Archive for ಅಕ್ಟೋಬರ್, 2008
ನಾನೀಗ ಮೊದಲಿನಂತಿಲ್ಲ
ನೀ ಸಿಗಲಿಲ್ಲ ಅಂತ
ಖಂಡಿತ ಬೇಜಾರಿಲ್ಲ
ಈಗ ನಾನು ಮೊದಲಿನಂತಿಲ್ಲ
ನಿನ್ನನ್ನೇ ನೆನೆಸಿ ಕೊರಗುತ್ತಿಲ್ಲ
ನೀ ಕಾಡಿದಾಗಲೆಲ್ಲ
ಮನಸ್ಸು ನಿನ್ನ ಸಂಗ ಬೇಡಿದಾಗಲೆಲ್ಲ
ಸುಮ್ಮನೆ ಮೌನಕ್ಕೆ ಶರಣಾಗುತ್ತೇನೆ
ಇಲ್ಲಸಲ್ಲದ ಉಪಮೆಗಳ ಕೆತ್ತಿ
ನಿನ್ನ ಮೇಲೆ ಪದ್ಯ ಕಟ್ಟುವುದ ಬಿಟ್ಟಿದ್ದೇನೆ
ಹಾಗೆ ಬರೆದ ಕವಿತೆಗಳ
ಗಂಟುಕಟ್ಟಿ ಅಟ್ಟಕ್ಕೆಸೆದು
ನಿಟ್ಟುಸಿರು ಬಿಟ್ಟಿದ್ದೇನೆ
ನೆನಪುಗಳು ಒತ್ತೊತ್ತಿ ಬಂದಾಗ
ದುಃಖಗಳ ಭಾರ ಅತಿಯಾಯಿತು ಅನಿಸಿದಾಗ
ಎಂದಾದರೊಮ್ಮೆ ಅತ್ತು ಹಗುರಾಗುತ್ತೇನೆ
ಅಷ್ಟಕ್ಕೂ ಸಮಾಧಾನವಾಗದಿದ್ದರೆ
ಹೊದ್ದು ಮಲಗುತ್ತೇನೆ
ಕನಸಿನಲ್ಲಾದರೇ ನೀನು ಖಂಡಿತ ಸಿಗುತ್ತಿ
ನನ್ನೊಂದಿಗೇ ಮಾತನಾಡುತ್ತಿ, ಲಲ್ಲೆ ಗರಿಯುತ್ತಿ,
ಅಷ್ಟರಲ್ಲೇ ನಿದ್ದೆಯ ಮಂಪರು ಕಣ್ಣಿಗತ್ತಿ
ನಾನು ಕೊಸರತೊಡಗಿದಾಗ
ಹಣೆ, ಕಣ್ಣು, ಕೆನ್ನೆಗೆಲ್ಲ ಹೂಮುತ್ತನಿಡುತ್ತ
ನೀ ನನ್ನೊಳಗೆ ಕರಗಿಹೋಗುತ್ತಿ
ಮನಸ್ಸೀಗ ಅದೆಷ್ಟೋ ನಿರಾಳ
ನಾನು ಮಾದೇವಣ್ಣ ಮೀನಿಗೆ ಗಾಳಹಾಕಿ ಕುಂತದ್ದು
ಹೀಗೊಂದು ದಿನ ಶಿವನಸಮುದ್ರಕ್ಕೆ ಹೋಗಿದ್ದೆ. ಮಳೆಗಾಲದ ಸಮಯ. ಎಂದಿಗಿಂತ ಜೋರಾಗಿ ಹರಿಯೋ ಕಾವೇರಿ. ನದಿಯ ಮೊರೆತದ ಸದ್ದು ದೂರಕ್ಕೂ ಕೇಳಿಸುತ್ತಾ ಇತ್ತು. ಸಖತ್ ನೀರು. ಭರಚುಕ್ಕಿಯನ್ನು ಕಂಡವನೇ ಅದರ ತಳಕ್ಕೆ ಹೊರಟೆ. ಉದ್ದಕ್ಕೂ ಕಲ್ಲುಚಪ್ಪಡಿಯ ಕೊರಕಲು ಹಾದಿ. ಆದರೆ ನನ್ನಂಥವರು ಎಲ್ಲಾದರೂ ನೇರವಾಗಿ ಹೋಗೋದುಂಟಾ! ಅಡ್ಡದಾರಿ ಹಿಡಿದೆ. ಎಡಕ್ಕೆ ತಿರುಗಿದ್ದೇ ಕೆಳಕ್ಕಿಳಿಯತೊಡಗಿದೆ. ಮಳೆಯಿಂದ ತೋಯ್ದ ನೆಲ. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ಸುಯ್… ಅಂತ ಜಾರಿಸಿಕೊಂಡು ನೇರ ಜಲಪಾತಕ್ಕೇ ಹೊತ್ತೊಯ್ಯೊ ಅಷ್ಟು ಜಾರುತ್ತಿತ್ತು. ದುರಾದೃಷ್ಟಕ್ಕೆ ಒಬ್ಬನೇ ಬೇರೆ? ಹಿಂಗೆ ಬಿದ್ದರೂ, ಕೊಚ್ಚಿಕೊಂಡು ನೀರೊಳಗೆ ಹೋದರೂ ಎತ್ತುವವರಿಲ್ಲ. ಈ ಹುಡುಗ ಬಂದಿದ್ದ ಅನ್ನುವುದಕ್ಕೆ ಗುರುತೇ ಸಿಗದ ಹಾಗಾದರೆ ಕಷ್ಟ ಅನ್ನುತ್ತ ಎಚ್ಚರದಿಂದ ಹೆಜ್ಜೆ ಇಡುತ್ತಿದ್ದೆ. ಹೀಗೆ ಮುಂದೆ ಹೋಗಿ ನೋಡಿದರೆ ಅಲ್ಲೂ ಒಂದು ಮಿನಿ ಜಲಧಾರೆ. ಆಶ್ಚರ್ಯ ಅನ್ನುವಂತೆ ಅಲ್ಲಿ ಒಬ್ಬ ಮೀನುಗಳಿಗೆ ಗಾಳ ಹಾಕಿ ಕುಂತಿದ್ದಾನೆ. ಅರರೆ.. ಅಂತ ಹತ್ತಿರ ಓದವನೇ ಒಂದಿಷ್ಟು ಹೊತ್ತು ಅವನ ಪಕ್ಕದಲ್ಲೇ ನಿಂತೆ. ಹೆಂಗೆ ಗಾಳ ಹಾಕ್ತಾನೆ ಅಂತ ನೋಡಲಿಕ್ಕೆ! ಆಮೇಲೆ ಅವನನ್ನ ಮಾತನಾಡಿಸಿದೆ. ಸರ್ ಸ್ವಲ್ಪ ಬಿಜಿ ಇದ್ರು. ಮಾತಾಡೋದು ಲೇಟ್ ಆಯ್ತು. ಆಮೇಲೆ ಹಂಗೂ ಹಿಂಗೂ ಪರಿಚಯ ಮಾಡಿಕೊಂಡು ಗಾಳ ಹಾಕುವ ಪಾಠ ಹೇಳಿಸಿಕೊಳ್ಳಲು ಮುಂದಾದೆ.
