Posts filed under ‘ಅರಳೀಕಟ್ಟೆ’

ನಿತ್ಯ ಬದುಕಿನ ಒಡನಾಡಿಗಳು…

ಮನೆ ಬದಲಿಸಿ ತಿಂಗಳಾಗುತ್ತಾ ಬಂತು. ಮೊದಲ ಮಹಡಿಯಲ್ಲಿರುವ ಮನೆಯ ಮುಂಭಾಗವೇ ಸಂಪಿಗೆ ಮರವಿದೆ. ಬಾಲ್ಕನಿಯಲ್ಲಿ ನಿಂತು ಕೈಚಾಚಿದರೆ ಸಂಪಿಗೆ ಹೂವುಗಳು ಸಿಗುತ್ತವೆ. ಅಡುಗೆಮನೆಯ ಹತ್ತಿರದ ಕೊಂಬೆಯಲ್ಲಿ ಆಗಾಗ್ಗೆ ಹೂವುಗಳು ಅರಳಿ ಒಗ್ಗರಣೆಯನ್ನೂ ಮೀರಿ ಕಂಪು ಸೂಸುತ್ತಿರುತ್ತವೆ. sampige
ಇಷ್ಟು ದೊಡ್ಡಮನೆಯ ಮುಂದೆ ಒಬ್ಬನೇ ಮರದ ನೆರಳಿನ ಕೆಳಗೆ ಚಹಾ ಹೀರುವಾಗ ಆಗಾಗ್ಗೆ ಅತಿಥಿಯೊಬ್ಬ ಕಾಣಸಿಗುತ್ತಾನೆ. ಕದ್ದು ನೋಡುತ್ತ, ಕೊಂಬೆಗಳ ತುಂಬೆಲ್ಲ ಓಡೋಡಿ ಆಡುವ ಈ ಅಳಿಲನ್ನು ಕಂಡರೆ ಏನೋ ಮುದ್ದು. ಮೊದಮೊದಲು ನನ್ನನ್ನು ಕಂಡರೆ ಹೆದರಿ ಮರ ಇಳಿಯುತ್ತಿದ್ದ ಈತ ಈಗ ಪರಿಚಿತನಾಗಿದ್ದಾನೆ. ಅಡುಗೆ ಕೋಣೆಯ ಕಿಟಕಿಯೆಡೆಗೆ ಬಂದು ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ  ಎಂದು ಬಗ್ಗಿ ನೋಡುವಷ್ಟು ಸಲಿಗೆ ಬೆಳೆಸಿಕೊಂಡಿದ್ದಾನೆ.
ಬೆಳಿಗ್ಗೆ ಎದ್ದಕೂಡಲೇ ರಾಕೆಟ್ ಹಿಡಿದು ಶಟಲ್ ಆಡಲು ಹೋಗುವುದಿದೆ. ಅರಳಿಮರದ ಕೆಳಗಿನ ರಸ್ತೆಯಲ್ಲಿ ನಮ್ಮ ಆಟ. ಹೀಗೆ ಆಡುವಾಗೆಲ್ಲ ನಮಗೆ ರಕ್ಷಣೆ ನೀಡಲೆಂದೇ ಈ ಏರಿಯಾದ ಡಾನ್ ಪರಿಚಿತನಾಗಿದ್ದಾನೆ. ನಾವು ಹೋಗುವ ವೇಳೆಗಾಗಲೇ ತನ್ನೆಲ್ಲ ಪ್ರೇಯಸಿಯರು, ಮಕ್ಕಳೊಡನೆ ರಸ್ತೆಯ ಬದಿಯಲ್ಲಿ ಚಿನ್ನಾಟವಾಡುತ್ತಿರುವ ಈತ ನಮ್ಮನ್ನು ಕಂಡ ಕೂಡಲೇ ಬಾಲ ಅಳ್ಳಾಡಿಸುತ್ತ ನಮಗೆ ದಾರಿ ಬಿಡುತ್ತಾನೆ. ಬಳಿ ಬಂದು ಮುದ್ದು ಮಾಡುವ ನೆಪದಲ್ಲಿ ತನ್ನ ಪಾಲಿನ ಬಿಸ್ಕತ್ತಿಗಾಗಿ ತಡುಕಾಡುತ್ತಾನೆ.
