಾಟಿದ್ದೆವು. ಹಿಂದಿ ಕಲಿಸಲು ಟೀಚರ್ ಇಲ್ಲಾ ಅನ್ನೋ ಕಾರಣಕ್ಕೆ ಸಾಮೂಹಿಕವಾಗಿ ಕಾಪಿ ಹೊಡಿಸಿ ಪಾಸ್ ಮಾಡಿಸಿದರು. ಒಂದು ಸಾಲನ್ನು ಉಲ್ಟಾ ಬರೆದರೆ ಅದೇ ಹಿಂದಿ ಅಂತ ಕೆಲವರು ಹೇಳಿಕೊಟ್ಟರು. ಹೀಗೆ ಕಲಿತುಕೊಂಡು ಕಾಲೇಜು ಮೆಟ್ಟಿಲು ತುಳಿದು ಬಂದರೆ , ಅಲ್ಲಿ ಇಂಗ್ಲಿಷು ಕಲಿತವರು, ಕಲಿಯದವರು ಅಂತ ಹೊಸದೆರಡು ಜಾತಿಗಳು! ಕಡೆಗೆ ಡಿಗ್ರಿ ಮುಗಿಸಿ ಕೆಲಸಕ್ಕೆ ಅರ್ಜಿ ಹಾಕುವಾಗ ಇಂಗ್ಲಿಷು ಬರುತ್ತದಾ? ಅಂತ ಒಂದು ದೊಡ್ಡ ಪ್ರಶ್ನೆ. ನಾವು ಹೌದು ಎಂದರಷ್ಟೆ ದೊಡ್ಡದೊಂದು ಉದ್ಯೋಗ! ಹೀಗಿರುವ ನಮಗೆ ಅದೆಷ್ಟೋ ಬಾರಿ ಕೀಳರಿಮೆ ಕಾಡಿದೆ. ಈಗಷ್ಟೆ ಸಾವಿರಾರು ಸುರಿದು ಸ್ಪೋಕನ್ ಇಂಗ್ಲಿಷ್ ಸೆಂಟರ್ ಗಳಿಗೆ ಹೋಗುತ್ತಿದ್ದೇವೆ. ನಾವು ಇಂಗ್ಲಿಷು ಕಲಿಯುತ್ತಿದ್ದೇವೆ!
ನಮ್ಮಂಥ ಸಾಮಾನ್ಯ ವರ್ಗದ ಜನರಿಗೆ ಇವತ್ತು ಇಂಗ್ಲಿಷ್ ಕಲಿಕೆಯ ಅಗತ್ಯತೆ ಕುರಿತು ಅರಿವಾಗುತ್ತಿದೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಂಗ್ಲಿಷನ್ನು ನಮ್ಮೆಲ್ಲರ ಭಾಷೆ ಅಂತ ಸ್ವೀಕರಿಸಿದ್ದೇವೆ. ಹೀಗಿರುವ ಜಗತ್ತಿನಲ್ಲಿ ನಮ್ಮ ಮಕ್ಕಳು ಇಂಗ್ಲಿಷು ಕಲಿಯದಿದ್ದರೆ ಭವಿಷ್ಯವಿಲ್ಲ ಎಂದು ಖಾತ್ರಿಯಾಗಿದೆ. ಅದಕ್ಕೆ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲೇ ಓದಿಸುವ ತೀರ್ಮಾನ ಕೈಗೊಳ್ಳುತ್ತಿದ್ದೇವೆ. ಸಾವಿರ ಗಟ್ಟಲೆ ಸುರಿದು ಮಕ್ಕಳನ್ನು ಕಾನ್ವೆಂಟುಗಳಿಗೆ ಸೇರಿಸುತ್ತಿದ್ದೇವೆ. ಸರಿಯಾದ ಸವಲತ್ತುಗಳಿಲ್ಲದ ಸರ್ಕಾರಿ ಶಾಲೆಗಳಿಗೆ ಗುಡ್ ಬೈ ಹೇಳುತ್ತಿದ್ದೇವೆ. ಇನ್ನು ಮುಂದೆ ಸರ್ಕಾರ ನಮ್ಮ ಮಕ್ಕಳಿಗೂ ಒಂದನೇ ತರಗತಿಯಿಂದ ಇಂಗ್ಲಿಷು ಕಲಿಸುವುದಾದರಷ್ಟೆ ಮಕ್ಕಳನ್ನು ಮತ್ತೆ ಸರಕಾರಿ ಶಾಲೆಗೆ ಕಳಿಸಲು ಯೋಚಿಸುತ್ತೇವೆ.
ಹಾಗಾಗಲು ಸಾಧ್ಯವಾಗದಿದ್ದರೆ, ಇನ್ನೂ ಸಾವಿರ ಸುರಿದಾದರೂ ಮಕ್ಕಳನ್ನು ಕಾನ್ವೆಂಟುಗಳಲ್ಲಿ ಓದಿಸುತ್ತೇವೆ. ಆದರೆ ಮನೆಯಲ್ಲಿ ಮಾತ್ರ ಅಪ್ಪಟ ದೇಸಿ ತನ ಕಲಿಸುತ್ತೇವೆ. ಅವರೊಂದಿಗೆ ಕನ್ನಡದಲ್ಲೇ ಮಾತನಾಡುತ್ತೇವೆ. ಕನ್ನಡದಲ್ಲೇ ಕಥೆ ಹೇಳುತ್ತಾ ನಿದ್ದೆ ಮಾಡಿಸುತ್ತೇವೆ. ಇಷ್ಟರ ಮಟ್ಟಿಗಷ್ಟೆ ನಮಗೆ ಭಾಷೆ ಉಳಿಸಿಕೊಳ್ಳಲು ಸಾಧ್ಯ. ನಮಗೆ ಶಾಸ್ತ್ರೀಯ ಸ್ಥಾನಮಾನ ಬೇಕಿಲ್ಲ. ಸಾಲು ಸಾಲು ಪ್ರಶಸ್ತಿಗಳು ಬೇಕಿಲ್ಲ. ನಮಗೆ ಭಾಷೆಗಿಂತ ಮಕ್ಕಳ ಭವಿಷ್ಯ ಮುಖ್ಯ.
ಬೇಕಿದ್ದರೆ ಬುದ್ದಿಜೀವಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಲಿ. ಮಂತ್ರಿ ಮಹಾಶಯರು ತಮ್ಮ ಮಕ್ಕಳನ್ನು ಕನ್ನಡದಲ್ಲೇ ಓದಿಸಿ ಆದರ್ಶ ಮೆರೆಯಲಿ!
4 comments July 8, 2008