Archive for ಫೆಬ್ರವರಿ, 2009

ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆಯ ನೆನಪು

ನಾನಾಗ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಅದೇ ವೇಳೆ ಜೊತೆಗೊಬ್ಬ ಗೆಳೆಯನಿದ್ದ. ನನಗಿಂತ ಮೂರು ವರ್ಷ ದೊಡ್ಡವ. ನನ್ನೂರಿನ ಕಾಲೇಜಿನಲ್ಲೇ ಎರಡನೇ ಪಿಯುಸಿ ಓದುತ್ತಿದ್ದ. ನಮ್ಮಲ್ಲಿ ಹೈಸ್ಕೂಲು, ಕಾಲೇಜು ಎಲ್ಲ ಒಟ್ಟಿಗೆ ಇದ್ದಿದ್ದರಿಂದ ದಿನ ಒಟ್ಟಿಗೆ ಬೆರೆಯುವಂತ ಅವಕಾಶ. ಸ್ಕೂಲಿನಲ್ಲಿ ಅಷ್ಟೇನು ಭೇಟಿಯಾಗದಿದ್ದರೂ, ನಾಲ್ಕರ ನಂತರ ತಪ್ಪದೇ ಸೇರುತ್ತಿದ್ದೆವು.  ಮಾಸ್ಟರ್, ಮೇಡಮ್ಮುಗಳೆಲ್ಲ ಈಚೆ ಹೊರಟು, ಗೇಟಿಗೆ ಬೀಗ ಬಿದ್ದದ್ದೇ ತಡ ಅದರ ಮೇಲೆ ನೆಗೆಯುತ್ತಾ ಮೈದಾನ ಹೊಕ್ಕವೆಂದರೇ ಅಲ್ಲಿಂದ ಹೊರಗೆ ಬರುತ್ತಿದ್ದುದು ಕತ್ತಲಾದ ಮೇಲೆ.

ಪ್ರತಿ ಸಂಜೆ ಅಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. ನಮ್ಮ ಪಾಲಿಗೆ ಭಾರೀ ಬೆಟ್ಟಿಂಗಿನ ತಾಣ. ಗೆಳೆಯ ಊರಿನಲ್ಲೇ ಒಳ್ಳೆಯ ಕ್ರಿಕೆಟ್ ಆಟಗಾರನಾಗಿದ್ದ. ಇದ್ದಬದ್ದವರನ್ನೆಲ್ಲ ಒಟ್ಟುಗೂಡಿಸಿ ಸಾಮರ್ಥ್ಯಕ್ಕೆ ಅನುಸಾರಗಾಗಿ ತಂಡ ಹಂಚಲಾಗುತ್ತಿತ್ತು. ಕೆಲವೊಮ್ಮೆ ದೊಡ್ಡವರೆಲ್ಲ ಸೇರಿಕೊಂಡಾಗ ನನ್ನಂತ ಹುಡುಗರಿಗೆ ಕೋಕ್.

ಆರು ಓವರುಗಳಿಂದ ಹೆಚ್ಚೆಂದರೆ ಹತ್ತು-ಹನ್ನೆರಡು ಓವರುಗಳ ಪಂದ್ಯ. (ಈಗಿನ ಟ್ವೆಂಟಿ೨೦ ಹಾಗೇ) ದಿನಕ್ಕೆ ಮೂರು-ನಾಲ್ಕು ಪಂದ್ಯಗಳು ನಡೆಯುತ್ತಿತ್ತು. ಪ್ರತಿ ಮ್ಯಾಚಿಗೂ ಐವತ್ತು-ನೂರು ರೂಪಾಯಿಗಳಷ್ಟು ಬೆಟ್ಟಿಂಗ್. ಗೆಳೆಯ ಒಳ್ಳೆಯ ಆಟಗಾರ. ಅವನ ಸಾಮರ್ಥ್ಯ ನಂಬಿಕೊಂಡೇ ನಮ್ಮೆಲ್ಲರ ಹಣ ಹೂಡಿಕೆಯಾಗುತ್ತಿತ್ತು. ಲಾಭ ಅಲ್ಲದಿದ್ದರೂ ನಷ್ಟವಾಗಿದ್ದು ಮಾತ್ರ ಗೊತ್ತಿಲ್ಲ. ಅವತ್ತಿನ ಖರ್ಚುಗಳಿಗಂತೂ ಮೋಸವಾಗುತ್ತಿರಲಿಲ್ಲ.

