Archive for ಜುಲೈ, 2008
ಇಲ್ಲಿ ತ್ಸುನಾಮಿ ಬಂದರೆ ದುಡ್ಡಿನ ಹೊಳೆ ಹರಿಯುತ್ತೆ!
ಮೈಸೂರು ಸೀಮೆಯ ಆಡುಮಾತಲ್ಲಿ ಈಗ ತ್ಸುನಾಮಿ ಅಂದರೆ ಇದ್ದಕ್ಕಿದ್ದಂತೆ ಬಂದೊರಗುವ ಐಶ್ವರ್ಯ! ಅರ್ಧ ರಾತ್ರಿಯಲ್ಲಿ ಸಿರಿತನ ಬರುವುದು ಅನ್ನುತ್ತಾರಲ್ಲ ಹಾಗೇ. ಐಟಿ ದೊರೆಗಳು ಮೈಸೂರಿನತ್ತ ಕಣ್ಣಿಟ್ಟ ಮೇಲೆ ಇಲ್ಲಿ ಭೂಮಿಯ ಬೆಲೆ ಬಂಗಾರವಾಗುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರ ಭಾರೀ ಉದ್ದಿಮೆಯಾಗಿ ಬೆಳೆಯುತ್ತಿದೆ. ಹೀಗಿರುವಾಗ ಹಣದಾಸೆಗೆ ಬಿದ್ದ ಒಂದಿಷ್ಟು ರೈತರು ತಮ್ಮ ಭೂಮಿಯನ್ನೆಲ್ಲ ಮಾರಿ ರಾಶಿ ರಾಶಿ ಹಣ ಗಳಿಸುತ್ತಿದ್ದಾರೆ. ಹೀಗೆ ತ್ಸುನಾಮಿಯಂತೆ ಇದ್ದಕ್ಕಿದ್ದ ಹಾಗೇ ಬಂದ ಹಣದ ಪ್ರವಾಹಕ್ಕೆ ಇಲ್ಲಿ ಜನ ತ್ಸುನಾಮಿ ಅಂತಲೇ ಅಡ್ಡ ಹೆಸರಿಟ್ಟಿದ್ದಾರೆ.
ಬಸ್ಸುಗಳಲ್ಲಿ ಪ್ರಯಾಣ ಮಾಡುವ ಹಳ್ಳಿಯ ಜನರ ಹರಟೆಗೆ ಈ ತ್ಸುನಾಮಿಯೇ ಪ್ರಮುಖ ವಿಷಯ. ಯಾರಾದರೊಬ್ಬ ದೊಡ್ಡದೊಂದು ಮನೆ ಕಟ್ಟಿಸಿದರೆ, ಭಾರೀ ವರದಕ್ಷಿಣೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿದ್ರೆ ಹೊಸದೊಂದು ಕಾರೋ, ಬೈಕೋ ಕೊಂಡುಕೊಂಡ್ರೆ ಅದೆಲ್ಲ ತ್ಸುನಾಮಿ ಎಫೆಕ್ಟ್ ಅಂತಲೇ ಜನ ಮಾತಾಡಿಕೊಳ್ತಾರೆ.
ಚೆನ್ನೈ ನಂಥ ಕಡಲತೀರದ ಊರುಗಳಲ್ಲಿ ಜನ ಯಾವಾಗ ಇನ್ನೊಂದು ತ್ಸುನಾಮಿ ಬಂದಪ್ಪಳಿಸುತ್ತೋ ಅಂತ ನಡುಗುತ್ತಿದ್ದರೆ, ಇಲ್ಲಿ ಮೈಸೂರಿನ ಒಂದಿಷ್ಟು ಜನ ತಮ್ಮೆಡೆಗೂ ಒಮ್ಮೆ ‘ತ್ಸುನಾಮಿ’ ಬರಲಪ್ಪ ಅಂತ ಬೆಚ್ಚಗೆ ಬೆಂಕಿ ಕಾಯುತ್ತಿದ್ದಾರೆ.
ದೇವದಾಸನ ಒಂದು ಚಿತ್ರ
ಮೊನ್ನೆ ಬಿಳಿಗಿರಿ ರಂಗನ ಬೆಟ್ಟದ ತುತ್ತತುದಿಯಲ್ಲಿ ಈ ದೇವದಾಸ ಭಗ್ನ ಪ್ರೇಮಿಯಂತೆ ಯೋಚಿಸುತ್ತಾ ಕುಳಿತುಬಿಟ್ಟಿದ್ದ. ಕಣ್ಣು ಮುಟುಕಿಸದೇ ಕೆಳಗಿರುವ ಪ್ರಪಾತವನ್ನು ಒಂದೇ ಸಮನೆ ದಿಟ್ಟಿಸುತ್ತಿದ್ದ. ಕರೆದರೂ ಕೇಳಲಿಲ್ಲ. ವಾಪಸ್ಸು ಬರಲಿಲ್ಲ. ಬೇರೇನು ಬೇಕಿತ್ತೋ ಗೊತ್ತಿಲ್ಲ!
ಕಡೆಗೊಮ್ಮೆ ಜನರ ಸದ್ದು ಗದ್ದಲ ಹೆಚ್ಚಾದಾಗ ಶಾಂತಿಯನ್ನರಸುವ ಸನ್ಯಾಸಿಯಂತೆ ಮತ್ತೆಲ್ಲಿಗೂ ಹೊರಟುಹೋದ.
ಇವನ ಈ ಚಿಂತೆಗೆ ಕಾರಣ ಏನಿರಬಹುದು? ಯಾರಾದರೂ ಹೇಳುವಿರಾ?
ಹೈವೇಯಲ್ಲೂ ಜತ್ರೋಪ ಜಪ
ಮೊನ್ನೆ ಬಲಮುರಿಗೆ ಹೋಗುವ ದಾರಿಯಲ್ಲಿ ತೆಗೆದ ಚಿತ್ರ ಇದು.
