ನಮಗೆ ಭಾಷೆಗಿಂತ ಭವಿಷ್ಯ ಮುಖ್ಯ

July 8, 2008

ಒಂದೆರಡು ದಿನಗಳ ಹಿಂದಷ್ಟೆ ಭಾಷಾ ಮಾಧ್ಯಮದ ಬಗ್ಗೆ ಹೈಕೋರ್ಟ್ ನೀಡಿದ ತೀರ್ಪಿನ ಕುರಿತು ಗುಡುಗುತ್ತಿದ್ದ ಮಾಧ್ಯಮಗಳು ತಟ್ಟನೆ ತಣ್ಣಗಾಗಿವೆ. ಶಾಸಕರ ಪಕ್ಷಾಂತರದ ಸುದ್ದಿಯಲ್ಲಿ ಭಾಷೆಯ ವಿಚಾರ ತಂಗಳಾಗಿದೆ. ಕನ್ನಡಕ್ಕೆ ಮರಣದಂಡನೆ, ಸಿರಿಗನ್ನಡಂ ಗಲ್ಲಿಗೆ ಅನ್ನುವ ಪ್ರಚೋದನಾಕಾರಿ ಶೀರ್ಷಿಕೆಗಳೆಲ್ಲ ಒಂದೇ ದಿನದಲ್ಲಿ ಅರ್ಥ ಕಳೆದುಕೊಂಡಿವೆ. ಬೀದಿಗಿಳಿದು ಪ್ರತಿಭಟಿಸುತ್ತೇವೆ ಎಂದಿದ್ದ ಬುದ್ದಿಜೀವಿಗಳ ಬಳಗ ಅಕ್ಷರಶಃ ಕಣ್ಮರೆಯಾಗಿದೆ.

ಹೀಗೆ ನಾಡು-ನುಡಿ , ನೆಲ-ಜಲದ ವಿಷಯ ಬಂದಾಗಲೆಲ್ಲ ತಮ್ಮ ಬೇಳೆಯನ್ನು ಆದಷ್ಟು ಬೇಯಿಸಿಕೊಳ್ಳುವ ಒಂದಿಷ್ಟು ಪತ್ರಿಕೆಗಳಿಗೆ, ರಾಜಕೀಯ ಪಕ್ಷಗಳಿಗೆ, ಹಾಲಿ, ಭಾವೀ ಮತ್ತು ಮಾಜಿ ರಾಜಕಾರಣಿಗಳಿಗೆ ಹಾಗೂ ಕನ್ನಡವನ್ನು ತಾವೇ ಗುತ್ತಿಗೆಗೆ ಪಡೆದವರಂತೆ ಹೋರಾಟ, ಪ್ರತಿಭಟನೆಯ ಬೆದರಿಕೆ ಹಾಕುವ ಒಂದಿಷ್ಟು ಸಂಘಟನೆಗಳಿಗೆ ಹಾಗೂ ‘ಬುದ್ದಿ’ ಜೀವಿಗಳಿಗೆ ಭಾಷೆಯ ಕುರಿತು ನಿಜವಾದ ಕಾಳಜಿ ಎಷ್ಟಿದೆ? ಅವರೇನೋ ಪ್ರತಿಭಟನೆ ಹೋರಾಟ ಅಂತೆಲ್ಲ ಗಲಾಟೆ ಎಬ್ಬಿಸಿ ಸುಮ್ಮನಾಗಿ ಬಿಡುತ್ತಾರೆ. ಅದಕ್ಕೆಲ್ಲ ಸಿಕ್ಕಿ ಸಾಯುವವರು ಮಾತ್ರ ಸಾಮಾನ್ಯ ಜನ.