ಆಟ ಮುಗಿದ ಕೂಡಲೇ ಊರ ಒಳಗೊಂದು ಸುತ್ತು. ರಾಮಮಂದಿರದ ಒಳಗೊಮ್ಮೆ ಹೋಗಿ ರಾಮ ಇದ್ದಾನೆಯೇ ಅಂತ ನೋಡಿಕೊಂಡು ಬರುವುದು ಕಡ್ಡಾಯ. ಅದಾದ ಬಳಿಕ ಊರಿನ ಏಕೈಕ ಪಾನಿಪೂರಿ ಅಂಗಡಿಯ ಮೇಲೆ ನಮ್ಮ ಠಿಕಾಣಿ. ಖಾಯಂ ಗಿರಾಕಿಗಳಾದ್ದರಿಂದ ಸ್ವಲ್ಪ ಹೆಚ್ಚಿಗೆ ಈರುಳ್ಳಿ ಹಾಕಿ, ಮೀಡಿಯಂ ಖಾರ ಸೇರಿಸಿ ಕೊಡಬೇಕು ಅನ್ನುವುದು ಅಲಿಖಿತ ನಿಯಮ.

ಹಾಗೇ ಬಸ್ ಸ್ಟ್ಯಾಂಡಿನ ಅರಳೀಕಟ್ಟೆ ಹತ್ತಿರಕೊಮ್ಮೆ ಬಂದು, ಆಸ್ಪತ್ರೆಗೂ ಒಂದು ಭೇಟಿ ಕೊಡುವ ಹೊತ್ತಿಗೆ ಸಂಜೆ ಏಳರ ಸಮಯ. ಹಾಗೇ ಅಂಗಡಿಯತ್ತ ಹೋದವರೇ ಎರಡು ಲೀಟರ್ ಕಡಲೇಪುರಿಯೊಂದಿಗೆ ಒಂದಿಷ್ಟು ಖಾರ ಬೂಂದಿ ಬೆರೆಸಿಕೊಂಡು, ಜೊತೆಗೆ ಮೆಣಸಿನಕಾಯಿ ಬಜ್ಜಿ ಹಿಡಿದು ಮತ್ತೆ ಕಾಲೇಜಿನ ಗೇಟು ಹಾರಿದವೆಂದರೆ ಇನ್ನು ಈಚೆ ಬರುವುದು ರಾತ್ರಿ ಒಂಭತ್ತಕ್ಕೆ. ಈ ಮಧ್ಯೆ ನಮ್ಮ ಮಾತಿಗೆ ಬಾರದ ವಿಷಯವಿಲ್ಲ.

ಆಗ ನಮ್ಮೂರಲ್ಲಿ ವರ್ಷಕ್ಕೊಮ್ಮೆ ಗೋಲಿ ಸೀಜನ್ನು ಅಂತ ಬರುತ್ತಿತ್ತು. ಆಗಲಂತೂ ಸಾಕ್ಷಾತ್ ಲಕ್ಷ್ಮಿ ಒಲಿದಂಥ ಅನುಭವ. ಸೀಜನ್ನು ಇರುವ ತನಕ ಸಂಪಾದನೆಗೆ ಕುತ್ತಿಲ್ಲ.

ಹೀಗಿರುವ ನಮಗೆ ಒಮ್ಮೆ ವಾಕ್ ಮನ್ ಕೊಂಡುಕೊಳ್ಳುವ ಯೋಗ ಸಹ ಕೂಡಿಬಂತು. ಆದರೆ ಕೇಳೋದಕ್ಕೆ ಮಾತ್ರ ಒಂದೂ ಕ್ಯಾಸೆಟ್ಟುಗಳಿರದೇ ತೊಂದರೆಯಾಗಿತ್ತು. ಅದೇ ಹೊತ್ತಿನಲ್ಲಿ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ  ‘ಸ್ಪರ್ಶ’ ಚಿತ್ರ ಬಿಡುಗಡೆಯಾಗಿತ್ತು. ಆವತ್ತಿಗೆ ನಮ್ಮ ಮಟ್ಟಿಗೆ ಅತ್ಯದ್ಭುತ ಅನ್ನುವಂಥ ಸಂಗೀತ. ಅದರದ್ದೊಂದು ಕ್ಯಾಸೆಟ್ ರೆಕಾರ್ಡ್ ಮಾಡಿಸಿಕೊಂಡು ಬರಬೇಕು ಅಂತ ಹಳೆಯದ್ದೊಂದು ಕ್ಯಾಸೆಟ್ ಹಿಡಿದು ಹನ್ನೆರಡು ಕಿ.ಮೀ ಸೈಕಲ್ ಹೊಡೆದು ಎರಡೆರಡೂ ದಿನ ಸುತ್ತಿ, ಕಡೆಗೂ  ಕ್ಯಾಸೆಟ್ಟು ಕೈ ಸೇರಿತ್ತು.

