ರಸ್ಕಿನ್ ಬಾಂಡ್ ರ `Dehli is not far’: ಮುಂದುವರಿದ ಕಾದಂಬರಿ
ಸೆಪ್ಟೆಂಬರ್ 30, 2009 at 1:12 ಅಪರಾಹ್ನ ನಿಮ್ಮ ಟಿಪ್ಪಣಿ ಬರೆಯಿರಿ
ರಸ್ಕಿನ್ ಬಾಂಡ್ ರ `Dehli is not far’ ಕಾದಂಬರಿಯ ಇನ್ನೊಂದು ಅಧ್ಯಾಯ.
ಒಂದು ರಾತ್ರಿ ಸೂರಜ್ ಮತ್ತು ನಾನು ಟೀ ಶಾಪ್ ಒಂದರಲ್ಲಿ ಕೂತಿದ್ದೆವು. ಬಹುತೇಕ ಗಿರಾಕಿಗಳು ಬೆಂಚಿನ ಹೊರಗೆ, ಅಲ್ಲಿನ ಪ್ರಸಿದ್ದ ಕಥೆಗಾರನೂ ಆದ ಅಂಗಡಿಯವನ ಸುತ್ತ ಸುತ್ತಿಕೊಂಡಿದ್ದರು. ಅಲ್ಲೇ, ತಲೆಯಲ್ಲಿ ಒಂದೂ ಕೂದಲಿಲ್ಲದ, ಕಿವಿಯೂ ಕೇಳಿಸದ ವ್ಯಕ್ತಿಯೊಬ್ಬ ನಿಂತಿದ್ದ. ಎಲ್ಲರೂ ಅವನನ್ನ ‘ಗೂಂಗ’ ಅಂತಲೇ ಕರೆಯುತ್ತಿದ್ದರು. ಅವನನ್ನ ಅಲ್ಲಿಂದ ಇಲ್ಲಿಗೆ ಓಡಿಸುವುದು, ಬೈಯ್ಯುವುದು, ತಲೆ ಮೇಲೊಂದು ಹೊಡೆದು ಸುಮ್ಮನಾಗುವುದು ಇನ್ನಿತರ ಚೇಷ್ಟೆ ಮಾಡುತ್ತಿದ್ದರು. ಆದರೆ ಆತ ಮಾತ್ರ ಇದಕ್ಕೆಲ್ಲ ಬೇಜಾರು ಮಾಡಿಕೊಳ್ಳುವ ವ್ಯಕ್ತಿ ಅಲ್ಲ. ಯಾರು ಏನೇ ಅಂದರೂ ಅದಕ್ಕೆ ಪ್ರತಿಯಾಗಿ ಅವರ ಕಡೆಗೊಂದು ನಗೆ ಬೀರುತ್ತಿದ್ದ. ಅವನಿಗೆ ಮಾತನಾಡಲು ಗೊತ್ತಿದ್ದ ಪದವೊಂದೇ ‘ಗೂ…….’ ಆತ ಹಾಗೆ ಕೂಗಿದ್ದೇ ತಡ ಎಲ್ಲರೂ ಇನ್ನೊಮ್ಮೆ ಜೋರಾಗಿ ನಗುತ್ತಿದ್ದರು.
ನಾವು ಟೀ ಅಂಗಡಿಯೊಳಗೆ ಹೋಗುವ ಹೊತ್ತಲ್ಲೂ ಆತ ಸೂರಜ್ ನನ್ನ ನೋಡಿದ್ದೇ ‘ಗೂ….’ ಅಂತ ಜೋರಾಗಿ ಕೂಗಿದ. ಎಲ್ಲರೂ ನಕ್ಕರು. ಯಾರೋ ಒಬ್ಬರು ಎದ್ದದ್ದೇ , ಅವನ ಬೋಳು ತಲೆಯ ಮೇಲೊಂದು ಏಟು ಕೊಟ್ಟರು. ಕಡೆಗೆ ಆತನನ್ನ ಅಂಗಡಿಯ ಆಚೆಗೆ ಕಳುಹಿಸಲಾಯಿತು.