ಇಷ್ಟೆಲ್ಲ ಮಾತನಾಡುವ ಬಹುತೇಕ ಜನರ ಮಕ್ಕಳು ಓದುತ್ತಿರುವುದು ಮಾತ್ರ ಸೆಂಟ್ರಲ್ ಸ್ಕೂಲು ಮತ್ತು ಕಾನ್ವೆಂಟುಗಳಲ್ಲಿ. ಇನ್ನೊಂದೆಡೆ ಈಗಲೂ ನಮ್ಮ ಹಳ್ಳಿಗಳ ಎಷ್ಟೋ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವ ಮೇಷ್ಟ್ರುಗಳಿಲ್ಲ. ನನ್ನಂಥವರು ಓದಿದ್ದು ಅಂತಹ ಶಾಲೆಗಳಲ್ಲೇ. ಎಬಿಸಿಡಿ ಕಲಿಯುವ ಹೊತ್ತಿಗೆ ಏಳನೇ ಕ್ಲಾಸು ದಾಟಿದ್ದೆವು. ಹಿಂದಿ ಕಲಿಸಲು ಟೀಚರ್ ಇಲ್ಲಾ ಅನ್ನೋ ಕಾರಣಕ್ಕೆ ಸಾಮೂಹಿಕವಾಗಿ ಕಾಪಿ ಹೊಡಿಸಿ ಪಾಸ್ ಮಾಡಿಸಿದರು. ಒಂದು ಸಾಲನ್ನು ಉಲ್ಟಾ ಬರೆದರೆ ಅದೇ ಹಿಂದಿ ಅಂತ ಕೆಲವರು ಹೇಳಿಕೊಟ್ಟರು. ಹೀಗೆ ಕಲಿತುಕೊಂಡು ಕಾಲೇಜು ಮೆಟ್ಟಿಲು ತುಳಿದು ಬಂದರೆ , ಅಲ್ಲಿ  ಇಂಗ್ಲಿಷು ಕಲಿತವರು, ಕಲಿಯದವರು ಅಂತ ಹೊಸದೆರಡು ಜಾತಿಗಳು! ಕಡೆಗೆ ಡಿಗ್ರಿ ಮುಗಿಸಿ ಕೆಲಸಕ್ಕೆ ಅರ್ಜಿ ಹಾಕುವಾಗ ಇಂಗ್ಲಿಷು ಬರುತ್ತದಾ? ಅಂತ ಒಂದು ದೊಡ್ಡ ಪ್ರಶ್ನೆ. ನಾವು ಹೌದು ಎಂದರಷ್ಟೆ ದೊಡ್ಡದೊಂದು ಉದ್ಯೋಗ! ಹೀಗಿರುವ ನಮಗೆ ಅದೆಷ್ಟೋ ಬಾರಿ ಕೀಳರಿಮೆ ಕಾಡಿದೆ. ಈಗಷ್ಟೆ ಸಾವಿರಾರು ಸುರಿದು ಸ್ಪೋಕನ್ ಇಂಗ್ಲಿಷ್ ಸೆಂಟರ್ ಗಳಿಗೆ ಹೋಗುತ್ತಿದ್ದೇವೆ. ನಾವು ಇಂಗ್ಲಿಷು ಕಲಿಯುತ್ತಿದ್ದೇವೆ!

ನಮ್ಮಂಥ ಸಾಮಾನ್ಯ ವರ್ಗದ ಜನರಿಗೆ ಇವತ್ತು ಇಂಗ್ಲಿಷ್ ಕಲಿಕೆಯ ಅಗತ್ಯತೆ ಕುರಿತು ಅರಿವಾಗುತ್ತಿದೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಂಗ್ಲಿಷನ್ನು ನಮ್ಮೆಲ್ಲರ ಭಾಷೆ ಅಂತ ಸ್ವೀಕರಿಸಿದ್ದೇವೆ. ಹೀಗಿರುವ ಜಗತ್ತಿನಲ್ಲಿ ನಮ್ಮ ಮಕ್ಕಳು ಇಂಗ್ಲಿಷು ಕಲಿಯದಿದ್ದರೆ ಭವಿಷ್ಯವಿಲ್ಲ ಎಂದು ಖಾತ್ರಿಯಾಗಿದೆ. ಅದಕ್ಕೆ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲೇ ಓದಿಸುವ ತೀರ್ಮಾನ ಕೈಗೊಳ್ಳುತ್ತಿದ್ದೇವೆ. ಸಾವಿರ ಗಟ್ಟಲೆ ಸುರಿದು ಮಕ್ಕಳನ್ನು ಕಾನ್ವೆಂಟುಗಳಿಗೆ ಸೇರಿಸುತ್ತಿದ್ದೇವೆ. ಸರಿಯಾದ  ಸವಲತ್ತುಗಳಿಲ್ಲದ ಸರ್ಕಾರಿ ಶಾಲೆಗಳಿಗೆ ಗುಡ್ ಬೈ ಹೇಳುತ್ತಿದ್ದೇವೆ. ಇನ್ನು ಮುಂದೆ ಸರ್ಕಾರ ನಮ್ಮ ಮಕ್ಕಳಿಗೂ ಒಂದನೇ ತರಗತಿಯಿಂದ ಇಂಗ್ಲಿಷು ಕಲಿಸುವುದಾದರಷ್ಟೆ ಮಕ್ಕಳನ್ನು ಮತ್ತೆ ಸರಕಾರಿ ಶಾಲೆಗೆ ಕಳಿಸಲು ಯೋಚಿಸುತ್ತೇವೆ.

