Archive for ಆಗಷ್ಟ್, 2008

ಪರೀಕ್ಷೆ ಹೊತ್ತಲ್ಲಿ ಒಂಟಿ ಹುಡುಗಿಯ ಧ್ಯಾನ

ಇವತ್ತು ಕತ್ತಲು ಕಳೆದು ಬೆಳಕು ಮೂಡಿ ನಾಳೆಯಾದರೆ ಎಂಎ ಪರೀಕ್ಷೆ. ಹಾಗಂತ ಒಬ್ಬರಮೇಲೊಬ್ಬರು ಮೆಸೇಜು ಮಾಡಿ ಎಚ್ಚರಿಸುತ್ತಿದ್ದಾರೆ! ನಾನಿನ್ನು ಪುಸ್ತಕದ ಧೂಳು ಕೆಡವಿ ಪುಟ ತೆರೆಯುವ ಸಾಹಸವನ್ನೂ ಕೈಗೊಂಡಿಲ್ಲ! ಯಾವತ್ತೂ ಅಷ್ಟೆ. ಈ ಪರೀಕ್ಷೆಗೆ ಓದೋದು ಅಂದ್ರೆ ನಂಗೆ ಎಲ್ಲಿಲ್ಲದ ಜಿಗುಪ್ಸೆ, ವೈರಾಗ್ಯ. ಪಠ್ಯ ಪುಸ್ತಕಗಳು ಅಂತಂದ್ರೆ ಒಂದ್ ರೀತಿ ಮುಜುಗರ. ಸಿಲಬಸ್ ಅನ್ನೋ ಒಂದೇ ಕಾರಣಕ್ಕೆ ಅದೆಷ್ಟೋ ಒಳ್ಳೊಳ್ಳೆ ಪುಸ್ತಕಗಳನ್ನೆಲ್ಲ ಓದದೇ ಹಾಗೇ ಮಡಿಸಿಟ್ಟಿದ್ದೀನಿ. ಡಿಗ್ರಿ ಎರಡನೇ ವರ್ಷದಲ್ಲಿದ್ದಾಗ ‘ಶಬ್ದಮಣಿದರ್ಪಣಂ’ ನನ್ನ ಸಿಲಬಸ್ಸಾಗಿತ್ತು. ಮೊದಲ ದಿನ ಕ್ಲಾಸಿಗೆ ಹೋಗಿದ್ದೇ ಕಡೆ. ಇನ್ಯಾವತ್ತೂ ಆ ಪಾಠ ಕೇಳಿಲ್ಲ. ದರ್ಪಣಂ ಮುಟ್ಲಿಲ್ಲ. ಕಡೆ ದಿನ ಜೆರಾಕ್ಸ್ ನೋಟ್ಸೇ ಗತಿಯಾಯ್ತು. ಇಂತಹದ್ದೊಂದು ಭಂಡಧೈರ್ಯ ಅದ್ಯಾಗೋ ನನಗೆ ಗೊತ್ತಿಲ್ಲದೆ ನನ್ನೊಳಗೆ ಸೇರಿಕೊಂಡಿದೆ.

ಈ ಅತಿಯಾದ ಆತ್ಮವಿಶ್ವಾಸ ಕೆಲವೊಮ್ಮೆ ಕೈ ಕೊಟ್ಟಿದ್ದೂ ಉಂಟು. ಐದನೇ ಸೆಮಿಸ್ಟಾರಿನಲ್ಲಿ ಹಿಂಗೇ ಆಯ್ತು. ‘ಭಾರತೀಯ ಕಾವ್ಯ ಮೀಮಾಂಸೆ’ ಯನ್ನ ಅರಗಿಸಿಕೊಳ್ಳಲಾರದೇ, ಬರೆದರಾಯಿತು ಅಂತನ್ನೋ ಅತೀ ವಿಶ್ವಾಸದೊಂದಿಗೆ ಪರೀಕ್ಷಾ ಹಾಲ್ ಗೆ ಹೋದೆ. ಪ್ರಶ್ನೆಪತ್ರಿಕೆ ನೋಡಿದ್ದೇ, ಕಣ್ಣು ಮಂಜಾಗಿ ತಲೆ ಸುತ್ತು ಬಂತು! ಇನ್ನೂ ಬರೆಯಲಾರೇ ಅನಿಸಿದ್ದೇ, ಮುಂದಿನ್ ಸೆಮ್ ನಲ್ಲಿ ಬರೆದರಾಯ್ತು ಅಂತಂದು , ಸಹಿ ಮಾಡಿದ ಖಾಲಿ ಉತ್ತರ ಪತ್ರಿಕೆ ನೀಡಿ ಹೊರಬಿದ್ದೆ. ರಿಸಲ್ಟ್ ದಿನ ನೋಡಿದ್ರೆ ಕನ್ನಡದಲ್ಲಿ ಪಾಸಾಗಿಬಿಟ್ಟಿದ್ದೆ (ಡಿಗ್ರಿ ಅಂತಿಮ ವರ್ಷದಲ್ಲಿ ನನ್ನಂತ ಸೋಮಾರಿಗಳು, ಪೆದ್ದರಿಗಾಗಿ ಒಂದು ಅನುಕೂಲ ಇದೆ. ಒಂದು ಐಚ್ಚಿಕ ವಿಷಯದಲ್ಲಿ ಮೂರು ಪತ್ರಿಕೆ ಇರುತ್ತೆ. ಒಟ್ಟಾರೆ ಗರಿಷ್ಟ ಅಂಕ ೩೦೦, ಯಾವ ಪತ್ರಿಕೆಯಲ್ಲಿ ಎಷ್ಟಾದರೂ ಅಂಕ ತೆಗೀರಿ ಬಿಡಿ. ಒಟ್ಟು ಮೂರರಿಂದ ೧೨೦ ಮಾರ್ಕ್ಸ್ ತೆಗಿದ್ರೆ ಸಾಕು. ನಂದು ಇಂಟರ್ನಲ್ಸ್ ಸೇರಿ ೧೯೫ ಮಾರ್ಕ್ಸ್ ಬಂತು!)

