ಒಂಟಿಯಾಗಿ ನಡೆಯುತ್ತಾ…..
ಜನವರಿ 10, 2012 at 4:42 ಅಪರಾಹ್ನ 1 comment
ಇವತ್ತು ಮತ್ತೆ ವಾರದ್ ರಜೆ. ಮೊನ್ನೆ ಭಾನುವಾರವೂ ಹೀಗೆ ಒಂದ್ ದಿನ ರಜೆ ಸಿಕ್ಕಿತ್ತು. ಅವತ್ತು ದಿನ ಪೂರ್ತಿ ನಿದ್ದೆ ಮಾಡಿದ್ದೆ ಆಯಿತು. ಇವತ್ತು ಏನ್ ಮಾಡೋದಪ್ಪ ಅನ್ನೋ ಚಿಂತೆ. ಮುಂಚೆ ೧೫ ದಿನಕ್ಕೊಮ್ಮೆ
ಊರಿಗೆ ಹೋಗುವ ಅಭ್ಯಾಸ ಇತ್ತು. ಎರಡೂ ರಜೆಗಳನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುತ್ತಿದ್ದೆ. ನಂತರ ಈ ಅವಧಿ ತಿಂಗಳಿಗೆ ಏರಿಕೆಯಾಯಿತು. ಈಗ ಊರು ಮರೆತೇಹೋಗಿದೆ ಅನ್ನುವ ಹಾಗೇ ಮನಸ್ಸು ಬಂದಾಗ ಊರಿಗೆ ಹೋಗುವುದು ಅಭ್ಯಾಸವಾಗುತ್ತಿದೆ. ಆದರೆ ನಮ್ಮದಲ್ಲದ ಊರಲ್ಲಿ ಒಂಟಿಯಾಗಿ ದಿನ ಕಳೆಯುವುದಿದೆಯಲ್ಲ ಅದಕ್ಕಿಂತ ಬೇಜಾರಿನ ಹಾಗೂ ಖುಷಿಯ ಕೆಲಸ ಇನ್ನೊಂದಿಲ್ಲ. (ಬೇಕಿದ್ರೆ ಸಂಸಾರಿಗಳಲ್ಲದ, ಗರ್ಲ್ ಫ್ರೆಂಡುಗಳಿಲ್ಲದ ಹುಡುಗರನ್ನು ಕೇಳಿ ನೋಡಿ). ಮೈಸೂರಿನಲ್ಲಿ ಇರುವಾಗಲೆಲ್ಲ ಇ಼ಷ್ಟಪಟ್ಟು ಮಾಡುವ ಕೆಲಸ ಅಂದರೆ ಸಂಜೆಯಾಗುತ್ತಿದ್ದಂತೆಯೇ ಸಿಟಿ ಬಸ್ ಹತ್ತಿ ಬಸ್ ಸ್ಯ್ಟಾಂಡಿನಲ್ಲಿ ಇಳಿದು ಅಲ್ಲಿಂದ ಅರಸು ರಸ್ತೆಯಲ್ಲಿ ಎರಡೂ ಜೇಬಲ್ಲಿ ಕೈ ಹಾಕಿಕೊಂಡು (ಹಣ ಪೋಲಾಗದಿರಲಿ ಅಂತ!) ನಡೆಯುತ್ತಾ ಮಹಾರಾಣಿ ಕಾಲೇಜಿನ ಕಂಪೌಂಡ್ ಮುಟ್ಟಿ ವಾಪಸ್ ಅದೇ ರಸ್ತೆಯಲ್ಲಿ ಬರುವುದು. ಪ್ರತಿ ಸಲ ಹೀಗೆ ನಡೆವಾಗಲೂ ಕಣ್ಣಲ್ಲಿ ಹೊಸ ಅಚ್ಚರಿ ತುಂಬಿರುತ್ತದೆ.
ಈ ಅಭ್ಯಾಸ ಶುರುವಾದದ್ದು ಪದವಿ ಕಾಲೇಜಿನ ಕೊನೆಯೆರಡು ವರ್ಷಗಳಲ್ಲಿ ರಂಗಾಯಣದ ಸಹವಾಸ ಆರಂಭವಾದಂದಿನಿಂದ. ಮಧ್ಯಾಹ್ನ ಆದ ಕೂಡಲೇ ರಂಗಾಯಣ ಕ್ಯಾಂಟಿನಿನಲ್ಲಿ ವಕ್ಕರಿಸಿ ಉಂಡು-ತಿಂದು, ಸ್ಕ್ರ್ಲಿಪ್ಟ್ ರೀಡಿಂಗ್ ಅನ್ನುವ ನಾಟಕವಾಡಿ, ಮತ್ತೆ ಚಾ ಹೀರಿ ಹರಟೆ ಹೊಡೆಯುತ್ತ, ಕತ್ತಲಾದ ಮೇಲೆ ಮನೆಯ ನೆನಪಾದಾಗ ಬಸ್ ಸ್ಯ್ಟಾಂಡಿಗೆ ಇದೇ ಅರಸು ರಸ್ತೆಯಲ್ಲಿ ಹೋಗಬೇಕಿತ್ತು. ಅದೇ ಮಹಾರಾಣಿ ಕಾಲೇಜು ಹಾಸ್ಟೆಲ್ಲಿನ ಕಂಪೌಂಡ್ ಗೆ ಅಂಟಿಕೊಂಡಿರುವ ಐಷಾರಾಮಿ ಕಾಫಿ ಡೇಯ ಪಕ್ಕದಲ್ಲೇ ಇರುವ ಚಾ ದುಕಾನಿನಲ್ಲಿ ಗೆಳೆಯರೆಲ್ಲ ಬೈ-ಟು ಟೀ ಕುಡಿದು ರಸ್ತೆಗೆ ಇಳಿದೆವೆಂದರೆ ಮತ್ತೆ ನೆಲ ನೋಡುತ್ತಿದ್ದುದು ಕೆ.ಆರ್.ಸರ್ಕಲ್ ಸಮೀಪಿಸಿದ ಮೇಲೆ!
