Archive for ಅಕ್ಟೋಬರ್, 2009
ಮುಂದುವರಿದ ಬಾಂಡ್ ಕಾದಂಬರಿ
ರಸ್ಕಿನ್ ಬಾಂಡ್ ರ `Dehli is not far’ ಕಾದಂಬರಿಯ ಇನ್ನೊಂದು ಅಧ್ಯಾಯ.

ರಸ್ಕಿನ್ ಬಾಂಡ್
‘ನೋಡು ಗಣಪತಿ’ ಒಂದು ದಿನ ನಾನವನನ್ನ ಕೇಳಿದೆ. ‘ನಾನು ನಿನ್ನ ಬಗ್ಗೆ ಸಾಕಷ್ಟು ಕಥೆಗಳನ್ನ ಕೇಳಿದ್ದೇನೆ. ಆದರೆ ಅದರಲ್ಲಿ ಯಾವುದು ಸುಳ್ಳು, ಯಾವುದು ಸತ್ಯ ಅಂತ ಗೊತ್ತಿಲ್ಲ. ನಿನ್ನ ಈ ಬೆನ್ನು ಗೂನಾದದ್ದಾದರೂ ಹೇಗೆ?’
‘ಅದೊಂದು ದೊಡ್ಡ ಕಥೆ’ ಅಂತಂದ ಗಣಪತಿ. ಅದು ಅವನ ಕಥೆ ಬಗ್ಗೆ ಇನ್ನಷ್ಟು ಕುತೂಹಲ ಕೆರಳಿಸಿತು. ‘ಅದನ್ನೆಲ್ಲ ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ. ಅಲ್ಲದೆ, ಹಾಗೇ ಯಾರಿಗೂ ನನ್ನ ಕಥೆಯನ್ನ ಬಿಟ್ಟಿಯಾಗಿ ಹೇಳುವುದೂ ಇಲ್ಲ.’
ಆತ ನನ್ನಿಂದ ಏನನ್ನಾದರೂ ಗಿಟ್ಟಿಸಿಕೊಳ್ಳುವ ತನ್ನ ಉದ್ದೇಶವನ್ನು ವ್ಯಕ್ತಪಡಿಸಿದ. ನಾನಂದೆ ‘ನೀನು ನಿನ್ನ ಕಥೆಯನ್ನ ಹೇಳಿದ್ದೇ ಆದಲ್ಲಿ, ನಿನಗೆ ನಾಲ್ಕು ಆಣೆಗಳನ್ನ ಕೊಡುತ್ತೇನೆ. ಹೇಳು, ಇದೆಲ್ಲ ಹೇಗಾಯಿತು?’
ಆತ ತನ್ನ ಗಡ್ಡದ ಮೇಲೊಮ್ಮೆ ಕೈಯಾಡಿಸುತ್ತಲೇ, ನನ್ನ ಬೇಡಿಕೆಯನ್ನ ಒಪ್ಪಿಕೊಂಡ. ‘ಆದರೆ ಇದೆಲ್ಲ ನಡೆದಿದ್ದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ. ಯಾವಾಗ ಅಂತ ಮಾತ್ರ ಖರಾರುವಕ್ಕಾಗಿ ಹೇಳುವುದಕ್ಕೆ ಆಗೋದಿಲ್ಲ.’
‘ಆ ದಿನಗಳಲ್ಲಿ ನಾನಿನ್ನು ಯುವಕನಾಗಿದ್ದೆ. ಆಗಷ್ಟೇ ಮದುವೆ ಕೂಡ ಆಗಿದ್ದೆ. ನನಗೆ ಒಂದಿಷ್ಟು ಜಮೀನು ಇದ್ದಾಗ್ಯೂ , ಬಡತನ ಇರದೇ ಇರಲಿಲ್ಲ. ನಾನು ಬೆಳೆದಿದ್ದನ್ನೆಲ್ಲ ನನ್ನೂರಿನಿಂದ ಐದು ಮೈಲು ದೂರದಲ್ಲಿದ್ದ ಮಾರುಕಟ್ಟೆಗೆ ತೆಗೆದುಕೊಂಡು ಹಾಕುತ್ತಿದ್ದೆ. ಎತ್ತುಗಳನ್ನ ಗಾಡಿಗೆ ಕಟ್ಟಿ, ಹೊಂಡ ಬಿದ್ದ ರಸ್ತೆಯಲ್ಲೇ ಓಡಿಸಿಕೊಂಡು ಹೋಗುತ್ತಿದ್ದೆ. ರಾತ್ರಿ ಮನೆಗೆ ಮರಳುತ್ತಿದ್ದೆ.
