Archive for ಜನವರಿ, 2012

ಜ್ವರ ಬಂದ ಕಾಲಕ್ಕೆ…

ಮೊನ್ನೆ ಜ್ವರ ಬಂದಿತ್ತು! ಎಷ್ಟೆಲ್ಲ ಬಾರಿ ಗೋಗರೆದರೂ, ದಮ್ಮಯ್ಯ ಗುಡ್ಡೆ ಹಾಕಿದರೂ ಬಾರದ್ದು, ಈಗ್ಗೆ ವಾರದ ಹಿಂದೆ ಮೈಮೇಲೆ ಬಂದು ಹಳೆಯ ಗೆಳೆತಿಯ ನೆನಪಿನ ಹಾಗೇ ಬಿಟ್ಟುಬಿಡದೇ ಕಾಡಿ ಬರೋಬ್ಬರಿ ವಾರದ ನಂತರ ಗುಡ್ ಬೈ ಹೇಳಿಹೋದಾಗ ಆದ ಸಮಾಧಾನ ಅಷ್ಟಿಷ್ಟಲ್ಲ.
ಈ ಜ್ವರಕ್ಕಾಗಿ ನಾನು ಎಷ್ಟೋ ಬಾರಿ ಪರಿಪರಿಯಾಗಿ ಬೇಡಿದ್ದು ಉಂಟು. ಹಿಂದೆ ನಾನೊಂಥರ ಜ್ವರವಾದಿಯೂ ಆಗಿದ್ದೆ ಎಂಬುದು ಕಟುಸತ್ಯ. ಇದರ ಮೇಲಿನ ಮೋಹ ಬೆಳೆದದ್ದು ನನ್ನ ಬಾಲ್ಯದಿಂದಲೇ. ಜ್ವರ ಬಂದಾಗ ಸಿಗುವ ಸ್ಪೆಷಲ್ “ಟ್ರೀಟ್ ಮೆಂಟ್” ಗೆ ಆಸೆ ಪಟ್ಟು ಜ್ವರಕ್ಕಾಗಿ ಬೇಡಿದ್ದು ಉಂಟು. ನಮ್ಮ ಮನೆಗಳಲ್ಲಿ ಜ್ವರ ಬಂದವರಿಗೆ ಹಾಲು, ಬ್ರೆಡ್ಡು, ಹಣ್ಣುಗಳ ರಾಜಾತಿಥ್ಯ ಸಿಗುತಿತ್ತು. ಆಗ ನನಗೆ ಬ್ರೆಡ್ಡಿನ ಬಗ್ಗೆ  ಇನ್ನಿಲ್ಲದ ಮೋಹ. ಅದಕ್ಕಾಗಿ ಬೆಳಿಗ್ಗೆ ಗುಡ್ಡೆಯಾಕುತ್ತಿದ್ದ ಹುಲ್ಲಿಗೆ ಬೆಂಕಿ ಹಚ್ಚಿ ಮೈ ಕಾಯಿಸಿಕೊಂಡೋ, ಮಧ್ಯಾಹ್ನವೆಲ್ಲ ಬಿಸಿಲಿನಲ್ಲಿ ನಿಂತು ತಲೆ ಬಿಸಿ ಮಾಡಿಕೊಂಡೋ ಜ್ವರದ ನಾಟಕವಾಡುತ್ತಿದ್ದುದು ಉಂಟು. ಹೀಗೆಲ್ಲ ಮಾಡಿದರೂ ಏನೂ ಉಪಯೋಗಕ್ಕೆ ಬಾರದೇ ಮನೆಯವರ ಕೈಯಲ್ಲಿ ಬೈಸಿಕೊಂಡು ಪೆಚ್ಚುಮೋರೆ ಹಾಕಿ ಕೂರುತ್ತಿದ್ದುದು ಹೆಚ್ಚು.