ನಿನ್ನೆ ಭಾನುವಾರ ಬೆಳಿಗ್ಗೆ ಒಂಭತ್ತಾದರೂ ಹಾಸಿಗೆಯಿಂದೇಳದೇ ನೆಮ್ಮದಿಯಿಂದಿದ್ದವನಿಗೆ ನಿದ್ರಾಭಂಗ ಮಾಡಿಸಲೆಂದೇ ಫೋನೊಂದು ಬಂದಿತ್ತು. ನನ್ನದೊಂದು ಬುಕ್ ಕಾಣ್ತಿಲ್ಲ, ನಿನ್ ಹತ್ರ ಇರೋ ಅದೇ ಸಿಲಬಸ್ ಬುಕ್ ನ ನಾಳೆ ತಕೊಂಡ್ ಬಾ, ಸಿಬಿಎಸ್ ಪಾಸ್ ಕೌಂಟರ್ ಹತ್ರ ಅಂತಂದು ಗೆಳೆಯ ಕಾಲ್ ಮಾಡಿದ್ದ. ಹೀಗಾಗಿ ಅನಿವಾರ್ಯವಾಗಿ ಪುಸ್ತಕ ಹುಡುಕೋ ಕಾರ್ಯ ಶುರುವಾಯ್ತು. ಹೀಗೆ ಹುಡುಕಲು ಶುರುಮಾಡಿದ್ದೇ ಮೊದಲು ಕೈಗೆ ಸಿಕ್ಕಿದ್ದು ಆಟೋಗ್ರಾಫ್ ಬುಕ್. ಅದನ್ನೆಲ್ಲ ಇಂಚಿಂಚು ಬಿಡದೇ ಓದಿ ಏನೋನೋ ನೆನಪಾಗಿ, ಸ್ವಲ್ಪ ಎಮೋಷನಲ್ ಆಗಿ, ಒಂದಿಬ್ಬರಿಗೆ ಕಾಲ್ ಮಾಡಿ ಸುಧಾರಿಸಿಕೊಳ್ಳೋ ಹೊತ್ತಿಗೆ ಒಂದೆರಡು ಗಂಟೆಗಳೇ ಬೇಕಾಯ್ತು. ಆಮೇಲೆ ನನ್ನ ಎಂಎ ಸಿಲಬಸ್ಸಿನ ಒಂದೊಂದೇ ಪುಸ್ತಕ ಕೈಗೆ ಸಿಗಲು ಶುರುವಾಯ್ತು. ಅಡ್ಮಿಷನ್ ಆಗಿ ಒಂದು ದೊಡ್ಡ ಗಂಟಿನ ಪುಸ್ತಕದ ಹೊರೆ ಪಡೆದಿದ್ದೆ ನೇರ ಮನೆಗೆ ತಂದು ಕಟ್ಟು ಬಿಚ್ಚಿ ಅಲ್ಲಲ್ಲಿ ಕೆಡವಿದ್ದೆ. ಆಮೇಲೆ ಹೀಗೊಂದು ಕಟ್ಟು ಇರೋದೆ ಮರೆತೋಯ್ತು. ಹಿಂಗೆ ಪುಸ್ತಕ ಹುಡುಕೋವಾಗ್ಲೆ ನಂಗೆ ಇನ್ನೊಂದು ಅಮೂಲ್ಯ ವಸ್ತು ಸಿಕ್ತು ಅದು ಅವಳ ಡೈರಿ!

ಈ ‘ಅವಳು’ ಅಂದ್ರೆ ಬೇರ್ಯಾರೂ ಅಲ್ಲ. ಅನ್ನಾ ಫ್ರಾಂಕ್. ಹಿಟ್ಲರನ ಕಾಲದಲ್ಲಿ ಬಲಿಯಾದ ಅದೆಷ್ಟೋ ಯಹೂದಿಗಳಲ್ಲಿ ಒಬ್ಬಳು. ಈಕೆ ತನ್ನ ಹದಿನಾಲ್ಕೊ- ಹದಿನೈದನೇ ವಯಸ್ಸಿನಲ್ಲಿ ಬರೆದುಕೊಂಡಿದ್ದ ಡೈರಿ ಅವಳು ಸತ್ತ ಅದೆಷ್ಟೋ ವರ್ಷಗಳ ಬಳಿಕ ಪ್ರಕಟ ಆಗಿ, ಜನಪ್ರಿಯ ಆಯ್ತು. ಆಗಷ್ಟೆ ಹರೆಯದ ಕಣ್ಣು ತೆರೆಯುತ್ತಿದ್ದ ಹೆಣ್ಣು ಮಗಳೊಬ್ಬಳು ಯುದ್ಧಾಕಾಂಕ್ಷಿ ಜರ್ಮನಿಯನ್ನು ತನ್ನ ಕಂಗಳಲ್ಲಿ ಕಂಡಬಗೆಯೇ ಭಿನ್ನ. ಈ ಡೈರಿಯದ್ದೊಂದು ಅಧ್ಯಾಯ ನಮಗೆ ಪಿಯುಸಿ ಯಲ್ಲಿ ಪಠ್ಯವಾಗಿತ್ತು. (ಹಾ! ಪಿಯುಸಿನಲ್ಲಿ ನಾನ್ ತಪ್ಪದೇ ಕ್ಲಾಸಿಗೆ ಹೋಗ್ತಿದ್ದೆ. ಅದಕ್ಕೆ ಬೇರೆ ಕಾರಣವೂ ಇತ್ತು ಬಿಡಿ). ಒಂದೆರಡು ವರ್ಷದ ಹಿಂದೆ ಗೆಳೆಯರೆಲ್ಲ ಒಟ್ಟಾಗಿ ಹರಟುತ್ತಿದ್ದಾಗ ನನಗೇಕೋ ಈಕೆಯ ನೆನಪಾಗಿ ಇವಳ ವಿಷಯ ಎತ್ತಿದ್ದೆ. ಆಮೇಲೆ ಮೊದಲನೇ ವರ್ಡ್ ವಾರ್, ಜರ್ಮನಿ, ಹಿಟರ್- ನಾಜಿ, ಯಹೂದಿಗಳ ನರಮೇಧ ಅಂತೆಲ್ಲ ಚರ್ಚೆಯಾಗಿ ಕಡೆಗೆ ಈ ಅನ್ನಾ ಫ್ರಾಂಕ್ ಳ ಡೈರಿ ಇಟ್ಟುಕೊಂಡೇ ಒಂದು ನಾಟಕ ಪ್ರಯೋಗ ಮಾಡಬೇಕು ಅನ್ನೋ ನಿರ್ಧಾರಕ್ಕೆ ಬಂದ್ವಿ. ಸ್ಕ್ರಿಪ್ಟ್ ಬರೆಯೋ ಕೆಲಸ ನನ್ನ ಹೆಗಲ ಮೇಲೆ ಬಿತ್ತು. ಹೀಗೆ ಬಂದಿದ್ದೇ ಒಂದ್ ದಿನ ಹತ್ತಿರದ ಬ್ರೌಸಿಂಗ್ ಸೆಂಟರಿಗೆ ನುಗ್ಗಿ, ಸತತ ಆರೂವರೆ ಗಂಟೆ ಕಾರ್ಯಚರಣೆ ನಡೆಸಿ, ಸಿಕ್ಕ ವಿಷಯಗಳು, ಒಂದಿಷ್ಟು ಫೋಟೊಗಳೆನ್ನೆಲ್ಲ ಪ್ರಿಂಟ್ ಔಟ್ ತೆಗೆಸಿ ಜೇಬು ಖಾಲಿಮಾಡಿಕೊಂಡು ಬಂದಿದ್ದೆ. ರಂಗಾಯಣದಲ್ಲಿ ಒಂದಿಷ್ಟು ಸಂಜೆ ಈ ಚರ್ಚೆಯ ನೆಪದಲ್ಲಿ ಟೀ ಕುಡಿಯುತ್ತಾ ಲೆಕ್ಕವಿಲ್ಲದಷ್ಟು ಭಜ್ಜಿ ತಿಂದಿದ್ವಿ. ನಾನೂ ಅದೇ ಉತ್ಸಾಹದಲ್ಲಿ ನಾಲ್ಕಾರು ಪುಟ ಬರೆದಿದ್ದೆ. ಆಮೇಲೆ ಕೆಲಸಕ್ಕೆ ಸೇರಿದ ಮೇಲೆ ನನ್ನ ಎಂದಿನ ಸೋಮಾರಿತನದಿಂದಾಗಿ ಹೆಚ್ಚೇನು ಬರೆಯಲಾಗಲಿಲ್ಲ.