ಮೈಸೂರು ಬಿಟ್ಟು ಮುಂದೆ ಹೋಗ್ತಾ ಇದ್ದ ಹಾಗೆ ರಸ್ತೆಯ ಮಧ್ಯದಲ್ಲಿ ಒಂದಿಷ್ಟು ಕಿಲೋಮೀಟರ್ ಪೂರ ಈ ಹಸಿರುಸಿರಿ ಕಂಗೊಳಿಸುತ್ತಿತ್ತು. ಇದೆನಪ್ಪಾ ಟಾರು ರಸ್ತೆಯ ಮಧ್ಯದಲ್ಲೂ ಹೀಗೆ ಬೆಳೆಸಿದ್ದಾರಲ್ಲಾ ಅಂತ ಕಣ್ಣರಳಿಸಿ ನಿಂತಿದ್ದಾಯಿತು. ಈ ಮೊದಲೇ ಆ ರಸ್ತೆಯಲ್ಲಿ ಅನೇಕ ಬಾರಿ ಓಡಾಡಿದ್ದೆನಾದರೂ ಆಗಷ್ಟೆ ನೆಟ್ಟ ಪೈರುಗಳು ಕಣ್ಣಿಗೆ ಬಿದ್ದಿರಲಿಲ್ಲ. ಈಗ ನೋಡಿದರೆ ಜತ್ರೋಪ ಸಸಿಗಳು ನಳನಳಿಸಿ ನಿಂತಿದ್ದವು.
ನಮ್ಮ ಮನೆಗಳ ಬಹುತೇಕ ಹಿತ್ತಲುಗಳಲ್ಲಿ ಬೇಲಿಯಾಗಿರುವುದು ಇದೇ ಜತ್ರೋಪ. ಈ ಗಿಡದಲ್ಲಿ ಬಿಡೋ ಕಾಯಿ ಮತ್ತು ಎಲೆಯಲ್ಲಿ ಸೋಪಿನ ನೊರೆಯಂತಹ ಅಂಟು ಸಿಗುತ್ತೆ. ಅದನ್ನ ಊದಿ ಬಲೂನು ಬಿಡೋದು ಅಂದ್ರೆ ನನಗೆ ಆಗ ಎಲ್ಲಿಲ್ಲದ ಸಂಭ್ರಮ. ಅದೇ ಖುಷಿಯಲ್ಲಿ ಅದೆಷ್ಟೋ ಬಾರಿ ಬಟ್ಟೆಗಲ್ಲ ಅಂಟು ಮೆತ್ತಿಸಿಕೊಂಡು ಅಮ್ಮನ ಕೈಲಿ ಶಾಪ ಹಾಕಿಸಿಕೊಂಡದ್ದು ಉಂಟು. ಆ ಅಂಟು ಏನಾದ್ರೂ ಕಣ್ಣಿಗೆ ಬಿದ್ದರೆ ನಿನ್ನ ಕಣ್ಣು ಕುರುಡಾಗಿ ಬಿಡುತ್ತೆ ನೋಡ್ತಿರು ಅಂತ ಅಮ್ಮ ಬೆದರಿಸಿದ್ದು ಉಂಟು. ಈಗಲೂ ಆಗಾಗ ಒಂದು ಕಾಯಿ ಹಿಡಿದು ನೊರೆಯ ಗುಳ್ಳೆಯನ್ನು ಗಾಳಿಗೆ ತೇಲಿಬಿಟ್ಟು ನಗುವುದು ಉಂಟು.
ಈಗ್ಗೆ ಒಂದೆರಡು ವರ್ಷಗಳ ಹಿಂದಿನಂದಲೂ ಇದೇ ಗಿಡದಿಂದ ಪೆಟ್ರೋಲ್ ತಯಾರಿಸಬಹುದು ಅಂತ ಒಂದಿಷ್ಟು ಜನ ಹೇಳ್ತಾ ಬಂದಿದ್ದಾರೆ. ಆದರೆ ನಿಜಕ್ಕೂ ಜತ್ರೋಪದಿಂದ ಜೈವಿಕ ಇಂಧನ ತಯಾರಾಗುತ್ತಾ ಅಂತ ನಾವು ಕಾಯ್ತ ಇದ್ದೀವಿ. ಅದರಲ್ಲೂ ಪೆಟ್ರೋಲ್ ನ ಬೆಲೆ ಆಕಾಶ ಮುಟ್ಟುತ್ತಿರೋವಾಗ ಜತ್ರೋಪ ಪೆಟ್ರೋಲ್ ಯಾವಾಗ ಬರುತ್ತಪ್ಪ ಅಂತ ಆಸೆಯ ಕಣ್ಣುಗಳನ್ನ ತೆರೆದಿಟ್ಟು ಕಾಯೋ ಹಾಗಾಗಿದೆ.
ಸರ್ಕಾರ ಕೂಡ ಜತ್ರೋಪ ಬೆಳೆಯಿರಿ ಅಂತ ರೈತರಿಗೆಲ್ಲ ಉಚಿತವಾಗಿ ಗಿಡ ನೀಡ್ತಿದೆ. ರಿಯಾಯಿತಿ ದರದಲ್ಲಿ ರಸಗೊಬ್ಬರ ನೀಡ್ತಿದೆ. ಈಗ ರಸ್ತೆಯಲ್ಲೂ ಜತ್ರೋಪ ಬೆಳೆಯುವ ಕಸರತ್ತು ನಡೆದಿದೆ. ಆದಷ್ಟು ಬೇಗ ಜತ್ರೋಪ ಪೆಟ್ರೋಲ್ ಬರಲಪ್ಪ ಅನ್ನೋದೇ ನಮ್ಮ ಪ್ರಾರ್ಥನೆ.