‘ಚಂದಕ್ಕಿಂತ ಚಂದ ನೀನೆ ಸುಂದರ…’ ಹಾಡೆಂದರೆ ಪ್ರಾಣ ಬಿಡುವಷ್ಟು ಇಷ್ಟ. ಪಂಕಜ್ ಉದಾಸ್ ಅನ್ನುವ ಗಾಯಕನ ಹೆಸರು ನೆನಪಿನಲ್ಲಿ ಉಳಿದುಕೊಂಡಿದ್ದು ಇದೇ ಹಾಡಿನಿಂದ. ಹಾಡು ಅದೆಷ್ಟು ಮೆಚ್ಚುಗೆಯಾಗಿತ್ತು ಎಂದರೆ, ಗೆಳೆಯ ಇದನ್ನ ಬಿಡದೇ ಹಾಡಿ ಹಾಡಿ, ಕಡೆಗೆ ಅಪ್ಪಪಕ್ಕದವರಿಗೆಲ್ಲ ನಾವು ಈ ಹಾಡಿನಿಂದಲೇ ಜನಪ್ರಿಯವಾಗಿ, ಅವ ಅದನ್ನೇ ಕಾಲೇಜಿನ ಚಿತ್ರಗೀತೆ ಸ್ಪರ್ಧೆಯಲ್ಲೂ ಹಾಡಿ, ತೀರ್ಪುಗಾರರು ತಾಳಲಾರದೇ ಎಂಬಂತೆ ಬಹುಮಾನವನ್ನೇ ಘೋಷಿಸಿದ್ದು ಉಂಟು. ಆಗಂತೂ ನಮ್ಮ ಸಂಭ್ರಮಕ್ಕೆ ಎಲ್ಲೆ ಇರಲಿಲ್ಲ. ಚಿತ್ರದ ಬಹುತೇಕ ಹಾಡುಗಳು ಕಂಠಪಾಠ ಆಗಿದ್ದವು.

ಊರಿಗೊಂದೇ ವಾಕ್ ಮನ್ ಅನ್ನುವ ಕಾರಣಕ್ಕೋ ಏನೋ ನಮಗೆ ಈ ಎಲ್ಲದರ ಜೊತೆಗೇ ಕೊಂಚ ಲೆವಲ್ಲು, ಅಹಮ್ಮು ಎಲ್ಲ ಬಂದಿದ್ದು ಸುಳ್ಳಲ್ಲ. ಆಮೇಲೆ ಅದ್ಯಾಕೋ ಸ್ಪರ್ಶವೂ ಬೇಜಾರಿಡಿಸತೊಡಗಿ ಬೇರೆ ಹಾಡುಗಳಿಗಾಗಿ ಹುಡುಕಾಟ ನಡೆಸಿದೆವು. ಅದೇ ಹೊತ್ತಿಗೆ ಆಗ ಜನಪ್ರಿಯವಾಗುತ್ತಿದ್ದ ‘soldier’ ಅನ್ನುವ ಹಿಂದಿ ಸಿನಿಮಾ ಹಾಡುಗಳು ಸಿಕ್ಕು ಒಂದಿಷ್ಟು ದಿನ ಹಿಂದಿ ಹಾಡುಗಳನ್ನ ಗುನುಗುವಂತಾಯ್ತು.

ಆಮೇಲೆ ಅವನು ಪಿಯುಸಿ ಮುಗಿಸಿ ಡಿಗ್ರಿ ಓದಿಗೆ ಅಂತ ಮೈಸೂರಿಗೆ ಹೊರಟ. ಆಮೇಲೆ ನನ್ನ ರೀತಿನೀತಿಗಳೂ ಬದಲಾಗುತ್ತಾ ಹೋದವು.