ನಾವು ಟೇಬಲ್ಲಿನ ಮೇಲೆ ಕೂತಿದ್ದೆವು. ಪ್ರತಿಯೊಬ್ಬರು ಟೀ ಹೀರುತ್ತಿದ್ದರು. ಗೂಂಗನನ್ನ ಬಿಟ್ಟು.
‘ಆ ಗೂಂಗನಿಗೊಂದು ಟೀ ಕೊಡು’ ಅಂದೆ. ಅಂಗಡಿಯಾತ ಕೊಂಚ ಕಸಿವಿಸಿ ಮಾಡಿಕೊಳ್ಳುತ್ತಲೇ ಅವನಿಗೂ ಒಂದು ಟೀ ಕೊಟ್ಟ. ಗೂಂಗ ನನ್ನತ್ತ ನೋಡಿ ಒಮ್ಮೆ ‘ಗೂ….’ ಅಂದ.
ನಾವು ಅಂಗಡಿ ಬಿಟ್ಟು ಹೊರಟಾಗ, ಬೆಳದಿಂಗಳ ಬೆಳಕು ಚೆಲ್ಲಿತ್ತು. ನಕ್ಷತ್ರಗಳು ಮಿಂಚುತ್ತಿದ್ದವು. ರೂಮಿನ ದಾರಿಯ ಮೈದಾನಕ್ಕುಂಟ ನಡೆಯಲು ಶುರು ಮಾಡಿದೆವು. ಬಜಾರ್ ಪೂರ್ತಿ ಖಾಲಿ ಹೊಡೆಯುತ್ತಿತ್ತು. ಎಲ್ಲ ಅಂಗಡಿಗಳೂ ಮುಚ್ಚಿದ್ದವು.
ಇನ್ನೊಂದಿಷ್ಟು ದೂರ ನಡೆಯುವಷ್ಟರಲ್ಲಿ ನಮ್ಮ ಹಿಂದೆ ಯಾರದೋ ಹೆಜ್ಜೆ ಸಪ್ಪಳಗಳು ಕೇಳಿಬಂತು. ತಿರುಗಿ ನೋಡಿದರೆ ಗೂಂಗ ನಮ್ಮನ್ನು ಹಿಂಬಾಲಿಸುತ್ತಿದ್ದ.
ನಮ್ಮನ್ನ ನೋಡಿದವನೇ ‘ಗೂ…’ ಅಂದ.
‘ನೀನೇಕೆ ಅವನಿಗೆ ಟೀ ಕೊಡಿಸಿದೆ. ಈಗ ನೋಡು. ನಾವು ಶ್ರೀಮಂತರಿರಬಹುದು ಅಂತ ಆತ ನಮ್ಮನ್ನ ಹಿಂಬಾಲಿಸುತ್ತಾ ಇದ್ದಾನೆ.’ ಸೂರಜ್ ತನ್ನ ಕಳವಳ ವ್ಯಕ್ತಪಡಿಸಿದ.
‘ಅವನಿಂದ ನಮಗೇನು ತೊಂದರೆ ಇಲ್ಲ’ ಅಂದವನೇ ಇಬ್ಬರೂ ನಮ್ಮ ನಡೆಯನ್ನ ಜೋರುಗೊಳಿಸಿದೆವು. ‘ನಾವು ಮೈದಾನದಲ್ಲೇ ಮಲಗಿದಂತೆ ಮಾಡೋಣ. ಆಗ ಆತ ನಮ್ಮನ್ನು ಹಿಂಬಾಲಿಸುವುದನ್ನ ನಿಲ್ಲಿಸಬಹುದು.’
