Archive for ಸೆಪ್ಟೆಂಬರ್, 2008
ನಿಮ್ಮ ಸಹಾಯ-ಸಲಹೆ ಬೇಕಿದೆ
ಸುಮಾರು ಒಂದು ತಿಂಗಳಿಂದ ಹೀಗಾಗಿದೆ. ವಿಷಯ ಇಷ್ಟೆ ನನ್ನ ಬ್ಲಾಗಿನ ಆರ್ ಎಸ್ ಎಸ್ ಫೀಡ್ ಕೈಕೊಟ್ಟಿದೆ. ಫೈರ್ ಫಾಕ್ಸ್ ನಲ್ಲಿ ಚೆನ್ನಾಗಿ ಕೆಲಸ ಮಾಡುವ ಫೀಡ್ ಇಂಟರ್ ನೆಟ್ ಎಕ್ಸ್ ಫ್ಲೋರ್ ನಲ್ಲಿ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಅದ್ಯಾವುದೂ ಲೇಖನದಲ್ಲಿ ಎರರ್ ಆಗಿದೆ. ಅದನ್ನು ಸರಿಪಡಿಸಿ ನಂತರ ರೀಫ್ರೆಶ್ ಮಾಡಿ ಅಂತ ತೋರಿಸುತ್ತದೆ. ಹಾಗೇ ಮಾಡಿದರೂ ಸರಿಯಾಗುತ್ತಿಲ್ಲ. ಅದು ತೋರಿಸಿದ ಎರರ್ ಲೇಖನವನ್ನು ತಿದ್ದಿ ತೀಡಿ ಒಪ್ಪಗೊಳಿಸಿ ಏನೆಲ್ಲ ಮಾಡಿದರೂ ಪ್ರಯೋಜನವಾಗಿಲ್ಲ.
ಮೊನ್ನೆ ಮೊನ್ನೆ ಅಪರೂಪಕ್ಕೆ ಕರೆ ಹಚ್ಚಿದ ಬ್ಲಾಗ್ ಗೆಳೆಯರೊಬ್ಬರಿಂದ ಈ ಸಂಗತಿ ಬಯಲಾಯಿತು. ಅದೇನಂದರೆ ಅವರು ಕನ್ನಡದಲ್ಲಿ ಅಪ್ ಲೋಡ್ ಆಗುವ ಎಲ್ಲ ಹೊಸ ಲೇಖನಗಳನ್ನೂ ಬರಹದ ಕನ್ನಡಲೋಕದ ಲಿಂಕಿನಲ್ಲಿ ತಪ್ಪದೇ ನೋಡುತ್ತಾರಂತೆ. ಅಲ್ಲಿ ಒಂದೂವರೆ ತಿಂಗಳಿನಿಂದ ನನ್ನ ಲೇಖನದ ಲಿಂಕ್ ಕಾಣಿಸಿಕೊಂಡಿಲ್ಲವಂತೆ. ಕರೆ ಮಾಡಿದ್ದೇ ‘ಏನಪ್ಪ ದೊಡ್ಡ ಮನುಷ್ಯ, ಬರೆಯೋದು ಎಷ್ಟು ಕಷ್ಟ ಅಂತ ಈಗಾಗಲಾದರೂ ತಿಳಿತೋ?’ ಅಂತ ಕ್ಲಾಸ್ ತೆಗೆದುಕೊಂಡರು. ಯಾಕೆ ಅಂತದ್ದಕ್ಕೆ ‘ಮತ್ತೇನಪ್ಪ ತಿಂಗಳಿಂದ ಏನೂ ಬರೆದಿಲ್ಲ. ನಮಗ್ ಮಾತ್ರ ಬರೀತಿರಿ ಅಂತ ಉಪದೇಶ ಮಾಡ್ತಿ’ ಅಂದ್ರು. ನಾನು ಇಲ್ಲ ಸರ್ ವಾರಕ್ಕೊಂದು ಸಾರಿ ಬರೀತಿದೀನಿ… ಅಂತ ರಾಗ ಎಳೆದೆ. ಆಮೇಲೆ ಗೊತ್ತಾಗಿದ್ದು ಬರಹ ಲಿಂಕ್ ನಲ್ಲಿ ನನ್ನ ಬರಹ ಲಿಂಕ್ ಕಾಣಿಸಿಕೊಳ್ಳದ ಕಾರಣ ನಾನು ಬರೀತಾನೇ ಇಲ್ಲ ಅಂತ ಅವರು ತೀರ್ಮಾನ ಮಾಡಿದ್ರು ಅಂತ!