ಅದೇ ಗೆಳೆಯ ನಿನ್ನೆ ಭಾನುವಾರ ಊರಿನಲ್ಲಿ ಮತ್ತೆ ಸಿಕ್ಕಿದ್ದ. ಆತನೀಗ ಹೈಸ್ಕೂಲೊಂದರಲ್ಲಿ ಟೀಚರ್. ಹೀಗೇ ಸಿಕ್ಕವರೇ ನೇರ ಬೈಕ್ ಏರಿ ಹೊಳೆಯತ್ತ ಹೋಗಿ, ದಡದಲ್ಲಿ ಕೂತು ಸಂಜೆಯಾಗುವವರೆಗೂ ಅದುಇದು ಅಂತ ಮಾತನಾಡುತ್ತ, ಕತ್ತಲಾದ ಮೇಲೆ ಊರ ಕಡೆ ಬಂದಿದ್ದೆವು.

ಇಲ್ಲಿ ಮತ್ತೆ ರೂಮಿಗೆ ಬಂದು, ರಾತ್ರಿ ಹನ್ನೆರಡರ ಹೊತ್ತಲ್ಲಿ, ಯಾವುದೋ ಹಾಡಿನ ಗುಚ್ಛಗಳ ನಡುವೆ ಅದೇ ಸ್ಪರ್ಶದ ಹಾಡುಗಳು ಸಿಕ್ಕು ಮತ್ತೆ ಹಳೆಯದ್ದೆಲ್ಲ ನೆನಪಾಗುತ್ತಿವೆ. ಮತ್ತೆ ಮೆಲುಕು ಹಾಕುವಂಥ ಗೀತೆಗಳು. ಹಂಸಲೇಖ ಇಂತಹದ್ದೊಂದು ಮಾಂತ್ರಿಕ ಸಂಗೀತ ಚಿತ್ರ ನೀಡಿದ್ದು ಅದೇ ಕೊನೆ ಇರಬೇಕು, ಆದಾದ ಮೇಲೆ ಹೇಳಿಕೊಳ್ಳುವಂತ ಸಂಗೀತ ಅವರಿಂದ ಬಂದಿಲ್ಲ ಅನ್ನಿಸುತ್ತೆ.

ಇದನ್ನೆಲ್ಲ ನೆನೆದು, ಮತ್ತೆ ಹಾಡು ಗುನುಗುತ್ತಾ ಹೊರಗೆ ಬಾಲ್ಕನಿಯಲ್ಲೊಮ್ಮೆ ಬಂದರೆ ಇಲ್ಲಿ ಕಗ್ಗತ್ತಲು. ಆದರೂ ತಣ್ಣನೆ ಮೈ ತಬ್ಬಿದಂತೆ ಬೀಸುವ ಗಾಳಿ ಹಾಯೆನಿಸುತ್ತಿದೆ. ‘ಈಗೀಗ ನೀನು ನಿಶಾಚರಿ ಆಗುತ್ತಿದ್ದೀಯಾ ಗುರುವೇ’ ಅಂತ ಗೆಳೆಯರು ಎಚ್ಚರಿಸುತ್ತಾ ಇರುವುದು ನೆನಪಿಗೆ ಬಂದು ಸಣ್ಣಗೊಂದು ನಗುವೂ ತೇಲುತ್ತಿದೆ.  ಹಾಗೇ ಗಾಳಿಗೆ ಮೈ ಒಡ್ಡಿಕೊಂಡೇ ನಿಂತಿದ್ದೇನೆ.

ಫೆಬ್ರವರಿ 23, 2009 at 8:00 ಅಪರಾಹ್ನ 2 comments

ಈ ಹೊತ್ತಿಗೆ ಈ ಕವಿತೆಯ ನೆನಪು

l1

ಒಲವೆಂಬ ಹೊತ್ತಿಗೆಯ ನೋದಬಯಸುತ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ, ಹುಚ್ಚ!
ಹಗಲಿರುಳು ದುಡಿದರೂ, ಹಲವು ಜನುಮ ಕಳೆದರೂ
ನೀ ತೆತ್ತಲಾರೆ ಬರಿಯ ಅಂಚೆವೆಚ್ಚ!