ಪ್ರತಿದಿನ ನಾನು ಒಂದು ಹುಣಸೇಮರದ ಹತ್ತಿರ ಹಾದು ಬರುವಾಗ ಅಲ್ಲಿ ಏನೋ ಸದ್ದಾದಂತೆ ಆಗುತ್ತಿತ್ತು. ನಾನು ಯಾವತ್ತೂ ಆ ದೆವ್ವವನ್ನ ಕಂಡಿರಲಿಲ್ಲ. ಅದನ್ನ ನಂಬುತ್ತಲೂ ಇರಲಿಲ್ಲ. ನಾನು ಕೇಳಿದಂತೆ, ಅಲ್ಲಿ ಬಿಪಿನ್ ಎನ್ನುವ ವ್ಯಕ್ತಿಯನ್ನ ಬಹಳ ವರ್ಷಗಳ ಹಿಂದೆ ಒಂದು ಡಕಾಯಿತರ ಗುಂಪು ನೇಣು ಹಾಕಿ ಕೊಂದಿತ್ತು. ಅಲ್ಲಿಂದ ಆತನ ಆತ್ಮ ಆ ಮರದಲ್ಲಿಯೇ ವಾಸಿಸುತ್ತಿದ್ದು, ಆ ದಾರಿಯಲ್ಲಿ ತಿರುಗಾಡುವ, ನೋಡಲು ಡಕಾಯಿತರಂತೆಯೇ ಕಾಣುವವರನ್ನೆಲ್ಲ ಹಿಡಿದು ಥಳಿಸುತ್ತಿತ್ತು. ಒಂದು ರಾತ್ರಿ ಹಾಗೇ ನನ್ನನ್ನು ಥಳಿಸಲು ಮುಂದಾಯಿತು. ಮರದಿಂದ ಕೆಳಗಿಳಿದು ಬಂದು, ರಸ್ತೆಗೆ ಅಡ್ಡವಾಗಿ ನಿಂತಿತ್ತು.
‘ಎಲಾ ಇವನೇ, ಗಾಡಿಯಿಂದ ಕೆಳಗೆ ಇಳಿ. ನಾನು ನಿನ್ನನ್ನ ಕೊಲ್ಲುತ್ತೇನೆ.’
ನಾನು ಇದರಿಂದ ಕೊಂಚ ಹೆದರಿದೆನಾದರೂ, ಅದರ ಆಜ್ಞೆಯನ್ನ ಪಾಲಿಸಬೇಕಾದ ಯಾವುದೇ ಅಗತ್ಯತೆ ತೋರಲಿಲ್ಲ.
‘ನಾನು ಕೊಲೆಯಾಗುವ ಯಾವ ಕಾರಣಗಳೂ ಇಲ್ಲ. ಬೇಕಾದರೆ ನೀನೇ ಗಾಡಿ ಮೇಲೆ ಬಾ.’ ಅಂದೆ.
‘ಒಳ್ಳೆ ಮನುಷ್ಯನ ಹಾಗೆ ಮಾತನಾಡುತ್ತೀಯಾ!’ ಬಿಪಿನ್ ಕಿರುಚಿದ. ಗಾಡಿ ಮೇಲಕ್ಕೆ ನೆಗೆದು ನನ್ನ ಬೆನ್ನ ಹಿಂದೆಯೇ ನಿಂತ. ‘ಹಾಗಾದರೆ, ನಿನ್ನನ್ನ ಯಾಕೆ ಕೊಲ್ಲಬಾರದು ಅಂತ ಒಂದು ಕಾರಣ ಹೇಳು’
‘ನಾನು ಡಕಾಯಿತನಲ್ಲ.’
‘ಆದರೆ ನೀನು ಡಕಾಯಿತನ ಹಾಗೇ ಕಾಣುತ್ತೀಯಾ!’