ಈಗಿನ್ನೂ ತನ್ನ ತರುಣಾವಸ್ತೆಯಲ್ಲಿರುವ, ಆದರೂ ಹತ್ತಾರು ಮಕ್ಕಳ ತಂದೆಯಾಗಿರುವ, ಮೈ ಪೂರ ಗೋಧಿ ಬಣ್ಣದ, ಕರಿಯ ಬಣ್ಣದ ಮೂತಿ ಹೊಂದಿರುವ ಈ ಸುಂದರ ಈ ಭಾಗದ ಶ್ವಾನಗಳ ಒಡೆಯ. ಒಂದೇ ನೆಗೆತಕ್ಕೆ ಅರಳೀಮರದ ಕಟ್ಟೆಯ ಮೇಲಣ ದೇವರ ಬೆನ್ನ ಮೇಲೆ ನೆಗೆಯುತ್ತಲೋ, ಬಳಿ ಬರುವ ಹಸುಗಳನ್ನು ಹೆದರಿಸಿ ಓಡಿಸುತ್ತಲೋ ಇಲ್ಲ ಅತ್ತಿಂತಿದ್ದ ಪುಟಿಯುವ ಕಾಕಿನ ವೇಗಕ್ಕೆ ತಕ್ಕಂತೆ ಕತ್ತು ತಿರುಗಿಸುತ್ತ ಅದನ್ನು ಹಿಡಿಯಲು ಹೊಂಚು ಹಾಕುವ ಈತ ಇರುವ ಹೊತ್ತಷ್ಟು ಪುಕ್ಕಟೆ ಮನೋರಂಜನೆ.
ಹೀಗೆ ಈ ನಾಯಿಯ ಸರ್ಕಸ್ ನಡೆದಿರುವಾಗಲೇ ಇಲ್ಲಿಗೆ ಮುದ್ದಾದ ಕರುವೊಂದರ ಆಗಮನವಾಗುತ್ತದೆ. ಒಂದೆರಡು ತಿಂಗಳು ವಯಸ್ಸಾಗಿರಬಹುದಾದ, ನಾಡಹಸುವಿನ ಜಾತಿಯ ಈ ಕರು ನಿತ್ಯ ತನ್ನ ಅಮ್ಮನೊಂದಿಗೆ ಮುಂಜಾನೆ ಅರಳೀಮರದ ಬಳಿ ಮೇಯಲು ಬರುತ್ತದೆ. ಸಂಕೋಚದ ಮುದ್ದೆಯಂಬಂತಿರುವ ಇದು ಮುಟ್ಟಹೋದಷ್ಟು ದೂರಕ್ಕೆ ಓಡುತ್ತದೆ.
ಇದೇ ಹೊತ್ತಿಗೆ ಎದುರು ಮನೆಯಿಂದ ಕರುವಿನಷ್ಟೇ ಮುದ್ದಾದ ಮಗು ತನ್ನ ಅಜ್ಜಿಯೊಡನೆ ವಾಕಿಂಗಿಗೆಂದು ರಸ್ತೆಗೆ ಬರುತ್ತದೆ. ಎರಡು ವರ್ಷವಿರಬಹುದಾದ ಈ ಹುಡುಗಿ ನಮ್ಮನ್ನು ಕಂಡು ಮಾಮ, ಅಣ್ಣ, ಅಪ್ಪ ಅಂತೆಲ್ಲ ತನಗೆ ತಿಳಿದುರುವ ಸಂಬಂಧಗಳ ಹೆಸರಿಡಿದು ಕೂಗುತ್ತದೆ. ಬಾ ಎಂದು ನಾವು ಕರೆಯುವುದು, ವಾಹನಗಳ ಓಡಾಟಕ್ಕೆ ಹೆದರಿ ಆಕೆ ಅಜ್ಜಿಯ ಪಕ್ಕದಲ್ಲೇ ನಿಲ್ಲುವುದು ನಡೆಯುತ್ತಿರುತ್ತ್ತದೆ. ನಮ್ಮ ಆಟ ನೋಡುತ್ತ ಆಕೆ, ಅವಳ ತುಂಟಾಟ ಸವಿಯುತ್ತ ನಾವು ಮುಂದುವರಿಯುತ್ತೇವೆ.
ಹೀಗೆ ನಿತ್ಯ ಓಡನಾಡಿಗಳಾಗುತ್ತಿರುವ ಆ ಅಳಿಲು, ನಾಯಿ, ಕರು ಮತ್ತು ಆ ಮಗು ಬಹುಶ್ಃ ಹಿಂದಿನ ಜನುಮದ ಗೆಳೆಯರಾಗಿರಬಹುದೇನೋ ಎಂಬ ಭ್ರಮೆ ಕಾಡುತ್ತದೆ.