ಈಗಷ್ಟೆ ಬರೆದ ಒಂದೆರಡು ಸಾಲು…
ನಿನ್ನ ನಿರೀಕ್ಷೆಯಲ್ಲೇ
ಕಾದು ಬಸವಳಿದು
ಮಣಭಾರವಾಗಿರುವ ಕಣ್ಣುಗಳ
ಒಮ್ಮೆ ಚುಂಬಿಸಿಬಿಡು
ನಿಶ್ಚಿಂತೆಯಾಗಿ ಮಲಗುತ್ತೇನೆ
ಇನ್ನೆಂದೂ
ಕಣ್ಣಿನ ಕದ ತೆರೆಯುವುದಿಲ್ಲ
-ಜಿತು
ನಮಗೆ ಭಾಷೆಗಿಂತ ಭವಿಷ್ಯ ಮುಖ್ಯ
ಒಂದೆರಡು ದಿನಗಳ ಹಿಂದಷ್ಟೆ ಭಾಷಾ ಮಾಧ್ಯಮದ ಬಗ್ಗೆ ಹೈಕೋರ್ಟ್ ನೀಡಿದ ತೀರ್ಪಿನ ಕುರಿತು ಗುಡುಗುತ್ತಿದ್ದ ಮಾಧ್ಯಮಗಳು ತಟ್ಟನೆ ತಣ್ಣಗಾಗಿವೆ. ಶಾಸಕರ ಪಕ್ಷಾಂತರದ ಸುದ್ದಿಯಲ್ಲಿ ಭಾಷೆಯ ವಿಚಾರ ತಂಗಳಾಗಿದೆ. ಕನ್ನಡಕ್ಕೆ ಮರಣದಂಡನೆ, ಸಿರಿಗನ್ನಡಂ ಗಲ್ಲಿಗೆ ಅನ್ನುವ ಪ್ರಚೋದನಾಕಾರಿ ಶೀರ್ಷಿಕೆಗಳೆಲ್ಲ ಒಂದೇ ದಿನದಲ್ಲಿ ಅರ್ಥ ಕಳೆದುಕೊಂಡಿವೆ. ಬೀದಿಗಿಳಿದು ಪ್ರತಿಭಟಿಸುತ್ತೇವೆ ಎಂದಿದ್ದ ಬುದ್ದಿಜೀವಿಗಳ ಬಳಗ ಅಕ್ಷರಶಃ ಕಣ್ಮರೆಯಾಗಿದೆ.
ಹೀಗೆ ನಾಡು-ನುಡಿ , ನೆಲ-ಜಲದ ವಿಷಯ ಬಂದಾಗಲೆಲ್ಲ ತಮ್ಮ ಬೇಳೆಯನ್ನು ಆದಷ್ಟು ಬೇಯಿಸಿಕೊಳ್ಳುವ ಒಂದಿಷ್ಟು ಪತ್ರಿಕೆಗಳಿಗೆ, ರಾಜಕೀಯ ಪಕ್ಷಗಳಿಗೆ, ಹಾಲಿ, ಭಾವೀ ಮತ್ತು ಮಾಜಿ ರಾಜಕಾರಣಿಗಳಿಗೆ ಹಾಗೂ ಕನ್ನಡವನ್ನು ತಾವೇ ಗುತ್ತಿಗೆಗೆ ಪಡೆದವರಂತೆ ಹೋರಾಟ, ಪ್ರತಿಭಟನೆಯ ಬೆದರಿಕೆ ಹಾಕುವ ಒಂದಿಷ್ಟು ಸಂಘಟನೆಗಳಿಗೆ ಹಾಗೂ ‘ಬುದ್ದಿ’ ಜೀವಿಗಳಿಗೆ ಭಾಷೆಯ ಕುರಿತು ನಿಜವಾದ ಕಾಳಜಿ ಎಷ್ಟಿದೆ? ಅವರೇನೋ ಪ್ರತಿಭಟನೆ ಹೋರಾಟ ಅಂತೆಲ್ಲ ಗಲಾಟೆ ಎಬ್ಬಿಸಿ ಸುಮ್ಮನಾಗಿ ಬಿಡುತ್ತಾರೆ. ಅದಕ್ಕೆಲ್ಲ ಸಿಕ್ಕಿ ಸಾಯುವವರು ಮಾತ್ರ ಸಾಮಾನ್ಯ ಜನ.