ಬಹುಶಃ ಬೇಂದ್ರೆಯದ್ದಿದ್ದಿರಬೇಕು. ಹತ್ತನೇ ತರಗತಿಯಲ್ಲಿದ್ದಾಗ ಡೈರಿಯ ಮೊದಲ ಪುಟದಲ್ಲಿ ಬರೆದುಕೊಂಡಿದ್ದೆ. ನಿಜಕ್ಕೂ ಅದರರ್ಥ ತಿಳಿದೇ ಬರೆದುಕೊಂಡಿದ್ದನಾ? ಗೊತ್ತಿಲ್ಲ. ಹಾಗೇ ಬರೆದುಕೊಂಡ ಮೇಲೆ ಅದೆಷ್ಟೋ ಬಾರಿ ಇದನ್ನ ಓದಿಕೊಂಡಿದ್ದೇನೆ. ಓದಿದ ಪ್ರತಿ ಸಾರಿಯೂ ಖುಷಿ ಪಟ್ಟುಕೊಂಡಿದ್ದೇನೆ.

ಈ ಅಪರಾತ್ರಿಯಲ್ಲಿ, ನೆನಪುಗಳು ಒತ್ತೊತ್ತಿ ಬರುತ್ತಿರುವ ಹೊತ್ತಲ್ಲಿ ಈ ಕವಿತೆ ಮತ್ತೆ ಮತ್ತೆ ಕಾಡುತ್ತಿದೆ. ಹಾಗೇ ಎದ್ದುಕುಂತವನೇ ಹೊತ್ತಲ್ಲದ ಹೊತ್ತು ಅನ್ನುವ ಹೊತ್ತಲ್ಲೇ ಇದನ್ನೆಲ್ಲ ಬ್ಲಾಗಿಸುತ್ತಿದ್ದೇನೆ. ಈ ಹೊತ್ತಿಗೆ ಈ ಕವಿತೆಯ ನೆನಪು.

ಫೆಬ್ರವರಿ 13, 2009 at 7:42 ಅಪರಾಹ್ನ 2 comments

ಸತ್ತು ಬದುಕಿದವರು, ಬದುಕಿ ಸತ್ತವರು

‘ವಾಜಪೇಯಿ ತೀರಿಕೊಂಡರಂತೆ’ ಹೀಗೊಂದು ದಿಡೀರ್ ‘ಸುದ್ದಿ’ ಕೇಳಿದ್ದೇ ನಿನ್ನೆ ಒಂದು ಕ್ಷಣ ಆಶ್ಚರ್ಯ ಆಯ್ತು. ರಸ್ತೆಯಲ್ಲಿ ನಡೆಯುತ್ತಿದ್ದವನಿಗೆ ವಾಜಪೇಯಿ ಮುಖವೇ ಕಣ್ಮುಂದೆ ಬಂದಂತಿತ್ತು. ಮನೆಗೆ ಹೋದದ್ದೇ ಟೀವಿ ಹಾಕಿ ನೋಡಿದರೆ, ‘ವಾಜಪೇಯಿ ಚೇತರಿಕೆಗೆ ಹೋಮ, ಹವನ…’ ಅಂತ ಸ್ಲಗ್ ಬರುತ್ತಿತ್ತು. ಮಾಜಿ ಪ್ರಧಾನಿಗಳು ಹುಷಾರಾಗಿದ್ದಾರೆ ಅಂತಂದುಕೊಂಡು ಚಾನಲ್ ಬದಲಿಸಿದೆ.