ಈಗ ಪರೀಕ್ಷೆ ಹೊತ್ತಲ್ಲಿ ಆ ಪುಟಗಳೆಲ್ಲ ಒಂದೊಂದಾಗಿ ಸಿಕ್ಕಿ, ನೆನ್ನೆಯಲ್ಲಾ ಅದನ್ನ ಓದೋದ್ರಲ್ಲೇ ಕಾಲ ಕಳೆದದ್ದಾಯಿತು. ಅವಳ ಬಗ್ಗೆ ಶ್ರೀಘ್ರದಲ್ಲೇ ಒಂದು ನಾಟಕದ ಸ್ಕ್ರಿಪ್ಟ್ ಬರೆದುಕೊಡ್ತೀನಿ ಅಂತ ಮತ್ತೆ ಗೆಳೆಯರಿಗೆ ಭರವಸೆ ಕೊಟ್ಟದ್ದೂ ಆಯಿತು. ಈ ಸಲ ಆದ್ರೂ ಬರೀಬೇಕು ಅನ್ನೋ ದೂರದಾಸೆ ನನ್ನದು.

ಬೆಳಿಗ್ಗೆ ಮತ್ತೊಮ್ಮೆ ಎಲ್ಲ ಕೆದಕಿ ,ಬೆದಕಿ ಕೂಡಿ ಕಳೆದೂ ಲೆಕ್ಕ ಹಾಕಿದ್ರೆ ಇಪ್ಪತ್ತರಲ್ಲಿ ಹದಿನಾರು ಪುಸ್ತಕ ಮಾತ್ರ ಇವೆ. ಇನ್ನೂ ನಾಲ್ಕು ನಾಪತ್ತೆ.  ಏನಾದ್ರೂ ಬರೆದರೆ ಆಯ್ತು ಅಂತ ಇನ್ನೊಮ್ಮೆ ಭಂಡ ಧೈರ್ಯದೊಂದಿಗೆ ನಾಳೆ ಪರೀಕ್ಷೆ ಬರೀಲಿಕ್ಕೆ ಹೊರಟಿದ್ದೇನೆ. ನೀವೂ ಯಾರಾದ್ರೂ ಕೆ ಎಸ್ ಒ ಯು ನಲ್ಲಿ ಎಂಎ ಪರೀಕ್ಷೆ (ಓನ್ಲಿ ಜರ್ನಲಿಸಂ) ಕಟ್ಟಿದ್ರೆ, ನಾಳೆ ಪರೀಕ್ಷೆ ಬರೀಲಿಕ್ಕೆ ಬರ್ತಿದ್ರೆ, ಅಪ್ಪಿ ತಪ್ಪಿ ನನ್ನ ಪಕ್ಕ ಏನಾದ್ರೂ ಕುತ್ಕೋಂಡ್ರೆ ಸ್ವಲ್ಪ ಹೆಲ್ಪ್ ಮಾಡಿ ಪ್ಲೀಸ್!

ಆಗಷ್ಟ್ 25, 2008 at 3:09 ಅಪರಾಹ್ನ 1 comment

ವೀರಪ್ಪನ್ ಸಮಾಧಿ ಹುಡುಕಿ ತಮಿಳುನಾಡಿನಲ್ಲಿ ಅಲೆದದ್ದು

ೂತಣ್ಣ

ಭೂತಣ್ಣ

ಬೆಳಿಗ್ಗೆ ಗೆಳೆಯನೊಂದಿಗೆ ಬೈಕನ್ನೇರಿ ಮಹದೇಶ್ವರನ ಬೆಟ್ಟ ಬಿಟ್ಟವನು ಅಲ್ಲಿ ಇಲ್ಲಿ ಸುತ್ತಿ ಗೋಪಿನಾಥಂ ತಲುಪುವ ಹೊತ್ತಿಗೆ ಸಂಜೆಯಾಗತೊಡಗಿತ್ತು. ವೀರಪ್ಪನ್ ನ ಹುಟ್ಟೂರಿನ ಈ ಜನರನ್ನು ಮಾತನಾಡಿಸಬೇಕೆಂದೇ ಮೈಸೂರಿನಿಂದ ೧೮೦ ಕಿ.ಮೀ ಅಲೆದು ಇಲ್ಲಿಗೆ ಬಂದಿದ್ದೆ. ಬಹುತೇಕ ತಮಿಳರೇ ಇರುವ ಗಡಿನಾಡ ಕನ್ನಡದ ಊರಿದು. ಅಲ್ಲಿದ್ದ ಜನಕ್ಕೆ ನಮ್ಮ ಮಾತು ಕಂಡು ‘ಇವರು ಪತ್ರಿಕೆಯವರಿರಬೇಕು’ ಅಂತ ಖಾತ್ರಿಯಾಗಿರಬೇಕು. ವೀರಪ್ಪನ್ ಅಂದರೆ ಸಾಕು, ಅವರ್ಯಾರು ಎಂಬುದೇ ತಮಗೆ ಗೊತ್ತಿಲ್ಲ ಎಂಬರ್ಥದಲ್ಲಿ ಮಾತನಾಡತೊಡಗಿದರು. ಅವರಿಂದ ಒಂದಿಷ್ಟು ಅದೂ ಇದು ವಿಚಾರಗಳನ್ನು ಕೆದಕುವುದಕ್ಕೆ ಬೆವರಿಳಿಸಬೇಕಾಯಿತು.

ಸರಿ ಇನ್ನೇನು ಅಂತ ಹೊರಡುವಾಗ ಇನ್ನೊಂದಿಬ್ಬರು ಸಿಕ್ಕರು. ವೀರಪ್ಪನ್ ಸತ್ತ ಮೇಲೆ ತಮ್ಮೂರಿನ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ದು, ಎಷ್ಟೆಲ್ಲ ಅಭಿವೃದ್ದಿಯಾಗುತ್ತಿದೆ ಅಂತೆಲ್ಲ ತಮಿಳು ಮಿಶ್ರಿತ ಕನ್ನಡದಲ್ಲಿ ಪರಿಪರಿಯಾಗಿ ವಿವರಿಸತೊಡಗಿದರು. ಅವರನ್ನು ನೋಡಿದರೆ, ಮಾತುಗಳನ್ನು ಕೇಳಿದರೆ ಬಹುಷಃ ಇಲ್ಲಿನ ಗ್ರಾಮ ಪಂಚಾಯ್ತಿಯ ಸದಸ್ಯರೇ ಇರಬೇಕು ಅನ್ನಿಸಿತು. ಮತ್ತೆ ಬೈಕನ್ನೇರಿ ಹೊರಡಲು ಅನುವಾದಾಗ ‘ಇಲ್ಲೇ ಕೊಳತ್ತೂರು ಬಳಿ ವೀರಪ್ಪನ್ ಸಮಾಧಿ ಇದೆ. ಬೇಕಾದ್ರೆ ಹೋಗಿ ಫೋಟೊ ತಕೊಂಡು ಪೇಪರ್ರಿಗೆ ಹಾಕಿ. ಹೆಚ್ಚೇನೂ ಇಲ್ಲ. ಇಲ್ಲಿಂದ ಒಂದಿಪ್ಪತ್ತು ಕಿ.ಮೀ ಅಷ್ಟೆ’ ಅಂದ್ರು. ಇಲ್ಲಿಗೆ ಬಂದದ್ದೇ ಆಗಿದೆ. ಅಲ್ಲಿಗೆ ಹೋಗೊದೇನು ಮಹಾ! ಅಂತಂದು ಕೊಳತ್ತೂರಿನ ದಾರಿ ಹಿಡಿದೆವು.

ಹೀಗೆ ಹಿಂದಿರುಗಿದ್ದೇ ‘ ಈ ವೀರಪ್ಪನ್ ಸಮಾಧಿ ಹೇಗೆಲ್ಲ ಇರಬಹುದು. ಇಷ್ಟಕ್ಕೂ ಇದು ತಮಿಳುನಾಡಿನಲ್ಲಿ ಇರೋದೇಕೆ ಅಂತ ಮಾತಾಡುತ್ತಾ ’ ಅಲ್ಲಿಂದ ಮತ್ತೆ ಬೆಟ್ಟದ ರಸ್ತೆಗೆ ಬಂದ್ವಿ. ಅಲ್ಲೇ ಪಕ್ಕದಲ್ಲೇ ಪಾಲರ್ ಅನ್ನೋ ಊರು. ಕರ್ನಾಟಕಕ್ಕೂ ತಮಿಳುನಾಡಿಗೂ ಇದೇ ಗಡಿ. ಕೇವಲ ಸಣ್ಣದೊಂದು ಚೆಕ್ ಪೋಸ್ಟ್ ದಾಟಿದ್ರೆ ತಮಿಳುನಾಡು. ಮೈಸೂರು ಅನ್ನೋ ಸುಭದ್ರ ಊರೊಳಗೆ ಭದ್ರವಾಗಿರೋ ಹುಡುಗನಿಗೆ ಗಡಿ ಅನ್ನೋದು ಹೀಗಿರುತ್ತೆ ಅನ್ನೋ ಕಲ್ಪನೆ ಇರಲಿಲ್ಲ. ಅಂತೂ ಚೆಕ್ ಪೋಸ್ಟ್ ದಾಟಿದ್ದಾಯಿತು, ಅಲ್ಲಿದ್ದ ಕಾವಲುಗಾರ ಮಹಾಶಯ ನಾವ್ ಯಾರು , ಎತ್ತ ಅನ್ನೋದನ್ನ ವಿಚಾರಿಸಲೂ ಹೋಗದೆ ನೆಮ್ಮದಿಯಾಗಿ ಕುರ್ಚಿ ಮೇಲೆ ಕುಂತು ಸಿಗರೇಟು ಸೇದ್ತಿದ್ದ!

ಸರಿ ಅಂತೂ ತಮಿಳುನಾಡಿಗೆ ನುಗ್ಗಿದ್ವಿ. ಅಲ್ಲಿಂದ ಒಂದೆರಡು ಕಿ.ಮೀ ಕಾಡು. ಸಮಯ ಬೇರೆ ಹತ್ತಿರತ್ತಿರ ಸಂಜೆ ಐದೂವರೆ. ಗೆಳೆಯನ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲ. ಬೈಕು ನಮ್ಮದೂ ಅಂತ ಹೇಳಿಕೊಳ್ಳೋಕೆ ತಕ್ಕ ದಾಖಲೆಗಳೂ ಇಲ್ಲ. ನಂಬರ್ ಪ್ಲೇಟ್ ಬೇರೆ ಶುದ್ಧ ಕನ್ನಡದಲ್ಲಿದೆ! ಅಯ್ಯೋ ದುರ್ದೈವವೇ ಅಂತಂದು ರಾಗ ಎಳೆಯುತ್ತಾ ಹೋಗೊ ಹೊತ್ತಿಗೆ ಕಾಡು ಮುಗಿದು ಊರುಗಳು ಸಿಗತೊಡಗಿದವು. ತಮಿಳುನಾಡಿಗೆ ಬಂದದ್ದರ ಸಂಕೇತವೆಂಬಂತೆ ನೀಲಿ ಮಿಶ್ರಿತ ಸುಣ್ಣದ ಮನೆಗಳು ಕಣ್ಣಿಗೆ ಕಾಣಿಸತೊಡಗಿದವು. ಅಲ್ಲಲ್ಲಿ ಭೂತ ದೈವದ ವಿಗ್ರಹಗಳು ಕಣ್ಣಿಗೆ ಬಿದ್ವು. ಸರಿ ಈಗ ಯಾವೂರಿಗೆ ಬಂದ್ವಪ್ಪ ಅಂತ ರಸ್ತೆ ಬದಿ ಬೋರ್ಡು ನೋಡಿದ್ರೆ ಬರೀ ತಮಿಳು! ನಮಗೋ ತಮಿಳಿನ ತಲೆ ಬುಡ ಗೊತ್ತಿಲ್ಲ. ಇದೊಳ್ಳೆ ಪೇಚಿಗೆ ಸಿಕ್ಕಿದ್ವಲ್ಲ ಅಂತಂದು ಮುಂದೆ ಹೋದ್ವಿ. ಅಲ್ಲೇ ಒಂದಿಬ್ಬರು ಮಹಾನುಭಾವರು ಸಿಕ್ಕರು. ನಾವು ನಮ್ಮ ಭಾಷಾ ಪ್ರಾವೀಣ್ಯವನ್ನೆಲ್ಲ ಬಳಸಿ ಹೀಗಂದ್ರೆ ಹೀಗಿರಬಹುದಾ ಅಂತ ಲೆಕ್ಕಾಚಾರ ಹಾಕಿ ತಮಿಳು ಪ್ರಯೋಗಿಸಿದ್ವಿ. ನಮ್ಮ ಭಾಷೆ ಕಂಡ ಅವರಿಗೆ ‘ಈ ಮಕ್ಕಳು ತಮಿಳಿನವರಲ್ಲ’ ಅಂತನ್ನಿಸಿರಬೇಕು. ಕನ್ನಡದವ್ರ ಅಂತ ಕೇಳಿದ್ದೆ ಕೊಳತ್ತೂರು ಇನ್ನೂ ಇಪ್ಪತ್ತು ಕಿ.ಮೀ ಇದೆ ಅಂದ್ರು. ನಾವು ಒಮ್ಮೆ ಉಸಿರು ಬಿಟ್ವಿ!