ಇಷ್ಟೆಲ್ಲ ಮಾತನಾಡುವ ಬಹುತೇಕ ಜನರ ಮಕ್ಕಳು ಓದುತ್ತಿರುವುದು ಮಾತ್ರ ಸೆಂಟ್ರಲ್ ಸ್ಕೂಲು ಮತ್ತು ಕಾನ್ವೆಂಟುಗಳಲ್ಲಿ. ಇನ್ನೊಂದೆಡೆ ಈಗಲೂ ನಮ್ಮ ಹಳ್ಳಿಗಳ ಎಷ್ಟೋ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವ ಮೇಷ್ಟ್ರುಗಳಿಲ್ಲ. ನನ್ನಂಥವರು ಓದಿದ್ದು ಅಂತಹ ಶಾಲೆಗಳಲ್ಲೇ. ಎಬಿಸಿಡಿ ಕಲಿಯುವ ಹೊತ್ತಿಗೆ ಏಳನೇ ಕ್ಲಾಸು ದಾಟಿದ್ದೆವು. ಹಿಂದಿ ಕಲಿಸಲು ಟೀಚರ್ ಇಲ್ಲಾ ಅನ್ನೋ ಕಾರಣಕ್ಕೆ ಸಾಮೂಹಿಕವಾಗಿ ಕಾಪಿ ಹೊಡಿಸಿ ಪಾಸ್ ಮಾಡಿಸಿದರು. ಒಂದು ಸಾಲನ್ನು ಉಲ್ಟಾ ಬರೆದರೆ ಅದೇ ಹಿಂದಿ ಅಂತ ಕೆಲವರು ಹೇಳಿಕೊಟ್ಟರು. ಹೀಗೆ ಕಲಿತುಕೊಂಡು ಕಾಲೇಜು ಮೆಟ್ಟಿಲು ತುಳಿದು ಬಂದರೆ , ಅಲ್ಲಿ ಇಂಗ್ಲಿಷು ಕಲಿತವರು, ಕಲಿಯದವರು ಅಂತ ಹೊಸದೆರಡು ಜಾತಿಗಳು! ಕಡೆಗೆ ಡಿಗ್ರಿ ಮುಗಿಸಿ ಕೆಲಸಕ್ಕೆ ಅರ್ಜಿ ಹಾಕುವಾಗ ಇಂಗ್ಲಿಷು ಬರುತ್ತದಾ? ಅಂತ ಒಂದು ದೊಡ್ಡ ಪ್ರಶ್ನೆ. ನಾವು ಹೌದು ಎಂದರಷ್ಟೆ ದೊಡ್ಡದೊಂದು ಉದ್ಯೋಗ! ಹೀಗಿರುವ ನಮಗೆ ಅದೆಷ್ಟೋ ಬಾರಿ ಕೀಳರಿಮೆ ಕಾಡಿದೆ. ಈಗಷ್ಟೆ ಸಾವಿರಾರು ಸುರಿದು ಸ್ಪೋಕನ್ ಇಂಗ್ಲಿಷ್ ಸೆಂಟರ್ ಗಳಿಗೆ ಹೋಗುತ್ತಿದ್ದೇವೆ. ನಾವು ಇಂಗ್ಲಿಷು ಕಲಿಯುತ್ತಿದ್ದೇವೆ!
ನಮ್ಮಂಥ ಸಾಮಾನ್ಯ ವರ್ಗದ ಜನರಿಗೆ ಇವತ್ತು ಇಂಗ್ಲಿಷ್ ಕಲಿಕೆಯ ಅಗತ್ಯತೆ ಕುರಿತು ಅರಿವಾಗುತ್ತಿದೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಂಗ್ಲಿಷನ್ನು ನಮ್ಮೆಲ್ಲರ ಭಾಷೆ ಅಂತ ಸ್ವೀಕರಿಸಿದ್ದೇವೆ. ಹೀಗಿರುವ ಜಗತ್ತಿನಲ್ಲಿ ನಮ್ಮ ಮಕ್ಕಳು ಇಂಗ್ಲಿಷು ಕಲಿಯದಿದ್ದರೆ ಭವಿಷ್ಯವಿಲ್ಲ ಎಂದು ಖಾತ್ರಿಯಾಗಿದೆ. ಅದಕ್ಕೆ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲೇ ಓದಿಸುವ ತೀರ್ಮಾನ ಕೈಗೊಳ್ಳುತ್ತಿದ್ದೇವೆ. ಸಾವಿರ ಗಟ್ಟಲೆ ಸುರಿದು ಮಕ್ಕಳನ್ನು ಕಾನ್ವೆಂಟುಗಳಿಗೆ ಸೇರಿಸುತ್ತಿದ್ದೇವೆ. ಸರಿಯಾದ ಸವಲತ್ತುಗಳಿಲ್ಲದ ಸರ್ಕಾರಿ ಶಾಲೆಗಳಿಗೆ ಗುಡ್ ಬೈ ಹೇಳುತ್ತಿದ್ದೇವೆ. ಇನ್ನು ಮುಂದೆ ಸರ್ಕಾರ ನಮ್ಮ ಮಕ್ಕಳಿಗೂ ಒಂದನೇ ತರಗತಿಯಿಂದ ಇಂಗ್ಲಿಷು ಕಲಿಸುವುದಾದರಷ್ಟೆ ಮಕ್ಕಳನ್ನು ಮತ್ತೆ ಸರಕಾರಿ ಶಾಲೆಗೆ ಕಳಿಸಲು ಯೋಚಿಸುತ್ತೇವೆ.
ಹಾಗಾಗಲು ಸಾಧ್ಯವಾಗದಿದ್ದರೆ, ಇನ್ನೂ ಸಾವಿರ ಸುರಿದಾದರೂ ಮಕ್ಕಳನ್ನು ಕಾನ್ವೆಂಟುಗಳಲ್ಲಿ ಓದಿಸುತ್ತೇವೆ. ಆದರೆ ಮನೆಯಲ್ಲಿ ಮಾತ್ರ ಅಪ್ಪಟ ದೇಸಿ ತನ ಕಲಿಸುತ್ತೇವೆ. ಅವರೊಂದಿಗೆ ಕನ್ನಡದಲ್ಲೇ ಮಾತನಾಡುತ್ತೇವೆ. ಕನ್ನಡದಲ್ಲೇ ಕಥೆ ಹೇಳುತ್ತಾ ನಿದ್ದೆ ಮಾಡಿಸುತ್ತೇವೆ. ಇಷ್ಟರ ಮಟ್ಟಿಗಷ್ಟೆ ನಮಗೆ ಭಾಷೆ ಉಳಿಸಿಕೊಳ್ಳಲು ಸಾಧ್ಯ. ನಮಗೆ ಶಾಸ್ತ್ರೀಯ ಸ್ಥಾನಮಾನ ಬೇಕಿಲ್ಲ. ಸಾಲು ಸಾಲು ಪ್ರಶಸ್ತಿಗಳು ಬೇಕಿಲ್ಲ. ನಮಗೆ ಭಾಷೆಗಿಂತ ಮಕ್ಕಳ ಭವಿಷ್ಯ ಮುಖ್ಯ.