ಈ ಮೀನು ಹಿಡಿಯುವ ಸಾಹಸ ನಂಗೆ ಹೊಸದೇನಲ್ಲ. ಚಿಕ್ಕವನಿದ್ದಾಗ ಮನೆಯ ಮುಂದೆಯ ಬಚ್ಚಲು ಬಗೆದು, ಎರೆಹುಳು ತೆಗೆದು , ಗಾಳ ಹಿಡಿದು ಹೊಳೆಗೆ ಹೋಗುತ್ತಿದ್ದೆ. ಅಲ್ಲಿ ಗಾಳಕ್ಕೆ ಎರೆಹುಳು ಸಿಕ್ಕಿಸಿ ಹೊಳೆಗೆ ತೇಲಿಬಿಟ್ಟು ಗಂಟೆಗಟ್ಟಲೆ ಫಿಳಿ ಫಿಳಿ ಕಣ್ಣು ಬಿಟ್ಟು ಕುಂತರೂ, ಮುಂಡೇವೂ ಒಂದ್ ಮೀನು ಬೀಳ್ತಿರ್ಲಿಲ್ಲ. ಕಿಲಾಡಿ ಮೀನುಗಳು ಮೀನು ಹಿಡಿಯಲು ಬರದ ನನ್ನ ದಡ್ಡತನವನ್ನೇ ಬಂಡವಾಳ ಮಾಡಿಕೊಂಡು, ಇದ್ದ ಬದ್ದ ಹುಳವನ್ನೆಲ್ಲ ಗಾಳಕ್ಕೆ ಸಿಕ್ಕದ ಹಾಗೆ ಮೇದು ಹೋಗುತ್ತಿದ್ದವು. ಕವರಿನಲ್ಲಿದ್ದ ಹುಳುವೆಲ್ಲ ಖಾಲಿಯಾದ ಮೇಲೆ ನಾನು ಪೆಚ್ಚುಮುಖ ಹಾಕಿಕೊಂಡು ಮನೆಗೆ ಹೋಗೋದು ಖಾಯಂ ದಿನಚರಿ.
ಇಂತಿಪ್ಪ ನನಗೆ ಮೀನು ಹಿಡಿಯುವುದೆಂದರೆ ಇರುವ ಎರಡು ಕಣ್ಣುಗಳು ನಾಲ್ಕಾಗಿ ಅರಳಿ ಬಿಡುತ್ತವೆ. ಇಷ್ಟೆಲ್ಲ ನೆನಪಿಸಿಕೊಳ್ಳೋ ವಾಗಲೇ ಆತನ ಗಾಳಕ್ಕೆ ಮೀನೊಂದು ಬಿತ್ತು. ಅಷ್ಟೇನೂ ದಪ್ಪವಲ್ಲದ ಮೀನು. ಯಾವ ಜಾತಿಯದ್ದೋ. ಅವನು ಅದನ್ನ ಬುಟ್ಟಿಗಿರಿಸುವ ಮುನ್ನ ನಾನು ಒಂದ್ನಿಮಿಷ ಅಂತಂದು ಕ್ಯಾಮರಾವನ್ನ ತಿರುಗಿಸಿ ತಿರುಗಿಸಿ ಎರಡೆರಡು ಸಲ ಕ್ಲಿಕ್ಕಿಸಿದೆ. ಒಂದು ಚೆನ್ನಾಗಿ ಬರದಿದ್ರೆ ಇನ್ನೊಂದಾದ್ರೂ ಬರಲಿ ಅಂತ.
ಆಮೇಲೆ ಮೀನು ಬುಟ್ಟಿ ಸೇರಿತು. ಗಾಳ ನೀರಿಗಿಳಿಯಿತು. ನಮ್ಮ ಮಾತು ಶುರುವಾಯಿತು. ಈತನ ಹೆಸರು ಮಾದೇವ ಅಂತ. ಈ ಮಾದೇವಣ್ಣ ಅಲ್ಲೇ ಹತ್ತಿರದಲ್ಲಿರೋ ಸತ್ತೆಗಾಲ ಎಂಬ ಊರಿನವರು. ಆಗಾಗ್ಗೆ ಇಲ್ಲಿಗೆ ಮೀನು ಹಿಡಿಲಿಕ್ಕೆ ಬರ್ತಾರಂತೆ. ಅದು ಸರಿ ಆದ್ರೆ ಜಲಪಾತದಡಿಗೇ ಬಂದಿದ್ದೀರಲ್ಲಾ ಅಂದ್ರೆ ಮೀನುಗಳು ಎಲ್ಲೆಲ್ಲಿಂದಲೋ ಈಜುತ್ತಾ ಬಂದು ಇಲ್ಲಿ ಮೇಲಿಂದ ಬೀಳ್ತಾವಲ್ಲ ಅದಕ್ಕೆ ಅಂದ್ರು. ಯಾವ ಜಾತಿಯ ಮೀನು ಹಿಡಿತೀರಿ ಅಂದ್ರೆ ಗಾಳಕ್ಕೆ ಸಿಗುವ ಎಲ್ಲ ಜಾತಿಯದೂ ಅಂತ ‘ಜಾತಿ ವಿಜಾತಿಯೆನಬೇಡ….’ ಅನ್ನುವವರ ಹಾಗೇ ಸಣ್ಣದಾಗಿ ನಕ್ಕರು.
ಅಷ್ಟರಲ್ಲೇ ನನ್ನ ಕಣ್ಣು ಪಕ್ಕದಲ್ಲೇ ಹರಿಯುತ್ತಿದ್ದ ರೈಲು ಹುಳುವಿನ ಮೇಲೆ ಬಿತ್ತು. ಹೇಗಾದರೂ ಮಾಡಿ ಇದರದ್ದೊಂದು ಚಂದದ ಚಿತ್ರ ತೆಗೀಬೇಕಲ್ಲ ಅನ್ನೋ ತವಕ. ಅದೋ ನನ್ನನ್ನು ಕಂಡದ್ದೇ ಬೆಚ್ಚಿ ಬೀಳುತ್ತಾ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸುರುಳಿಯಾಗಿ ಸುತ್ತಿಕೊಂಡು, ಮತ್ತೆ ತೆರೆದುಕೊಳ್ಳುತ್ತ ಹರಿಯುತ್ತಿತ್ತು. ಚಿಮ್ಮುವ ಹನಿಗಳಿಂದ ಕ್ಯಾಮರಾ ಲೆನ್ಸ್ ರಕ್ಷಿಸಿಕೊಂಡು ಹೇಗೋ ಬಂದರಲ್ಲಿ ಒಂದೆರಡು ಫೋಟೊ ಕ್ಲಿಕ್ಕಿಸಿದೆ. ಅದರ ಪಾಡಿಗೆ ಅದನ್ನು ಬಿಟ್ಟೆ.