‘ಒಂದು ವೇಳೆ ನೀನು ನನ್ನನ್ನ ಕೊಂದಿದ್ದೇ ಆದಲ್ಲಿ, ಆಮೇಲೆ ಪಶ್ಚಾತಾಪ ಪಡುತ್ತೀಯಾ. ನಾನು, ಹೆಂಡತಿಯೂ ಜೊತೆಗಿರುವ ಒಬ್ಬ ಬಡ ಮನುಷ್ಯ.’
‘ನೀನು ಬಡವನಾಗಿರುವುದಕ್ಕೆ ಸಾಧ್ಯವೇ ಇಲ್ಲ’ ಬಿಪಿನ್ ಕೋಪದಿಂದ ಅಂದ.
‘ಹಾಗಾದರೆ, ನಿನಗೆ ತಾಕತ್ತಿದ್ದರೆ ನನ್ನನ್ನ ಶ್ರೀಮಂತನನ್ನಾಗಿ ಮಾಡು ನೋಡೋಣ?’
‘ನನಗೆ ಆ ಶಕ್ತಿಯಿಲ್ಲ ಅಂತೀಯಾ? ನಿನ್ನನ್ನ ಶ್ರೀಮಂತನನ್ನಾಗಿ ಮಾಡೋದಕ್ಕೆ ಆಗಲ್ಲ ಅಂತೀಯಾ?’
‘ಹೌದು, ಖಂಡಿತ. ನನ್ನನ್ನ ನೀನು ಶ್ರೀಮಂತನನ್ನಾಗಿ ಮಾಡೋದಕ್ಕೆ ಆಗೋದಿಲ್ಲ.’
‘ಹಾಗಾದರೆ ನೋಡೇ ಬಿಡೋಣ. ನಾನು ನಿನ್ನ ಜೊತೆಗೇ ನಿನ್ನ ಮನೆಗೆ ಬರ್ತೀನಿ’ ಅಂದ. ನಾನು ಗಾಡಿಯನ್ನ ಊರಿನತ್ತ ಹೊಡೆದೆ.
‘ನಾನದಕ್ಕೆ ತಕ್ಕ ವ್ಯವಸ್ಥೆ ಮಾಡಿಕೊಳ್ಳಬೇಕು’ ಅಂದ. ‘ಇನ್ನೊಂದು ವಿಷಯ. ನಿನ್ನನ್ನ ಬಿಟ್ಟು ಬೇರೆ ಯಾರ ಕಣ್ಣಿಗೂ ನಾನು ಕಾಣಿಸುವುದಿಲ್ಲ. ನಾನು ಪ್ರತಿದಿನ ನಿನ್ನ ಪಕ್ಕದಲ್ಲೇ ಮಲಗುತ್ತೇನೆ. ಆದರೆ ಇದು ಯಾರಿಗೂ ಗೊತ್ತಾಗಕೂಡದು. ನನ್ನ ಬಗ್ಗೆ ಯಾರ ಹತ್ತಿರವಾದರೂ ಹೇಳಿದ್ರೆ, ಅವತ್ತೇ ನಿನ್ನನ್ನ ಕೊಂದು ಬಿಡ್ತೀನಿ!’
‘ಚಿಂತಿಸಬೇಡ. ಯಾರಿಗೂ ಹೇಳೋಲ್ಲ.’
‘ಒಳ್ಳೆಯದು. ಹಾಗಾದರೆ ನಾನಿನ್ನು ನಿನ್ನೊಟ್ಟಿಗೇ ಜೀವಿಸ್ತೀನಿ. ನನಗೂ ಈ ಮರದ ಮೇಲೆ ಒಬ್ಬನೇ ಇದ್ದು ಬೇಜಾರಾಗಿ ಹೋಗಿದೆ.’