ಆಗ ನಾನು ಐದನೇ ಕ್ಲಾಸು. ನಮ್ಮೂರಿನಲ್ಲೇ ಬಿಸಿಎಂ ಹಾಸ್ಟೆಲ್ ಇತ್ತು. ಬೇರೆ ಊರಿನವರು ಸೇರದ ಕಾರಣ ನಮ್ಮೂರಿನವರೇ ಅಲ್ಲಿ ಹೆಚ್ಚಾಗಿದ್ದರು. ಅದ್ಯಾವನೋ ಪುಣ್ಯಾತ್ಮ, ಬಿಸಿಎಂ ಹಾಸ್ಟೆಲ್ ನಲ್ಲಿ ಓದಿದವರಿಗೆ ಒಳ್ಳೆ ಭವಿಷ್ಯ ಇದೆ. ಮುಂದೆ ಸರ್ಕಾರವೇ ನೌಕರಿ ಕೊಡುತ್ತದೆ ಅಂತೆಲ್ಲ ನಮ್ಮ ಮನೆಯವರ ಬ್ರೈನ್ ವಾಶ್ ಮಾಡಿದ ಪರಿಣಾಮ ನನಗೆ ಸೆರೆವಾಸ ಆರಂಭವಾಯಿತು. ಆಗ ನಮಗೆ ದೇವರಾಗಿ ಕಾಣುತ್ತಿದ್ದುದು ಜ್ವರ! ಜ್ವರ ಬಂದವರನ್ನು ಹಾಸ್ಟೆಲ್ ನಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ. ಏನಾದರೂ ಆದೀತು ಎಂಬ ಭಯದಿಂದ, ಬೇರೆ ಮಕ್ಕಳಿಗೂ ಅಂಟೀತು ಎಂಬ ಕಾಳಜಿಯಿಂದ ಜ್ವರ ತಪ್ತರನ್ನು ಮನೆಗೆ ಕಳುಹಿಸಿಬಿಡುತ್ತಿದ್ದರು. ಮನೆಯವರಿಗೂ ನಮ್ಮಂಥವರ ಪೂರ್ವಾಪರಗಳೆಲ್ಲ ಚೆನ್ನಾಗಿ ಗೊತ್ತಿದ್ದ ಕಾರಣ ಅದೊಂದು ದಿನ ಮನೆಯಲ್ಲಿ ಇರಿಸಿಕೊಂಡು ಮಾರನೇ ದಿನವೇ ಹಳೇ ಗಂಡನ ಪಾದದೆಡೆಗೆ ತಂದೊಪ್ಪಿಸುತ್ತಿದ್ದುದು ಉಂಟು.
ಕಾಲ ಬದಲಾದಂತೆ ಹಾಸ್ಟೆಲ್ ಹತ್ತಿರವಾಯಿತು. ಸೀನಿಯರ್ ಗಿರಿ ಬಂದ ಮೇಲೆ ಮನೆಗಿಂತ ಇದೇ ವಾಸಿ ಅನಿಸಿತು. ಆದರೆ ಗಣಿತದ ಭೂತ ಬಿಡಬೇಕಲ್ಲ. ಈ ಕಬ್ಬಿಣದ ಕಡಲೆಯ ಬಗ್ಗೆ ಇದ್ದ ಫೋಬಿಯಾ ಮತ್ತೆ ಜ್ವರವನ್ನು ನೆನೆಯುವಂತೆ ಮಾಡಿತು. ಹೈಸ್ಕೂಲಿನ ಎರಡನೇ ಪಿರಿಯಡ್ ಗಣಿತದ್ದಾಗಿತ್ತು.  