ಇತ್ತೀಚೆಗೆ ಈ ರೀತಿ ಸುದ್ದಿ ಕೇಳುತ್ತಿರುವುದು ಇದು ಎರಡನೆಯ ಬಾರಿ. ಮಾಜಿ ರಾಷ್ಟ್ರಪತಿ ವೆಂಕಟರಾಮನ್ ವಿಷಯದಲ್ಲೂ ಹೀಗಾಗಿತ್ತು. ಆದರೆ ಇದಕ್ಕಿಂತ ಕೊಂಚ ಭಿನ್ನ. ಜನವರಿ ಇಪ್ಪತ್ತೈದರ ಭಾನುವಾರ ಮನೆಯಲ್ಲೇ ಟೀವಿ ನೋಡ್ತಾ ಇದ್ದೆ. ಅಷ್ಟರಲ್ಲೇ, ಪಕ್ಕದ ಮನೆಯ ಅಂಕಲ್ ಇಂತಹುದ್ದೇ ಒಂದು ಸುದ್ದಿ ಹೇಳಿದ್ರು. ಅದರಂತೆ,  “ವೆಂಕಟರಾಮನ್ ತೀರಿಹೋಗಿದ್ದಾರಂತೆ. ಆದ್ರೆ ಅದಿನ್ನೂ ಅಧಿಕೃತವಾಗಿ ಪ್ರಕಟ ಆಗಿಲ್ಲ. ನಾಳೆ ಗಣರಾಜ್ಯೋತ್ಸವ. ಸತ್ತಿರೋರು ಮಾಜಿ ರಾಷ್ಟ್ರಪತಿ ಗಳಾಗಿರೋದ್ರಿಂದ ಯಾವುದೇ ಆಚರಣೆ ಮಾಡುವ ಹಾಗಿಲ್ಲ, ರಾಷ್ಟ್ರಧ್ವಜವನ್ನ ಅರ್ಧಕ್ಕೆ ಇಳಿಸಿ ಹಾರಿಸಬೇಕು. ವಾರಗಳ ಕಾಲ ಶೋಕಚರಣೆ ಮಾಡಬೇಕಾಗಿತ್ತೆ. ಆದ್ರೆ ಏನ್ ಮಾಡೋದು ಗಣರಾಜೋತ್ಸವವನ್ನ ಆಚರಿಸದೇ ಇರೋದು ಸರಿ ಅಲ್ಲ. ಅದಕ್ಕೆ ಈ ವಿಷಯವನ್ನ ಹೀಗೆ ಮುಚ್ಚಿಡಲಾಗುತ್ತೆ. ಗಣರಾಜೋತ್ಸವದ ಬಳಿಕ ಅಧಿಕೃತವಾಗಿ ಪ್ರಕಟಿಸೋದಕ್ಕೆ ಏರ್ಪಾಡು ನಡೆದಿದೆ”

ನ್ಯೂಸ್ ಚಾನಲ್ ಗಳಲ್ಲಿ ನೋಡಿದ್ರೆ ಈ ಬಗ್ಗೆ ಸುಳಿವೂ ಇಲ್ಲ. ಈಗೀಗ ತೀರ ‘ಕುಟುಕು ಕಾರ್ಯಾಚರಣೆ’ ಗಳಿಗೆ ಹೆಸರಾಗ್ತಾ ಇರೋ ಚಾನಲ್ ಗಳಿಗಾದ್ರು ಇದರ ಸುಳಿವು ಸಿಕ್ಕಿ ಹೋಗಿರುತ್ತೆ ಅಂತಂದುಕೊಂಡು ನೋಡಿದರೆ ಅವುಗಳಲ್ಲೂ ಏನೂ ಇಲ್ಲ.

ಅಂಕಲ್ ಗೆ ಯಾರೋ ಏನೋ ಸುಳ್ಳು ಹೇಳಿರಬೇಕು. ಹೀಗೊಂದು ವದಂತಿ ಹಬ್ಬಿರಬೇಕು ಅಂದುಕೊಂಡೆ. ಈ ಬಗ್ಗೆ ಯಾರನ್ನಾದರೂ ಕೇಳಲು ಮುಜುಗರ ಅಂತನಿಸಿ ಸುಮ್ಮನಾದೆ.

ಅದಾದ ಎರಡು ದಿನಗಳ ನಂತರ, ಮತ್ತದೇ ಚಾನಲ್ಲುಗಳಲ್ಲಿ ವೆಂಕಟರಾಮನ್ ನಿಧನ ವಾರ್ತೆ ಪ್ರಸಾರ ಆಗ್ತಾ ಇತ್ತು. ಶ್ರದ್ಧಾಂಜಲಿ ಶುರುವಾಗಿತ್ತು. ಅಧಿಕೃತ ಪ್ರಕಟಣೆಯಂತೆ, ಆರ್. ವೆಂಕಟರಾಮನ್ ಜನವರಿ ೨೭ರ ಮಧ್ಯಾಹ್ನ ೨.೩೦ ವೇಳೆಗೆ ಅನಾರೋಗ್ಯದಿಂದ ನಿಧನ ಹೊಂದಿದ್ದರು.

ಅವತ್ತು ಸಂಜೆ ಒಬ್ಬರೊಡನೆ ಹೀಗೇ ಮಾತನಾಡುತ್ತಿರುವಾಗ, ‘ಸರ್ ಹೀಗೊಂದು ಸುದ್ದಿ ಹಬ್ಬಿತ್ತು ಅದು ನಿಜವಾ’ ಅಂತ ಕೇಳಿದರೆ, ‘ಹೌದು ನಂಗೂ ಈ ಸುದ್ದಿ ಶನಿವಾರನೇ ಕಿವಿಗೆ ಬಿದ್ದಿತ್ತು’ ಅಂದವರ ಮಾತಿಗೆ ಏನು ಹೇಳಬೇಕೋ ತೋಚದೆ ಸುಮ್ಮನಾಗಿದ್ದೆ.