‘ಗೂ…’ ಅಂದವನೇ ಆತ ಕೂಡ ಜೋರಾಗಿ ಹೆಜ್ಜೆ ಹಾಕತೊಡಗಿದ. ಹಾಗೇ ಕೆಳಕ್ಕಿಳಿದು , ಅಡ್ಡದಾರಿ ಹಿಡಿದೆವು. ಆತ ಮರೆಯಾದ. ಮತ್ತೆ ಮುಖ್ಯರಸ್ತೆಗೆ ಕೂಡಿಕೊಳ್ಳುವ ಹೊತ್ತಲ್ಲಿ ನಮ್ಮ ಬೆನ್ನಿಗೆ ಬಿದ್ದ. ಮೈದಾನದ ತುದಿಯಲ್ಲಿ ನಿಂತ ನಾನು ಹಿಂದಕ್ಕೆ ತಿರುಗಿದೆ. ‘ಇಲ್ಲಿಂದ ಹೊರಟುಹೋಗು ಗೂಂಗ. ನಮ್ಮ ಹತ್ತಿರವೇ ಏನೂ ಇಲ್ಲ. ನಿನಗೇನು ಕೊಡೋಣ.’
‘ಗೂ..’ ಅಂದವನೇ ಇನ್ನೊಂದೆರಡು ಹೆಜ್ಜೆ ಮುಂದೆ ಬಂದ.
ನಾನು ಸೂರಜ್‌ನನ್ನ ಕರೆದುಕೊಂಡು ಮುಂದೆ ಹೊರಟೆ.
ನಾವು ಹುಲ್ಲಿನ ಮೇಲೆ ಹೆಜ್ಜೆ ಹಾಕುತ್ತಾ ಇನ್ನಷ್ಟು ದೂರ ಹೋಗುವವರೆಗೂ ಆತ ನಮ್ಮನ್ನು ನೋಡುತ್ತಲೇ ಇದ್ದ. ನಾವು ಒಂದು ಬೆಂಚಿನ ಮೇಲೆ ಕೂತೆವು. ಆತ ‘ಗೂ…’ ಅನ್ನುತ್ತ ತಿರುಗಿ ಹೊರಟುಹೋದ.
*******
ಪೀಪಲ್ ನಗರದ ಭಿಕ್ಷುಕರಿಗೆ ಅವರದ್ದೇ ಆದ ಆದಾಯವೂ ಇದೆ, ಸಂಘಟನೆಯೂ ಇದೆ. ಹೀಗಾಗಿಯೇ ಭಿಕ್ಷಾಟನೆ ಮೇಲೆ ತೆರಿಗೆ ವಿಧಿಸುವುದಾಗಿ ಪುರಸಭೆ ನಿರ್ಧರಿಸಿದೆ ಅಂತ ಗೊತ್ತಾದಾಗ ನನಗೆ ಆಶ್ಚರ್ಯ ಆಗಲಿಲ್ಲ. ನನಗೆ ಗೊತ್ತು ಕೆಲವು ಭಿಕ್ಷುಕರು ದಿನವೊಂದಕ್ಕೆ ಒಬ್ಬ ಕೂಲಿ ಅಥವಾ ಗುಮಾಸ್ತನಿಗಿಂತ ಹೆಚ್ಚು ಸಂಪಾದಿಸುತ್ತಾರೆ ಅಂತ. ಇಲ್ಲಿನ ಒಂಟಿ ಕಾಲಿನ ಭಿಕ್ಷುಕನೊಬ್ಬ ಭಿಕ್ಷೆ ಬೇಡಿಯೇ ಪ್ರತಿ ತಿಂಗಳೂ ತನ್ನ ಮನೆಗೆ ಮನಿ ಆರ್ಡರ್ ಕಳಿಸುವುದನ್ನ ನಾನು ನೋಡಿದ್ದೇನೆ. ಭಿಕ್ಷಾಟನೆ ಎಷ್ಟರಮಟ್ಟಿಗೆ ಒಂದು ವೃತ್ತಿಯಾಗಿ ಪರಿವರ್ತನೆಯಾಗಿದೆ ಎಂದರೆ , ಆ ಕಾರಣದಿಂದಲೇ ಪುರಸಭೆ ಅದರ ಮೇಲೆ ತೆರಿಗೆ ವಿಧಿಸುವ ನಿರ್ಧಾರಕ್ಕೆ ಬಂದಿದ್ದು.
