ಜ್ವರ ಬಂದ ಕಾಲಕ್ಕೆ…
ಜನವರಿ 30, 2012 at 3:19 ಅಪರಾಹ್ನ 1 comment
ಮೊನ್ನೆ ಜ್ವರ ಬಂದಿತ್ತು! ಎಷ್ಟೆಲ್ಲ ಬಾರಿ ಗೋಗರೆದರೂ, ದಮ್ಮಯ್ಯ ಗುಡ್ಡೆ ಹಾಕಿದರೂ ಬಾರದ್ದು, ಈಗ್ಗೆ ವಾರದ ಹಿಂದೆ ಮೈಮೇಲೆ ಬಂದು ಹಳೆಯ ಗೆಳೆತಿಯ ನೆನಪಿನ ಹಾಗೇ ಬಿಟ್ಟುಬಿಡದೇ ಕಾಡಿ ಬರೋಬ್ಬರಿ ವಾರದ ನಂತರ ಗುಡ್ ಬೈ ಹೇಳಿಹೋದಾಗ ಆದ ಸಮಾಧಾನ ಅಷ್ಟಿಷ್ಟಲ್ಲ.
ಈ ಜ್ವರಕ್ಕಾಗಿ ನಾನು ಎಷ್ಟೋ ಬಾರಿ ಪರಿಪರಿಯಾಗಿ ಬೇಡಿದ್ದು ಉಂಟು. ಹಿಂದೆ ನಾನೊಂಥರ ಜ್ವರವಾದಿಯೂ ಆಗಿದ್ದೆ ಎಂಬುದು ಕಟುಸತ್ಯ. ಇದರ ಮೇಲಿನ ಮೋಹ ಬೆಳೆದದ್ದು ನನ್ನ ಬಾಲ್ಯದಿಂದಲೇ. ಜ್ವರ ಬಂದಾಗ ಸಿಗುವ ಸ್ಪೆಷಲ್ “ಟ್ರೀಟ್ ಮೆಂಟ್” ಗೆ ಆಸೆ ಪಟ್ಟು ಜ್ವರಕ್ಕಾಗಿ ಬೇಡಿದ್ದು ಉಂಟು. ನಮ್ಮ ಮನೆಗಳಲ್ಲಿ ಜ್ವರ ಬಂದವರಿಗೆ ಹಾಲು, ಬ್ರೆಡ್ಡು, ಹಣ್ಣುಗಳ ರಾಜಾತಿಥ್ಯ ಸಿಗುತಿತ್ತು. ಆಗ ನನಗೆ ಬ್ರೆಡ್ಡಿನ ಬಗ್ಗೆ ಇನ್ನಿಲ್ಲದ ಮೋಹ. ಅದಕ್ಕಾಗಿ ಬೆಳಿಗ್ಗೆ ಗುಡ್ಡೆಯಾಕುತ್ತಿದ್ದ ಹುಲ್ಲಿಗೆ ಬೆಂಕಿ ಹಚ್ಚಿ ಮೈ ಕಾಯಿಸಿಕೊಂಡೋ, ಮಧ್ಯಾಹ್ನವೆಲ್ಲ ಬಿಸಿಲಿನಲ್ಲಿ ನಿಂತು ತಲೆ ಬಿಸಿ ಮಾಡಿಕೊಂಡೋ ಜ್ವರದ ನಾಟಕವಾಡುತ್ತಿದ್ದುದು ಉಂಟು. ಹೀಗೆಲ್ಲ ಮಾಡಿದರೂ ಏನೂ ಉಪಯೋಗಕ್ಕೆ ಬಾರದೇ ಮನೆಯವರ ಕೈಯಲ್ಲಿ ಬೈಸಿಕೊಂಡು ಪೆಚ್ಚುಮೋರೆ ಹಾಕಿ ಕೂರುತ್ತಿದ್ದುದು ಹೆಚ್ಚು.