ಬೇಕಿದ್ದರೆ ಬುದ್ದಿಜೀವಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಲಿ. ಮಂತ್ರಿ ಮಹಾಶಯರು ತಮ್ಮ ಮಕ್ಕಳನ್ನು ಕನ್ನಡದಲ್ಲೇ ಓದಿಸಿ ಆದರ್ಶ ಮೆರೆಯಲಿ!
ಬೀಡಿ ಬಂಡಲ್ಲಿನ ಶ್ಯಾಮ ಮತ್ತೆ ಸಿಕ್ಕಿದ್ದ!
ಅವನು ಮತ್ತೆ ಸಿಕ್ಕಿದ್ದ. ಏಳು ವರ್ಷಗಳ ಬಳಿಕ.
ಇವತ್ತು ಮೈಸೂರಿನಲ್ಲಿ ಬಂದ್ ಬಿಸಿ ನಿಧಾನವಾಗಿ ಏರುತ್ತಿತ್ತು.ಬಸ್ಸುಗಳು ಒಂದೊಂದಾಗಿ ನಿಲ್ದಾಣದಲ್ಲಿ ನಿಲ್ಲಲು ಶುರು ಮಾಡಿದ್ದವು. ಇಂತಹ ಇಕ್ಕಟ್ಟಿನಲ್ಲಿ ಆಫೀಸಿಗೆ ಹೋಗುವುದು ಹ್ಯಾಗಪ್ಪ ಅಂತ ಯೋಚಿಸುತ್ತಾ ನಿಂತಿರುವಾಗ, ಯಾರೋ ಹೆಗಲ ಮೇಲೆ ಕೈ ಹಾಕಿದಂತಾಗಿ ಹಿಂದಕ್ಕೆ ತಿರುಗಿದೆ. ನನ್ನ ವಯಸ್ಸಿನವನೇ ಆದ ಹುಡುಗ ನಗುತ್ತಾ ನಿಂತಿದ್ದ. ಚೆನ್ನಾಗಿ ಪರಿಚಯವೇ ಇರುವ ಮುಖ. ಆದರೂ ಅವನ ನೆನೆಪಾಗುತ್ತಿಲ್ಲ. ಹೀಗೆ ಯೋಚಿಸುತ್ತಲೇ ನಾನು ಪೇಚಿಗೆ ಸಿಲುಕಿದ್ದೆ. ಅವನು ಮತ್ತೊಮ್ಮೆ ನಕ್ಕ. ಗುರುತು ಸಿಕ್ಕಲಿಲ್ಲವಾ ಗುರು ಅಂದ. ನಾನು ಮತ್ತೇನನ್ನೂ ಹೇಳಬೇಕು, ಅಷ್ಟರಲ್ಲೆ ‘ನಾನು ಶ್ಯಾಮ’ ಅಂದ!
ಶ್ಯಾಮ…ಆರೇಳು ವರ್ಷಗಳ ಹಿಂದೆ ನನಗೆ ಮತ್ತು ನನ್ನ ಪುಡಾರಿ ಬಳಗಕ್ಕೆ ಕಾಸಿನ ಖಜಾನೆಯಾಗಿದ್ದಾತ. ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಆಗಿದ್ದವ. ಆವತ್ತು ಹೇಳದೇ ಕೇಳದೆ ಹೊರಟುಹೋಗಿದ್ದವನು, ಇವತ್ತು ಇಲ್ಲಿ ಹೀಗೆ ಸಿಕ್ಕಿದ್ದ.
ನಮ್ಮೂರಿನಲ್ಲಿ ಸುಮಾರು ವರ್ಷಗಳಿಂದ ಒಂದು ಬಿಸಿಎಂ ಹಾಸ್ಟೆಲ್ ಇದೆ.ನಾನು ಐದನೇ ಕ್ಲಾಸಿನಲ್ಲಿರುವಾಗ, ಈ ಹಾಸ್ಟೆಲ್ಲಿಗೆ ವಿದ್ಯಾರ್ಥಿಗಳ ಕೊರತೆ ಇದೆ ಅಂತ ಒಂದೇ ಊರಿನವರಾದ ನಮ್ಮನ್ನೆಲ್ಲ ಇಲ್ಲಿಗೆ ಸೇರಿಸಿಕೊಂಡಿದ್ದರು. ಅದೇ ಊರಾದ್ದರಿಂದ ನಮಗೆ, ಮನೆ ಮತ್ತು ಹಾಸ್ಟೆಲ್ಲಿನ ನಡುವೆ ಅಷ್ಟೇನು ವ್ಯತ್ಯಾಸ ಇರಲಿಲ್ಲ. ಹಾಸ್ಟೆಲ್ ಮೇ ಖಾನಾ, ಘರ್ ಮೇ ಸೋನಾ…ಎನ್ನುವಂತಿದ್ದೆ. ಒಂದೆರಡು ವರ್ಷ ಕಳೆಯಿತು. ನಾನು ಓದಿನಲ್ಲಿ ಒಂದಿಷ್ಟು ಮುಂದಿದ್ದರಿಂದ ಹೆಚ್ಚಿನ ಮನ್ನಣೆ ದೊರೆಯುತ್ತಿತ್ತು. ನನ್ನ ವಯಸ್ಸಿನ ಹುಡುಗರೆಲ್ಲರೂ ನನ್ನ ಸಂಗಡಕ್ಕೆ ಬಂದರು. ಒಂದರ್ಥದಲ್ಲಿ ನಾನೇ ಅಘೋಷಿತ ನಾಯಕನಾದೆ. ದಿನ ಕಳೆದಂತೆಲ್ಲ ನಮ್ಮ ಪಾರುಪತ್ಯೆ ಹೆಚ್ಚಾಗುತ್ತಾ ಹೋಯಿತು.