ತನ್ನ ಬೆನ್ನುಗಳು ಪೂರ ನೆಲಕ್ಕೆ ಬಗ್ಗಿರುವ ಮತ್ತು ಅದು ಎಂದೂ ನೆಟ್ಟಗಾಗದ ಗಣಪತಿ ರಾಮ್‌ಗೆ ಮಾತ್ರ ಈ ತೆರಿಗೆಯ ವಿಚಾರ ಅಷ್ಟು ಹಿಡಿಸಲಿಲ್ಲ. ‘ಹೀಗೆಲ್ಲ ಆಗುತ್ತೆ ಅಂತ ಗೊತ್ತಿದ್ದರೆ ಬೇರೆ ಯಾವುದಾದರೂ ಕೆಲಸ ಹುಡುಕಿಕೊಳ್ಳುತ್ತಿದ್ದೆ’ ಅಂತ ಆತ ಬೇಸರ ಪಟ್ಟುಕೊಂಡ.
ಗಣಪತಿ ರಾಮ್ ಇದ್ದದ್ದರಲ್ಲಿ ಉಳಿದ ಭಿಕ್ಷುಕರಿಗಿಂತ ಭಿನ್ನವಾದ ಮನುಷ್ಯ. ಆತ ಹಿಂದೊಮ್ಮೆ ಸಾಕಷ್ಟು ಆಸ್ತಿಯನ್ನು ,ಮತ್ತು ವಿದೇಶಿ ಹೆಂಡತಿಯೊಬ್ಬಳನ್ನ ಹೊಂದಿದ್ದ ಅನ್ನುವ ವದಂತಿಗಳನ್ನ ನಾನು ಕೇಳಿದ್ದೇನೆ. ಆತನ ಹೆಂಡತಿ ಇದ್ದಬದ್ದ ಹಣವನ್ನೆಲ್ಲ ಎತ್ತಿಕೊಂಡು ವಿದೇಶಕ್ಕೆ ಹಾರಿಹೋದಳಂತೆ. ಅದೇ ಆಘಾತದಲ್ಲಿ ಕುಸಿದು ಬಿದ್ದವನು ಮತ್ತೆ ಚೇತರಿಸಿಕೊಳ್ಳಲೇ ಇಲ್ಲವಂತೆ. ಕಡೆಗೆ ಆತನ ಆರೋಗ್ಯ ಎಷ್ಟು ಹದಗೆಟ್ಟಿತೆಂದರೆ , ಆತ ಸ್ವಲ್ಪ ನಡೆದಾಡಲೂ ಕೋಲು ಬಳಸಬೇಕಾದ ಪರಿಸ್ಥಿತಿ ಬಂತಂತೆ.
ಅವನೆಂದೂ ಹಣಕ್ಕಾಗಿ ನೇರವಾಗಿ ಬೇಡಿಕೊಂಡಿದ್ದನ್ನ ನಾನು ಕಂಡಿಲ್ಲ. ಆತ ಇವತ್ತಿನ ಹವಾಮಾನದ ಬಗ್ಗೆ ಮಾತನಾಡುತ್ತಲೋ, ಬೆಲೆ ಏರಿಕೆ ಬಗ್ಗೆ ಹೇಳುತ್ತಲೋ ಹೇಗೋ ನಮ್ಮ ಗಮನವನ್ನ ತನ್ನತ್ತ ಸೆಳೆಯುತ್ತಾನೆ.