ಅಂದಿನಿಂದ ಬಿಪಿನ್ ನನ್ನೊಟ್ಟಿಗೆ ಬಂದ. ಪ್ರತಿರಾತ್ರಿ ನನ್ನೊಂದಿಗೇ ಮಲಗುತ್ತಿದ್ದ. ನಾವಿಬ್ಬರೂ ಚೆನ್ನಾಗಿಯೇ ಹೊಂದಿಕೊಂಡಿದ್ದೆವು. ಅವನು ತನ್ನ ಮಾತಿನಂತೆಯೇ ನಡೆದುಕೊಂಡಿದ್ದ. ಯಾವ್ಯಾವುದೋ ಮೂಲಗಳಿಂದ ಹಣ ಹರಿದುಬರಲು ಶುರುವಾಗಿತ್ತು. ಅದರಿಂದ ಒಂದಿಷ್ಟು ಜಮೀನು, ಆಸ್ತಿಯನ್ನ ಕೊಂಡೆ. ನಮ್ಮೀ ಸಹವಾಸದ ಬಗ್ಗೆ ಯಾರೊಬ್ಬರಿಗೂ ಗೊತ್ತಿರಲಿಲ್ಲ. ಆದಾಗ್ಯೂ, ನಾನು ಹೀಗೆ ದಿಢೀರ್ ಶ್ರೀಮಂತನಾಗುತ್ತಿರುವ ಕುರಿತು ನನ್ನ ಕೆಲವು ಗೆಳೆಯರಿಗೆ ಮತ್ತು ಸಂಬಂಧಿಕರಿಗೆ ಅನುಮಾನಗಳು ಶುರುವಾದವು. ಅದೇ ವೇಳೆ, ನನ್ನ ಹೆಂಡತಿಯ ಜೊತೆ ರಾತ್ರಿ ಕಳೆಯಲು ನಿರಾಕರಿಸುತ್ತಿದ್ದೆನಾದ್ದರಿಂದ ಆಕೆ ಕೂಡ ನಿರಾಸೆಗೊಂಡಿದ್ದಳು. ಆದರೇನು ಮಾಡಲಿ, ದೆವ್ವ ಪಕ್ಕದಲ್ಲಿರುವಾಗ ಆಕೆಯನ್ನ ಒಂದೇ ಹಾಸಿಗೆಯಲ್ಲಿ ಹೇಗೆ ಮಲಗಿಸಿಕೊಳ್ಳಲಿ! ಈ ಬಿಪಿನ್ ಕೂಡ ಈ ಮಲಗೋ ವಿಷಯದಲ್ಲಿ ಬಹಳ ಕಟ್ಟುನಿಟ್ಟಾಗಿದ್ದ. ಮೊದಮೊದಲು ವರಾಂಡದಲ್ಲಿ ಮಲಗುತ್ತಿದ್ದೆ. ಆಮೇಲೆ ಯಾರೋ ನಮ್ಮ ಹಸುಗಳನ್ನೆಲ್ಲ ಕದಿಯಲು ಪ್ರಯತ್ನಿಸುತ್ತಿದ್ದಾರೆ, ಅದನ್ನೆಲ್ಲ ಕಾಯಬೇಕು ಅಂತಂದು ಕೊಟ್ಟಿಗೆಯಲ್ಲಿ ಬಿಪಿನ್‌ನೊಟ್ಟಿಗೆ ಮಲಗತೊಡಗಿದೆ.
ಹೆಂಡತಿಗೆ ಅನುಮಾನ ಬಂದು, ನಾನು ಬೇರೆ ಹೆಂಗಸಿನ ಜೊತೆ ಮಲಗುತ್ತಿರಬಹುದಾ ಅಂತ ಕದ್ದು ನೋಡುತ್ತಿದ್ದಳು. ಆದರೆ ಕೊಟ್ಟಿಗೆಯಲ್ಲಿ ಹುಲ್ಲಿನ ಮೇಲೆ ಒಬ್ಬನೇ ಮಲಗುತ್ತಿದ್ದುದನ್ನು ಕಂಡು ಅವಳಿಗೆ ಏನೂ ತೋಚದಾಗಿ, ಇದನ್ನೆಲ್ಲ ತನ್ನ ತವರು ಮನೆಯವರಲ್ಲಿ ಹೇಳಿಕೊಂಡಳು. ಅವರು ಬಂದವರೇ ಇದಕ್ಕೆಲ್ಲ ಕಾರಣ ಹೇಳು ಅಂತ ಒತ್ತಾಯ ಪಡಿಸತೊಡಗಿದರು.
ಇದೇ ವೇಳೆ, ನನ್ನ ಸಂಬಂಧಿಕರು ಕೂಡ ನನ್ನೀ ದಿಢೀರ್ ಶ್ರೀಮಂತಿಕೆ ಬಗ್ಗೆ ತಿಳಿದುಕೊಳ್ಳಬಯಸಿದರು. ಎಲ್ಲರೂ ಒಂದಾಗಿ ಒಂದು ದಿನ ನನ್ನನ್ನ ಪಟ್ಟಾಗಿ ಹಿಡಿದುಕೊಂಡರು. ಇದೆಲ್ಲದಕ್ಕೂ ಕಾರಣ ಹೇಳು ಅಂತ ಬಲವಂತ ಮಾಡತೊಡಗಿದರು.