ನಾನು ಎಂಟನೇ ಕ್ಲಾಸಿನಲ್ಲಿದ್ದ ಸಂದರ್ಭ, ಕೊಳ್ಳೇಗಾಲದಿಂದ ಒಬ್ಬ ಹುಡುಗ ನಮ್ಮ ಹಾಸ್ಟೆಲ್ಲಿಗೆ ಬಂದು ಸೇರಿದ. ಅವನೇ ಈ ಶ್ಯಾಮ. ನಮ್ಮೂರಿನ ಅಂಗಡಿ ಮಾಲೀಕರೊಬ್ಬರ ಸಂಬಂಧಿ. ನನಗಿಂತ ಒಂದು ಕ್ಲಾಸು ದೊಡ್ಡವ. ಬಂದ ಹೊಸತರಲ್ಲಿ ನಮ್ಮ ಜೊತೆಗೇ ಇರುತ್ತಿದ್ದ. ನಮ್ಮ ಬೀದಿಯಲ್ಲೇ ಅವರ ಸಂಬಂಧಿಕರ ಮನೆ ಇದ್ದಿದ್ದರಿಂದ, ನಾವು ಬೆಳಿಗ್ಗೆ, ಸಾಯಂಕಾಲ ಮನೆಗೆ ಹೋಗುವಾಗ ಜೊತೆಗೆ ಬರುತ್ತಿದ್ದ. ಬಿಡುವಿನ ಸಮಯದಲ್ಲಿ ಅವನ ಸಂಬಂಧಿಕರ ಅಂಗಡಿಯಲ್ಲಿ ಕೂರುತ್ತಿದ್ದ. ನಮಗೆ ಇನ್ನಷ್ಟು ಹತ್ತಿರವಾದ.
ಹೀಗಿರುವ ಶ್ಯಾಮ ಬರುತ್ತಾ ಬರುತ್ತಾ ನಮ್ಮ ಜೊತೆ ಸೇರುವುದನ್ನು ಕಡಿಮೆ ಮಾಡಿದ. ಹಾಸ್ಟೆಲ್ಲಿನಲ್ಲಿ ಅವನ ಜನಪ್ರಿಯತೆ ಹೆಚ್ಚಾಯಿತು. ತನ್ನದೇ ಬಳಗ ಕಟ್ಟಿಕೊಂಡ. ಅವರಿಗೆಲ್ಲ ಸಂಜೆ ಟೀ ಕುಡಿಸುವುದು, ಬಜ್ಜಿ ಕೊಡಿಸಲು ಶುರು ಮಾಡಿದ. ಕಡೆಗೆ ಚಿಲ್ಲರೆ ಕಾಸನ್ನು ಹಂಚುತ್ತಿದ್ದ. ನಮಗೋ ಇದೆಲ್ಲವನ್ನೂ ಕಂಡು ಹೊಟ್ಟೆ ಉರಿ. ಇಷ್ಟು ದುಡ್ಡು ಎಲ್ಲಿಂದ ತರುತ್ತಾನೆ ಅಂತ ಸಂಶಯ. ಕಡೆಗೆ ಇವನನ್ನು ಹಿಂಬಾಲಿಸುವ ತೀರ್ಮಾನ ಕೈಗೊಂಡೆವು. ನಮ್ಮ ಕೇರಿಯ ಹೊರ ಭಾಗದಲ್ಲಿರುವ, ನನ್ನ ಸಹಪಾಠಿಯ ಮಾವನ ಅಂಗಡಿಯ ಹತ್ತಿರ ಈ ಶ್ಯಾಮ ಆಗಾಗ್ಗೆ ಹೋಗಿ ಬರುತ್ತಿದ್ದ. ದಿನ ಕಳೆದಂತೆ ನಮ್ಮ ಸಂಶಯ, ಕೋಪ ಎರಡೂ ಹೆಚ್ಚಾಯಿತು. ಕಡೆಗೊಂದು ದಿನ ಅವನ ಡ್ರಾಯರ್ ಒಡೆದು ‘ಸತ್ಯಾಂಶವನ್ನು’ ಹೊರಗೆಡವಲು ತೀರ್ಮಾನಿಸಿದೆವು.
ಒಂದು ಭಾನುವಾರ ಮಧ್ಯಾಹ್ನ, ಯಾವ ಹುಡುಗರು ಇಲ್ಲದಿದ್ದನ್ನು ಖಾತ್ರಿ ಮಾಡಿಕೊಂಡು ಅವನ ರೂಮು ಹೊಕ್ಕು, ಗುದ್ದಲಿಯಿಂದ ಡ್ರಾಯರ್ ನ ಬೀಗ ಮೀಟಿದೆವು. ಆಗ ಒಳಗೆ ಕಂಡಿದ್ದು ಒಂದಿಷ್ಟು ಬೀಡಿ ಬಂಡಲ್ಲುಗಳು! ಇವನು ಕದ್ದು ಸೇದುವುದಕ್ಕೆ ಇಷ್ಟೊಂದು ಬೀಡಿಯಾ ಅಂದುಕೊಂಡೆವು. ಆದರೆ ಅದು ಕದ್ದು ಸೇದಲಿಕ್ಕಲ್ಲ, ಕದ್ದು ತಂದು ಸಂಗ್ರಹಿಸಿದ್ದಾಗಿತ್ತು.