ಆತನ ಹಿಂದಿರುವ ಕಥೆಗಳಲ್ಲಿ ಅರ್ಧ ನಿಜವೂ ಅರ್ಧ ಸುಳ್ಳು ಆಗಿರಬಹುದು ಅಂತ ನನ್ನ ಅಂದಾಜು. ಯಾಕೆಂದರೆ, ಯಾರಾದರೂ ಒಳ್ಳೆಯ ಬಟ್ಟೆ ಹಾಕಿರುವ ಜನರನ್ನ ಮಾತನಾಡಿಸುವಾಗ ಆತ ಇಂಗ್ಲಿಷಿನಲ್ಲೇ ಮಾತನಾಡುತ್ತಾನೆ. ಬಿಳೀಯ ಗಡ್ಡ ಮತ್ತು ಕೆಂಚು ಕಣ್ಣುಗಳುಳ್ಳ ಆತ ಬೇರೆ ಭಿಕ್ಷುಕರ ಹಾಗೆ ದೇವರ ಹೆಸರುಗಳನ್ನ ಹೇಳಿಕೊಂಡು ಬೇಡುವುದಿಲ್ಲ. ಗಣಪತಿಯ ಕುರಿತು ಇನ್ನೂ ಸಾಕಷ್ಟು ಸುದ್ದಿಗಳೂ ಹಬ್ಬಿವೆ. ಆತ ಗೂಢಾಚಾರಿ ಅಥವಾ ಪೊಲೀಸಿನವನಾಗಿರಬಹುದು ಅನ್ನುವುದು ಕೆಲವರ ಅನುಮಾನ. ಆದರೆ ಆತ ಈ ವೃತ್ತಿಗೆ ನಿಷ್ಟನಾಗಿರುವ ಪರಿಯನ್ನ ನೋಡಿದರೆ, ಇನ್ನೊಂದು ಐದು ವರ್ಷ ಆತ ಇದೇ ವೃತ್ತಿಯಲ್ಲಿ ಮುಂದುವರಿಯಬಹುದು ಅನ್ನಿಸುತ್ತೆ.
ಆ ಕುರುಡು ಮನುಷ್ಯ ನಿಜವಾಗಿಯೂ ಕುರುಡ ಅಂತ ನನಗೆ ಅನಿಸುವುದಿಲ್ಲ. ಆತ ಯಾವಾಗಲೂ ಬೀದಿಯಲ್ಲಿ ನಡೆಯಬೇಕಾದರೆ ನನ್ನ ಗುರುತು ಹಿಡಿಯುತ್ತಾನೆ, ಆತ ಒಬ್ಬನೇ ಇದ್ದಾಗಲೂ. ನನ್ನ ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದೇ ಒಂದಿಷ್ಟು ಚಿಲ್ಲರೆ ಬೇಡುತ್ತಾನೆ. ಆತ ನನಗೆ ಅಷ್ಟು ಇಷ್ಟ ಆಗೋಲ್ಲ. ಅವನು ನನ್ನ ಗಮನವನ್ನ ತನ್ನತ್ತ ಸೆಳೆಯುವ ಸಲುವಾಗಿ ಅತಿಯಾಗಿ ವರ್ತಿಸುತ್ತಾನೆ.
ಇತರ ಅಂಧರ ಜೊತೆ ಸೇರಿ ಕೆಲಸ ಮಾಡುವ ಸಾಕಷ್ಟು ಅವಕಾಶಗಳು ಇದ್ದಾಗ್ಯೂ , ಆತ ಮಾತ್ರ ಈ ಭಿಕ್ಷಾಟನೆಯಲ್ಲೇ ಹೆಚ್ಚಿನ ಲಾಭ ಕಂಡುಕೊಂಡಿದ್ದಾನೆ. ಕೆಲವೊಮ್ಮೆ ಆತನನ್ನ ಪಟ್ಟಣದಲ್ಲಿ ತಿರುಗಾಡಿಸುವ ಹುಡುಗ ಮಾತ್ರ ನನ್ನಿಂದ ಭಿಕ್ಷೆ ಬೇಡುವುದಿಲ್ಲ. ಬದಲಾಗಿ ಕೇಳುತ್ತಾನೆ. ‘ನಿಮ್ಮ ಹತ್ತಿರ ಒಂದು ಆಣೆ ಇದೆಯಾ?’ ಅಂತ, ಸಾಲ ಪಡೆದು ಹಿಂತಿರುಗಿಸುವವನಂತೆ.