ಹಾಗಾಗಲು ಸಾಧ್ಯವಾಗದಿದ್ದರೆ, ಇನ್ನೂ ಸಾವಿರ ಸುರಿದಾದರೂ ಮಕ್ಕಳನ್ನು ಕಾನ್ವೆಂಟುಗಳಲ್ಲಿ ಓದಿಸುತ್ತೇವೆ. ಆದರೆ ಮನೆಯಲ್ಲಿ ಮಾತ್ರ ಅಪ್ಪಟ ದೇಸಿ ತನ ಕಲಿಸುತ್ತೇವೆ. ಅವರೊಂದಿಗೆ ಕನ್ನಡದಲ್ಲೇ ಮಾತನಾಡುತ್ತೇವೆ. ಕನ್ನಡದಲ್ಲೇ ಕಥೆ ಹೇಳುತ್ತಾ ನಿದ್ದೆ ಮಾಡಿಸುತ್ತೇವೆ. ಇಷ್ಟರ ಮಟ್ಟಿಗಷ್ಟೆ ನಮಗೆ ಭಾಷೆ ಉಳಿಸಿಕೊಳ್ಳಲು ಸಾಧ್ಯ. ನಮಗೆ ಶಾಸ್ತ್ರೀಯ ಸ್ಥಾನಮಾನ ಬೇಕಿಲ್ಲ. ಸಾಲು ಸಾಲು ಪ್ರಶಸ್ತಿಗಳು ಬೇಕಿಲ್ಲ. ನಮಗೆ ಭಾಷೆಗಿಂತ ಮಕ್ಕಳ ಭವಿಷ್ಯ ಮುಖ್ಯ.

ಬೇಕಿದ್ದರೆ ಬುದ್ದಿಜೀವಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಲಿ. ಮಂತ್ರಿ ಮಹಾಶಯರು ತಮ್ಮ ಮಕ್ಕಳನ್ನು ಕನ್ನಡದಲ್ಲೇ ಓದಿಸಿ ಆದರ್ಶ ಮೆರೆಯಲಿ!

Entry Filed under: Uncategorized. Tags: , , , .

4 Comments Add your own

  • 1. sundaranadu  |  July 9, 2008 at 10:02 am

    ನಮಸ್ಕಾರ,

    ನೀವೇಳೋ ರೀತಿಯಲ್ಲಿ ಎಲ್ಲ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇಲ್ಲ. ಏಕೆಂದರೆ ನಾನು ಅಂಥಹ ಶಾಲೆಯಲ್ಲಿಯೇ ನನ್ನ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು. ಈಗಲೂ ನನಗೆ ನನ್ನ ಶಾಲೆಯ ಬಗ್ಗೆ, ಕನ್ನಡದ ಬಗ್ಗೆ ಪ್ರೀತಿ, ಅಭಿಮಾನವಿದೆ.

    ಮತ್ತೊಂದು ವಿಚಾರ, ನಾನು ನ್ಯಾಯಾಲಯದ ತೀರ್ಮಾನದ ಬಗ್ಗೆ ಮಾತನಾಡುವುದಿಲ್ಲ. ಒಂದು ರಾಜ್ಯದ ಕಾನೂನು ಆ ರಾಜ್ಯದ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಟೆಗಳಿಗೂ ಅಥವಾ ಉದ್ಯಮಕ್ಕು ಅನ್ವಯಿಸಬೇಕು. ಇಲ್ಲದೇ ಹೋದರೆ ನಮಗೆ ಯಾವುದೇ ಸರ್ಕಾರಗಳ ಅಗತ್ಯವಿಲ್ಲ. ಮಕ್ಕಳಿಗೆ ತಾಯಿ ಬಾಷೆ ಕಲಿತಷ್ಟು ಸುಲಭವಾಗಿ ಮತ್ತೊಂದು ಬಾಷೆ ಕಲಿಯಲು ಆಗುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಅದಕ್ಕೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಮಾಡಬೇಕು ಎಂಬುದು ಕರ್ನಾಟಕದಲ್ಲಿ ಅಷ್ಟೇ ಅಲ್ಲ ಎಲ್ಲ ರಾಜ್ಯಗಳಲ್ಲಿಯೂ ಇರುವಂಥದ್ದು.