ಮಾರನೇ ದಿನ ಗಸಗಸೆ ಮರದ ಬಳಿ ಶ್ಯಾಮನನ್ನು ನಿಲ್ಲಿಸಿ, ನಾವು ಸುತ್ತ ನಿಂತು ‘ತನಿಖೆ’ ಆರಂಭಿಸಿದೆವು. ನಿಜ ಹೇಳದಿದ್ದರೆ ವಾರ್ಡನ್ ಗೆ ಹಿಡಿದುಕೊಡುತ್ತೇವೆ ಅಂತ ಹೆದರಿಸಿದೆವು. ಶ್ಯಾಮ ಮೊದಮೊದಲು ಕೊಸರಾಡಿದನಾದರೂ, ಆಮೇಲೆ ಸತ್ಯ ಒಪ್ಪಿಕೊಂಡ.ಅದನ್ನು ತನ್ನ ಸಂಬಂಧಿಕರ ಮನೆಯಿಂದ ಕದ್ದು ತರುತ್ತಿರುದಾಗಿಯೂ,ಹೀಗೆ ತಂದದ್ದನ್ನು ನಮ್ಮ ಸಹಪಾಠಿಯ ಮಾವನ ಅಂಗಡಿಗೆ ಅರ್ಥ ರೇಟಿಗೆ ಮಾರುತ್ತಿರುವುದಾಗಿಯೂ ಹೇಳಿದ.
ನಮ್ಮಲ್ಲಿ ಒಂದಿಬ್ಬರು ಇದನ್ನೇ ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಉಪಾಯ ನೀಡಿದರು. ಅದರಂತೆ ಶ್ಯಾಮ ತಾನು ಬಂಡಲ್ ಗಟ್ಟಲೆ ಬೀಡಿ ಕದಿಯುವುದನ್ನು ಮುಂದುವರಿಸಬಹುದೆಂದು, ಅದಕ್ಕೆ ಪ್ರತಿಯಾಗಿ ನಮ್ಮ ‘ಸಂಘ’ಕ್ಕೆ ಇಂತಿಷ್ಟು ಮಾಮೂಲಿ ನೀಡಬೇಕೆಂದು ಒಪ್ಪಂದವಾಯಿತು. ಶ್ಯಾಮನ ದಿಸೆಯಿಂದ ನಮ್ಮ ಮೋಜು ಇನ್ನಷ್ಟು ಹೆಚ್ಚಾಗುತ್ತಾ ಹೋಯಿತು. ಕ್ರಿಕೆಟ್ ಮ್ಯಾಚಿಗೆ ಬೆಟ್ಟಿಂಗು ಕಟ್ಟಲು ಹಣ ಇಲ್ಲದಿದ್ದಾಗಲೆಲ್ಲ ಈ ಶ್ಯಾಮನ ಬಳಿ ಸಾಲ ಪಡೆದದ್ದು ಉಂಟು. ಆದರೆ ಹಾಗೇ ಈಸಿಕೊಂಡ ಸಾಲವನ್ನು ವಾವಸ್ಸು ಕೊಟ್ಟದ್ದು ಮಾತ್ರ ನೆನಪಿಲ್ಲ.
ಹೀಗೆ ಕಾಲ ಸಾಗುತ್ತಿತ್ತು. ಇನ್ನೊಂದೆಡೆ ಅಂಗಡಿಯಲ್ಲಿ ಬೀಡಿ ಬಂಡಲ್ಲುಗಳು ಕಾಣೆಯಾಗುತ್ತಿರುವ ಕುರಿತು ಶ್ಯಾಮನ ಸಂಬಂಧಿಕರಿಗೆ ಅನುಮಾನ ಶುರುವಾಯಿತು. ಅವರೊಂದು ಉಪಾಯ ಹೂಡಿದರು. ಎಲ್ಲ ಬಂಡಲ್ಲುಗಳ ಮೇಲೆ ತಮ್ಮ ಅಂಗಡಿಯ ಹೆಸರು ಮತ್ತು ಬಂಡಲ್ಲಿನ ನಂಬರನ್ನು ಬರೆದಿಟ್ಟರು. ಅದೊಂದು ದಿನ ನಮ್ಮ ಮತ್ತು ಶ್ಯಾಮನ ಅದೃಷ್ಟ ಕೆಟ್ಟಿತ್ತು. ಬೀಡಿ ಬಂಡಲ್ಲು ಕದ್ದ ಶ್ಯಾಮ ಅದನ್ನು ತನ್ನ ಅಂಗಿಯೊಳಗೆ ಅವಿತಿಟ್ಟುಕೊಂಡು, ನೇರ ಇನ್ನೊಂದು ಅಂಗಡಿಗೆ ನಡೆದ. ಅಂಗಡಿಯಾತ ಸೈಕಲನ್ನೇರಿ ಶ್ಯಾಮನನ್ನು ಹಿಂಬಾಲಿಸಿದ. ಅಲ್ಲಿ ಕದ್ದುತಂದ ಬಂಡಲ್ಲಿಗೆ ಬೆಲೆ ಕಟ್ಟುತ್ತಿದ್ದ ಸಂದರ್ಭ ಶ್ಯಾಮ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ.
ಬೀಡಿ ಕದ್ದು ಮಾರುತ್ತಿದ್ದ ಶ್ಯಾಮ, ಮತ್ತದನ್ನು ಕೊಂಡುಕೊಳ್ಳುತ್ತಿದ್ದ ನನ್ನ ಸಹಪಾಠಿಯನ್ನು ಮಾರನೇ ದಿನ ಶಾಲೆಗೆ ಕರೆತಂದರು. ಅಲ್ಲಿ ಪ್ರಿನ್ಸಿಪಾಲರ ಎದುರು ಇಬ್ಬರನ್ನು ಬಡಿದರು. ಇತ್ತ ಎಲ್ಲಿ ಶ್ಯಾಮ ನಮ್ಮ ಹೆಸರನ್ನೆಲ್ಲ ಹೇಳಿ ಬಿಡುವನೋ ಎಂದು ನಾವು ಹೆದರಿದ್ದೆವು. ಆದರೆ ಹಾಗಾಗಲಿಲ್ಲ. ಅವನು ನಮ್ಮ ಯಾರ ಹೆಸರನ್ನು ಅಪ್ಪಿ ತಪ್ಪಿಯೂ ಹೇಳಲಿಲ್ಲ. ಕಡೆಗೊಂದು ದಿನ ರಾತ್ರಿ ಶ್ಯಾಮನ ತಂದೆ ತಾಯಿ ಬಂದು ಅವನನ್ನು ಊರಿಗೆ ಕರೆದೊಯ್ದುರು. ಬೆಳಿಗ್ಗೆ ಸ್ಕೂಲಿಗೆ ಬಂದ ಮೇಲಷ್ಟೆ ಅವನು ಊರು ಬಿಟ್ಟದ್ದು ಗೊತ್ತಾದದ್ದು. ನಮ್ಮಂದಿಲೇ ಒಂದು ಹುಡುಗನ ಭವಿಷ್ಯ ಹಾಳಾಯಿತಲ್ಲ ಎಂಬ ಕೊರಗು ಆಗಾಗ್ಗೆ ಕಾಡುತ್ತಿತ್ತು.