ಇದೇನಾಯಿತಪ್ಪ . ಬರಹದವರು ಕಂಪಿನ ಲಿಂಕ್ ತೆಗೆದುಹಾಕಿದ್ರಾ? ಈ ಬಡವನ ಮೇಲೆ ಯಾಕೀ ಮುನಿಸು ಅಂತಂದುಕೊಂಡು ಕನ್ನಡಲೋಕದ ವಾಸು ಸರ್ ಗೆ ಒಂದು ಮೇಲ್ ಮಾಡಿ , ನನ್ನ ಬ್ಲಾಗ್ ಲಿಂಕ್ ಬಿಟ್ಟುಹೋಗಿದೆ. ದಯಮಾಡಿ ಸೇರಿಸಿಕೊಳ್ಳಿ ಅಂತ ಕೊರೆದೆ. ಅವರು ಸಾವಧಾನದಿಂದ ಪ್ರತಿಕ್ರಿಯಿಸಿ, ನಿಮ್ಮ ಬ್ಲಾಗ್ ನ ಆರ್ ಎಸ್ ಎಸ್ ಫೀಡ್ ಕೆಲಸ ಮಾಡ್ತಿಲ್ಲ ಅಂತ ಸಾಕ್ಷಿ ಸಮೇತ (ಲಿಂಕ್ ಕಳಿಸಿ) ತಿಳಿಸಿದ್ರು. ಆಗಾಲೇ ನನಗೀ ಸತ್ಯ ಗೊತ್ತಾಗಿದ್ದು.
ಈ ವಿಘ್ನ ನಿವಾರಣೆಗೆ ಒಂದಿಬ್ಬರು ತಕ್ಕ ತಜ್ಝರನ್ನು ಸಂಪರ್ಕಿಸಿದರೂ ಪರಿಹಾರ ಮಾತ್ರ ಸಿಕ್ಕಿಲ್ಲ. ಕೆಲವರು ನಿಮ್ಮ ಎಕ್ಸ್ ಫ್ಲೋರ್ ಅಪ್ ಡೇಟ್ ಆಗಿಲ್ಲ ಅನ್ಸುತ್ತೆ ಅಂದ್ರು. ಇನ್ನು ಇನ್ನೊಬ್ಬರು ವೈರೆಸ್ ಸೇರಿಕೊಂಡಿರಬೇಕು, ಹಿಸ್ಟರಿ ಡೆಲಿಟ್ ಮಾಡಿ ಮತ್ತೆ ರೀ ಸ್ಟಾರ್ಟ್ ಮಾಡಿ ಅಂದ್ರು. ಊಹು…. ಏನು ಮಾಡಿದ್ರು ಏನೂ ಆಗ್ತಾ ಇಲ್ಲ.