ಮತ್ತೆ ಯಥಾ ಪ್ರಕಾರ ನಮ್ಮ ಕನ್ನಡಮಿಶ್ರಿತ ತಮಿಳಿನಲ್ಲಿ ಅವರಿವರನ್ನ ಕೇಳುತ್ತಾ ಕೊಳತ್ತೂರಿಗೆ ತಲುಪಿದ್ದಾಯಿತು. ಅಲ್ಲಿ ಕೇಳಿದ್ದಕ್ಕೆ, ವೀರಪ್ಪನ್ ಸಮಾಧಿ ಇಲ್ಲಿಂದ ನಾಲ್ಕೈದು ಕಿ.ಮೀ ಇರೋದಾಗಿಯೂ, ಮೊಳೈಕಾಡು ಎಂಬಲ್ಲಿ ಹೋದ್ರೆ ಸಿಗುತ್ತೆ ಅಂತ ಹೇಳಿದ್ರು. ಈಗ ಮೊಳೈಕಾಡಿನ ಅನ್ವೇಷಣೆ ಶುರುವಾಯ್ತು. ನಡುವೆ ನಮ್ಮ ಅದೃಷ್ಟಕ್ಕೆ ಅಲ್ಲೊಂದು ತಮಿಳಿನ ಜೊತೆಗೆ ಇಂಗ್ಲೀಷಿರೋ ದೂರಗಾಹಿ ಬೋರ್ಡು ಸಿಕ್ಕಿತು. ಅದರಂತೆ ಮೆಟ್ಟೂರು ಇಲ್ಲಿಂದ ಹತ್ತು ಕಿ.ಮೀ ದೂರದಲ್ಲಿತ್ತು.

ವೀರಪ್ಪನ್ ಸಮಾಧಿ

ವೀರಪ್ಪನ್ ಸಮಾಧಿ

ಅಂತೂ ಇಂತು ಮೊಳೈ ಕಾಡು ಬಂತು. ನಾವೋ ಗೊತ್ತಿಲ್ಲದೆ ಅಲ್ಲಿಂದ ಒಂದೆರಡು ಕಿ.ಮೀ ಮುಂದೆ ಹೋಗಿ , ಮತ್ತೆಯಾರನ್ನೋ ಕೇಳಿ ಹಿಂದೆ ಬಂದೆವು. ಅವರು ಹೇಳಿದಂತೆ ರಸ್ತೆ ಬದಿಯ ಟ್ರಾನ್ಸ್ ಫಾರ್ಮರ್ ನ ಗುರುತು ಹಿಡಿದು ಎಡಕ್ಕೆ ತಿರುಗಿದರೆ ಅಲ್ಲೊಂದು ಸಶ್ಮಾನ. ಪಕ್ಕದಲ್ಲೇ ಕಣ್ಣು ಕಾಣುವಷ್ಟು ದೂರ ಮೆಟ್ಟೂರು ಅಣೆಕಟ್ಟಿನ ನಿಂತ ನೀರು. ಎಷ್ಟೊಂದ್ ಸಮಾಧಿ, ಇದ್ರಲ್ಲಿ ಯಾವುದಿರಬಹುದು ವೀರಪ್ಪನ್ ಸಮಾಧಿ ಅಂತ ಹುಡುಕುತ್ತಿದ್ದೆವು. ದೂರದಲ್ಲಿ ಪುಂಡ ಹುಡುಗರ ಗುಂಪು ನಮ್ಮನ್ನು ಕರೆಯಿತು. ನಾವು ಹೋದ್ವಿ. ಬೈಕಿನ ಕನ್ನಡ ನಂಬರ್ ಪ್ಲೇಟ್ ನೋಡಿದ್ದೆ ‘ಇದೇನು ಜಿಲೇಬಿ ಇದ್ದಹಾಗಿದೆ’ ಅಂತಂದ್ರು. ಇದು ಕನ್ನಡ ಸ್ವಾಮಿ ಅಂದು, ವೀರಪ್ಪನ್ ಸಮಾಧಿ ಯಾವ್ದು ಅಂದ್ವಿ. ಅಲ್ಲಿ ಎಡಕ್ಕೆ ತಿರುಗಿ ಅಂದ್ರು. ಎಡಕ್ಕೆ ಹೋದರೆ ಅಲ್ಲೊಂದು ಮೋಟುಗೋಡೆ ಮತ್ತು ಮಣ್ಣಿನ ಸಮಾಧಿ. ವೀರಪ್ಪನ್ ಸಮಾಧಿ ಹೀಗಿರಬಹುದು , ಹಾಗಿರಬಹುದು ಅಂತೆಲ್ಲ ಏಣಿಸಿದ್ದ ನಮಗೆ ಇದು ವೀರಪ್ಪನ್ ಸಮಾಧಿ ಇರಲಾರದು ಅನಿಸಿತು. ಎಲಾ ಹುಡುಗ್ರಾ ಕನ್ನಡದವರು ಅನ್ನೋ ಕಾರಣಕ್ಕೆ ನಮಗೆ ಚಮಕ್ ಕೊಟ್ರ ಅಂತ ಅಂದುಕೊಂಡು ಬೇರೆಯವರ ಆಗಮನಕ್ಕೆ ಕಾಯುತ್ತ ನಿಂತ್ವಿ. ಅಷ್ಟರಲ್ಲೇ ಸ್ಕೂಲ್ ಹುಡುಗರು ಅದೇ ದಾರೀಲಿ ಬಂದ್ರು, ಇದೇ ವೀರಪ್ಪನ್ ಸಮಾಧಿ ಅಂದ್ರು! ಅರರೆ…. ಇದಾ! , ನಾನು ಹಾಗಿದೆ ಹೋಗಿದೆ ಅಂತೆಲ್ಲ ಕಲ್ಪಿಸಿಕೊಂಡಿದ್ನಲ್ಲ ಅಂತ ಹೇಳಿದ್ರೆ, ‘ವೀರಪ್ಪನ್ ಏನು ರಾಜ್ಕುಮಾರ? ಅವನಿಗೊಂದು ಸಮಾಧಿ, ಸೌಧ ಎಲ್ಲ ಕಟ್ಟಿಸೋಕೆ’ ಅಂತ ಗೆಳೆಯ ಅಣಕ ಮಾಡಿದ. ಇದ್ದದ್ದನ್ನೇ ಕ್ಯಾಮರಾದಲ್ಲಿ ಕ್ಲಿಕ್ಕಿಸಿದೆ.

ಅಲ್ಲಿಂದ ಹೊರಟು ಮುಖ್ಯರಸ್ತೆ ತಲುಪುವ ವೇಳೆಗೆ ಸಂಜೆ ಆರೂವರೆ. ಇಲ್ಲಿಂದ ಮೆಟ್ಟೂರು ಏಳೇ ಕಿ.ಮೀ. ಇಷ್ಟು ದೂರವೇ ಬಂದಿದ್ದೀವಿ. ಮೆಟ್ಟೂರಿಗೆ ಹೋಗದೆ ಇರುವುದಾ ಅಂತ ಮೆಟ್ಟೂರಿನ ರಸ್ತೆ ಕಡೆ ಹೊರಳಿದೆವು.

ಹೆಚ್ಚಿನ ಓದಿಗೆ: http://www.kendasampige.com/article.php?id=1235

ಆಗಷ್ಟ್ 22, 2008 at 12:52 ಅಪರಾಹ್ನ 1 comment

ಒಂಟಿತನ ಕಳೆಯಲು ಎಷ್ಟೆಲ್ಲ ಕಸರತ್ತು!