ಸ್ಕೂಲಿನ ಎದುರಿಗೇ ಹಾಸ್ಟೆಲ್ ಇತ್ತು. ಹೀಗಾಗಿ ಉಳಿದ ಗೆಳೆಯರೆಲ್ಲ ಬೆಳಿಗ್ಗೆ ನಾಷ್ಟಾ ತಿಂದು ಸ್ಕೂಲಿಗೆ ಹೋದರೆ ನಾವು ರಗ್ಗು ಹೊದ್ದು ಮಲಗುತ್ತಿದ್ದೆವು. ಕ್ಲಾಸು ಆರಂಭವಾದ ನಂತರ ಮುಸುಕು ತೆಗೆದು, ಆಸ್ಪತ್ರೆಗೆ ಹೋಗುವುದಾಗಿ ಅಡುಗೆಯವರಿಗೆ ವರದಿ ಒಪ್ಪಿಸಿ ಊರ ಮಧ್ಯದಲ್ಲಿನ ಕೇಬಲ್ ರೂಮಿನಲ್ಲಿ ಕ್ರಿಕೆಟ್ ನೋಡಲು ತಪ್ಪದೇ ಹಾಜರಾಗುತ್ತಿದ್ದೆವು.
ಅಲ್ಲಿಂದ ಮುಂದುವರೆದು ಮೊನ್ನೆಮೊನ್ನೆವರೆಗೂ ಈ ಬೇಡಿಕೆ ಹಾಗೇ ಮುಂದುವರಿದಿತ್ತು. ಕಡೆಗೆ, ಕಳೆದ ಡಿಸೆಂಬರ್ ನಲ್ಲಿ ಇದ್ದ ರಜೆಯೆಲ್ಲ ಕಳೆದುಹೋಗಿ ಇನ್ನು ಮೂರು ಸಿಎಲ್ಲುಗಳು ಮಾತ್ರವೇ ಉಳಿದು, ರಜೆ ಕೇಳಲು ಕಾರಣವೇ ಇಲ್ಲದಿರುವಾಗ, ಹಾಳು ಜ್ವರ ಯಾರ್ಯಾರಿಗೋ ಬಂದು ವಕ್ಕರಿಸುತ್ತದೆ. ನನಗೂ ಒಮ್ಮೆ ಇಂತಹ ಹೊತ್ತಲ್ಲಿ ಬರಬಾರದಾ? ಅಂತ ಕೊರಗಿದ್ದು ಉಂಟು. ಆಗ್ಗೆ ಯಾವಾಗಲೂ ಬರದ ಜ್ವರ, ಈ ಗದುಗಿನ ಧೂಳಿನಲ್ಲಿ ಹುದುಗಿ ಕುಂತಾಗಲೇ ಬರಬೇಕೆ?
ಮೊದಲ ದಿನ ಬಂದಾಗ ಅಷ್ಟು ಅನುಭವವಾಗಲಿಲ್ಲ. ಸಂಜೆಯಾದಂತೆ ಕೊಂಚ ಮೈ ಬಿಸಿಯಾಗಿ ಸುಸ್ತಾದರೂ ಕೆಲಸದೊತ್ತಡದಲ್ಲಿ ಅಷ್ಟು ಗೊತ್ತಾಗಲಿಲ್ಲ.. ಎರಡನೇ ದಿನವೂ ಸುಸ್ತು ಹೆಚ್ಚಾಗಿ, ಮೈ ಬಿಸಿಯಾದರೂ “ಇದುವೇ ಜ್ವರ” ಅಂತ ಮನಸ್ಸು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಮೂರನೇ ದಿನ ದೇಹ ಕೈಕೊಡುವ ಎಲ್ಲ ಲಕ್ಷಣಗಳೂ ಕಂಡುಬಂದ ಕಾರಣ, ಅನಿವಾರ್ಯವಾಗಿ ವೈದ್ಯರ ಮೊರಹೋಗಬೇಕಾಯಿತು. ಅವರೋ ಇಂಜೆಕ್ಷನ್ನಿನ ಜೊತೆಗೆ ಒಂದಿಷ್ಟು ಸಲಹೆಗಳನ್ನೂ ಕೊಟ್ಟರು. ಬಿಸಿ ನೀರನ್ನೇ ಕುಡಿಯಿರಿ, ಕಡ್ಡಾಯವಾಗಿ ವಿಶ್ರಾಂತಿ ಪಡೆಯಿರಿ ಎಂದರು. ಮತ್ತೊಬ್ಬರ ಜಾಗಕ್ಕೆ ಬಂದು ಇಲ್ಲಿನ ಏಕಸದಸ್ಯ ಬ್ಯುರೋದ ಮುಖ್ಯಸ್ಥನೂ, ಕಾರ್ಮಿಕನೂ ಆಗಿರುವಾಗ ವಿಶ್ರಾಂತಿ ಎಲ್ಲಿಂದ ಸಿಗಬೇಕು! ಹೀಗಾಗಿ ಜ್ವರದ ನಡುವೆಯೇ ಕೆಲಸ ಮುಂದುವರೆಯಿತು.
ಹೀಗೆ ಪರ ಊರಿನಲ್ಲಿ ಒಂಟಿಯಾಗಿರುವಾಗ ಜ್ವರ ಬಂದವರ ಪಾಡು ನಾಯಿಪಾಡೇ ಸರಿ. “ಬಿಸಿ ನೀರು, ಏಳನೀರು ಕುಡಿ, ಅನ್ನ ತಿನ್ನಬೇಡ, ಜಿಡ್ಡು, ಖಾದ್ಯ ಬೇಡವೇ ಬೇಡ…” ಏನೆಲ್ಲ ಪಥ್ಯಗಳು. ಗದುಗಿನ ಯಾವ ಹೋಟೆಲಿನಲ್ಲಿ ಗಂಜಿ ಹುಡುಕಲಿ! ಹೀಗಾಗಿ ಜ್ವರವಿದ್ದರೂ, ತೋಂಟದಾರ್ಯ ಮಠದ ಎದುರಿನ ನೇಸರ ಹೋಟೆಲ್ಲಿನ ಪಲಾವು, ಸಂಜೆಗಳಲ್ಲಿ ಅದೇ ಬೀದಿಯ ಗಿರಮಿಟ್ಟು, ಮಿರ್ಚಿಗಳೇ ಗತಿಯಾದವು. ಕಹಿಯಾದರೂ ಬೇರೆ ರುಚಿ ದೊರದಂತಾಯಿತು. ಬಿಸಿ ನೀರಿನ ಬದಲೂ ೨ ರೂಪಾಯಿಗೆ ೨೦ ಲೀಟರಿನ “ಶುದ್ಡ ನೀರು” ಜೊತೆಯಾಯಿತು.
ಇಂತಿಪ್ಪ ಪರಿಸ್ಠಿತಿಯೊಳಗೆ ತನಗೇ ಬೇಜಾರಾಗಿ ಜ್ವರ ನನ್ನನ್ನು ಬಿಟ್ಟುಹೋಗುವ ವೇಳೆಗೆ ವಾರ ಕಳೆದಿತ್ತು!

ಜನವರಿ 30, 2012 at 3:19 ಅಪರಾಹ್ನ 1 comment

ಒಂಟಿಯಾಗಿ ನಡೆಯುತ್ತಾ…..

ಇವತ್ತು ಮತ್ತೆ ವಾರದ್ ರಜೆ. ಮೊನ್ನೆ ಭಾನುವಾರವೂ ಹೀಗೆ ಒಂದ್ ದಿನ ರಜೆ ಸಿಕ್ಕಿತ್ತು. ಅವತ್ತು ದಿನ ಪೂರ್ತಿ ನಿದ್ದೆ ಮಾಡಿದ್ದೆ ಆಯಿತು. ಇವತ್ತು ಏನ್ ಮಾಡೋದಪ್ಪ ಅನ್ನೋ ಚಿಂತೆ. ಮುಂಚೆ ೧೫ ದಿನಕ್ಕೊಮ್ಮೆ

ನಾನೇ!

ಊರಿಗೆ ಹೋಗುವ ಅಭ್ಯಾಸ ಇತ್ತು. ಎರಡೂ ರಜೆಗಳನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುತ್ತಿದ್ದೆ. ನಂತರ ಈ ಅವಧಿ ತಿಂಗಳಿಗೆ ಏರಿಕೆಯಾಯಿತು. ಈಗ ಊರು ಮರೆತೇಹೋಗಿದೆ ಅನ್ನುವ ಹಾಗೇ ಮನಸ್ಸು ಬಂದಾಗ ಊರಿಗೆ ಹೋಗುವುದು ಅಭ್ಯಾಸವಾಗುತ್ತಿದೆ. ಆದರೆ ನಮ್ಮದಲ್ಲದ ಊರಲ್ಲಿ ಒಂಟಿಯಾಗಿ ದಿನ ಕಳೆಯುವುದಿದೆಯಲ್ಲ ಅದಕ್ಕಿಂತ ಬೇಜಾರಿನ ಹಾಗೂ ಖುಷಿಯ ಕೆಲಸ ಇನ್ನೊಂದಿಲ್ಲ. (ಬೇಕಿದ್ರೆ ಸಂಸಾರಿಗಳಲ್ಲದ, ಗರ್ಲ್ ಫ್ರೆಂಡುಗಳಿಲ್ಲದ ಹುಡುಗರನ್ನು ಕೇಳಿ ನೋಡಿ). ಮೈಸೂರಿನಲ್ಲಿ ಇರುವಾಗಲೆಲ್ಲ ಇ಼ಷ್ಟಪಟ್ಟು ಮಾಡುವ ಕೆಲಸ ಅಂದರೆ ಸಂಜೆಯಾಗುತ್ತಿದ್ದಂತೆಯೇ ಸಿಟಿ ಬಸ್ ಹತ್ತಿ ಬಸ್ ಸ್ಯ್ಟಾಂಡಿನಲ್ಲಿ ಇಳಿದು ಅಲ್ಲಿಂದ ಅರಸು ರಸ್ತೆಯಲ್ಲಿ ಎರಡೂ ಜೇಬಲ್ಲಿ ಕೈ ಹಾಕಿಕೊಂಡು (ಹಣ ಪೋಲಾಗದಿರಲಿ ಅಂತ!) ನಡೆಯುತ್ತಾ ಮಹಾರಾಣಿ ಕಾಲೇಜಿನ ಕಂಪೌಂಡ್ ಮುಟ್ಟಿ ವಾಪಸ್ ಅದೇ ರಸ್ತೆಯಲ್ಲಿ ಬರುವುದು. ಪ್ರತಿ ಸಲ ಹೀಗೆ ನಡೆವಾಗಲೂ ಕಣ್ಣಲ್ಲಿ ಹೊಸ ಅಚ್ಚರಿ ತುಂಬಿರುತ್ತದೆ.

ಈ ಅಭ್ಯಾಸ ಶುರುವಾದದ್ದು ಪದವಿ ಕಾಲೇಜಿನ ಕೊನೆಯೆರಡು ವರ್ಷಗಳಲ್ಲಿ ರಂಗಾಯಣದ ಸಹವಾಸ ಆರಂಭವಾದಂದಿನಿಂದ. ಮಧ್ಯಾಹ್ನ ಆದ ಕೂಡಲೇ ರಂಗಾಯಣ ಕ್ಯಾಂಟಿನಿನಲ್ಲಿ ವಕ್ಕರಿಸಿ ಉಂಡು-ತಿಂದು, ಸ್ಕ್ರ್ಲಿಪ್ಟ್ ರೀಡಿಂಗ್ ಅನ್ನುವ ನಾಟಕವಾಡಿ, ಮತ್ತೆ ಚಾ ಹೀರಿ ಹರಟೆ ಹೊಡೆಯುತ್ತ, ಕತ್ತಲಾದ ಮೇಲೆ ಮನೆಯ ನೆನಪಾದಾಗ ಬಸ್ ಸ್ಯ್ಟಾಂಡಿಗೆ ಇದೇ ಅರಸು ರಸ್ತೆಯಲ್ಲಿ ಹೋಗಬೇಕಿತ್ತು. ಅದೇ ಮಹಾರಾಣಿ ಕಾಲೇಜು ಹಾಸ್ಟೆಲ್ಲಿನ ಕಂಪೌಂಡ್ ಗೆ ಅಂಟಿಕೊಂಡಿರುವ ಐಷಾರಾಮಿ ಕಾಫಿ ಡೇಯ ಪಕ್ಕದಲ್ಲೇ ಇರುವ ಚಾ ದುಕಾನಿನಲ್ಲಿ ಗೆಳೆಯರೆಲ್ಲ ಬೈ-ಟು ಟೀ ಕುಡಿದು ರಸ್ತೆಗೆ ಇಳಿದೆವೆಂದರೆ ಮತ್ತೆ ನೆಲ ನೋಡುತ್ತಿದ್ದುದು ಕೆ.ಆರ್.ಸರ್ಕಲ್ ಸಮೀಪಿಸಿದ ಮೇಲೆ!