ಹುಬ್ಬಳ್ಳಿಗೆ ಬಂದ ಮೇಲೆ ಹೀಗೆ ಸೆಳೆದದ್ದು ಇಲ್ಲಿನ “ಎಂ.ಜಿ. ರೋಡ್” ಉರುಫ್ ಕೊಪ್ಪಿಕರ ರಸ್ತೆ. ಇವತ್ತು ಸಂಜೆ ಹೀಗೆ ಇದೇ ರಸ್ತೆಯಲ್ಲಿ ನಡೆಯುತ್ತಿರುವಾಗ ಇನ್ನೇನು ಡಿಕ್ಕಿ ಹೊಡೆಯುವಷ್ಟು ಸಮೀಪದಲ್ಲಿ ಇಲ್ಲಿನ ಗೆಳೆಯರೊಬ್ಬರು ಎದುರಾದರು. ಉಭಯ ಕುಶಲೋಪರಿಯ ನಂತರ “ಮದುವೆ” ಅಂದರು. ಅವರಿಗೆ ಈ ಬ್ರಹ್ಮಚರ್ಯದ ಸುಖವನ್ನೂ, ಹೀಗೆ ಅಲೆಯುವ ಹಿಂದಿರುವ ಸ್ವಾತಂತ್ರ್ಯವನ್ನೂ ವಿವರಿಸಿದೆ. ನಿಮ್ಮ ಪರಿಸ್ಥಿತಿ ನೋಡಿದ ಮೇಲೂ ಮದುವೆಯಾಗುವುದೇ, ಅದಕ್ಕಿಂತ ಹೀಗೆ ಇದ್ದುಬಿಡುವುದೇ ಲೇಸು ಅಂತೆಲ್ಲ ಛೇಡಿಸಿದೆ. ಅದಕ್ಕವರು “ತಮ್ಮ ಯಾವ್ಯಾವ ಕಾಲದಾಗ ಏನೇನ್ ಆಗ್ಬೇಕೊ ಅದೇ ಆಗ್ಬೇಕು ನೋಡು. ಅದ್ ಬಿಟ್ಟು ಹಿಂಗ ಸಂಸಾರ ಮಾಡೋ ಹೊತ್ನಾಗ ಸನ್ಯಾಸದ ಮಾತಾಡ್ತೀ ಅಂದ್ರ ನಿನ್ನಲ್ಲೇ ಏನೋ ತಾಂತ್ರಿಕ ದೋಷ ಇರಬೇಕು ಅಂತ ಮಂದಿ ತಪ್ಪು ತಿಳಿತಾರಾ” ಅಂತ ಮಾತಲ್ಲೇ ಬಾಂಬ್ ಸಿಡಿಸಿದರು. ಆಮೇಲೆ ಇಬ್ಬರೂ ರಾಜೀ ಆಗಿ ಸಮೀಪದ ಹೋಟೆಲ್ ನಲ್ಲಿ ಚಾ ಹೀರಿ ನಮ್ಮ ದಾರಿ ಹಿಡಿದದ್ದಾಯಿತು.
Entry filed under: Uncategorized. Tags: hubli, mysore, street, walking.
1 ಟಿಪ್ಪಣಿ Add your own
ನಿಮ್ಮದೊಂದು ಉತ್ತರ
Trackback this post | Subscribe to the comments via RSS Feed
1.
pbanagi | ಜನವರಿ 11, 2012 ರಲ್ಲಿ 6:47 ಫೂರ್ವಾಹ್ನ
ಹೀರುವ ಏಕಾಂತಗಳು, ಬರಿ ಸುಮ್ಮನೆ ತಿರುಗಾಟ, ಹೊತ್ತುಗೊತ್ತಿಲ್ಲದ ಹರಟೆ, ಹೀಗೆ ಎಲ್ಲವೂ ಮೆಟ್ರೋ ಧೂಳಲ್ಲಿ ಕರಗಿ ಹೋಗ್ತಿವೆ ಕಣೋ… ಮೈಸೂರ ನೆನಪುಗಳಷ್ಟೇ ಬಾಕಿ ಈಗ…. ಸಂತೆಯಲ್ಲೂ ಏಕಾಂತ ಸೃಷ್ಟಿಸಿಕೊಳ್ಳುವ ಸಂತನಲ್ಲದ್ದರಿಂದ(?) ಈ ತೊಂದ್ರೆ ಅಂತ ಬೇಕಾದರೂ ಅನ್ಬಹುದು…..!!!
– ಪ್ರವೀಣ್