Archive for ಏಪ್ರಿಲ್ 9, 2012

ಆಲಿಕಲ್ಲು ಮಳೆಯೂ, ಸಾತೊಡ್ಡಿ ಜಲಪಾತವೂ


ಇವತ್ತು ಸಂಜೆ ಹುಬ್ಬಳ್ಳಿಯಲ್ಲಿ ಆಲಿಕಲ್ಲು ಮಳೆ ಸುರಿಯಿತು. ಚಹಾಗೆಂದು ಆಫೀಸಿನಿಂದ ಹೊರಗಡೆ ಕಾಲಿಟ್ಟಾಗ ಆಕಾಶದಲ್ಲಿ ಒಂದಿಷ್ಟು ಮೋಡವಿತ್ತು. ಈ ಬಿರು ಬಿಸಿಲಿನಲ್ಲಿ ಮಳೆ ಬರುವುದುಂಟೆ ಎಂದು ಅನುಮಾನದಿಂದ ರಸ್ತೆಗೆ ಕಾಲಿಟ್ಟರೆ ಮಳೆ ನಮ್ಮ ನೆತ್ತಿ ಮೇಲೆ ನಗುತ್ತ ಮುತ್ತಿನ ಹನಿಗಳನ್ನು ಉದುರಿಸತೊಡಗಿತು. ನೋಡುತ್ತಿದ್ದಂತೆಯೇ ರಸ್ತೆ ತುಂಬ ಮಂಜುಗಡ್ಡೆಯ ಬಿಂದುಗಳು ರಪ್ಪನೆ ಅಪ್ಪಳಿಸತೊಡಗಿದ್ದವು. ಒಂದಿಷ್ಟು ಕ್ಷಣ ನಾವು ಎಲ್ಲವನ್ನೂ ಮರೆತು ಮಕ್ಕಳಾದೆವು. ಕಾಲಿನ ಬಳಿಗೆ ಬಂದು ಬಿದ್ದ ಕಲ್ಲನ್ನು ತೆಗೆದು ಬಾಯಿಗಿಟ್ಟುಕೊಂಡು ತಣ್ಣಗಾದೆವು.
ಬೇಸಿಗೆಯಲ್ಲಿ ಬರುವ ಮಳೆಯಲ್ಲಿ ನೆನೆಯುವ ಸುಖವಿದೆಯಲ್ಲಾ. ಅದರ ಮಜವೇ ಬೇರೆ. ಕಾದ ದೋಸೆಕಲ್ಲಿನ ಮೇಲೆ ನೀರು ಚಿಮುಕಿಸಿದಂತೆ. ಒಳಗೂ ಬಿಸಿ, ಹೊರಗೂ ಬಿಸಿ. ಇವತ್ತು ಹೀಗೆ ಮಳೆಯಲ್ಲಿ ಅರೆಬರೆ ನೆನೆದರೆ, ಮೊನ್ನೆ ಸಾತೊಡ್ಡಿ ಜಲಪಾತದಲ್ಲಿ ಮೈಮನ ತೋಯುವಷ್ಟು ನೀರಾಟವಾಡುವ ಅವಕಾಶ ಸಿಕ್ಕಿತ್ತು.
ಕಳೆದ ಶುಕ್ರವಾರ, ಪತ್ರಿಕೆಯ ಸಹ ಸಂಪಾದಕರ ಮಗಳ ಮದುವೆಗೆಂದು ಯಲ್ಲಾಪುರಕ್ಕೆ ಹೋಗಿದ್ದೆವು. ಮಧ್ಯಾಹ್ನ ಊಟ ಮುಗಿಸಿ ಹುಬ್ಬಳ್ಳಿಗೆ ವಾಪಾಸ್ ಆಗುವಾಗ ಇದಕ್ಕಿದ್ದಂತೆ ಜಲಪಾತದ ಹಾದಿಯ ಬೋರ್ಡು ಕಾಣಿಸಿತು. ಸಂಜೆ ಆಫೀಸಿಗೆ ಹೋಗಲೇಬೇಕಾದ ಅನಿವಾರ್ಯತೆ ಇದ್ದರೂ ಒಂದೆರಡು ತಾಸು ತಡವಾದರೂ ಪರವಾಗಿಲ್ಲ ಎಂದು ನಮ್ಮನ್ನು ನಾವು ಸಮಾಧಾನಿಸಿಕೊಂಡು ಸಾತೊಡ್ಡಿ ಜಲಪಾತದ ಹಾದಿ ಹಿಡಿದೆವು. ಯಲ್ಲಾಪುರದಿಂದ ಈ ಜಲಪಾತ ೨೮ ಕಿ.