Archive for ಅಕ್ಟೋಬರ್ 22, 2008
ನಾನು ಮಾದೇವಣ್ಣ ಮೀನಿಗೆ ಗಾಳಹಾಕಿ ಕುಂತದ್ದು
ಹೀಗೊಂದು ದಿನ ಶಿವನಸಮುದ್ರಕ್ಕೆ ಹೋಗಿದ್ದೆ. ಮಳೆಗಾಲದ ಸಮಯ. ಎಂದಿಗಿಂತ ಜೋರಾಗಿ ಹರಿಯೋ ಕಾವೇರಿ. ನದಿಯ ಮೊರೆತದ ಸದ್ದು ದೂರಕ್ಕೂ ಕೇಳಿಸುತ್ತಾ ಇತ್ತು. ಸಖತ್ ನೀರು. ಭರಚುಕ್ಕಿಯನ್ನು ಕಂಡವನೇ ಅದರ ತಳಕ್ಕೆ ಹೊರಟೆ. ಉದ್ದಕ್ಕೂ ಕಲ್ಲುಚಪ್ಪಡಿಯ ಕೊರಕಲು ಹಾದಿ. ಆದರೆ ನನ್ನಂಥವರು ಎಲ್ಲಾದರೂ ನೇರವಾಗಿ ಹೋಗೋದುಂಟಾ! ಅಡ್ಡದಾರಿ ಹಿಡಿದೆ. ಎಡಕ್ಕೆ ತಿರುಗಿದ್ದೇ ಕೆಳಕ್ಕಿಳಿಯತೊಡಗಿದೆ. ಮಳೆಯಿಂದ ತೋಯ್ದ ನೆಲ. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ಸುಯ್… ಅಂತ ಜಾರಿಸಿಕೊಂಡು ನೇರ ಜಲಪಾತಕ್ಕೇ ಹೊತ್ತೊಯ್ಯೊ ಅಷ್ಟು ಜಾರುತ್ತಿತ್ತು. ದುರಾದೃಷ್ಟಕ್ಕೆ ಒಬ್ಬನೇ ಬೇರೆ? ಹಿಂಗೆ ಬಿದ್ದರೂ, ಕೊಚ್ಚಿಕೊಂಡು ನೀರೊಳಗೆ ಹೋದರೂ ಎತ್ತುವವರಿಲ್ಲ. ಈ ಹುಡುಗ ಬಂದಿದ್ದ ಅನ್ನುವುದಕ್ಕೆ ಗುರುತೇ ಸಿಗದ ಹಾಗಾದರೆ ಕಷ್ಟ ಅನ್ನುತ್ತ ಎಚ್ಚರದಿಂದ ಹೆಜ್ಜೆ ಇಡುತ್ತಿದ್ದೆ. ಹೀಗೆ ಮುಂದೆ ಹೋಗಿ ನೋಡಿದರೆ ಅಲ್ಲೂ ಒಂದು ಮಿನಿ ಜಲಧಾರೆ. ಆಶ್ಚರ್ಯ ಅನ್ನುವಂತೆ ಅಲ್ಲಿ ಒಬ್ಬ ಮೀನುಗಳಿಗೆ ಗಾಳ ಹಾಕಿ ಕುಂತಿದ್ದಾನೆ. ಅರರೆ.. ಅಂತ ಹತ್ತಿರ ಓದವನೇ ಒಂದಿಷ್ಟು ಹೊತ್ತು ಅವನ ಪಕ್ಕದಲ್ಲೇ ನಿಂತೆ. ಹೆಂಗೆ ಗಾಳ ಹಾಕ್ತಾನೆ ಅಂತ ನೋಡಲಿಕ್ಕೆ! ಆಮೇಲೆ ಅವನನ್ನ ಮಾತನಾಡಿಸಿದೆ. ಸರ್ ಸ್ವಲ್ಪ ಬಿಜಿ ಇದ್ರು. ಮಾತಾಡೋದು ಲೇಟ್ ಆಯ್ತು. ಆಮೇಲೆ ಹಂಗೂ ಹಿಂಗೂ ಪರಿಚಯ ಮಾಡಿಕೊಂಡು ಗಾಳ ಹಾಕುವ ಪಾಠ ಹೇಳಿಸಿಕೊಳ್ಳಲು ಮುಂದಾದೆ.