    ‘ಮಕ್ಕಳ ಭವಿಷ್ಯ’-ಇಂಗ್ಲೀಷಿನಿಂದಲೇ ಎಂಬುದು ಎಷ್ಟು ಸತ್ಯ? ನಾವು ಕನ್ನಡದಲ್ಲಿ ಕಲಿತು, ಈಗ ಒಂದು ಖಾಸಗಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವಲ್ಲ. ‘ಮಕ್ಕಳ ಭವಿಷ್ಯದ’ ಹೆಸರಿನಲ್ಲಿ ಕನ್ನಡವನ್ನು ಮೂಲೆಗುಂಪು ಮಾಡುವುದು ಎಷ್ಟು ಸರಿ? ಆನಧಿಕೃತವಾಗಿ ಅಥವಾ ಸರ್ಕಾರಕ್ಕೆ ‘ಭಾಷಾ ನೀತಿ’ ಯಲ್ಲಿ ಮೋಸ ಮಾಡಿದ ಅಥವಾ ಹಣವೇ ಮುಖ್ಯವೆನಿಸಿಕೊಂಡ ಈ ಶಾಲೆಗಳಿಂದ ‘ಮಕ್ಕಳ ಭವಿಷ್ಯ’ ರೂಪಿಸಲು ಸಾಧ್ಯವೇ?

    ಕನ್ನಡ ಯೋಚಿಸಿದರೆ ಸಾಲದು, ಅದು ನಮ್ಮ ನಡೆಯಲ್ಲಿಯೂ ಇರಬೇಕು. ಇಲ್ಲದಿದ್ದರೆ ‘ನಮ್ಮ ಕನ್ನಡ’, ಇತಿಹಾಸದ ಭಾಗ ಮಾತ್ರ ಆಗುತ್ತದೆ.

    ಸುಂದರನಾಡು

    Reply
  • 2. ಜೋಮನ್  |  July 10, 2008 at 7:24 am

    ಜಿತೇಂದ್ರ,

    ಭವಿಷ್ಯದಷ್ಟೇ ಭಾಷೆಗೂ ಪ್ರಾಧಾನ್ಯತೆ ಇದೆ. ತಾಯಿಯ ಎದೆಹಾಲಿನೊಂದಿಗೆ ಹರಿದು ಬರುವುದು ನಮ್ಮ ಮಾತೃಭಾಷೆ, ಅದು ನಮ್ಮ ಸವಿಗನ್ನಡ. ಅಭಿಮಾನ ಇರಬೇಕಾದದ್ದೇ. ಆದರೆ ಭವಿಷ್ಯ, ಉದ್ಯೋಗ, ವ್ಯವಹಾರವನ್ನು ಗಮನಿಸಿದಾಗ ಇಲ್ಲೆಲ್ಲಾ ಇಂಗ್ಲಿಷ್ ಭಾಷೆಯ ಬಳಕೆ ಅನಿವಾರ್ಯವಾಗಿರುವುದರಿಂದ ಮಕ್ಕಳು ಇಂಗ್ಲಿಷ್ ಕಲಿಯಲೇಬೇಕಾಗಿದೆ. ಸರಕಾರಿ ಕನ್ನಡ ಶಾಲೆಗಳಲ್ಲಿ ಉತ್ತಮ ಇಂಗ್ಲಿಷ್ ಯಾಕೆ ಕಲಿಸಬಾರದು? ಹಾಗೊಂದು ಪ್ರಯತ್ನ ನಮ್ಮ ಸರಕಾರ ಯಾಕೆ ಮಾಡುತ್ತಿಲ್ಲ. ಈ ಕೊರತೆ ಇರುವುದರಿಂದಲೇ ತಾನೇ ನಗರ ಮತ್ತು ಹಳ್ಳಿ ವಿದ್ಯಾರ್ಥಿಗಳ ನಡುವೆ ಸಂವಹನದ ತಾರತಮ್ಯ ಏರ್ಪಟ್ಟಿರುವುದು. ಸುಮ್ಮನೆ ಬೊಬ್ಬೆ ಹೊಡೆಯುವದರಲ್ಲಿ ಅರ್ಥವಿಲ್ಲ.