ಮೀ. ದೂರದಲ್ಲಿತ್ತು. ಕಾರಿನಲ್ಲಿ ಸಹೋದ್ಯೋಗಿಗಳಾದ ಎಂ.ಆರ್. ಮಂಜುನಾಥ್, ವೆಂಕಟೇಶ್, ಮನೋಜ್ ಜೊತೆಗಿದ್ದರು.
ಉತ್ತರ ಕರ್ನಾಟಕ ಉರಿ ಬಿಸಿಲಿನಲ್ಲಿ ಬೇಯುತ್ತಿದ್ದರೂ ಇಲ್ಲಿ ಮಾತ್ರ ಕಣ್ಣು ಹಾಯಿಸಿದಷ್ಟು ದೂರ ಬರಿ ಹಸಿರು. ಕಾಡು. ಕಾಡೊಳಗೊಂದು ಊರು. ಮತ್ತೆ ಕಾಡು. ಮುಗಿಲಿಗೆ ಮುತ್ತಿಡಲು ಜಿದ್ದಿಗೆ ಬಿದ್ದಿಂತಿರುವ ಮರಗಳು. ಎಲ್ಲವನ್ನೂ ಕಣ್ತುಂಬಿಕೊಳ್ಳುತ್ತ ಹೊರಟವರಿಗೆ ರಸ್ತೆಗೆ ಅಡ್ಡಡ್ಡಲಾಗಿ ಬಿದ್ದಿದ್ದ ಮರ ಎದುರಾಯಿತು. ಪುಣ್ಯಕ್ಕೆ ಅದು ರಸ್ತೆಯ ಎರಡು ದಿಬ್ಬಗಳ ಮೇಲೆ ಬಿದ್ದಿದ್ದರಿಂದ ಸಂಚಾರ ಬಂದ್ ಆಗಿರಲಿಲ್ಲ. ಅಲ್ಲೇ ಮೂಲೆಯಲ್ಲಿ ಕಾರು ನಿಲ್ಲಿಸಿ ಮುರಿದ ಮರದ ಬೆನ್ನೇರಿ ವಿಜಯ ದುಂದುಬಿ ಮೊಳಗಿಸಿ ಕೆಳಗೆ ಇಳಿದದ್ದಾಯಿತು. ಪ್ರಯಾಣ ಮುಂದುವರೆಯಿತು.
ಒಮ್ಮೆ ಹಸಿರಾಗಿ, ಇನ್ನೊಮ್ಮೆ ನೀಲಿಯಾಗಿ ಸಾಗರದಂತೆ ಕಂಗೊಳಿಸುತ್ತಿದ್ದ ಕಾಳಿ ನದಿಯ ಹಿನ್ನೀರಿನ ಪಕ್ಕದ ಕಿರಿದಾದ ಕಚ್ಚಾ ರಸ್ತೆಯಲ್ಲಿ ಕಾರು ಚಲಿಸತೊಡಗಿತ್ತು. ಕೊಂಚ ಆಯತಪ್ಪಿದರೂ ಸೀದಾ ಕಾಳಿಯ ಪಾದಕ್ಕೆ ಹೋಗಿಬೀಳುವ ಸಾಧ್ಯತೆಗಳನ್ನು ಬದಿಗೊತ್ತಿ ಕಾರು ಜಲಪಾತದ ಪ್ರವೇಶದ್ವಾರದ ಮುಂದೆ ನಿಂತಿತ್ತು. ಅಲ್ಲಿಂದ ಒಂದೊವರೆ ಕಿ.ಮೀ. ಉದ್ದದ ಕಾಲು ಹಾದಿ ನೇರ ಜಲಪಾತದ ಬುಡಕ್ಕೆ ಕರೆದೊಯ್ಯಿತು. ಬೇಸಿಗೆಯಾದ್ದರಿಂದ ನೀರು ಇರಲಿಕ್ಕಿಲ್ಲ ಎಂಬ ನಮ್ಮ ಊಹೆ ಸುಳ್ಳಾಗಿತ್ತು. ಇಂತಹ ನೀರಿನಲ್ಲಿ ಈಜುವ ಮನಸ್ಸಾಯಿತು. ನಮ್ಮಾಸೆಗೆ ಅಡ್ಡಬಂದ ಕಲ್ಲುಬಂಡೆಗಳನ್ನು ಮೆಟ್ಟಿನಿಂತು ಮುಂದುವರೆದೆವು.