ಈ ಮೀನು ಹಿಡಿಯುವ ಸಾಹಸ ನಂಗೆ ಹೊಸದೇನಲ್ಲ. ಚಿಕ್ಕವನಿದ್ದಾಗ ಮನೆಯ ಮುಂದೆಯ ಬಚ್ಚಲು ಬಗೆದು, ಎರೆಹುಳು ತೆಗೆದು , ಗಾಳ ಹಿಡಿದು ಹೊಳೆಗೆ ಹೋಗುತ್ತಿದ್ದೆ. ಅಲ್ಲಿ ಗಾಳಕ್ಕೆ ಎರೆಹುಳು ಸಿಕ್ಕಿಸಿ ಹೊಳೆಗೆ ತೇಲಿಬಿಟ್ಟು ಗಂಟೆಗಟ್ಟಲೆ ಫಿಳಿ ಫಿಳಿ ಕಣ್ಣು ಬಿಟ್ಟು ಕುಂತರೂ, ಮುಂಡೇವೂ ಒಂದ್ ಮೀನು ಬೀಳ್ತಿರ್ಲಿಲ್ಲ. ಕಿಲಾಡಿ ಮೀನುಗಳು ಮೀನು ಹಿಡಿಯಲು ಬರದ ನನ್ನ ದಡ್ಡತನವನ್ನೇ ಬಂಡವಾಳ ಮಾಡಿಕೊಂಡು, ಇದ್ದ ಬದ್ದ ಹುಳವನ್ನೆಲ್ಲ ಗಾಳಕ್ಕೆ ಸಿಕ್ಕದ ಹಾಗೆ ಮೇದು ಹೋಗುತ್ತಿದ್ದವು. ಕವರಿನಲ್ಲಿದ್ದ ಹುಳುವೆಲ್ಲ ಖಾಲಿಯಾದ ಮೇಲೆ ನಾನು ಪೆಚ್ಚುಮುಖ ಹಾಕಿಕೊಂಡು ಮನೆಗೆ ಹೋಗೋದು ಖಾಯಂ ದಿನಚರಿ.
ಇಂತಿಪ್ಪ ನನಗೆ ಮೀನು ಹಿಡಿಯುವುದೆಂದರೆ ಇರುವ ಎರಡು ಕಣ್ಣುಗಳು ನಾಲ್ಕಾಗಿ ಅರಳಿ ಬಿಡುತ್ತವೆ. ಇಷ್ಟೆಲ್ಲ ನೆನಪಿಸಿಕೊಳ್ಳೋ ವಾಗಲೇ ಆತನ ಗಾಳಕ್ಕೆ ಮೀನೊಂದು ಬಿತ್ತು. ಅಷ್ಟೇನೂ ದಪ್ಪವಲ್ಲದ ಮೀನು. ಯಾವ ಜಾತಿಯದ್ದೋ. ಅವನು ಅದನ್ನ ಬುಟ್ಟಿಗಿರಿಸುವ ಮುನ್ನ ನಾನು ಒಂದ್ನಿಮಿಷ ಅಂತಂದು ಕ್ಯಾಮರಾವನ್ನ ತಿರುಗಿಸಿ ತಿರುಗಿಸಿ ಎರಡೆರಡು ಸಲ ಕ್ಲಿಕ್ಕಿಸಿದೆ. ಒಂದು ಚೆನ್ನಾಗಿ ಬರದಿದ್ರೆ ಇನ್ನೊಂದಾದ್ರೂ ಬರಲಿ ಅಂತ.
ಆಮೇಲೆ ಮೀನು ಬುಟ್ಟಿ ಸೇರಿತು. ಗಾಳ ನೀರಿಗಿಳಿಯಿತು. ನಮ್ಮ ಮಾತು ಶುರುವಾಯಿತು. ಈತನ ಹೆಸರು ಮಾದೇವ ಅಂತ. ಈ ಮಾದೇವಣ್ಣ ಅಲ್ಲೇ ಹತ್ತಿರದಲ್ಲಿರೋ ಸತ್ತೆಗಾಲ ಎಂಬ ಊರಿನವರು. ಆಗಾಗ್ಗೆ ಇಲ್ಲಿಗೆ ಮೀನು ಹಿಡಿಲಿಕ್ಕೆ ಬರ್ತಾರಂತೆ. ಅದು ಸರಿ ಆದ್ರೆ ಜಲಪಾತದಡಿಗೇ ಬಂದಿದ್ದೀರಲ್ಲಾ ಅಂದ್ರೆ ಮೀನುಗಳು ಎಲ್ಲೆಲ್ಲಿಂದಲೋ ಈಜುತ್ತಾ ಬಂದು ಇಲ್ಲಿ ಮೇಲಿಂದ ಬೀಳ್ತಾವಲ್ಲ ಅದಕ್ಕೆ ಅಂದ್ರು. ಯಾವ ಜಾತಿಯ ಮೀನು ಹಿಡಿತೀರಿ ಅಂದ್ರೆ ಗಾಳಕ್ಕೆ ಸಿಗುವ ಎಲ್ಲ ಜಾತಿಯದೂ ಅಂತ ‘ಜಾತಿ ವಿಜಾತಿಯೆನಬೇಡ….’ ಅನ್ನುವವರ ಹಾಗೇ ಸಣ್ಣದಾಗಿ ನಕ್ಕರು.