    Reply
  • 3. MAHENDRA  |  July 13, 2008 at 12:05 pm

    excellent

    Reply
  • 4. ಜಿತೇಂದ್ರ  |  July 15, 2008 at 7:39 am

    ಸುಂದರನಾಡಿನ ಲೇಖಕರೇ,

    ನೀವೂ ಹೇಳಿದ್ದು ನಿಜವೇ. ಅಂತೆಯೇ ನಮಗೂ ನಾಡು ನುಡಿಯ ಕುರಿತು ಅಷ್ಟೇ ಪ್ರೀತಿಯಿದೆ. ಪ್ರಶ್ನೆ ಅದಲ್ಲಾ ಕಾನೂನು ಎಲ್ಲರಿಗೂ ಒಂದೇ ಆದ ಮೇಲೆ ಎಲ್ಲ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ಸಿಗಬೇಕು ಎಂಬುದೇ ನನ್ನ ಆಶಯ. ಇವತ್ತು ನಗರಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಮಟ್ಟಕ್ಕೆ ಬಂದಿರುವುದಾದರೂ ಏಕೆ ಅಂತ ಯೋಚನೆ ಡಿದರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತು.

    ನಾವಂತು ಕಂಗ್ಲಿಷು ಶಾಲೆಗಳ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಆದರೆ ಇವತ್ತಿಗೆ ಇಂಗ್ಲಿಷ್ ಅನಿವಾರ್ಯ ಅಂತ ಹೇಳುತ್ತಿದ್ದೇವೆ ಅಷ್ಟೇ. ಒಂದು ಮಗು ತನ್ನ ಆರರಿಂದ ಹತ್ತನೇ ವಯಸ್ಸಿನ ತನಕ ಮೂರು ಭಾಷೆಗಳನ್ನು ಸುಲಭವಾಗಿ ಕಲಿಯಬಹುದು ಅಂತ ಮನಶಾಸ್ತ್ತ್ರಜ್ಝರೇ ಅಭಿಪ್ರಾಯ ಪಟ್ಟಿದ್ದಾರೆ.

    ಏನೇ ಆಗಲಿ ಒಂದು ನಿರ್ಧಾರಕ್ಕೆ ಬರುವ ಮುನ್ನ ಒಂದಿಷ್ಟು ಚರ್ಚೆಯಾಗಬೇಕು ಅನ್ನುವ ನಿಲುವಿಟ್ಟುಕೊಂಡೇ ಈ ಲೇಖನ ಬರೆದಿದ್ದು. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.

    ಜೋಮನ್,

    ನೀವು ಹೇಳುವಂತೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಇಂಗ್ಲಿಷ ಕಲಿಸುವುದಾದರೆ ಅರ್ಧ ಸಮಸ್ಯೆ ಬಗೆಹರಿದೀತು. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ
    -ಜಿತೇಂದ್ರ

    Reply

Leave a Comment

Required

Required, hidden

Some HTML allowed:
<a href="" title=""> <abbr title=""> <acronym title=""> <b> <blockquote cite=""> <cite> <code> <pre> <del datetime=""> <em> <i> <q cite=""> <strike> <strong>

Trackback this post  |  Subscribe to the comments via RSS Feed


ಕಾಲಮಾನ

July 2008
M T W T F S S
    Aug »
 123456
78910111213
14151617181920
21222324252627
28293031  

Archives

1356

ಬ್ಲಾಗ್ ಕೊಂಡಿ

ಇವರು ಹೀಗೆಂದರು..

jomon on ಬಹು ದಿನಗಳ ನಂತರ: ಒಂದು ಅನುವ…
ಶೆಟ್ಟರು (Shettaru) on ಬಹು ದಿನಗಳ ನಂತರ: ಒಂದು ಅನುವ…
jomon on ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆ…
minchulli on ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆ…
ಪ್ರದೀಪ್ on ಹೀಗೆ ಸುಮ್ಮನೆ ಒಂದು ಹನಿ

ಈಚೆಗೆ ಬರೆದಿದ್ದು

ಮುಗಿಲು ಮುಟ್ಟಿದವರು

ನೀವು ಮೆಚ್ಚಿದ್ದು- ಹೆಚ್ಚಿಗೆ ನೋಡಿದ್ದು

ಪಕ್ಷಿ ನೋಟ

Feeds