ನಾನು ಬಹುತೇಕ ಇಂಟರ್ ನೆಟ್ ಎಕ್ಸ್ ಫ್ಳೋರ್ ಬಳಸ್ತೀನಿ. ನಿಜಕ್ಕೂ ಇಲ್ಲಿ ಸಮಸ್ಯೆ ಇರೋದೆಲ್ಲಿ? ಇದರಿಂದೇನು ತೊಂದರೆ? ಈ ಎರರ್ ಸರಿಮಾಡೋದು ಹೇಗೆ? ಇತ್ಯಾದಿ ಸಂಗತಿಗಳ ಬಗ್ಗೆ, ಹಿರಿಯ, ಅನುಭವಸ್ಥ, ತಜ್ಝ ಬ್ಲಾಗಿಗರು ತಿಳಿಸಿಕೊಡುವುದಾದರೆ ನಾನು ರುಣಿ. ಇದರಿಂದ ನನಗೆ , ನನ್ನಂತ ನಾಲ್ಕಾರು ಕಿರೀ-ಮರಿ ಬ್ಲಾಗಿಗರಿಗೆ ಅನುಕೂಲವಾದೀತು…
(ಅಂದ ಹಾಗೆ ಈ ಲೇಖನವನ್ನು ಫೈರ್ ಫಾಕ್ಸ್ ನಿಂದ ಅಪ್ ಲೋಡ್ ಮಾಡುತ್ತಿದ್ದೇನೆ. )
ಬಿಳಿ ಕಾಗೆ ಹಿಡಿಯಲು ಬರುವಿರಾ?
‘ಶ್ರೀರಂಗಪಟ್ಟಣದ ರಂಗನ ಮೇಲೆ (ಅಥವಾ ದೇವಸ್ಥಾನ) ಬಿಳಿಕಾಗೆ ಕೂತು ನೀರು ಕುಡಿಯುತ್ತದೆ. ಹಾಗಾದ ದಿನ ಕೆಆರ್ ಎಸ್ ಅಣೆಕಟ್ಟೆ ಒಡೆದು ಮೈಸೂರು ನೀರಿನಲ್ಲಿ ಮುಳುಗುತ್ತದೆ.’ ಹಾಗಂತ ಯಾರೋ ಸ್ವಾಮಿಗಳು ಹೇಳಿದ್ದು, ಮುನ್ನೆಚ್ಚರಿಕೆ ಕೈಗೊಳ್ಳಿ ಅಂತ ಎಚ್ಚರಿಸಿದ್ದು ಗೊತ್ತಿರಬಹುದು. ಪತ್ರಿಕೆಗಳು, ಟೀವಿ ಚಾನಲ್ಲುಗಳೂ ಈ ಸುದ್ದಿಯನ್ನ ಪ್ರಕಟ ಮಾಡಿದ್ದವು.
ಹೀಗೆ ಹಬ್ಬಿದ ಸುದ್ದಿ ಹೇಗೆಲ್ಲ ರೂಪ ಪಡೆದು ಕಡೆಗೆ ಮತ್ತೇನೇನೋ ಸೇರಿಸಿಕೊಂಡು ಒಂದು ಭಯಂಕರ ಸುದ್ದಿಯಾಗಿ ಬಿಟ್ಟಿದೆ. ಸದ್ಯ ಇಲ್ಲಿ ಮೈಸೂರಿನ ಯಾವುದೇ ಹಳ್ಳಿಗೆ ಹೋದರೂ, ಇಲ್ಲಿನ ಟೀ ಅಂಗಡಿಯಲ್ಲಿ, ಅರಳೀಕಟ್ಟೆಯಲ್ಲಿ ಇದೇ ಮಾತು. ತಮಾಷೆ ಅಂದ್ರೆ ಮೈಸೂರಿನಲ್ಲಿ ಜಲಪ್ರಳಯವಾಗುತ್ತದೆ ಅನ್ನುವುದರಿಂದ ಹಿಡಿದು , ಈಗ ನಡಿತಿರೋ ಬಿಗ್ ಬ್ಯಾಂಗ್ ನ ಪ್ರಯೋಗದಿಂದ ಭೂಮಿ ನಾಶ ಆಗುತ್ತೆ ಅನ್ನುವವರೆಗೂ, ಅದಕ್ಕೂ ಬಿಳಿಕಾಗೆಗೂ ಸಂಬಂಧ ಕಟ್ಟಿ ಮಾತನಾಡುತ್ತಿರುವುದು!