ಇಷ್ಟೊತ್ತಾದರೂ ಇನ್ನೊಂದು ಮೀನು ಗಾಳಕ್ಕೆ ಬೀಳಲಿಲ್ಲ. ಮತ್ತೆ ಮಾತು ಮುಂದುವರಿಯಿತು. ಹೀಗೆ ಒಂದೊಂದು ಬಾರಿ ಮೀನು ಹಿಡಿದಾಗಲೂ ಅವರಿಗೆ ಇನ್ನೂರರಿಂದ ಮುನ್ನೂರು ರುಪಾಯಿ ವ್ಯಾಪಾರ ಆಗುತ್ತಂತೆ. ಸತ್ತೆಗಾಲದಲ್ಲೇ ಮೀನು ಮಾರುತ್ತೀನಿ ಅಂತಂದ್ರು. ಅಷ್ಟರಲ್ಲೇ ಎಲ್ಲಿತ್ತೋ ನತದೃಷ್ಟ ಮೀನು. ಗಾಳಕ್ಕೆ ಬಂದು ಬಿತ್ತು. ಈ ಸಲದ ಮೀನು ಮೊದಲಿನದ್ದಕ್ಕಿಂತ ಸ್ವಲ್ಪ ದಪ್ಪದಿತ್ತು. ಆದ್ರೆ ಅಷ್ಟೇನೂ ದೊಡ್ಡ ಗಾತ್ರದ್ದಾಗಿರಲಿಲ್ಲ. ನನಗೆ ಕೊಂಚ ನಿರಾಸೆಯೇ ಆಯ್ತು. ಇರಲಿ ದೊಡ್ಡ ಮೀನುಗಳನ್ನು ನಾನೇ ಹಿಡಿಯುತ್ತೇನೆ ಅಂದುಕೊಂಡೆ. ಅದನ್ನೂ ಬಿಡದೇ ಕ್ಲಿಕ್ಕಿಸಿದೆ. ಎಂದಿನಂತೆ ಮೀನು ಬುಟ್ಟಿಗೆ ಗಾಳ ನೀರಿಗೆ.
ಅಷ್ಟರಲ್ಲೇ, ನಾನಿಲ್ಲಿಗೆ ಬಂದದ್ದರ ಉದ್ದೇಶ ನೆನಪಾಯಿತು. ಎದ್ದವನೇ ಅಲ್ಲಿಂದ ಹೊರಡಲು ಅನುವಾದೆ. ಹೋಗುವ ಮುನ್ನ ಮಾದೇವಣ್ಣನದ್ದೂ ಒಂದು ಫೋಟೊ ಕ್ಲಿಕ್ಕಿಸಿದೆ. ಸ್ಮೈಲ್ ಪ್ಲೀಸ್ ಅಂದದ್ದೆ, ಅವರೂ ಥೇಟ್ ಹಿರೋ ಥರಾನೇ ಫೋಸ್ ಕೊಟ್ಟರು. ಅವರಿಗೊಂದು ಬೈ ಹೇಳಿ ಅಲ್ಲಿಂದ ಮೇಲಕ್ಕೆ ಹೊರಟೆ.
ಜೋಕೆ ಜಾಣೆ ಇದು ಜಾಹಿರಾ…ಥೂ!
(ಸದ್ಯಕ್ಕೆ ಏನೂ ಬರೆಯಲಾಗದ ನನ್ನ ಸೋಮಾರಿತನಕ್ಕೆ ಕ್ಷಮೆ ಇರಲಿ. ಈ ಸಲ ಸಣ್ಣದೊಂದು ಬದಲಾವಣೆ. ನನ್ನ ಬದಲಾಗಿ ಗೆಳೆಯ ಚೈತನ್ಯ ಹೆಗಡೆ ಮುಗಿಲಕಂಪಿಗಾಗಿ ಬರೆದಿದ್ದಾನೆ. ಓದಿ ನಿಮಗೇನನ್ನಿಸಿತು ನಾಲ್ಕು ಸಾಲು ಬರೆಯುವುದು ಮರೆಯದಿರಿ.)
ಚೆಲುವೆ ಜಾಹಿರಾ
ಥೂ ಎಂದು ಉಗಿದರೆ ಅದೇ ಒಂದು ಜಾಹಿರಾತು..
ಹಾಗಂತ ವೈಯೆನ್ಕೆ ಬರೆದಿದ್ದರು. ತಮಾಷೆಯ ಮಾತೀಗ ತೀರ ವಾಸ್ತವ. ಎಲ್ಲ ಜಾಹಿರಾತುಗಳಲ್ಲೂ ಇದೀಗ ಉಗಿಯಲು, ಉಲಿಯಲು, ಉನ್ಮಾದಿಸಲು ಮಾನಿನಿಯರೇ ಬೇಕು. ಶೇವಿಂಗ್ ಕ್ರೀಮ್ ಜಾಹಿರಾತಿಗೂ ಬೇಕು ಸುಹಾಸಿನಿಯರ ಹಾಜರಿ. ಆದರೆ, ತಕರಾರಿನ ವಿಷಯ ಅದಲ್ಲ.
ದೃಶ್ಯ ಮಾಧ್ಯಮದಲ್ಲಿ ಮಹಿಳೆಯರ ಚಿತ್ರಣ ಮೊದಲಿಂದಲೂ ಚರ್ಚೆಯ ವಸ್ತುವೇ. ಸೌಂದರ್ಯದ ಹೆಸರಲ್ಲಿ ಮಹಿಳೆಯನ್ನು ಅತಿಕಡಿಮೆ ಬಟ್ಟೆಯಲ್ಲಿ ತೋರಿಸುವುದು ಅಬಾತ ಬೆಳವಣಿಗೆ. ಅದು ಜಾಹಿರಾತು ಕ್ಷೇತ್ರದಲ್ಲೂ ಮುಂದುವರಿದಿದೆ. ಅದಕ್ಕೂ ಮಿಕ್ಕಿ ಗಮನಿಸಬೇಕಾದ ಕೆಲ ಅಂಶಗಳಿಲ್ಲಿವೆ.