ಆತ ಸ್ವಲ್ಪ ಸ್ನೇಹಮಯಿ. ಕೆಲವೊಮ್ಮೆ ನನ್ನ ರೂಮಿಗೂ ಬಂದಿದ್ದಾನೆ. ನನ್ನ ಆರೋಗ್ಯದ ಕುರಿತು ಅವನಿಗೆ ಇನ್ನಿಲ್ಲದ ಕಾಳಜಿ. ನಾನು ಅವನ ಕಣ್ಣಿಗೆ ಎಲ್ಲೇ ಕಾಣಿಸಿಕೊಂಡರೂ ಓಡಿಬಂದು ನನ್ನ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಾನೆ. ಪುರಸಭೆಯ ತೆರಿಗೆ ನಿರ್ಧಾರ ಇವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಇವರೇನು ವೃತ್ತಿನಿರತ ಭಿಕ್ಷುಕರಲ್ಲ!
ಆ ಹುಡುಗ ನನ್ನ ಹತ್ತಿರ ಮತ್ತೆ ಬಂದು ಕೇಳುತ್ತಾನೆ ‘ನಿಮ್ಮ ಹತ್ತಿರ ಒಂದು ಆಣೆ ಇದೆಯಾ?’
‘ಇಲ್ಲ. ನನ್ನಲ್ಲಿ ಚಿಲ್ಲರೆ ಇಲ್ಲ.’
‘ಹಾಗಾದರೆ ನೋಟನ್ನೆ ಕೊಡಿ. ಚಿಲ್ಲರೆ ಮುರಿಸಿ ಕೊಡ್ತೀನಿ.’
‘ನನ್ನಲ್ಲಿ ನೋಟಿಲ್ಲ. ಐವತ್ತು ಪೈಸೆ ನಾಣ್ಯ ಇದೆ.’
‘ಹಾಗಾದರೆ ಚಿಲ್ಲರೆ ಯಾಕೆ ಬೇಕು? ಆ ನಾಣ್ಯವನ್ನು ನನಗೆ ಕೊಡಿ. ಇನ್ನೊಂದು ವಾರ ನಿಮ್ಮ ಹತ್ತಿರ ಕಾಸು ಕೇಳಲ್ಲ.’
ನಾನವನಿಗೆ ಎಷ್ಟೇ ಹಣವನ್ನ ಕೊಟ್ಟರೂ ಆತ ಮತ್ತೆ ನನ್ನ ಪರ್ಸಿನಿಂದ ಇನ್ನಷ್ಟು ಗಿಟ್ಟಿಸಿಕೊಳ್ಳುವುದನ್ನೇ ಎದುರು ನೋಡುತ್ತಿರುತ್ತಾನೆ. ಒಂದು ಕಾಲದಲ್ಲಿ ಭಿಕ್ಷುಕರು ಕೇವಲ ಒಂದು ಅಥವಾ ಎರಡು ಪೈಸೆಗಾಗಿ ಬೇಡುತ್ತಾ ಇದ್ದರು. ಆದರೆ ಇವತ್ತು ಬದುಕು ಎಷ್ಟು ದುಬಾರಿ ಆಗಿಬಿಟ್ಟಿದೆ ಅಂದರೆ , ಅವರು ಒಂದು ಆಣೆಗಿಂತ ಕಡಿಮೆ ಹಣವನ್ನ ಕೇಳುವುದೇ ಇಲ್ಲ.