ಜಲಪಾತದ ನೀರು ನೇರ ನೆತ್ತಿಗೆ ಬೀಳುತ್ತಿದ್ದರೆ ತಲೆಯೆಲ್ಲ ಸುತ್ತಿದ ಅನುಭವ. ಕಣ್ಣು ಮುಂಚಿಕೊಂಡು ಹಾಗೆ ಒಂದಿಷ್ಟು ಹೊತ್ತು ಧ್ಯಾನಿಸುತ್ತ ನಿಂತು, ಆಮೇಲೆ ಕಲ್ಲುಬಂಡೆಗಳನ್ನೇರಿ ಜಲಪಾತಕ್ಕೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನ ನಡೆಸಿದೆವು. ಕಲ್ಲುಗಳು ನಮ್ಮನ್ನು ಬೀಳಿಸಲು ಪೈಪೋಟಿ ನಡೆಸಿದ್ದರೂ ಯಶಸ್ಸು ಕಾಣಲಿಲ್ಲ.
ಅಲ್ಲೇ ಇರುವ ಭಟ್ಟರ ಮಿನಿ ಹೋಟೆಲ್ಲಿನಲ್ಲಿ ಚಾ ಹೀರಿ ಕಾರನ್ನೇರಿದೆವು. ಬರುವ ಹಾದಿಯಲ್ಲಿ ಕಾಡುಕೋಳಿ ಎದುರಿಗೆ ಸಿಕ್ಕಿ ಹೊಟ್ಟೆ ಚುರುಗುಟ್ಟಿತು. ನನ್ನೀ ಬಯಕೆ ಹೇಳಿಕೊಂಡಾಗ, ಪಕ್ಕದಲ್ಲಿದ್ದ ಮಂಜುನಾಥ್, ಹಿಂದೆ ಸ್ವತಃ ಆರ್ ಎಫ್ ಒಬ್ಬರು ಕಾಡಿನಲ್ಲಿ ಜಿಂಕೆ ಮಾಂಸ ತಿಂದ ಕಥೆಯನ್ನೂ, ಮುಂದೆ ಅವರಿಗಾದ ವ್ಯಥೆಯನ್ನೂ ಪರಿಪರಿಯಾಗಿ ಬಿಡಿಸಿಟ್ಟರು. ಹೀಗೆ ಮಾತಿಗೆ ಮಾತು ಬೆರೆಸುತ್ತಾ ಹುಬ್ಬಳ್ಳಿ ಕಚೇರಿಯ ಬಾಗಿಲು ಮುಟ್ಟುವ ಹೊತ್ತಿಗೆ ಸಂಜೆ ಆರಾಗಿತ್ತು.

ಏಪ್ರಿಲ್ 9, 2012 at 7:46 ಅಪರಾಹ್ನ 1 comment


ಕಾಲಮಾನ

ಏಪ್ರಿಲ್ 2012
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 1
2345678
9101112131415
16171819202122
23242526272829
30  

ಮುಗಿಲು ಮುಟ್ಟಿದವರು

  • 9,309 hits

ಪಕ್ಷಿ ನೋಟ

Feeds