ಇಂತಿಪ್ಪ ಶ್ಯಾಮ ಇವತ್ತು ಇದ್ದಕ್ಕಿದ್ದ ಹಾಗೆ ಸಿಕ್ಕು, ಹೆಗಲ ಮೇಲೆ ಕೈ ಇಟ್ಟಾಗ ಒಮ್ಮೆ ಮೈ ಜುಮ್ಮೆಂದಿತು. ಹಳೆಯ ಆಟಗಳೆಲ್ಲ ಮತ್ತೆ ನೆನಪಾಯಿತು. ಅವನನ್ನು ಒಂದಿಷ್ಟು ಮಾತನಾಡಿಸಿ, ಮತ್ತೆ ಇಲ್ಲಿ ಬಂದು ಅದೆನ್ನೆಲ್ಲ ಟೈಪಿಸುತ್ತಾ ಕುಳಿತಿದ್ದೇನೆ. ಮನಸ್ಸಿನಲ್ಲಿ ಇದ್ದದ್ದನೆಲ್ಲ ಒಂದಿಷ್ಟು ಬಿಡದೇ ಒದರುತ್ತಿದ್ದೇನೆ. ಮನಸ್ಸು ಹಗುರವಾಗುತ್ತಿದೆ….
ಇಲ್ಲೊಂದು ಬ್ಲಾ-ಗಿಲು ತೆರೆದುಕೊಂಡಿದೆ
ಇವತ್ತಿನಿಂದ ನನ್ನದೊಂದು ಬ್ಲಾಗ್ ಬಾಗಿಲು ಬ್ಲಾಗಿನಂಗಳಕ್ಕೆ ತೆರೆದುಕೊಳ್ಳುತ್ತಿದೆ.
ನನ್ನದೇ ಒಂದು ಬ್ಲಾಗ್ ತೆರೆಯಬೇಕೆಂಬ ಬಯಕೆ ಬಹು ದಿನಗಳಿಂದ ಇತ್ತಾದರೂ,ಅಂತಹ ಬಯಕೆಗಳಿಗೆಲ್ಲ ಒಂದಿಷ್ಟು ದಿನ ಬೀಗ ಜಡಿದು, ಹಾಗೇ ಸುಮ್ಮನೆ ಮಜಾ ನೋಡುತ್ತಿದ್ದೆ. ಈಗ ಇದಕ್ಕೆಲ್ಲ ‘ಮುಹೂರ್ತ’ ಕೂಡಿ ಬಂದಂತಿದೆ.
ಅಸಲಿಗೆ ಈ ಬ್ಲಾಗ್ ಲೋಕದ ಪರಿಚಯವಾದದ್ದೇ ವರ್ಷದ ಹಿಂದೆ.ಟೈಮ್ಸ್ ಬಿಟ್ಟು ಕೆಂಡಸಂಪಿಗೆ ಸೇರಿದ ಬಳಿಕ ಈ ಜಗತ್ತು ಇನ್ನಷ್ಟು ಆತ್ಮೀಯವಾಗುತ್ತಾ ಬಂದಿದೆ. ಕಳೆದ ನಾಲ್ಕು ತಿಂಗಳಿನಿಂದ ಇಲ್ಲಿ ನಿತ್ಯ ಸಂಚಾರ ಮಾಡುತ್ತಿದ್ದೇನೆ.ಇಲ್ಲೇ ಒಂದಿಷ್ಟು ವಿಸ್ಮಯಗಳನ್ನು, ವಿಚಾರಗಳನ್ನು, ವಾದ-ವಿವಾದಗಳನ್ನೆಲ್ಲ ಕಾಣುತ್ತಾ ಬಂದಿದ್ದೇನೆ.ಈಗಷ್ಟೆ ಮುಗಿಲ ಕಂಪಿಗೆ ಮುನ್ನುಡಿ ಬರೆಯುತ್ತಿದ್ದೇನೆ.
ಮುಂಗಾರಿನ ಮೊದಲ ಮಳೆಗೆ ನೆಲವೆಲ್ಲ ಒದ್ದೆಯಾಗಿ, ಇದ್ದಬದ್ದ ಧೂಳೆಲ್ಲ ಆಗಸಕ್ಕೇರುವಾಗ ಘಮ್ಮಂಥ ಒಂದು ವಾಸನೆ ಬರುತ್ತದೆಯಲ್ಲಾ.ಅಂತಹದ್ದೇ ಮಣ್ಣಿನ ವಾಸನೆ ಮುಗಿಲ ಕಂಪಾಗಿ ಮೂಡಿಬರಲಿದೆ. ವಾರಕ್ಕೊಮ್ಮೆಯಾದರೂ ಬರೆಯಬೇಕೆಂಬ ದೂರದಾಸೆ-ದುರಾಸೆ ಎರಡೂ ನನ್ನದು.
ಇವರು ಹೀಗೆಂದರು..