*ಸುವಾಸನಾ ಸಿಂಪಡಿಕೆ ಉತ್ಪನ್ನವೊಂದರ ಜಾಹಿರಾತು ಹೀಗಿದೆ. ಮೇಕಪ್ ವ್ಯಾನ್‌ನಿಂದ ಹೊರಬರುತ್ತಿರುವ ಹುಡುಗಿ. ಅದನ್ನೇ ಕಾಯುತ್ತಿದ್ದ ಹುಡುಗ ತನ್ನ ಮೈಗೆಲ್ಲಾ ‘ಆ’ ಸೆಂಟ್ ಪೂಸಿಕೊಳ್ಳುತ್ತಾನೆ. ಆ ಹುಡುಗಿ ಸೆಂಟ್‌ನ ಘಮಕ್ಕೆ ಮೋಹಿತಳಾಗಿ ಜಗದ ಪರಿವೆಯೇ ಇಲ್ಲದಂತೆ ಅವನ ತೆಕ್ಕೆಗೆ ಬೀಳುತ್ತಾಳೆ.
*ಅಂಥದ್ದೇ ಇನ್ನೊಂದು ಜಾಹಿರಾತಿನಲ್ಲಿ ಮೈಗೆಲ್ಲಾ ಕೆಸರು ಪೂಸಿಕೊಂಡ ಯುವಕನನ್ನು ಮುತ್ತಿಕೊಳ್ಳುವ ಹುಡುಗಿಯರು ಎಗ್ಗಿಲ್ಲದೇ ಆತನ ಮುಖ-ಮೈಗಳ ಕೆಸರು ಕಚ್ಚುತ್ತಾರೆ. ಯಾಕೆಂದರೆ ಆತ ಸೆಂಟ್ ಪುಸಿಕೊಂಡಿರುತ್ತಾನೆ. ಅದು ಹುಡುಗಿಯರು ಹತ್ತಿಕ್ಕಿಕ್ಕೊಳ್ಳಲಾಗದ ಅತ್ತರು
*ಇಂಥದೇ ಸುಗಂಧ ಉತ್ಪನ್ನದ ಕುರಿತ ಇನ್ನೊಂದು ಜಾಹಿರಾತಂತೂ ಇನ್ನೂ ಒಂದು ಹೆಜ್ಜೆ ಮುಂದಿರಿಸಿದೆ. ಸೆಂಟ್ ಪೂಸಿಕೊಂಡ ಹುಡುಗನೊಬ್ಬನಿಗೆ ಅಕಸ್ಮಾತ್ ಢಿಕ್ಕಿ ಹೊಡೆದ ಮಹಿಳೆಯೋರ್ವಳು ಅಲ್ಲೇ ಮೋಹಿತಳಾಗಿ ಅವನೊಂದಿಗೆ ರೊಮಾನ್ಸ್ ಮಾಡಿದಂತೆ ಕನಸಿಗೆ ಜಾರುತ್ತಾಳೆ.
*ಬ್ಯೂಟಿ ಕ್ರೀಂಗಳ ಕುರಿತ ಜಾಹಿರಾತುಗಳಂತೂ ಕಪ್ಪು ಬಣ್ಣದವರು ಭೂಮಿಯಲ್ಲಿ ಬದುಕಲಿಕ್ಕೇ ಅಯೋಗ್ಯರು ಎಂದು ಸೂಚಿಸುವಂತಿರುತ್ತವೆ. ಹುಡುಗಿಗೆ ನೌಕರಿ ಸಿಗಲು, ಹುಡುಗ ಒಲಿಯಲು ಎಲ್ಲವಕ್ಕೂ ಬೆಳ್ಳಗಾಗಿರಬೇಕು. ಹಾಗೆ ಶ್ವೇತವರ್ಣೀಯರಾಗಿರಲು ಮಹಿಳೆಯರು ತಮ್ಮ ಬ್ಯೂಟಿಕ್ರೀಂ ಲೇಪಿಸಿಕೊಳ್ಳಬೇಕು ಎಂಬ ಧಾಟಿ ಇವುಗಳದ್ದು.
ಇವನ್ನೆಲ್ಲ ಆ ಕ್ಷಣದಲ್ಲಿ ಒಂದು ತಮಾಷೆಯನ್ನಾಗಿ ನೋಡಿ ಮರೆತುಬಿಡಬಹುದು. ಆದರೆ ಒಂದೊಮ್ಮೆ ಸಿನಿಮಾಗಳು ಮಾಡಿದಂತೆ ಇವತ್ತಿನ ಜಾಹಿರಾತುಗಳೂ ಸಹ ಮಹಿಳೆಯ ಕುರಿತಾದ ಒಂದಷ್ಟು ‘ಸ್ಟಿರಿಯೋಟೈಪ್’ಗಳನ್ನು ಹುಟ್ಟುಹಾಕುತ್ತಿವೆ. ಅವು ಹೊರಹಾಕುತ್ತಿರುವ ಸಂದೇಶಗಳು ಮಾತ್ರ ಭಯಾನಕವಾಗಿವೆ.
ಅದೆಷ್ಟೇ ಸ್ವರ್ಗಾನುಭೂತಿಯ ಸೆಂಟ್ ಆಗಿರಲಿ. ಯಾವ ಮಹಿಳೆಯಾದರೂ ಹಿಂದು-ಮುಂದು ಯೋಚಿಸದೇ ಸೆಂಟ್ ಪೂಸಿಕೊಂಡ ಹುಡುಗನನ್ನು ತಬ್ಬಿಕೊಂಡು ಬಿಡುತ್ತಾಳೆಯೇ? ಕೇವಲ ಸೆಂಟ್ ಪೂಸಿಕೊಂಡ ಮಾತ್ರಕ್ಕೆ ಹುಡುಗಿಯರನ್ನೆಲ್ಲಾ ವಶವಾಗಿಸಿಕೊಂಡುಬಿಡಬಹುದು ಎನ್ನಲು ಅವರೇನು ಅಷ್ಟು ಅಗ್ಗಕ್ಕೆ ಬಿದ್ದವರಾ?
ಇದನ್ನು ಕೇವಲ ಒಂದು ತಮಾಷೆಯ ಜಾಹಿರಾತು ಎಂದುಕೊಳ್ಳುವುದಕ್ಕೆ ಮೊದಲು ತುಸು ಯೋಚಿಸಬೇಕಾಗಿದೆ. ಉತ್ಪನ್ನದ ಹೆಚ್ಚುಗಾರಿಕೆ ಚಿತ್ರಿಸುವ ಭರದಲ್ಲಿ ವ್ಯಕ್ತಿತ್ವವನ್ನು ಇಷ್ಟು ಕೇವಲವಾಗಿ ತೋರ್ಪಡಿಸಿದರೆ ಹೇಗೆ? ಇದನ್ನು ಗೌರವಯುತವಾಗಿ ಚಿತ್ರಿಸುವ ಎಲ್ಲ ಅವಕಾಶಗಳಿದ್ದವು. ಸೆಂಟ್ ಪೂಸಿಕೊಂಡವನತ್ತ ಒಂದು ವಾರೆ ನೋಟ, ಮುಗಳ್ನಗು.. ಇಷ್ಟರ ಬಗ್ಗೆ ತಕರಾರಿಲ್ಲ. ಒಂದು ಉತ್ತಮ ಸುಗಂಧಕ್ಕೆ ಅಷ್ಟರಮಟ್ಟಿಗಿನ ತಾಕತ್ತಿದ್ದರೆ ಅದರಲ್ಲೇನು ಅಸಹಜವಿಲ್ಲ ಬಿಡಿ. ತೀರ ತನ್ನತನವನ್ನೇ ಮರೆತು ಸೆಂಟ್ ಹಾಕಿಕೊಂಡವನಿಗೆ ಸರ್ವಸ್ವವನ್ನೂ ಅರ್ಪಿಸುವ ಗತಿ ಯಾವ ಹುಡುಗಿಗೂ ಬಂದಿಲ್ಲ.