ಯಾವಾಗಲೂ ನಾಲ್ಕು ಜನರ ಸುತ್ತ ಇರಬೇಕು. ಸದಾ ಹರಟುತ್ತಾ, ನಗುತ್ತಾ ಕೆಲಸ ಮಾಡಿಕೊಂಡಿರಬೇಕು ಅನ್ನೋದು ನನ್ನ ಪಾಲಿಸಿ. ಹೀಗಂದುಕೊಂಡವ ಓದು ಮುಗಿಸಿ ಕೆಲಸಕ್ಕೆ ಸೇರಿಕೊಂಡ ಮೇಲೆ ಗುಂಪುಗಾರಿಕೆಗಿಂತ ಒಂಟಿಯಾಗಿ ದುಡಿಯುವ ಅವಕಾಶ ದಕ್ಕಿದ್ದೇ ಹೆಚ್ಚು. ಈಗಲೂ. ಹೀಗೆಲ್ಲ ಆದಾಗ ಕೆಲವೊಮ್ಮೆ ತೀರ ಒಂಟಿ ಅನಿಸಿಬಿಡುತ್ತದೆ. ಈ ಒಂಟಿತನ ಅನ್ನುವುದು ನನ್ನ ಅದೆಷ್ಟೋ ಬಾರಿ ಅದು ಹೇಗೆಗೋ ಕಾಡಿದೆ. ಕೆಲವೊಮ್ಮೆ ಕಣ್ಣಲ್ಲಿ ನೀರೂ ಬರಿಸಿದೆ. ಬೆಂಗಳೂರಿನಲ್ಲಿ ಬದುಕುತ್ತಿದ್ದಾಗಲಂತೂ ಒಮ್ಮೆಮ್ಮೆ ಅಳುವೇ ತುಟಿಗೆ ಬಿದ್ದಂತೆ. ಇಂತಹದ್ದೊಂದು ಏಕಾಂಗಿತನವನ್ನು ಸಹಿಸಲಾಗದೆಯೇ ಏನೋ ನಾನು ಬೆಂಗಳೂರು ಬಿಟ್ಟು ಬಂದದ್ದು!

ಬರುಬರುತ್ತಾ ಇದಕ್ಕೊಂದಿಷ್ಟು ಟ್ರಿಕ್ಸ್ ಕಂಡುಹಿಡಿದುಕೊಳ್ಳುತ್ತಿದ್ದೇನೆ. ಆಫೀಸಿನಲ್ಲಾದರೆ ಒಂದಿಷ್ಟು ಚೆಂದದ ಹಾಡು ಕೇಳುತ್ತಾ ಕೆಲಸ ಮಾಡುತ್ತಾ ಹೊತ್ತು ಕಳೆಯುತ್ತೇನೆ. ಇನ್ನೂ ಮನೆಯಲ್ಲಿದ್ದರೆ, ಅದರಲ್ಲೂ ಊರಿಗೆ ಹೋಗಿದ್ದರೆ ಬೇಜಾರಾದರೆ ಗುದ್ದಲಿ ಹಿಡಿದು ನೇರ ಹಿತ್ತಲಿಗೆ ನಡೆದು ಬಿಡುತ್ತೇನೆ. ದಾಳಿಂಬೆ, ಸೀಬೆ , ಬಾಳೆ ಸಸಿಗೆಲ್ಲ ಪಾತಿ ಕಟ್ಟುತ್ತಾ ನಿಲ್ಲುತ್ತೇನೆ. ಇಲ್ಲ ಹರಳೆಣ್ಣೆ ಹಾಕಿ ತಲೆಯನ್ನೆಲ್ಲ ತಣ್ಣಗೆ ತಟ್ಟಿ, ನೀರೊಲೆಯ ಮುಂದೆ ಕುರಿತಿದ್ದೇ ಬರಬರನೇ ಸೌದೆ ಉರಿಸುತ್ತಾ ಬೆಂಕಿ ಕಾಯುತ್ತಾ ಕುಳಿತುಕೊಳ್ಳುತ್ತೇನೆ. ಆಗ ಹಿಂದಿನದ್ದೆಲ್ಲ ನೆನಪಾಗುತ್ತದೆ. ಚಿಕ್ಕವನಿದ್ದಾಗ ಹೀಗೆ ಒಲೆ ಉರಿಹಾಕುತ್ತಿದ್ದದ್ದು, ಆದಷ್ಟು ಹಸಿ ಪುಳ್ಳೆಗಳನ್ನು ಒಲೆಗೆ ಹಾಕಿ, ಅದರಿಂದ ಬಂದ ಹೊಗೆಯನ್ನೇ ಬೀಡಿ ಮಾಡಿ ಮೊದಲು ಸೇದಿದ್ದು, ಅವ್ವ ನೆತ್ತಿಯೇ ಸುಟ್ಟುಹೋಗುವಂತೆ ನೀರು ಹಾಕುತ್ತಿದ್ದುದು ಎಲ್ಲ ನೆನಪಾಗುತ್ತದೆ. ಅಷ್ಟರಲ್ಲಿ ನೀರೂ ಕಾದಿರುತ್ತದೆ. ಬೆಚ್ಚಗೊಂದು ಸ್ನಾನ ಮಾಡಿ ನಿದ್ದೆ ಹೋಗುತ್ತೇನೆ.

ಇನ್ನೂ ರಜೆಯ ದಿನಗಳಲ್ಲಿ ಮೈಸೂರಿನಲ್ಲಿದ್ದರೆ ಹಳೆಯ ಗೆಳೆಯರಿಗೆಲ್ಲ ಕರೆ ಮಾಡಿ , ಸಿಕ್ಕವರನ್ನು ಕಟ್ಟಿಕೊಂಡು ಎತ್ತಲಾದರೂ ಊರು ಬಿಟ್ಟು ಹೊರಟುಬಿಡುತ್ತೇನೆ. ಯಾರು ಸಿಗದಿದ್ದರೂ ಒಬ್ಬನೇ ಹೋಗುತ್ತೇನೆ. ಇಲ್ಲ ರಂಗಾಯಣ ಸೇರುತ್ತೇನೆ. ಇಲ್ಲ ಗೆಳೆಯನ ರೂಮು ಹೊಕ್ಕು ಅವನ ಕಂಪ್ಯೂಟರು, ಹಳೆಯ ಸಿಡಿ ಎಲ್ಲವನ್ನೂ ವಶಕ್ಕೆ ತೆಗೆದುಕೊಂಡು ಚೆಂದದೊಂದು ಚಿತ್ರ ಹಾಕಿ ನೋಡುತ್ತೇನೆ. ಫಿಲ್ಮೂ ಬೇಜಾರಾದರೇ ಹಾಡು ಹಾಕಿ ದೀಪ ಆರಿಸಿ ಕಣ್ಣು ಬಿಟ್ಟುಕೊಂಡೇ ನಿದ್ದೆ ಮಾಡುತ್ತೇನೆ.