ಆಗ ನಾನು ಐದನೇ ಕ್ಲಾಸು. ನಮ್ಮೂರಿನಲ್ಲೇ ಬಿಸಿಎಂ ಹಾಸ್ಟೆಲ್ ಇತ್ತು. ಬೇರೆ ಊರಿನವರು ಸೇರದ ಕಾರಣ ನಮ್ಮೂರಿನವರೇ ಅಲ್ಲಿ ಹೆಚ್ಚಾಗಿದ್ದರು. ಅದ್ಯಾವನೋ ಪುಣ್ಯಾತ್ಮ, ಬಿಸಿಎಂ ಹಾಸ್ಟೆಲ್ ನಲ್ಲಿ ಓದಿದವರಿಗೆ ಒಳ್ಳೆ ಭವಿಷ್ಯ ಇದೆ. ಮುಂದೆ ಸರ್ಕಾರವೇ ನೌಕರಿ ಕೊಡುತ್ತದೆ ಅಂತೆಲ್ಲ ನಮ್ಮ ಮನೆಯವರ ಬ್ರೈನ್ ವಾಶ್ ಮಾಡಿದ ಪರಿಣಾಮ ನನಗೆ ಸೆರೆವಾಸ ಆರಂಭವಾಯಿತು. ಆಗ ನಮಗೆ ದೇವರಾಗಿ ಕಾಣುತ್ತಿದ್ದುದು ಜ್ವರ! ಜ್ವರ ಬಂದವರನ್ನು ಹಾಸ್ಟೆಲ್ ನಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ. ಏನಾದರೂ ಆದೀತು ಎಂಬ ಭಯದಿಂದ, ಬೇರೆ ಮಕ್ಕಳಿಗೂ ಅಂಟೀತು ಎಂಬ ಕಾಳಜಿಯಿಂದ ಜ್ವರ ತಪ್ತರನ್ನು ಮನೆಗೆ ಕಳುಹಿಸಿಬಿಡುತ್ತಿದ್ದರು. ಮನೆಯವರಿಗೂ ನಮ್ಮಂಥವರ ಪೂರ್ವಾಪರಗಳೆಲ್ಲ ಚೆನ್ನಾಗಿ ಗೊತ್ತಿದ್ದ ಕಾರಣ ಅದೊಂದು ದಿನ ಮನೆಯಲ್ಲಿ ಇರಿಸಿಕೊಂಡು ಮಾರನೇ ದಿನವೇ ಹಳೇ ಗಂಡನ ಪಾದದೆಡೆಗೆ ತಂದೊಪ್ಪಿಸುತ್ತಿದ್ದುದು ಉಂಟು.
ಕಾಲ ಬದಲಾದಂತೆ ಹಾಸ್ಟೆಲ್ ಹತ್ತಿರವಾಯಿತು. ಸೀನಿಯರ್ ಗಿರಿ ಬಂದ ಮೇಲೆ ಮನೆಗಿಂತ ಇದೇ ವಾಸಿ ಅನಿಸಿತು. ಆದರೆ ಗಣಿತದ ಭೂತ ಬಿಡಬೇಕಲ್ಲ. ಈ ಕಬ್ಬಿಣದ ಕಡಲೆಯ ಬಗ್ಗೆ ಇದ್ದ ಫೋಬಿಯಾ ಮತ್ತೆ ಜ್ವರವನ್ನು ನೆನೆಯುವಂತೆ ಮಾಡಿತು. ಹೈಸ್ಕೂಲಿನ ಎರಡನೇ ಪಿರಿಯಡ್ ಗಣಿತದ್ದಾಗಿತ್ತು. ಸ್ಕೂಲಿನ ಎದುರಿಗೇ ಹಾಸ್ಟೆಲ್ ಇತ್ತು. ಹೀಗಾಗಿ ಉಳಿದ ಗೆಳೆಯರೆಲ್ಲ ಬೆಳಿಗ್ಗೆ ನಾಷ್ಟಾ ತಿಂದು ಸ್ಕೂಲಿಗೆ ಹೋದರೆ ನಾವು ರಗ್ಗು ಹೊದ್ದು ಮಲಗುತ್ತಿದ್ದೆವು. ಕ್ಲಾಸು ಆರಂಭವಾದ ನಂತರ ಮುಸುಕು ತೆಗೆದು, ಆಸ್ಪತ್ರೆಗೆ ಹೋಗುವುದಾಗಿ ಅಡುಗೆಯವರಿಗೆ ವರದಿ ಒಪ್ಪಿಸಿ ಊರ ಮಧ್ಯದಲ್ಲಿನ ಕೇಬಲ್ ರೂಮಿನಲ್ಲಿ ಕ್ರಿಕೆಟ್ ನೋಡಲು ತಪ್ಪದೇ ಹಾಜರಾಗುತ್ತಿದ್ದೆವು.
ಅಲ್ಲಿಂದ ಮುಂದುವರೆದು ಮೊನ್ನೆಮೊನ್ನೆವರೆಗೂ ಈ ಬೇಡಿಕೆ ಹಾಗೇ ಮುಂದುವರಿದಿತ್ತು. ಕಡೆಗೆ, ಕಳೆದ ಡಿಸೆಂಬರ್ ನಲ್ಲಿ ಇದ್ದ ರಜೆಯೆಲ್ಲ ಕಳೆದುಹೋಗಿ ಇನ್ನು ಮೂರು ಸಿಎಲ್ಲುಗಳು ಮಾತ್ರವೇ ಉಳಿದು, ರಜೆ ಕೇಳಲು ಕಾರಣವೇ ಇಲ್ಲದಿರುವಾಗ, ಹಾಳು ಜ್ವರ ಯಾರ್ಯಾರಿಗೋ ಬಂದು ವಕ್ಕರಿಸುತ್ತದೆ. ನನಗೂ ಒಮ್ಮೆ ಇಂತಹ ಹೊತ್ತಲ್ಲಿ ಬರಬಾರದಾ? ಅಂತ ಕೊರಗಿದ್ದು ಉಂಟು. ಆಗ್ಗೆ ಯಾವಾಗಲೂ ಬರದ ಜ್ವರ, ಈ ಗದುಗಿನ ಧೂಳಿನಲ್ಲಿ ಹುದುಗಿ ಕುಂತಾಗಲೇ ಬರಬೇಕೆ?