******
ಅಂತೂ ಪುರಸಭೆ ಈ ಭಿಕ್ಷಾಟನೆಯ ಮೇಲೆ ತೆರಿಗೆ ವಿಧಿಸಲು ನಿರ್ಧರಿಸಿದಂದಿನಿಂದ ಇವರೆಲ್ಲ ಒಂದುಗೂಡುತ್ತಿದ್ಧಾರೆ. ಒಂದು ಸಂಘಟನೆಯನ್ನೂ ಕಟ್ಟಿಕೊಳ್ಳುತ್ತಿದ್ದಾರೆ. ಒಂದು ದಿನ ನೂರಕ್ಕೂ ಹೆಚ್ಚು ಜನ ಭಿಕ್ಷುಕರು ಒಂದು ದಿನ ಬೀದಿಯಲ್ಲಿ ಪ್ರತಿಭಟನೆಗಿಳಿದು ಪುರಸಭೆ ಆಡಳಿತದ ವಿರುದ್ದ ಧಿಕ್ಕಾರ ಕೂಗಲು ಶುರು ಮಾಡಿದ್ದರು. ಭಿಕ್ಷುಕರ ಮೇಲೆ ಮಾಡಹೊರಟಿರುವ ದೌರ್ಜನ್ಯವನ್ನ ನಿಲ್ಲಿಸಿ ಅಂತ ದೊಡ್ಡ ಬ್ಯಾನರುಗಳನ್ನ ಕಟ್ಟಿಕೊಂಡಿದ್ದರು. ನಗರದಲ್ಲೆಡೆ ಮೆರವಣಿಗೆ ಹೊರಟು , ಕಡೆಗೆ ಪುರಸಭೆಯ ಕಛೇರಿಗಳನ್ನ ಸುತ್ತುವರಿದು ಯಾರೂ ಒಳಹೋಗದ ಹಾಗೆ ದಿಗ್ಭಂದನ ಹಾಕಿದ್ದರು.
ಅಷ್ಟರಲ್ಲೇ, ಕಛೇರಿಯಿಂದ ಹೊರಬಂದ ಅಧಿಕಾರಿಗಳು ‘ಇದೆಲ್ಲ ಕೇವಲ ವದಂತಿ. ಅಂತಹ ಯಾವುದೇ ತೆರಿಗೆಯನ್ನ ಹಾಕಲಾಗುತ್ತಿಲ್ಲ, ಅದಕ್ಕೆ ಅವಕಾಶವೂ ಇಲ್ಲ’ ಅಂತ ಸ್ಪಷ್ಟಪಡಿಸಿದರು. ಭಿಕ್ಷುಕರೆಲ್ಲ ತಮ್ಮ ಮನೆಗಳಿಗೆ ಹೋಗಿ, ಯಾವುದೇ ಅಧಿಕಾರಿಗಳ ಭಯವಿಲ್ಲದೇ ನಿರ್ಭೀತಿಯಿಂದ ತಮ್ಮ ಸಂಪಾದನೆಗಳನ್ನ ಲೆಕ್ಕ ಹಾಕಬಹುದು ಅಂದರು.
ಇದನ್ನ ತಮ್ಮ ಹೋರಾಟಕ್ಕೆ ಸಿಕ್ಕ ನೈತಿಕ ಜಯ ಅಂದುಕೊಂಡ ಭಿಕ್ಷುಕರು, ತಮ್ಮ ಸಂಘಟನೆಯನ್ನ ಹೀಗೆ ಉಳಿಸಿಕೊಳ್ಳಬೇಕು ಅಂತ ನಿರ್ಧರಿಸಿದರು. ಪರಿಣಾಮ ಈಗ ‘ಭಿಕ್ಷುಕರ ಸಂಘ’ ಸ್ಥಾಪನೆಯಾಗಿದೆ. ಒಂದೊಂದು ಪ್ರದೇಶವನ್ನ ಒಬ್ಬೊಬ್ಬರಿಗೆ ವಹಿಸಿಕೊಡಲಾಗಿದ್ದು, ಒಬ್ಬರ ಪ್ರದೇಶದಲ್ಲಿ ಇನ್ನೊಬ್ಬರು ಭಿಕ್ಷೆ ಬೇಡುವಂತಿಲ್ಲ. ಅಲ್ಲದೆ ಇತ್ತೀಚೆಗೆ , ಭಿಕ್ಷೆ ಕೊಡದವರ ಮನೆ ಮುಂದೆ ಕೂತು ಪ್ರತಿಭಟನೆಯನ್ನ ಕೂಡ ಮಾಡಲಾರಂಭಿಸಿದ್ಧಾರೆ ಅಂತ ವದಂತಿ ಹಬ್ಬಿದೆ.
(ಮುಂದುವರಿಯುವುದು)
Entry filed under: ಕಥೆ-ಕವಿತೆ. Tags: dehli is not far, kannada, novel, ruskin bond, translation.
Trackback this post | Subscribe to the comments via RSS Feed