ಕಳೆದ ಶನಿವಾರ , ಗೆಳೆಯರ ದಿನದಂದು ಆಫೀಸಿನಲ್ಲಿ ಒಬ್ಬನೇ ಇದ್ದೆ. ತುಂಬಾನೇ ಬೋರಾಗಿತ್ತು. ಆದಷ್ಟು ಬೇಗ ಕೆಲಸ ಮುಗಿಸಿದ್ದೇ ಬಸ್ಸನ್ನಿಡಿದು ಹೊರಟೆ. ಬಸ್ಸಿನಲ್ಲಿ ಕುಳಿತಿದ್ದೇ ಮತ್ತೇನೋ ನೆನಪಾಯಿತು. ಗೆಳೆಯರ ದಿನದ ಶುಭಾಶಯ ಕೋರುವ ನೆಪದಲ್ಲೇ ಅದು ಇದು ಅಂತ ಒಂದಿಷ್ಟು ಎಮೋಷನಲ್ ಆಗಿ ಟೈಪಿಸಿದ್ದೇ ಅದನ್ನೆಲ್ಲ ಇದ್ದ ಬದ್ದ ಗೆಳೆಯ-ಗೆಳೆತಿಯರಿಗೆಲ್ಲ ಮೆಸೇಜು ಮಾಡಿ , ಮೊಬೈಲ್ ಸೈಲೆಂಟ್ ಮೋಡ್ ನಲ್ಲಿಟ್ಟು ತೆಪ್ಪಗೆ ಕುಳೀತೆ. ಯಾವ ಮೆಸೇಜು ಬಂದರೂ, ಕರೆ ಬಂದರೂ ತೆಗೆದುಕೊಳ್ಳಲಿಲ್ಲ. ಮನೆಗೆ ಹೋದದ್ದೇ ಮೊಬೈಲ್ ಎಸೆದು ನೆಮ್ಮದಿಯಿಂದ ನಿದ್ದೆ ಹೋದೆ.

ಬೆಳಿಗ್ಗೆ ನಾಲ್ಕಕ್ಕೇ ಎಚ್ಚರವಾಗಿ ಹೋಯ್ತು. ಯಾರ್ಯಾರು ಏನೇನಂತ ಮೆಸೇಜು ಕಳಿಸಿರಬಹುದು. ಯಾರೆಲ್ಲ ಕರೆ ಮಾಡಿರಬಹುದು ಅನ್ನೋ ಕುತೂಹಲ ಜಾಸ್ತಿ ಆಗೋಕೆ ಶುರು ಆಯ್ತು. ತಡೆದುಕೊಳ್ಳಲಾಗಲಿಲ್ಲ. ಕಡೆಗೆ ಐದರ ಸುಮಾರಿಗೆ ಎದ್ದಿದ್ದೆ ಮೊಬೈಲು ತಡಕಿದರೆ ಬರೋಬ್ಬರಿ ೬೦ ಮೆಸೇಜು ಮತ್ತು ೩೯ ಮಿಸ್ ಕಾಲ್ ಗಳು! ಕೆಲವರಂತೂ ಇನ್ನೂ ಎಮೋಶನಲ್ ಆಗಿ ಪ್ರತಿಕ್ರಿಯಿಸಿದ್ದರು. ಮತ್ತೆ ಕೆಲವರು ನಾನು ಕಳಿಸಿದ್ದನ್ನು ನನಗೆ ಕಳುಹಿಸಿದ್ದರು. ಒಂದಿಷ್ಟು ಫಾರ್ವಡ್ ಮೆಸೇಜುಗಳೂ ಬಂದಿದ್ದವು. ಇನ್ನೂ ಕರೆ ಮಾಡಿದವರು ಏನೆಲ್ಲ ಮಾತನಾಡಲು ಯೋಚಿಸಿರಬಹುದು ಅಂತೆಲ್ಲ ನೆನೆದು ಒಮ್ಮೆ ನಕ್ಕೆ. ಅದೇ ಖುಷಿಯಲ್ಲೇ ಸ್ನಾನ ಮಾಡಿ, ಬಟ್ಟೆ ಬದಲಿಸಿದ್ದೇ, ಹೆಗಲ ಮೇಲೊಂದು ಬ್ಯಾಗನ್ನೇರಿಸಿ ಒಂಟಿಯಾಗಿಯೇ ಶಿವನ ಸಮುದ್ರಕ್ಕೆ ಹೊರಟೆ.

ಆಗಷ್ಟ್ 18, 2008 at 10:26 ಫೂರ್ವಾಹ್ನ ನಿಮ್ಮ ಟಿಪ್ಪಣಿ ಬರೆಯಿರಿ

ಇದಕ್ಕೆಲ್ಲ ಅರ್ಥವಿಲ್ಲ

ಮನದ ಮುಗಿಲಿಂದ
ಸುರಿವ ಮುಂಗಾರಿಗೆ
ನೆನೆಪೆಲ್ಲ ಒದ್ದೆ ಒದ್ದೆ

ಕಣ್ಣ ಕೊಳದಲ್ಲಿ
ತೇಲುವ ನಿನ್ನದೇ ಚಿತ್ರಕ್ಕೆ
ಬಣ್ಣ ಹಾಕಲು ಮನಸ್ಸಿಲ್ಲ
ಕಾಣುವ ಕನಸಿಗೆ
ಮಾತ್ರ ಬಿಡುವಿಲ್ಲ

ಬೆದೆಗೆ ಬಿದ್ದ ಮನಕ್ಕೆ
ಕಂಡಿದ್ದೆಲ್ಲ ಕಾಮಾಲೆ
ನಿದ್ದೆಯಲ್ಲೂ ನಿನ್ನನ್ನಪ್ಪಿ
ಹೊರಳಿದವನಿಗೆ ಕಂಡಿದ್ದು….

ಆಗಷ್ಟ್ 13, 2008 at 9:45 ಫೂರ್ವಾಹ್ನ 1 comment

ತಿಂಗಳ ಖುಷಿಗೆ ಒಂದೆರೆಡು ಮಾತು

ಅಂತೂ ಬ್ಲಾಗಿಗೆ ಬರೆದು ವಾರದ ಮೇಲಾಯ್ತು. ‘ಇನ್ನೂ ಮೇಲೆ ವಾರಕ್ಕೊಮ್ಮೆ ಬರೀತಿನಿ ಅಂತ ಹೇಳಿದ್ಯಲ್ಲ. ಬರೀ ನೋಡೋಣ. ಗೊತ್ತಾಗುತ್ತೆ ಕಷ್ಟ’ ಅಂತ ಯಾರಾದರೂ ಹಂಗಿಸುವ ಮೊದಲೇ ಏನಾದರೂ ಬರಿಯಲೇಬೇಕು ಅಂತ ಕೂತಿದ್ದೀನಿ. ನಿನ್ನೆ ಬ್ಲಾಗಿಗೆ ಏನ್ ಬರೆಯೋದಪ್ಪ ಅಂತ ಯೋಚನೆ ಮಾಡುತ್ತಿದ್ದೆ. ಆಗ ತಾನೇ ಚೇತನಾ ಹಾಗೂ ಸೋಮಾರಿಕಟ್ಟೆಯ ಶಂಕರರು ತಮ್ಮ ಬ್ಲಾಗಿನ ಹುಟ್ಟುಹಬ್ಬದ ಖುಷಿಗೆ ಬರೆದಿದ್ದು ಕಣ್ಣಿಗೆ ಬಿತ್ತು. ನನ್ನ ಬ್ಲಾಗಿನ್ನೂ ಶುರುವಾಗಿ ಇವತ್ತಿಗೆ ತಿಂಗಳಾಯಿತು. ನಾನ್ಯಾಕೆ ಈ ತಿಂಗಳ ಖುಷಿಗೆ ಬರೀಬಾರ್ದು ಅಂತ ಅನಿಸಿದ್ದೇ, ಅದನ್ನೆಲ್ಲ ಇಲ್ಲಿ ಟೈಪಿಸುತ್ತಾ ಕುಳಿತಿದ್ದೇನೆ.