ಆಕರ್ಷಣೆ ಎನ್ನೋದು ಒಟ್ಟಾರೆ ವ್ಯಕ್ತಿತ್ವದ ಪ್ರಭಾವದಿಂದ ಹುಟ್ಟೋದು. ಒಬ್ಬ ವ್ಯಕ್ತಿಯ ಮಾತು, ನಡೆ, ಆತನ ಹವ್ಯಾಸ ಇವೆಲ್ಲ ಒಟ್ಟುಗೊಂಡರೆ ಆತನೆಡೆಗೆ ಒಂದು ಆಕರ್ಷಣೆ ಬೆಳೆಯುತ್ತದೆ ಎನ್ನುವ ಅಂಶ ಒಪ್ಪಬಹುದು. ಈ ಹಂತದಲ್ಲಿ ಆತನ ಉಡುಗೆ-ತೊಡುಗೆಗಳೂ ಒಂದಷ್ಟು ಪ್ರಭಾವ ಬೀರುತ್ತವೆ ಅನ್ನೋದನ್ನು ಒಪ್ಪೋಣ. ಆದರೆ ಬಾಹ್ಯ ಸೌಂದರ್ಯವೇ ವ್ಯಕ್ತಿತ್ವವಲ್ಲವಲ್ಲ? ಬಾಹ್ಯ ಸೌಂದರ್ಯವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಶರಣಾಗುತ್ತಾನೆ ಎನ್ನುವುದು ಆತನ ಬುದ್ಧಿಮಟ್ಟವನ್ನೇ ಗೇಲಿ ಮಾಡಿದಂತೆ.
ನೌಕರಿಗಾಗಿ ಹುಡುಕಾಡುತ್ತಿರುವ ಹುಡುಗಿ ಸುಂದರಿಯಾಗಿರಲೇಬೇಕು. ಹಾಗಂತ ಹೇಳುವಂತಿರುತ್ತವೆ ಬ್ಯೂಟಿ ಕ್ರೀಂ ಜಾಹಿರಾತುಗಳು. ಅಂದರೆ ಅವಳ ಬುದ್ಧಿವಂತಿಕೆ, ಪಡೆದ ಮಾರ್ಕ್ಸು, ವ್ಯವಹಾರ ಕುಶಲತೆ ಇತ್ಯಾದಿ ಗುಣಗಳೆಲ್ಲವೂ ಗೌಣ ಎಂದಂತಾಯಿತು. ವಾಸ್ತವದಲ್ಲಿ ಕಪ್ಪು ಸೌಂದರ್ಯವೇ ಅಲ್ಲ ಎಂದಂತಾಯಿತು. ಇನ್ನೂ ಕೆಟ್ಟದೆನಿಸುವುದೇನೆಂದರೆ, ಇಂಥ ಜಾಹಿರಾತುಗಳು ಬಿಂಬಿಸುವ ಪ್ರಕಾರ ಮೇಲಧಿಕಾರಿಗಳನ್ನು ಮೆಚ್ಚಿಸಲು ನಿಮ್ಮ ಸೌಂದರ್ಯವೊಂದೇ ಮಾರ್ಗ!
ನೋಡಲು ಕಪ್ಪಾಗಿರುವ ಆದರೆ ವಿಷಯಜ್ಞಾನ ಉತ್ತಮವಾಗಿರುವ ಹುಡುಗಿಯರದೇನು ಕತೆ? ಅವರೆಲ್ಲ ನಮ್ಮ ಕಂಪನಿಯ ಕ್ರೀಂ ಹಚ್ಚಿಕೊಳ್ಳಲಿ ಎಂಬುದು ವ್ಯಾಪಾರದ ಮಾತಾಯಿತು. ಆದರೆ ಹಾಗೆ ಹೇಳುವವರಿಗೂ ಗೊತ್ತಿರುವ ವಿಷಯವೆಂದರೆ ಕ್ರಿಂ ಹಚ್ಚಿಕೊಂಡ ಮಾತ್ರಕ್ಕೆ ಯಾರೂ ಸುರ ಸುಂದರಿಯರಾಗುವುದಿಲ್ಲ. ಬೆಳ್ಳಗಾದರೂ ತೀರಾ ಜಾಹಿರಾತು ತೋರಿಸಿದ ಮಟ್ಟಕ್ಕೆ ತ್ವಚೆ ಬದಲಾಗುವುದಿಲ್ಲ. ಅಂದ ಮೇಲೆ ಕೊನೆಗೂ ಕಪ್ಪಾಗಿಯೇ ಉಳಿಯುವವರ ಮನದಲ್ಲಿ ಈ ರೀತಿಯ ಸಂದೇಶಗಳು ಎಂಥ ಭಾವನೆ ಹುಟ್ಟು ಹಾಕಬಹುದು? ಕಪ್ಪೆಂಬ ಕೀಳರಿಮೆ ಅವರನ್ನು ಕಿತ್ತು ತಿನ್ನದಿರದೇ?
ಇದೂ ಒಂದು ಸಂಚು..
ಜಾಹಿರಾತಿನಲ್ಲಿ ಮಹಿಳೆಗೆ ಪ್ರಾಮುಖ್ಯತೆ ಬಂದು ಆಕೆ ಕೈತುಂಬ ಕಮಾಯಿಸುವಂತಾದರೆ ನಿಮಗೇನು ಹೊಟ್ಟೆ ಉರಿ? ಹೀಗೂ ಒಂದು ವಾದ ಹೂಡಿಬಿಡಬಹುದು. ಆದರೆ, ಸ್ವಾತಂತ್ರ್ಯದ ಹೆಸರಲ್ಲಿ ಮಹಿಳೆಯನ್ನು ಬೇಕಾಬಿಟ್ಟಿ ಚಿತ್ರಿಸುವುದರಲ್ಲೂ ಮತ್ತದೇ ಪುರುಷ ಪ್ರಧಾನ ವ್ಯವಸ್ಥೆಯ ಸಂಚಿದೆ. ಮಹಿಳೆಗೆ ವಿದ್ಯಾಭ್ಯಾಸ ನಿರಾಕರಿಸಿ ಅವಳನ್ನು ಒಳಮನೆಯಲ್ಲಿ ಕೂಡಿಹಾಕಿದ್ದರಲ್ಲಿ ಆಕೆಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳಬಹುದೆಂಬ ಧೂರ್ತತೆಯಿತ್ತು. ಇದೀಗ ಸ್ವಾತಂತ್ರ್ಯದ ಹೆಸರಲ್ಲಿ ನೀನು ಎಷ್ಟಾದರೂ ಬಟ್ಟೆ ಬಿಚ್ಚು , ಸೌಂದರ್ಯವೇ ಎಲ್ಲ ಅನ್ನುತ್ತಿರುವುದರಲ್ಲೂ ಸಹ ಆಕೆಯನ್ನು ಸ್ವೇಚ್ಛೆಗೆ ತಿರುಗಿಸಿ ತನ್ನಿಷ್ಟಕ್ಕೆ ಬಳಸಿಕೊಳ್ಳುವ ಧೋರಣೆಯಿದೆ.