ಮೊನ್ನೆ ಮೊನ್ನೆ ಸ್ವಾಮಿಗಳು ಹೇಳಿದ ರೀತಿಯಲ್ಲೇ ಶ್ರೀರಂಗಪಟ್ಟಣದಲ್ಲಿ ಬಿಳಿಕಾಗೆ ಕಾಣಿಸಿಕೊಂಡಿದ್ದು, ಅದಕ್ಕೆ ಅಪಶಕುನವೇನೋ ಎಂಬಂತೆ ಯಾವತ್ತು ಹೊರಗೆ ತರದಿದ್ದ ದೇವರ ಮೂರ್ತಿಯೊಂದು ಬಿದ್ದು ಮುಕ್ಕಾದದ್ದು ಎಲ್ಲವನ್ನೂ ಪತ್ರಿಕೆಗಳು ವರದಿ ಮಾಡಿ ಜನರಲ್ಲಿ ಇನ್ನಷ್ಟು ಭಯ ಹುಟ್ಟಿಸಿದ್ದಂತೂ ನಿಜ. ಹಾಗಾದ ಮರುದಿನವೇ ನಮ್ಮ ಪಕ್ಕದ ಮನೆಗಳಲ್ಲಿ (ನಮ್ಮ ಮನೆಯೂ ಸೇರಿ) ಈ ಬಗ್ಗೆ ಭಾರೀ ಚರ್ಚೆ ನಡೀತು. ಇದ್ದಬದ್ದ ಹೆಂಗಸರೆಲ್ಲ ಸೇರಿ ಮುಂಬರುವ ಜಪಪ್ರಳಯದ ಸಾಧಕ- ಭಾದಕ ಕುರಿತು ಗಂಭೀರ ಚರ್ಚೆಗೆ ತೊಡಗಿದ್ರು. ಚಿನ್ನ-ಗಿನ್ನ ಮಾಡಿಸೋದು , ಆಸ್ತಿ ಮಾಡೋದು ಬಿಟ್ಟು ಇರೋವಷ್ಟು ದಿನ ಸುಖವಾಗಿ ತಿಂದುಂಡು ಬದುಕಬೇಕಪ್ಪಾ ಅಂತೆಲ್ಲ ನಿರ್ಧಾರಕ್ಕೆ ಬರೋಕೆ ಶುರುಮಾಡಿದ್ರು.
ಇಷ್ಟೆಲ್ಲವನ್ನೂ ಕೇಳಿಸಿಯೂ ಕೇಳಿಸದವನಂತಿದ್ದ ನನಗೆ ಅದ್ಯಾಕೋ ಈ ಬಗ್ಗೆ ಭಾರೀ ಕುತೂಹಲ ಬಂದುಬಿಟ್ಟಿದೆ. ಮೊನ್ನೆ ಶ್ರೀರಂಗಪಟ್ಟಣದಲ್ಲಿ ನಿಜವಾಗಿ ಬಿಳಿಕಾಗೆ ಕಾಣಿಸಿಕೊಂಡಿತಾ? ಅಥವಾ ಯಾರೋ ಕಾಣಿಸಿಕೊಂಡಂತೆ ಮಾಡಿ ಸುದ್ದಿ ಹಬ್ಬಿಸಿದರಾ? ಇದೆಲ್ಲ ಜನರನ್ನು ತಮ್ಮತ್ತ ಸೆಳೆಯಲು ಪವಾಡದಾರಿಗಳು ಮಾಡುತ್ತಿರುವ ಸಂಚಾ? ಒಂದು ವೇಳೆ ಕಾಣಿಸಿಕೊಂಡಿದ್ದೇ ಆದ್ರೆ ಅದು ಎಲ್ಲಿಂದ ಬಂತು? (ಯಾರೋ ಹೇಳಿದ್ರು ಶಿವಾಜಿನಗರ ಮಾರ್ಕೆಟ್ ನಲ್ಲಿ ಬೇಕಾದಷ್ಟು ಬಿಳಿಕಾಗೆಗಳು ಸಿಕ್ಕುತ್ವೆ ಅಂತ) ಯಾರಾದರೂ ಬೇಕಂತ ತಂದು ಬಿಟ್ರಾ? ಅಥವಾ ಅಷ್ಟು ಶ್ರಮ ತೆಗೆದುಕೊಳ್ಳದೇ ಕಪ್ಪು ಕಾಗೆಯೊಂದನ್ನ ಹಿಡಿದು ಅದಕ್ಕೇ ಬಿಳಿ ಬಣ್ಣ ಬಳೆದು ದೇವಸ್ಥಾನಕ್ಕೆ ತಂದು ಬಿಟ್ರಾ? (ಯಾಕಂದ್ರೆ ತಿಂಗಳಿಗೊಮ್ಮೆಯಾದರೂ ಶ್ರೀರಂಗಪಟ್ಟಣಕ್ಕೆ ಹೋಗ್ತಿರ್ತಿನಿ. ಎಂದೂ ಬಿಳಿಕಾಗೆ ಕಾಣಿಸಿಕೊಂಡಿದ್ದಿಲ್ಲ) ಹೀಗೆ ತರಾವರಿ ಕುತೂಹಲೀ ಪ್ರಶ್ನೆಗಳು ನನ್ನನ್ನ ಕಾಡತೊಡಗಿವೆ.
ಅದಕ್ಕೆ ಒಂದು ನಿರ್ಧಾರಕ್ಕೆ ಬಂದಿದ್ದೀನಿ. ಆದದ್ದಾಗಲೀ, ಒಂದು ಭಾನುವಾರ ಪಟ್ಟಣಕ್ಕೆ ಲಗ್ಗೆ ಇಟ್ಟು, ಇಡೀ ದಿನ ಬಿಳಿಕಾಗೆಯನ್ನ ಹುಡುಕೋ ಪ್ರಯತ್ನ ಮಾಡ್ಬೇಕು. ಒಂದು ವೇಳೆ ಸಿಕ್ಕಿದ್ರೆ ಅದನ್ನೊಮ್ಮೆ ನೀರಿನಲ್ಲಿ ತೊಳೆದು ಬಿಡಬೇಕು (ಸರ್ಫ್ ಎಕ್ಸೆಲ್ ಬಳಸಿ). (ಕಾಗೆ ಎಂದಾದರೂ ಕೈಗೆ ಸಿಗುತ್ತಾ, ಅದೂ ಬಿಳಿ ಕಾಗೆ!) ಹಾಗಾದ ಮೇಲೂ ಅದರ ಬಣ್ಣ ಬಯಲಾಗದಿದ್ರೆ , ಅದು ದೇವಸ್ಥಾನದಲ್ಲಿ ಕೂತದ್ದೇಕೆ ಕೇಳಬೇಕು. ಇದೆಲ್ಲ ನಿಜಕ್ಕೂ ನಿಜ ಅನಿಸಿದ್ರೆ , ಭವಿಷ್ಯ ಹೇಳಿದ ಸ್ವಾಮಿಯ ಕಾಲಿನ ಮುಂದೆ ಉದ್ದುದ್ದ ಅಡ್ಡಬಿದ್ದು , ಹಿಂಗೆಲ್ಲ ಯೋಚಿಸಿದಕ್ಕೆ ನನ್ನನ್ನ ಕ್ಷಮಿಸಿ ಅಂತ ಕೇಳ್ಬೇಕು!
ನನ್ನೀ ಹುಚ್ಚು ಸಾಹಸದಲ್ಲಿ ಭಾಗವಹಿಸುವ, (ನನ್ನಂತೇ ಹುಚ್ಚಿರುವ!) ಆಸಕ್ತರು, ಬಿಳಿ ಕಾಗೆ ಹಿಡಿಯಲು ಬರಬಹುದು.