ಮುಗಿಲಕಂಪು ಈಗಷ್ಟೆ ಚಿಗಿತುಕೊಳ್ಳುತ್ತಿದೆ. ಪ್ರತಿಕ್ರಿಯೆ ಕೂಡ ಚೆನ್ನಾಗಿಯೇ ಇದೆ. ಬ್ಲಾಗ್ ಲೋಕದಲ್ಲಿ ಹೊಸಬನಾದವನಿಗೆ, ಒಂದಿಷ್ಟು ಪರಿಚಿತ ಬ್ಲಾಗಿಗರ ಜೊತೆಗೆ ಹಿಂದೆಂದೂ ಓದಿಲ್ಲದ ಬ್ಲಾಗಿಗರು ಕೂಡ ಕಮೆಂಟು ಮಾಡುತ್ತಿದ್ದಾರೆ. ಇಂತಹದ್ದೊಂದು ಪ್ರೋತ್ಸಾಹದ ಖುಷಿಯೇ ಇನ್ನಷ್ಟು ಬರೀ ಅಂತ ಬೆನ್ನು ತಟ್ಟುತ್ತಿದೆ.

ಹಾಗೇ ನೋಡಿದರೆ ಹೀಗೆ ಓದಿದ್ದನ್ನು ಮೆಚ್ಚಿ ಒಂದೆರಡು ಸಾಲು ಬರೆಯುವ ವಿಚಾರದಲ್ಲಿ ನಾನು ಸಂಕೋಚದ ಜೀವಿಯೇ. ಕೆಂಡಸಂಪಿಗೆಯಲ್ಲಿನ ಬ್ಲಾಗ್ ಬೀಟ್ ದೆಸೆಯಿಂದ ಕನ್ನಡದ ಬ್ಲಾಗುಗಳಲ್ಲಿ ನಿತ್ಯ ದಾಖಲಾಗುವ ಬಹುತೇಕ ಹೊಸ ಬರಹಗಳನ್ನು ತಪ್ಪದೇ ಓದುತ್ತೇನೆ. ಅದರಲ್ಲಿ ಒಂದಿಷ್ಟು ತೀರ ಇಷ್ಟವಾಗುತ್ತವೆ. ಮೆಚ್ಚಿ ಒಂದು ಕಮೆಂಟು ಹಾಕೋಣ ಅಂದರೆ ಸಂಕೋಚ ಅಡ್ಡಬರುತ್ತದೆ. ಮನದಲ್ಲೇ ಮೆಚ್ಚಿ ಮುಂದೆ ಹೋಗುತ್ತೇನೆ.

ಕನ್ನಡದ ಬ್ಲಾಗುಗಳ ವಿಚಾರದಲ್ಲಿ ಹೀಗೆ ‘ಸುಮ್ಮನೆ ಯಾರು ಕಮೆಂಟು ಮಾಡುವುದಿಲ್ಲ’ ಅಂತ ಒಂದಿಬ್ಬರು ಅನುಭವಸ್ಥ ಬ್ಲಾಗಿಗರು ಹೇಳಿದ್ದುಂಟು. ಅದರಲ್ಲೂ ಬ್ಲಾಗ್ ಸ್ಪಾಟ್ ಮತ್ತು ವರ್ಡ್ ಪ್ರೆಸ್ ಬ್ಲಾಗ್ ಬಣಗಳು ಪ್ರತ್ಯೇಕವಂತೆ. ಒಂದು ಬಣದವರು ಇನ್ನೊಂದು ಬಣಕ್ಕೆ ಕಮೆಂಟು ಮಾಡುವುದು ಅಪರೂಪವಂತೆ. ನಾವು ಕಮೆಂಟಿಸಿದರಷ್ಟೆ ಅವರೂ ಪ್ರತಿಕ್ರಿಯಿಸುತ್ತಾರಂತೆ. ವರ್ಡ್ ಪ್ರೆಸ್ಸಿನಲ್ಲಿ ಬ್ಲಾಗಿಸುವವರೆಲ್ಲ ಬುದ್ದಿಜೀವಿಗಳು ಅಂತೆಲ್ಲ ವಿಚಾರಗಳು ಚಾಲ್ತಿಯಲ್ಲಿವೆ. ಮೊದಲು ಜಾತಿ, ಆಮೇಲೆ ಊರು ಇದೆಲ್ಲ ನೋಡಿ ಕಮೆಂಟು ಮಾಡುತ್ತಾರೆ, ನಾವು ಹಾಗೇ ಮಾಡಬೇಕು ಅಂತೆಲ್ಲ ಒಂದಿಬ್ಬರು ಹೇಳಿದ್ದುಂಟು. ಇದೆಲ್ಲ ಎಷ್ಟು ಸತ್ಯ ಅಂತ ಮಾತ್ರ ಗೊತ್ತಿಲ್ಲ. ನನ್ನ ಮಟ್ಟಿಗೆ ಇದ್ಯಾವುದೂ ಅನುಭವಕ್ಕೆ ಬಂದಿಲ್ಲ.

ಇನ್ನು ಮುಂದೆ ಹಾಗೇ ಮೆಚ್ಚಿಕೊಂಡಿದ್ದನ್ನು, ಅನಿಸಿದ್ದನ್ನು ಅಷ್ಟೇ ಮುಕ್ತವಾಗಿ ಹೇಳಬೇಕು ಅಂತ ನಿರ್ಧರಿಸಿದ್ದೇನೆ. ನಾನು ಕಮೆಂಟಿಸಲು ಬರುತ್ತಿದ್ದೇನೆ!

ಅರೇ, ಸುಮ್ಮನೆ ಕುಟ್ಟುತ್ತಾ ಕುಂತರೆ ಇದೇ ಒಂದು ಬರಹವಾಗಿ ಬಿಟ್ಟಿದೆ. ಇರಲಿ ಸದ್ಯಕ್ಕೆ ಏನೂ ಬರಯಲಾಗದ ನನ್ನ ಸೋಮಾರಿತನಕ್ಕೆ ಕ್ಷಮೆ ಕೋರಿ ಇದನ್ನೇ ಪ್ರಕಟಿಸುವ ಧೈರ್ಯ ಮಾಡುತ್ತಿದ್ದೇನೆ. ಓದಿ ನಿಮಗೆನನ್ನಿಸಿತು, ಆ ಒಂದಿಬ್ಬರು ಬ್ಲಾಗಿಗರು ಹೇಳಿದ್ದು ನಿಜನಾ? ಸುಳ್ಳಾ? ಸಾಧ್ಯ ಆದ್ರೆ ನೀವೂ ಮುಲಾಜಿಲ್ಲದೆ ಕಮೆಂಟಿಸಿ.
-ಜಿತು

ಆಗಷ್ಟ್ 1, 2008 at 9:50 ಫೂರ್ವಾಹ್ನ 10 comments


ಕಾಲಮಾನ

ಆಗಷ್ಟ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

ಮುಗಿಲು ಮುಟ್ಟಿದವರು

  • 9,307 hits

ಪಕ್ಷಿ ನೋಟ

Feeds