‘ನಾನು ಸಾಯೋದು ನಿಮಗೆಲ್ಲ ಇಷ್ಟನಾ?’ ತಾಳ್ಮೆ ಕಳೆದುಕೊಂಡು ಒದರಿದೆ. ‘ನನ್ನೀ ಶ್ರೀಮಂತಿಕೆಯ ಬಗ್ಗೆ ಹೇಳಿಕೊಂಡಿದ್ದೇ ಆದಲ್ಲಿ, ನನ್ನ ಸಾವು ಖಂಡಿತ!’
ಆದರೆ ಅವರೆಲ್ಲ ಸುಮ್ಮನೆ ನಕ್ಕರು. ನಾನು ಏನನ್ನೂ ಹೇಳದೆ ಎಲ್ಲವನ್ನೂ ನನ್ನೊಳಗೆ ಬಚ್ಚಿಡಲು ಪ್ರಯತ್ನಿಸುತ್ತಿದ್ದೀನಿ ಅಂದುಕೊಂಡರು. ನನ್ನ ಹೆಂಡತಿಯ ಸಂಬಂಧಿಕರು, ನಾನು ಇನ್ನೊಬ್ಬಳನ್ನ ಇಟ್ಟುಕೊಂಡಿದ್ದೀನಿ ಅಂತಲೂ ಅನುಮಾನ ಪಟ್ಟರು. ಅವರ ಒತ್ತಾಯಗಳಿಗೆಲ್ಲ ಮಣಿದು ನಾನು ಕಡೆಗೂ ನಿಜ ಹೇಳಿಬಿಟ್ಟೆ.
ಈ ಸತ್ಯವನ್ನ ಮಾತ್ರ ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. (ಯಾರು ತಾನೇ ನಂಬುತ್ತಾರೆ ಹೇಳಿ!) ಇದರ ಬಗ್ಗೆ ಯೋಚನೆ ಮಾಡಿ ಹೇಳಿ ಅಂದೆ. ಆಯ್ತು ಅಂತ ತಮ್ಮ ಮನೆಗಳಿಗೆ ಹೊರಟುಹೋದರು.
ಆ ರಾತ್ರಿ ಬಿಪಿನ್ ನನ್ನೊಟ್ಟಿಗೆ ಮಲಗಲು ಬರಲಿಲ್ಲ. ನಾನು ಹಸುಗಳ ಪಕ್ಕದಲ್ಲಿ ಒಬ್ಬನೇ ಮಲಗಿದೆ. ಎಲ್ಲಿ ನಾನು ಮಲಗಿಕೊಂಡಿದ್ದಾಗ ಆತ ನನ್ನನ್ನ ಕೊಂದುಬಿಡುತ್ತಾನೋ ಅಂತ ಹೆದರಿಕೊಂಡಿದ್ದೆ. ಆದರೆ ಆತ ತನ್ನ ಪಾಡಿಗೆ ತಾನು ಹೊರಟುಹೋಗಿದ್ದ. ನನ್ನ ಒಳ್ಳೆಯ ದಿನಗಳು ಮುಗಿದವು ಅಂದುಕೊಳ್ಳುತ್ತ ಹೆಂಡತಿಯೊಟ್ಟಿಗೆ ಮಲಗಲು ಶುರುಮಾಡಿದೆ.
ಮುಂದಿನ ಸಲ ನಾನು ಅದೇ ರಸ್ತೆಯಲ್ಲಿ ಬರುವಾಗ, ಬಿಪಿನ್ ಅದೇ ಹುಣಸೇಮರದ ಕೆಳಗೆ ಅಡ್ಡಲಾದ.
‘ಮೋಸದ ಗೆಳೆಯ’ ಜೋರಾಗಿ ಕಿರುಚಿದ. ಎತ್ತುಗಳನ್ನು ಎಳೆದು ನಿಲ್ಲಿಸಿದ. ‘ನೀನು ಬಯಸಿದ್ದನ್ನೆಲ್ಲ ಕೊಟ್ಟೆ. ಆದರೆ ನೀನು ಮೋಸ ಮಾಡಿಬಿಟ್ಟೆ!’