ಸ್ಟಿರಿಯೋಟೈಪ್
ಯಾವುದೋ ಒಂದು ವ್ಯತಿರಿಕ್ತ ಸನ್ನಿವೇಶವನ್ನಿರಿಸಿ ಹೆಣ್ಣನ್ನು ಚಿತ್ರಿಸುವುದು ಮಾಧ್ಯಮಗಳಿಗೆ ಮೊದಲಿನಿಂದಲೂ ಬೆಳೆದು ಬಂದಿರುವ ವ್ಯಾ. ಹಳೆಯ ಚಲನಚಿತ್ರಗಳನ್ನು ಗಮನಿಸಿದರೆ ಅಲ್ಲಿ ಅಸಹಾಯಕಳಾಗಿ ಭೋರಿಡುವ ಹೆಣ್ಣಿನ ಪಾತ್ರ ದಂಡಿಯಾಗಿ ಬಂದು ಹೋಗಿದೆ. ಯಾವತ್ತೂ ಗಂಡನಿಗೆ ವಿಧೇಯಳಾಗಿರುವ ಮತ್ತು ಹಾಗೆಯೇ ಇರಬೇಕಾದ ಚಿತ್ರಣ. ಗಂಡ ಸತ್ತು ಹೋದರೆ ನಂತರ ಬದುಕೇ ಇಲ್ಲದಂತೆ ಬವಣೆ ಪಡುವ, ಗೋಳು ತಾಳಲಾರದೇ ಆತ್ಮಹತ್ಯೆಗೆ ಎಳಸಿಬಿಡುವ ಪಾತ್ರಗಳಲ್ಲಿ ಸಾಕಷ್ಟು ಸಾರಿ ಆಕೆಯನ್ನು ನೋಡಿಯಾಗಿದೆ. ತಮಾಷೆಯೆಂದರೆ, ಒಬ್ಬ ಬಾಸ್‌ನ ಪರ್ಸನಲ್ ಸೆಕ್ರೆಟರಿ ಎಂದರೆ ಅವಳು ಹೆಣ್ಣೇ ಆಗಿರಬೇಕು. ಅದರಲ್ಲೂ ಸುರಸುಂದರಿಯಾಗಿದ್ದಿರಬೇಕು ಎಂಬ ಮಟ್ಟಿಗೆ ಕಾದಂಬರಿ ಹಾಗೂ ಸಿನಿಮಾಗಳು ನಮಗೆ ಕಲ್ಪನೆಯನ್ನು ಕಟ್ಟಿಕೊಟ್ಟಿವೆ.
ಅಂಥದೇ ಒಮ್ಮುಖದ ಚಿತ್ರಣ ನೀಡುವತ್ತ ಈಗಿನ ಜಾಹಿರಾತುಗಳೂ ಹೆಜ್ಜೆ ಇಟ್ಟಿವೆ. ನಿರ್ದಿಷ್ಟ ಉತ್ಪನ್ನವೊಂದನ್ನು ಬಳಸುವ ಪುರುಷನ ಬಗಲಿಗೆ ಹಿಂದೆ ಮುಂದೆ ಯೋಚಿಸದೆ ಜೋತು ಬೀಳುವವರಂತೆ ಹುಡುಗಿಯರನ್ನು ಚಿತ್ರಿಸಲಾಗುತ್ತಿದೆ.
-ಚೈತನ್ಯ ಹೆಗಡೆ
ನನ್ನೂರಿನಲ್ಲಿ ದಸರೆಯ ಸಂಭ್ರಮ
ಈಗಂತೂ ಇಲ್ಲಿನ ಬೀದಿಗಳಲ್ಲಿ ನಡೆಯುವುದೆಂದರೆ ಬಲು ಮಜವಾದ ಸಂಗತಿ. ಮೈ ತುಂಬ ಬೆಳಕಿನ ಬಲ್ಬುಗಳನ್ನು ಹೊದ್ದು ನಿಂತ ಅರಮನೆ, ಹಬ್ಬಕ್ಕೆಂದು ಹೊಸಲಂಗ ತೊಟ್ಟ ಹುಡುಗಿಯಂತೆ ಬಣ್ಣ ಬಳಿಸಿಕೊಂಡು ಸಿಂಗರಿಸಿ ನಿಂತ ಸರ್ಕಾರಿ ಕಟ್ಟಡಗಳು, ರಾತ್ರಿ ಹೊತ್ತಲ್ಲಿ ಹಸಿರು ಬೆಳಕಿನ ಹೊಂಬೆಳಕಲ್ಲಿ ಅದ್ದು ನಿಂತಂತೆ ಕಾಣುವ ಕಾರ್ಪೋರೇಷನ್, ಚೆಲುಂವಂಬಾ , ಆಯುರ್ವೇದಾ ಆಸ್ಪತ್ರೆ, ಟೌನ್ ಹಾಲ್, ಕ್ರಾಫರ್ಡ್ ಹಾಲ್ ಮುಂತಾದ ಬಿಲ್ಡಿಂಗು, ಮಿರಮಿರನೆ ಹೊಳೆಯುವ ಕೆ ಆರ್ ವೃತ್ತ, ಕೆ ಆರ್ ಆಸ್ಪತ್ರೆ ವೃತ್ತಗಳು, ಕತ್ತಲಲ್ಲಿ ಥೇಟ್ ರಥ ಬೀದಿಯಂತೆ ಕಾಣಿಸೋ ಅರಸು ರಸ್ತೆ, ಗಿಜಿಗುಡುವ ಸಯ್ಯಾಜಿರಾವ್- ಮಾರ್ಕೆಟ್ ರಸ್ತೆ, ಹೀಗೆ ಸುಮ್ಮನೆ ಇಲ್ಲೆಲ್ಲ ಅಡ್ಡಾಡುವುದೆಂದರೆ ಖುಷಿಯೋ ಖುಷಿ.