ಹುಬ್ಬಳ್ಳಿಗೆ ಬಂದ ಮೇಲೆ ಹೀಗೆ ಸೆಳೆದದ್ದು ಇಲ್ಲಿನ “ಎಂ.ಜಿ. ರೋಡ್” ಉರುಫ್ ಕೊಪ್ಪಿಕರ ರಸ್ತೆ. ಇವತ್ತು ಸಂಜೆ ಹೀಗೆ ಇದೇ ರಸ್ತೆಯಲ್ಲಿ ನಡೆಯುತ್ತಿರುವಾಗ ಇನ್ನೇನು ಡಿಕ್ಕಿ ಹೊಡೆಯುವಷ್ಟು ಸಮೀಪದಲ್ಲಿ ಇಲ್ಲಿನ ಗೆಳೆಯರೊಬ್ಬರು ಎದುರಾದರು. ಉಭಯ ಕುಶಲೋಪರಿಯ ನಂತರ “ಮದುವೆ” ಅಂದರು. ಅವರಿಗೆ ಈ ಬ್ರಹ್ಮಚರ್ಯದ ಸುಖವನ್ನೂ, ಹೀಗೆ ಅಲೆಯುವ ಹಿಂದಿರುವ ಸ್ವಾತಂತ್ರ್ಯವನ್ನೂ ವಿವರಿಸಿದೆ. ನಿಮ್ಮ ಪರಿಸ್ಥಿತಿ ನೋಡಿದ ಮೇಲೂ ಮದುವೆಯಾಗುವುದೇ, ಅದಕ್ಕಿಂತ ಹೀಗೆ ಇದ್ದುಬಿಡುವುದೇ ಲೇಸು ಅಂತೆಲ್ಲ ಛೇಡಿಸಿದೆ. ಅದಕ್ಕವರು “ತಮ್ಮ ಯಾವ್ಯಾವ ಕಾಲದಾಗ ಏನೇನ್ ಆಗ್ಬೇಕೊ ಅದೇ ಆಗ್ಬೇಕು ನೋಡು. ಅದ್ ಬಿಟ್ಟು ಹಿಂಗ ಸಂಸಾರ ಮಾಡೋ ಹೊತ್ನಾಗ ಸನ್ಯಾಸದ ಮಾತಾಡ್ತೀ ಅಂದ್ರ ನಿನ್ನಲ್ಲೇ ಏನೋ ತಾಂತ್ರಿಕ ದೋಷ ಇರಬೇಕು ಅಂತ ಮಂದಿ ತಪ್ಪು ತಿಳಿತಾರಾ” ಅಂತ ಮಾತಲ್ಲೇ ಬಾಂಬ್ ಸಿಡಿಸಿದರು. ಆಮೇಲೆ ಇಬ್ಬರೂ ರಾಜೀ ಆಗಿ ಸಮೀಪದ ಹೋಟೆಲ್ ನಲ್ಲಿ ಚಾ ಹೀರಿ ನಮ್ಮ ದಾರಿ ಹಿಡಿದದ್ದಾಯಿತು.

ಜನವರಿ 10, 2012 at 4:42 ಅಪರಾಹ್ನ 1 comment

ಮರೆತುಹೋದ ಪಾಸ್ ವರ್ಡ್ ನೆನಪಿಸಿಕೊಳ್ಳುತ್ತ

೨೦೦೯ರ ಅಕ್ಟೋಬರ್ ನಲ್ಲಿ ಕೆಂಡಸಂಪಿಗೆಯ ಬಾಗಿಲು ಮುಚ್ಚುವ ಜೊತೆಗೆ ಈ ಬ್ಲಾಗಿನ ಬಾಗಿಲೂ ಮುಚ್ಚಿತ್ತು. ಉದ್ಯೋಗವಿಲ್ಲದೆ ಬದುಕೇ ಗೊಂದಲವಾಗಿ ಹೋಗಿತ್ತು. ಆ ಹೊತ್ತಿಗೆ ಕೈ ಹಿಡಿದು ಮೇಲೆತ್ತಿದ್ದು ಪ್ರಜಾವಾಣಿ. ಅಲ್ಲಿಂದ ಆರಂಭವಾದ ವಿಶ್ವಾಸಾರ್ಹ ಪತ್ರಿಕೆಯೊಟ್ಟಿಗಿನ ಪಯಣ ಮುಂದುವರಿದಿದೆ. ಬದುಕಿನ ರೈಲು ಮೈಸೂರಿನಿಂದ ಹುಬ್ಬಳ್ಳಿಗೆ ಬಂದು ನಿಂತಿದೆ.
ಈ ನಡುವೆ ಕಳೆದುಕೊಂಡಿದ್ದು ಉಂಟು. ಗಳಿಸಿದ್ದೂ ಉಂಟು. ಹೊಸ ಜಾಗ, ಹೊಸ ಸ್ನೇಹಿತರ ಸಹವಾಸದ ಖುಷಿ ತಂದುಕೊಟ್ಟಿದ್ದರೂ ಒಮ್ಮೊಮ್ಮೆ “ಮತ್ತದೇ ಬೇಸರ ಅದೇ ಸಂಜೆ, ಅದೇ ಏಕಾಂತ”.
ಬ್ಲಾಗೂ, ಸ್ಲೇಟು-ನನ್ನ ಪಾಲಿಗೆ ಎರಡೂ ಒಂದೇ. ಬೇಕಾದ್ದನ್ನು ಬರೆಯಬಹುದು. ಬೇಡೆಂದಾಗ ಅಳಿಸಬಹುದು. ಇಲ್ಲವೇ ಸ್ಲೇಟು ಬದಲಿಸಬಹುದು. ಸರಿಸುಮಾರು ಎರಡೂವರೆ ವರ್ಷಗಳ ನಂತರ ಈಗ್ಗೆ ಇಲ್ಲಿನ ಬರಹಗಳನ್ನು ಓದುವಾಗ ಕೆಲವನ್ನು ಅಳಿಸಿಹಾಕುವ ಮನಸ್ಸೂ, ಜೊತೆಗೆ ಖುಷಿಯೂ ಆಗಿ ಗೊಂದಲವಾಗುತ್ತಿದೆ. ಇದನ್ನೆಲ್ಲ ಪಕ್ಕಕ್ಕಿಟ್ಟು, ಮತ್ತೆ ಬರೆಯುವ ಹಠ ತೊಟ್ಟಿದ್ದೇನೆ. ಮರೆತುಹೋಗಿದ್ದ ಪಾಸ್ ವರ್ಡ್ ನೆನಪಿಸಿಕೊಳ್ಳುತ್ತಿದ್ದೇನೆ.

ಜನವರಿ 8, 2012 at 8:32 ಅಪರಾಹ್ನ ನಿಮ್ಮ ಟಿಪ್ಪಣಿ ಬರೆಯಿರಿ


ಕಾಲಮಾನ

ಜನವರಿ 2012
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 1
2345678
9101112131415
16171819202122
23242526272829
3031  

ಮುಗಿಲು ಮುಟ್ಟಿದವರು

  • 9,307 hits

ಪಕ್ಷಿ ನೋಟ

Feeds