ಮೊದಲ ದಿನ ಬಂದಾಗ ಅಷ್ಟು ಅನುಭವವಾಗಲಿಲ್ಲ. ಸಂಜೆಯಾದಂತೆ ಕೊಂಚ ಮೈ ಬಿಸಿಯಾಗಿ ಸುಸ್ತಾದರೂ ಕೆಲಸದೊತ್ತಡದಲ್ಲಿ ಅಷ್ಟು ಗೊತ್ತಾಗಲಿಲ್ಲ.. ಎರಡನೇ ದಿನವೂ ಸುಸ್ತು ಹೆಚ್ಚಾಗಿ, ಮೈ ಬಿಸಿಯಾದರೂ “ಇದುವೇ ಜ್ವರ” ಅಂತ ಮನಸ್ಸು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಮೂರನೇ ದಿನ ದೇಹ ಕೈಕೊಡುವ ಎಲ್ಲ ಲಕ್ಷಣಗಳೂ ಕಂಡುಬಂದ ಕಾರಣ, ಅನಿವಾರ್ಯವಾಗಿ ವೈದ್ಯರ ಮೊರಹೋಗಬೇಕಾಯಿತು. ಅವರೋ ಇಂಜೆಕ್ಷನ್ನಿನ ಜೊತೆಗೆ ಒಂದಿಷ್ಟು ಸಲಹೆಗಳನ್ನೂ ಕೊಟ್ಟರು. ಬಿಸಿ ನೀರನ್ನೇ ಕುಡಿಯಿರಿ, ಕಡ್ಡಾಯವಾಗಿ ವಿಶ್ರಾಂತಿ ಪಡೆಯಿರಿ ಎಂದರು. ಮತ್ತೊಬ್ಬರ ಜಾಗಕ್ಕೆ ಬಂದು ಇಲ್ಲಿನ ಏಕಸದಸ್ಯ ಬ್ಯುರೋದ ಮುಖ್ಯಸ್ಥನೂ, ಕಾರ್ಮಿಕನೂ ಆಗಿರುವಾಗ ವಿಶ್ರಾಂತಿ ಎಲ್ಲಿಂದ ಸಿಗಬೇಕು! ಹೀಗಾಗಿ ಜ್ವರದ ನಡುವೆಯೇ ಕೆಲಸ ಮುಂದುವರೆಯಿತು.
ಹೀಗೆ ಪರ ಊರಿನಲ್ಲಿ ಒಂಟಿಯಾಗಿರುವಾಗ ಜ್ವರ ಬಂದವರ ಪಾಡು ನಾಯಿಪಾಡೇ ಸರಿ. “ಬಿಸಿ ನೀರು, ಏಳನೀರು ಕುಡಿ, ಅನ್ನ ತಿನ್ನಬೇಡ, ಜಿಡ್ಡು, ಖಾದ್ಯ ಬೇಡವೇ ಬೇಡ…” ಏನೆಲ್ಲ ಪಥ್ಯಗಳು. ಗದುಗಿನ ಯಾವ ಹೋಟೆಲಿನಲ್ಲಿ ಗಂಜಿ ಹುಡುಕಲಿ! ಹೀಗಾಗಿ ಜ್ವರವಿದ್ದರೂ, ತೋಂಟದಾರ್ಯ ಮಠದ ಎದುರಿನ ನೇಸರ ಹೋಟೆಲ್ಲಿನ ಪಲಾವು, ಸಂಜೆಗಳಲ್ಲಿ ಅದೇ ಬೀದಿಯ ಗಿರಮಿಟ್ಟು, ಮಿರ್ಚಿಗಳೇ ಗತಿಯಾದವು. ಕಹಿಯಾದರೂ ಬೇರೆ ರುಚಿ ದೊರದಂತಾಯಿತು. ಬಿಸಿ ನೀರಿನ ಬದಲೂ ೨ ರೂಪಾಯಿಗೆ ೨೦ ಲೀಟರಿನ “ಶುದ್ಡ ನೀರು” ಜೊತೆಯಾಯಿತು.
ಇಂತಿಪ್ಪ ಪರಿಸ್ಠಿತಿಯೊಳಗೆ ತನಗೇ ಬೇಜಾರಾಗಿ ಜ್ವರ ನನ್ನನ್ನು ಬಿಟ್ಟುಹೋಗುವ ವೇಳೆಗೆ ವಾರ ಕಳೆದಿತ್ತು!
Entry filed under: ಅರಳೀಕಟ್ಟೆ.
1 ಟಿಪ್ಪಣಿ Add your own
ನಿಮ್ಮದೊಂದು ಉತ್ತರ
Trackback this post | Subscribe to the comments via RSS Feed
1.
SURESH | ಫೆಬ್ರವರಿ 1, 2012 ರಲ್ಲಿ 9:01 ಫೂರ್ವಾಹ್ನ
ur experience made thought of same feeling……wish u all d best..