(ವಿ.ಸೂ.: ನಾನಿನ್ನೂ, ಪಟ್ಟಣದ ಕಾಗೆ ಕಪ್ಪೋ, ಬಿಳಿಯೋ ಎಂಬ ದ್ವಂದ್ವದಲ್ಲಿರುವುದರಿಂದ ಸದ್ಯಕ್ಕೆ ಎರಡು ಬಣ್ಣಗಳುಳ್ಳ ಕಾಗೆಯ ಚಿತ್ರ ಕೊಡಲಾಗಿದೆ. ಬಿಳಿಯ ಕಾಗೆ ಸಿಕ್ಕ ನಂತರ (ಸಿಕ್ಕರೆ!, ಅದು ನನ್ನ ಕ್ಯಾಮರಾಕ್ಕೆ ಪೋಸು ಕೊಟ್ಟರೆ) ಅದರ ಚಿತ್ರವನ್ನು ತಪ್ಪದೆ ಪ್ರಕಟಿಸಲಾಗುವುದು.)
ಚಿತ್ರ ಕೃಪೆ: Azmi Bogart
ಇಲ್ಲಿ ಬಂದವರು ಅಲ್ಲಿಗೂ ಹೋಗಿಬನ್ನಿ
ಹೊಸ ಚಿತ್ರ ಬರೆಯುವ ಮನಸ್ಸಿತ್ತು. ಬ್ರಶ್, ಕ್ಯಾನ್‌ವಾಸ್ ಎಲ್ಲವೂ ಸಿದ್ಧವಿದ್ದವು. ಮೆತ್ತುವುದೊಂದು ಬಾಕಿಯಿತ್ತು. ಈಗ ಅದೂ ಆಗಿದೆ. ‘ಚಿತ್ರ’ ನಿಮ್ಮ ಮುಂದಿದೆ, ‘ಕುಲುಮೆ’ಯೊಟ್ಟಿಗೆ.
ಕುಲುಮೆಯ ಕೊಂಡಿ ಇಲ್ಲಿದೆ: http://chitrakulume.wordpress.com/
ಇಲ್ಲಿ ಬರುವವರು ಅಲ್ಲಿಗೂ ಹೋಗಿಬನ್ನಿ.
ಇದ್ಯಾವ ‘ಇಸಂ’ ಹೇಳ್ತಿರಾ?
ಮಹಿಳಾ ವಾದ (?)ದ ಕುರಿತು ಈಗ ಕನ್ನಡದ ಬ್ಲಾಗುಗಳಲ್ಲಿ ಹಿಂದೆಂದಿಗಿಂತ ಹೆಚ್ಚು ಚರ್ಚೆಯಾಗುತ್ತಿದೆಯಾ? ನನಗಂತೂ ಹಾಗೇ ಅನಿಸುತ್ತಿದೆ. ಚೇತನಾರ ಒಂದು ಗಟ್ಟಿ ಚರ್ಚೆಯನ್ನು ಓದಿ ಮುಗಿಸುತ್ತಿದ್ದಂತೆ, ಅತ್ತ ಅಕ್ಷರವಿಹಾರದಲ್ಲಿ ಇನ್ನೇನೋ ಗಲಾಟೆಯಾಗುತ್ತಿದೆ. ಇನ್ನೊಂದು ಕಡೆ ಸೀಮಾ ಸಣ್ಣದಾಗಿ ಧಮಕಿ ಹಾಕುತ್ತಿದ್ದಾರೆ.
ಇದನ್ನೆಲ್ಲ ಓದುತ್ತ ಕುಳಿತಿರುವಾಗಲೇ , ಇಲ್ಲೇ ಕಣ್ಣೆದುರು ಒಂದು ಪ್ರಸಂಗ ನಡೆಯುತ್ತಿದೆ. ಅದೇನಂತ ಹೇಳ್ತೀನಿ….