‘ಕ್ಷಮಿಸು. ತಪ್ಪಾಗಿದ್ದರೆ ನನ್ನನ್ನು ಕೊಂದುಬಿಡು.’
‘ಇಲ್ಲ ನಿನ್ನನ್ನ ಕೊಲ್ಲೋದಿಲ್ಲ. ನಾವು ಬಹಳ ದಿನಗಳ ಕಾಲ ಸ್ನೇಹಿತರಾಗಿದ್ದೆವು. ಆದರೆ ನಿನ್ನನ್ನ ಶಿಕ್ಷಿಸದೇ ಬಿಡೋದಿಲ್ಲ.’ ಹಾಗಂದವನೇ ಒಂದು ದಪ್ಪನೆಯ ದೊಣ್ಣೆಯನ್ನ ಎತ್ತಿಕೊಂಡು ನನಗೆ ಬಲವಾಗಿ ಮೂರೇಟು ಬಿಗಿದ. ಅಷ್ಟೇ, ನನ್ನ ಬೆನ್ನು ನೆಲ ಮುಟ್ಟುತ್ತಿತ್ತು.’
‘ಆಮೇಲೆ…..’ ಗಣಪತಿ ದೊಡ್ಡದೊಂದು ನಿಟ್ಟುಸಿರು ಬಿಟ್ಟ. ‘ಆಮೇಲೆ ನನ್ನ ಬೆನ್ನು ಮತ್ತೆ ನೆಟ್ಟಗಾಗಲೇ ಇಲ್ಲ. ನಾನು ಗೂನು ಬೆನ್ನಿನವನಾದೆ. ಹೆಂಡತಿ ನನ್ನನ್ನ ತೊರೆದು ತವರುಮನೆ ಸೇರಿಕೊಂಡಳು. ಕೆಲಸ ಮಾಡಲಾರದ ಕಾರಣ ಜಮೀನು ಹಾಳಾಯ್ತು. ಆಸ್ತಿಯನ್ನೂ ಮಾರಬೇಕಾಯಿತು. ನಾನು ಹಳ್ಳಿ ತೊರೆದು ನಗರಕ್ಕೆ ಬಂದೆ. ಒಂದೂರಿನಿಂದ ಇನ್ನೊಂದೂರಿಗೆ ಭಿಕ್ಷೆ ಬೇಡುತ್ತಾ ಅಲೆದೆ. ಈಗ ಪೀಪಲ್ ನಗರದಲ್ಲಿ ಇದ್ದೀನಿ. ಉಳಿದ ಊರಿಗಿಂತ ಇಲ್ಲಿನವರು ಹೆಚ್ಚು ಜಿಪುಣರು ಅಂತ ನನಗನ್ನಿಸುತ್ತೆ. ಖಾಸೇ ಬಿಚ್ಚೋದಿಲ್ಲ.’
ನನ್ನತ್ತ ನೋಡಿ ನಕ್ಕವನೇ, ನಾಲ್ಕು ಆಣೆಗಾಗಿ ಕಣ್ಣರಳಿಸಿ ಕೂತ.
‘ನಾನೀ ಕಥೆಯನ್ನ ನಂಬುತ್ತೀನಿ ಅಂದುಕೊಳ್ಳಬೇಡ. ಆದರೂ ಚೆನ್ನಾಗಿ ಹೇಳಿದ್ದೀಯಾ. ಹೀಗಾಗಿ, ತಕೋ ನಿನ್ನ ಹಣ.’
‘ಬೇಡ, ಬೇಡ’ ಅಂದವನೇ ಹಣ ಪಡೆಯಲು ನಿರಾಕರಿಸಿದ. ‘ನನ್ನನ್ನ ನಂಬದೇ ಹೋದರೆ ನಿಮ್ಮೀ ಹಣ ಖಂಡಿತ ಬೇಡ. ನಾಲ್ಕು ಆಣೆಗಾಗಿ ಸುಳ್ಳು ಹೇಳುವ ಆಸಾಮಿ ನಾನಲ್ಲ.’
ಕಡೆಗೂ ಕೊಟ್ಟೆ. ಈಸಿಕೊಂಡವನೇ ಶುಭದಿನ ಅನ್ನುತ್ತ ಹೊರಟ.
(ಮುಂದುವರಿಯುವುದು)
ಇವರು ಹೀಗೆಂದರು..