ಬೆಳಗಾಗುವುದೇ ತಡ ಅಲ್ಲಿ ಅರಮನೆಯ ಮುಂಬಾಗ ಆನೆಗಳ ಕಸರತ್ತು ಆರಂಭವಾಗುತ್ತದೆ. ಬಲರಾಮನಂತೂ ತಣ್ಣನೆಯ ನೀರ ಹೊಂಡದಲ್ಲಿ ಮೈ ಅದ್ದಿ ಮತ್ತೆಮ್ಮೊ ನಿದ್ದೆಗೆ ಜಾರುವವನಂತೆ ಮಲಗಿ ಬಿಡುತ್ತಾನೆ. ಮಾವುತರು ಅವನ ಮೈಯೇರಿ ತಿಕ್ಕಿ ತೊಳೆಯುವಾಗ ದೂರಕ್ಕೆ ಇರುವೆಗಳಂತೆಯೇ ಕಾಣುತ್ತಿರುತ್ತಾರೆ. ಪಕ್ಕಕ್ಕೆ ಹೋದರೆ ಅಲ್ಲಿನ ತುಂಟ ಗಜೇಂದ್ರ, ಅಭಿಮನ್ಯು ಕಸರತ್ತು ಮಾಡುತ್ತಿರುವವರಂತೆ ಫೋಸು ಕೊಡುತ್ತಿರುತ್ತಾರೆ. ವಯಸ್ಸಿನಲ್ಲಿ ತನಗಿಂತಲೂ ದೊಡ್ಡವರಾದ ಹೆಣ್ಣಾನೆಗಳಿಗೆ ಲೈನು ಹೊಡೆಯುತ್ತಾ ನಿಂತಿರುತ್ತಾರೆ. ಮಾವುತರ ಮಕ್ಕಳೂ ನಿಧಾನಕ್ಕೆ ಎದ್ದು ಆನೆಗಳೊಂದಿಗೆ ಆಟ ಆಡುತ್ತಾ ನಿಂತಿರುತ್ತಾರೆ.
ದಸರಾ ಆರಂಭಗೊಂಡಿದ್ದರೂ ಇಲ್ಲಿನ ರಸ್ತೆಗಳ ರಿಪೇರಿ ನಿಂತಿಲ್ಲ. ಕಪ್ಪನೆಯ ಟಾರು ಜಲ್ಲಿ ಚೆಲ್ಲಿ ಡಾಂಬರು ಹಾಕುವ ಕಾರ್ಯ ಸಾಗುತ್ತಲೇ ಇದೆ. ತರಾತುರಿಯಲ್ಲಿ ಮಾಡುತ್ತಿರುವ ಕೆಲಸವಾದ್ದರಿಂದ ಯಾವುದೂ ಪೂರ್ಣ ಎನ್ನುವ ಹಾಗಿಲ್ಲ. ಡಾಂಬರು ಮೆತ್ತಿಕೊಂಡ ರಸ್ತೆಗಳು ಅಂಗಿಯ ಮೇಲಿನ ತೇಪೆಗಳಂತೆ ಅಸಹ್ಯವಾಗಿ ಕಾಣುತ್ತಿದ್ದರೂ ಮೈಸೂರಿನ ಅಂದಕ್ಕೆ ಕುತ್ತೇನೂ ಇಲ್ಲ. ಅಂತೆ ಫುಟ್ ಪಾತಿನಲ್ಲಿದ್ದ ಕಲ್ಲು ಕಿತ್ತು ಟೈಲ್ಸ್ ಹಾಕುವ ಹೆಂಗಸರು ಮುಖ ಮೈಗೆಲ್ಲ ಬಿಳಿ ಪುಡಿ ಚೆಲ್ಲಿಕೊಂಡು ಅಂದ ಕಾಣದಂತೆ ಮರೆಮಾಚಿಕೊಂಡಿದ್ದಾರೆ. ಬೀದಿಬದಿಯಲ್ಲಿ ಓಡಾಡುವ ಪಾದಚಾರಿಗಳೂ ಅದರ ಘಾಟು ಗ್ರಹಿಸುತ್ತಿದ್ದಾರೆ.
ವ್ಯಾಪಾರಿಗಳಿಗಂತೂ ಇದು ಸುಗ್ಗಿಯ ಕಾಲ. ನಾನಾ ಆಫರ್ ನೀಡಿ ಅದಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ , ಭಾರೀ (!) ಡಿಸ್ ಕೌಂಟ್ ಸೇಲ್ ಅಂತ ಬೋರ್ಡು ಬರೆಸಿ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ದೇವರಾಜ ಮಾರ್ಕೆಟ್ಟಿನಲ್ಲಂತೂ ಎಂದಿನ ಗಿಜಿಗಿಜಿ ಸದ್ದು. ಈಗಲೇ ಹೀಗಾದರೆ ಇನ್ನು ಆಯುಧಪೂಜೆಯ ಹಿಂದಿನ ದಿನ ಇಲ್ಲಿ ಕಾಲಿಡಲು ಜಾಗವಿರುವುದಿಲ್ಲ. ಈಗಾಗಲೇ ಬಹುತೇಕ ಹೋಟೆಲ್ಲುಗಳು ಬುಕ್ ಆಗಿಹೋಗಿವೆ. ಟಾಂಗಾವಾಲಗಳಿಗಂತೂ ಇಂಥ ಸಮಯ ಬಿಟ್ಟರೆ ಸಿಗದು.
ಮಧ್ಯಾಹ್ನ ಬಿಸಿಲು ಕಡಿಮೆಯಾಗುತ್ತಿದ್ದಂತೆ ರಸ್ತೆಯ ಸಾಲುದೀಪಗಳು ಹೊತ್ತಿಕೊಳ್ಳುತ್ತವೆ. ಎಲ್ಲ ಸರಿಯಿದೆಯಾ ಅಂತ ಇನ್ನೊಮ್ಮೆ ಪರೀಕ್ಷಿಸುವ ಕಾರ್ಯ ನಡೆಯುತ್ತದೆ. ಈ ಸಲವಂತೂ ಈ ದೀಪಸಿಂಗಾರಕ್ಕೆ ಕೋಟಿಗಟ್ಟಲೆ ಖರ್ಚು ಮಾಡಲಾಗಿದೆ. ಅರಮನೆ ಅಂಗಳದಿಂದ ಹಿಡಿದು ಬನ್ನಿಮಂಟಪದ ವರೆಗೆ ಸಾಲಾಗಿ ದೀಪ ಜೋಡಿಸಲಾಗಿದೆ. ಸಂಜೆಯಾಗುತ್ತಲೇ ಅವು ತಮ್ಮೆಲ್ಲ ಶಕ್ತಿ ಮೀರುತ್ತಾ ಬೆಳಕು ಚೆಲ್ಲುತ್ತಾ ನಿಲ್ಲುತ್ತಿವೆ. ಸಿಟಿ ಬಸ್ ಸ್ಟಾಂಡಿನ ಪಕ್ಕದ ವನದಲ್ಲಿ, ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆಗಳ ಏರಿಗಳಲ್ಲಿ ರಾಶಿ ಹೂವುಗಳು ಅರಳಿ ನಿಂತಿವೆ. ಅತ್ತ ಚಾಮುಂಡಿ ಬೆಟ್ಟದಲ್ಲೂ ಇದೇ ಖುಷಿ.