ನಿನ್ನೆ, ಇಲ್ಲಿ ಮೈಸೂರಲ್ಲಿ ವಾಜಪೇಯಿ ಸತ್ತೇ ಹೋದ್ರು ಅಂತ ತಿಳಿದುಕೊಂಡ ಒಂದಿಷ್ಟು ಜನ ಸಭೆ ಸೇರಿ ಶ್ರದ್ಧಾಂಜಲಿ ಕೂಡ ಅರ್ಪಿಸಿದ್ದರಂತೆ! ಹಾಗಂತ ಈಗಷ್ಟೆ ತಿಳಿದುಬಂತು.

ಇಷ್ಟಕ್ಕೂ ಈ ಸುದ್ದಿಗಳೆಲ್ಲ ಹೀಗೆ ಹಬ್ಬೋದು ಹೇಗೆ? ವಯಸ್ಸಾದವರು ಆಸ್ಪತ್ರೆ ಸೇರಿದ್ರು ಅಂದ್ರೆ ಸತ್ತೇ ಹೋದ್ರು ಅಂತ ಅರ್ಥಾನ? ಇನ್ಯಾರೋ ಹೇಳ್ತಿದ್ರು, ಹೀಗೆ ಆಸ್ಪತ್ರೆ ಸೇರಿದ್ದನ್ನೇ ನ್ಯೂಸ್ ಚಾನಲ್ ಗಳು ರೋಚಕವಾಗಿ ಪದೇ ಪದೇ ತೋರಿಸ್ತಾ ಇರೋದ್ರಿಂದ ನಿಜಕ್ಕೂ ಅವರಿಗೆ ಏನೋ ಆಗಿಹೋಗಿದೆ ಅಂತ ಸಾಮಾನ್ಯ ಜನ ಯೋಚನೆ ಮಾಡ್ತಾರೆ ಅಂತ.

ಫೆಬ್ರವರಿ 8, 2009 at 4:51 ಅಪರಾಹ್ನ 2 comments

ಹೀಗೆ ಸುಮ್ಮನೆ ಒಂದು ಹನಿ

teertha-halli-230

ಯಾಕೋ ಗೊತ್ತಾಗುತ್ತಿಲ್ಲ

ಬೇಡವೆಂದರೂ ತನ್ ತಾನೇ
ಸುರಿಯುತ್ತಿದೆ ಕಣ್ಣೀರು
ನೆನಪುಗಳ ತೋಯಿಸುತ್ತಾ.

ರೆಪ್ಪೆ ತೆರೆದಿಟ್ಟರೆ
ತೊಟ್ಟಿಕ್ಕುವ ಜಲಪಾತ
ಮುಚ್ಚಿದರೆ,
ಒಳಗೆ ಜಲಪ್ರಳಯ.
ಹರಿವ ನೀರೊಳಗೂ
ಕೆಂಡದಷ್ಟು ಕಾವು.

ಒಮ್ಮೆ
ಮುಗಿಲೇ ಅಪ್ಪಳಿಸುವಷ್ಟು
ಅಥವಾ
ನೆಲ ಕಚ್ಚುವಷ್ಟು
ಮಳೆ ಬಂದು

ಈ ರಾಡಿಯನ್ನೆಲ್ಲ ತೊಳೆದು
ಶುದ್ಧಮಾಡಬಾರದೇ
ಅನ್ನುವ ತವಕ.

[ಚಿತ್ರ- ಪ್ರವೀಣ್ ಬಣಗಿ, ಚಿತ್ರಕುಲುಮೆ ]

ಫೆಬ್ರವರಿ 4, 2009 at 11:47 ಫೂರ್ವಾಹ್ನ 6 comments


ಕಾಲಮಾನ

ಫೆಬ್ರವರಿ 2009
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 1
2345678
9101112131415
16171819202122
232425262728  

ಮುಗಿಲು ಮುಟ್ಟಿದವರು

  • 9,307 hits

ಪಕ್ಷಿ ನೋಟ

Feeds