ಮಧ್ಯಾಹ್ನ ಆಫೀಸಿನಲ್ಲಿ ಕೆಲಸ ಮಾಡ್ತೀರೋವಾಗ ಡಬ್ ಅಂತ ದೊಡ್ಡ ಶಬ್ದದ ಜೊತೆಗೆ ಬೆಳಕೂ ಒಟ್ಟೊಟ್ಟಿಗೆ ರೂಮಿಗೆ ನುಗ್ಗಿ ಬಂತು. ಏನಪ್ಪ ಅಂತ ಹೊರಗೋಡಿ ನೋಡಿದ್ರೆ ಲೈಟುಕಂಬದ ಮಧ್ಯದಲ್ಲಿ ಒಂದೆರಡು ವಿದ್ಯುತ್ ತಂತಿಗಳು ಸಿಡಿದು ಬಿದ್ದಿದ್ವು. ಸ್ಕೂಲು ಬಿಡೋ ಹೊತ್ತು ಮಕ್ಕಳ್ಯಾರಾದ್ರೂ ಇತ್ತ ಬಂದ್ರೆ ಕಷ್ಟ ಅಂತ ಕೆಇಬಿ ವಿಭಾಗಕ್ಕೆ ಫೋನಾಯಿಸಿದರೂ ರಿಸೀವ್ ಮಾಡಲಿಲ್ಲ. ಇದರ ಯೋಚನೆಯಲ್ಲಿದ್ದಾಗಲೇ ಅದೃಷ್ಟಕ್ಕೇನೋ ಎಂಬಂತೆ ಅವರೇ ಒಟ್ಟೊಟ್ಟಿಗೆ ಎರಡು ಜೀಪಿನಲ್ಲಿ ಬಂದುಬಿಟ್ಟರು!
ಅದರಲ್ಲಿ ಒಬ್ಬರು ಮಹಿಳಾ ಸೂಪರ್ ವೈಸರ್. ಈಗಷ್ಟೆ ಕೆಲಸಕ್ಕೆ ಸೇರಿದ ಹುಡುಗಿ ಅನ್ನಿಸುತ್ತೆ. ಬಂದವರೇ ಕಡಿದ ತಂತಿ ನೋಡಿ, ಏನಾಗಿರಬಹುದು ಅಂತ ಉಳಿದ ಕೆಲಸಗಾರರತ್ತ ಮುಖ ಮಾಡಿದರು. ಅವರು ಏನೂ ಆಗಿಲ್ಲ ಎಂಬಂತೆ ತಮ್ಮ ಪಾಡಿಗೆ ಕೆಲಸದಲ್ಲಿ ತೊಡಗಿಕೊಂಡ್ರು. ಅಷ್ಟರಲ್ಲೇ ಯಾರೋ ಮೇಲಧಿಕಾರಿಗಳು ಬಂದು ಆ ಹುಡುಗಿ ಪಕ್ಕದಲ್ಲೇ ನಿಂತು ಒಂದಿಷ್ಟು ಹೊತ್ತು ಮಾತನಾಡಿ, ಉಳಿದರನ್ನೊಮ್ಮೆ ಸುಮ್ನೆ ನೋಡಿ ಹೋದ್ರು. ಇದೆಲ್ಲ ಇಲ್ಲಿ ಉಳಿದವರಿಗೆ ಸ್ವಲ್ಪ ಹೊಟ್ಟೆಕಿಚ್ಚು ತಂದಿರಬೇಕು. ಆ ಮಹಿಳೆ ಏನೂ ಹೇಳಿದ್ರು ಇವರು ಕಿವಿಗೆ ಹಾಕಿಕೊಳ್ಳುವ ಹಾಗೇ ಕಾಣ್ತಾ ಇಲ್ಲ. ಕೇಳಿಸಿಕೊಂಡವರಂತೆ ನಟಿಸಿ, ಆಕೆ ಬದಿಗೆ ಸರಿದಾಗ ನಮಗಿಂತ ಗೊತ್ತ ಅಂತ ಒಳಗೊಳಗೆ ನಗುತ್ತಿದ್ದಾರೆ. ಆಕೆ ಕೂಡ ಇದೆಲ್ಲ ತಿಳಿದವರಂತೆ ಮುಜುಗರದಿಂದ ಒಂದು ಬದಿಯಲ್ಲೇ ನಿಂತು, ಮೊಬೈಲಿನ ಮಣೆ ಒತ್ತುತ್ತ, ಅತ್ತಿತ್ತ ನೋಡುತ್ತ ಹೊತ್ತು ಹೋಗುವುದನ್ನೇ ಕಾಯುತ್ತಿದ್ದಾರೆ. ಕತ್ತಲಾಗುತ್ತಾ ಬಂದು ಕರೆಂಟು ಬಂದು , ಹೋಗಿ ಈಗ ಮತ್ತೆ ಬಂದಿದೆ. ಆದರೂ ಕೆಲಸ ನಿಂತಿಲ್ಲ. ಕತ್ತಲಾಗುತ್ತಿದೆ. ಆಕೆ ಅಲ್ಲೇ ರಸ್ತೆ ಬದಿಯಲ್ಲಿ ಇರಿಸು-ಮುರಿಸು ಪಡುತ್ತಾ ನಿಂತಿದ್ದಾರೆ. ಇವರು ಕೆಲಸ ಮುಂದುವರಿಸಿದ್ದಾರೆ…. ಇದನ್ನೆಲ್ಲ ನಾನು ಆಗಾಗ್ಗೆ ಕಿಟಕಿಯಿಂದ, ಒಮ್ಮೊಮ್ಮೆ ಹೊರಗೆ ಬಂದು ನೋಡಿ ಹೋಗುತ್ತಿದ್ದೇನೆ….
ನನಗೆ ಯಾವ ಇಸಂ ಕೂಡ ಗೊತ್ತಿಲ್ಲ. ಅದ್ಯಾಕೋ ಇದನ್ನು ಬರೀಬೇಕು ಅನ್ನಿಸ್ತು. ಸುಮ್ಮನೆ ಬರೆದಿದ್ದೇನೆ, ಅಷ್ಟೆ…!
ಹೀಗೆ ಸುಮ್ಮನೆ ಒಂದು ಕವಿತೆ
ಸುಮ್ಮನೆ ಸುಖಕೊಡುವ ಏಕಾಂತ
ಬಿಚ್ಚಿಟ್ಟಷ್ಟು ಬೆಚ್ಚಗಾಗುವ ನೆನಪುಗಳು
ಮಾತಿಗೆ ಕೊನೆಯಿಲ್ಲ ಮೌನಕ್ಕೆ ಮಿಗಿಲಿಲ್ಲ
ಒಮ್ಮೆಮ್ಮೆ ಮೌನ ಮಾತಾಗಿ
ಮಾತು ಮೌನಕ್ಕೆ ತಿರುಗಿ
ಮತ್ತೇನೋ ಆಗಿ ಹೋಗಿ
ಇನ್ನು ಇಬ್ಬರು ಮಾತನಾಡಬಾರದು ಅಂತಂದು
ಎಲ್ಲ ಸರಿಹೋಗಿದೆ ಅಂದುಕೊಳ್ಳುವ ಹೊತ್ತಿಗೆ
ಇಲ್ಲ ಇನ್ನೊಂದಿದೆ ಎನ್ನುವಂತೆ
ಇಣುಕುತ್ತಿವೆ ನಿನ್ನ ನಿನ್ನ ಕಣ್ಣೊಳಗಿಂದ ಕನಸುಗಳು
ಇವರು ಹೀಗೆಂದರು..