ಅಷ್ಟರಲ್ಲೇ ನನ್ನ ಕಣ್ಣು ಪಕ್ಕದಲ್ಲೇ ಹರಿಯುತ್ತಿದ್ದ ರೈಲು ಹುಳುವಿನ ಮೇಲೆ ಬಿತ್ತು. ಹೇಗಾದರೂ ಮಾಡಿ ಇದರದ್ದೊಂದು ಚಂದದ ಚಿತ್ರ ತೆಗೀಬೇಕಲ್ಲ ಅನ್ನೋ ತವಕ. ಅದೋ ನನ್ನನ್ನು ಕಂಡದ್ದೇ ಬೆಚ್ಚಿ ಬೀಳುತ್ತಾ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸುರುಳಿಯಾಗಿ ಸುತ್ತಿಕೊಂಡು, ಮತ್ತೆ ತೆರೆದುಕೊಳ್ಳುತ್ತ ಹರಿಯುತ್ತಿತ್ತು. ಚಿಮ್ಮುವ ಹನಿಗಳಿಂದ ಕ್ಯಾಮರಾ ಲೆನ್ಸ್ ರಕ್ಷಿಸಿಕೊಂಡು ಹೇಗೋ ಬಂದರಲ್ಲಿ ಒಂದೆರಡು ಫೋಟೊ ಕ್ಲಿಕ್ಕಿಸಿದೆ. ಅದರ ಪಾಡಿಗೆ ಅದನ್ನು ಬಿಟ್ಟೆ.
ಇಷ್ಟೊತ್ತಾದರೂ ಇನ್ನೊಂದು ಮೀನು ಗಾಳಕ್ಕೆ ಬೀಳಲಿಲ್ಲ. ಮತ್ತೆ ಮಾತು ಮುಂದುವರಿಯಿತು. ಹೀಗೆ ಒಂದೊಂದು ಬಾರಿ ಮೀನು ಹಿಡಿದಾಗಲೂ ಅವರಿಗೆ ಇನ್ನೂರರಿಂದ ಮುನ್ನೂರು ರುಪಾಯಿ ವ್ಯಾಪಾರ ಆಗುತ್ತಂತೆ. ಸತ್ತೆಗಾಲದಲ್ಲೇ ಮೀನು ಮಾರುತ್ತೀನಿ ಅಂತಂದ್ರು. ಅಷ್ಟರಲ್ಲೇ ಎಲ್ಲಿತ್ತೋ ನತದೃಷ್ಟ ಮೀನು. ಗಾಳಕ್ಕೆ ಬಂದು ಬಿತ್ತು. ಈ ಸಲದ ಮೀನು ಮೊದಲಿನದ್ದಕ್ಕಿಂತ ಸ್ವಲ್ಪ ದಪ್ಪದಿತ್ತು. ಆದ್ರೆ ಅಷ್ಟೇನೂ ದೊಡ್ಡ ಗಾತ್ರದ್ದಾಗಿರಲಿಲ್ಲ. ನನಗೆ ಕೊಂಚ ನಿರಾಸೆಯೇ ಆಯ್ತು. ಇರಲಿ ದೊಡ್ಡ ಮೀನುಗಳನ್ನು ನಾನೇ ಹಿಡಿಯುತ್ತೇನೆ ಅಂದುಕೊಂಡೆ. ಅದನ್ನೂ ಬಿಡದೇ ಕ್ಲಿಕ್ಕಿಸಿದೆ. ಎಂದಿನಂತೆ ಮೀನು ಬುಟ್ಟಿಗೆ ಗಾಳ ನೀರಿಗೆ.
ಅಷ್ಟರಲ್ಲೇ, ನಾನಿಲ್ಲಿಗೆ ಬಂದದ್ದರ ಉದ್ದೇಶ ನೆನಪಾಯಿತು. ಎದ್ದವನೇ ಅಲ್ಲಿಂದ ಹೊರಡಲು ಅನುವಾದೆ. ಹೋಗುವ ಮುನ್ನ ಮಾದೇವಣ್ಣನದ್ದೂ ಒಂದು ಫೋಟೊ ಕ್ಲಿಕ್ಕಿಸಿದೆ. ಸ್ಮೈಲ್ ಪ್ಲೀಸ್ ಅಂದದ್ದೆ, ಅವರೂ ಥೇಟ್ ಹಿರೋ ಥರಾನೇ ಫೋಸ್ ಕೊಟ್ಟರು. ಅವರಿಗೊಂದು ಬೈ ಹೇಳಿ ಅಲ್ಲಿಂದ ಮೇಲಕ್ಕೆ ಹೊರಟೆ.
ಇವರು ಹೀಗೆಂದರು..