ಇಷ್ಟು ವರ್ಷ ಬರೀ ಕನ್ನಡದ ಭಾವುಟ, ಗಂಡಭೇರುಂಡದ ಭಾವುಟಗಳಷ್ಟನ್ನೇ ನೋಡುತ್ತಿದ್ದೆ. ಈ ಸಲ ಬಣ್ಣಬಣ್ಣದ ತರಾವರಿ ಭಾವುಟಗಳು ಎಲ್ಲೆಂದರಲ್ಲಿ ಸರ್ಕಲ್ಲುಗಳಲ್ಲಿ ನೆಟ್ಟಗೆ ನಿಂತಿವೆ. ಇದೇನು ಸ್ವಾಗತದ ಹೊಸ ವಿಧಾನವೋ ಇಲ್ಲ ಖಾಸಗೀಕರಣದ ಸಂಕೇತವೋ… ಇರಲಿ.
ವಸ್ತು ಪ್ರದರ್ಶನ ಕೂಡ ಸಿದ್ಧಗೊಂಡಿದೆ. ಅದರ ಆವರಣದಲ್ಲೇ ನಾನಾ ಸಾಹಸ ಕ್ರೀಡೆಗಳ ಏರ್ಪಾಟು ಆಗಿದೆ. ಕತ್ತಲಾಗುತ್ತಲೇ ಇಲ್ಲಿನ ಟೌನ್ ಹಾಲ್ , ಜನನ್ಮೋಹನ ಅರಮನೆ, ಅರಮನೆಯ ಮುಂಭಾಗ ಮುಂತಾದ ಕಡೆ ನಾನಾ ಕಾರ್ಯಕ್ರಮಗಳು ನಡೆಯುತ್ತವೆ. ಅತ್ತ ನಮ್ಮ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಅರ್ಥಾತ್ ನಮ್ಮಂಥ ಪಡ್ಡೆ ಐಕಳ ಸಂಭ್ರಮ. ಮೊದಲೆಲ್ಲ ಗಂಗೋತ್ರಿಯ ಓಪನ್ ಏರ್ ಥಿಯೇಟರಿನಲ್ಲಿ ನಡೆಯುತ್ತಿದ್ದ ಕಳೆದೆರಡು ವರ್ಷದಿಂದ ಇಲ್ಲಿ ನಡೆಯುತ್ತಿದೆ. ಈ ಸಲ ಕೈಲಾಸ್ ಖೇರ್ , ಶಂಕರ್ ಮಹದೇವನ್ ರ ಗಾನಸುಧೆಯಿಂದ ಹಿಡಿದು ಶಿವಮಣಿ -ಪ್ರವೀಣ್ ಗೋಡ್ಕಿಂಡಿ ಜುಗಲ್ ಬಂದಿಯೂ ಇದೆಯಂತೆ. ಒಂದು ದಿನವಾದರೂ ಹೋಗಬೇಕು. ಯಾರು ಬರಲಿ ಬಿಡಲಿ ನಮ್ಮ ಮಹಾರಾಜ ಕಾಲೇಜು- ಹಾಸ್ಟೆಲ್ಲಿನ ಹುಡುಗರು ತಪ್ಪದೇ ಬರುತ್ತಾರೆ. ಏಕೆಂದರೆ… ಅಲ್ಲಿಗೆ ಮಸ್ತ್ ಹುಡ್ಗೀರು ಬರ್ತಾರೆ.
ಇನ್ನು ನಮ್ಮ ರಂಗಾಯಣ- ಕಲಾಮಂದಿರಗಳು ಹೇಗೆ ಸಿಂಗರಿಸಿಕೊಂಡಿವೆಯೋ ಎನೋ? ತಿಂಗಳಾಯಿತು ಅತ್ತ ಹೋಗಿ. ಅಲ್ಲಿ ಒಂದಿಷ್ಟು ಹೊತ್ತು ಕೂತು ಟೀ ಹೀರುವುದೇ ಒಂದು ಖುಷಿ. ಈ ಬಾರಿ ಒಂದೆರಡು ನಾಟಕವಾದರೂ ನೋಡಬೇಕು.
ಇತಿಹಾಸದ ಪುಸ್ತಕಗಳಲ್ಲಿ ಹಬ್ಬಹರಿದಿನಗಳ ಆಚರಣೆ ಬಗ್ಗೆ ಓದಿದ್ದು ಉಂಟು. ವಿಜಯನಗರದಲ್ಲೂ ದಸರಾ ಆಚರಿಸುತ್ತಿದ್ದರಂತೆ. ಅದೂ ಹೀಗೆ ಇರಬಹುದಾ? ಗೊತ್ತಿಲ್ಲ. ಸ್ವರೂಪಗಳು ಏನೇ ಬದಲಾಗಿದ್ದರೂ ಆಚರಣೆ ಮತ್ತದರ ಸಂಭ್ರಮ ಮಾತ್ರ ಬದಲಾಗಿಲ್ಲ ಅನಿಸುತ್ತಿದೆ.
ಕಳೆದ ಬಾರಿ ಅಂಬಾರಿ ನೋಡಲು ಕೆ ಆರ್ ವೃತ್ತದಲ್ಲಿ ನಿಂತಿದ್ದೆ. ಅಂಬಾರಿ ಆನೆ ಹೊರಬರುವ ಹೊತ್ತಿಗೆ ಮೈಯೆಲ್ಲ ಬೆವರಿನಲ್ಲಿ ಅದ್ದಿಹೋಗಿತ್ತು. ಅಷ್ಟು ನೂಕುನುಗ್ಗಲು. ಈ ಬಾರಿ ನನ್ನ ದುರಾದೃಷ್ಟಕ್ಕೆಂಬಂತೆ ಬಲಗಾಲು ಸ್ವಲ್ಪ ಮುರಿದು ಊದಿಕೊಂಡಿದೆ. ಸದ್ಯ ಕುಂಟುತ್ತಲೇ ನಡೆಯುತ್ತಿದ್ದೇನೆ. ಡಾಕ್ಟರ್ ಮಾತ್ರ ಏನೂ ಆಗೋದಿಲ್ಲ ಬಿಡಯ್ಯ ಅಂತ ಧೈರ್ಯ ತುಂಬಿದ್ದಾರೆ. ಏನಾಗುವುದೋ ಕಾದು ನೋಡಬೇಕು.
(ಪೋಸ್ಟರ್ ಚಿತ್ರ- ಪ್ರವೀಣ್ ಬಣಗಿ)
ಇವರು ಹೀಗೆಂದರು..