.

ಮೇ 8, 2012 at 7:11 ಅಪರಾಹ್ನ 3 comments

ಜ್ವರ ಬಂದ ಕಾಲಕ್ಕೆ…

ಮೊನ್ನೆ ಜ್ವರ ಬಂದಿತ್ತು! ಎಷ್ಟೆಲ್ಲ ಬಾರಿ ಗೋಗರೆದರೂ, ದಮ್ಮಯ್ಯ ಗುಡ್ಡೆ ಹಾಕಿದರೂ ಬಾರದ್ದು, ಈಗ್ಗೆ ವಾರದ ಹಿಂದೆ ಮೈಮೇಲೆ ಬಂದು ಹಳೆಯ ಗೆಳೆತಿಯ ನೆನಪಿನ ಹಾಗೇ ಬಿಟ್ಟುಬಿಡದೇ ಕಾಡಿ ಬರೋಬ್ಬರಿ ವಾರದ ನಂತರ ಗುಡ್ ಬೈ ಹೇಳಿಹೋದಾಗ ಆದ ಸಮಾಧಾನ ಅಷ್ಟಿಷ್ಟಲ್ಲ.
ಈ ಜ್ವರಕ್ಕಾಗಿ ನಾನು ಎಷ್ಟೋ ಬಾರಿ ಪರಿಪರಿಯಾಗಿ ಬೇಡಿದ್ದು ಉಂಟು. ಹಿಂದೆ ನಾನೊಂಥರ ಜ್ವರವಾದಿಯೂ ಆಗಿದ್ದೆ ಎಂಬುದು ಕಟುಸತ್ಯ. ಇದರ ಮೇಲಿನ ಮೋಹ ಬೆಳೆದದ್ದು ನನ್ನ ಬಾಲ್ಯದಿಂದಲೇ. ಜ್ವರ ಬಂದಾಗ ಸಿಗುವ ಸ್ಪೆಷಲ್ “ಟ್ರೀಟ್ ಮೆಂಟ್” ಗೆ ಆಸೆ ಪಟ್ಟು ಜ್ವರಕ್ಕಾಗಿ ಬೇಡಿದ್ದು ಉಂಟು. ನಮ್ಮ ಮನೆಗಳಲ್ಲಿ ಜ್ವರ ಬಂದವರಿಗೆ ಹಾಲು, ಬ್ರೆಡ್ಡು, ಹಣ್ಣುಗಳ ರಾಜಾತಿಥ್ಯ ಸಿಗುತಿತ್ತು. ಆಗ ನನಗೆ ಬ್ರೆಡ್ಡಿನ ಬಗ್ಗೆ  ಇನ್ನಿಲ್ಲದ ಮೋಹ. ಅದಕ್ಕಾಗಿ ಬೆಳಿಗ್ಗೆ ಗುಡ್ಡೆಯಾಕುತ್ತಿದ್ದ ಹುಲ್ಲಿಗೆ ಬೆಂಕಿ ಹಚ್ಚಿ ಮೈ ಕಾಯಿಸಿಕೊಂಡೋ, ಮಧ್ಯಾಹ್ನವೆಲ್ಲ ಬಿಸಿಲಿನಲ್ಲಿ ನಿಂತು ತಲೆ ಬಿಸಿ ಮಾಡಿಕೊಂಡೋ ಜ್ವರದ ನಾಟಕವಾಡುತ್ತಿದ್ದುದು ಉಂಟು. ಹೀಗೆಲ್ಲ ಮಾಡಿದರೂ ಏನೂ ಉಪಯೋಗಕ್ಕೆ ಬಾರದೇ ಮನೆಯವರ ಕೈಯಲ್ಲಿ ಬೈಸಿಕೊಂಡು ಪೆಚ್ಚುಮೋರೆ ಹಾಕಿ ಕೂರುತ್ತಿದ್ದುದು ಹೆಚ್ಚು.
ಆಗ ನಾನು ಐದನೇ ಕ್ಲಾಸು. ನಮ್ಮೂರಿನಲ್ಲೇ ಬಿಸಿಎಂ ಹಾಸ್ಟೆಲ್ ಇತ್ತು. ಬೇರೆ ಊರಿನವರು ಸೇರದ ಕಾರಣ ನಮ್ಮೂರಿನವರೇ ಅಲ್ಲಿ ಹೆಚ್ಚಾಗಿದ್ದರು. ಅದ್ಯಾವನೋ ಪುಣ್ಯಾತ್ಮ, ಬಿಸಿಎಂ ಹಾಸ್ಟೆಲ್ ನಲ್ಲಿ ಓದಿದವರಿಗೆ ಒಳ್ಳೆ ಭವಿಷ್ಯ ಇದೆ. ಮುಂದೆ ಸರ್ಕಾರವೇ ನೌಕರಿ ಕೊಡುತ್ತದೆ ಅಂತೆಲ್ಲ ನಮ್ಮ ಮನೆಯವರ ಬ್ರೈನ್ ವಾಶ್ ಮಾಡಿದ ಪರಿಣಾಮ ನನಗೆ ಸೆರೆವಾಸ ಆರಂಭವಾಯಿತು. ಆಗ ನಮಗೆ ದೇವರಾಗಿ ಕಾಣುತ್ತಿದ್ದುದು ಜ್ವರ! ಜ್ವರ ಬಂದವರನ್ನು ಹಾಸ್ಟೆಲ್ ನಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ. ಏನಾದರೂ ಆದೀತು ಎಂಬ ಭಯದಿಂದ, ಬೇರೆ ಮಕ್ಕಳಿಗೂ ಅಂಟೀತು ಎಂಬ ಕಾಳಜಿಯಿಂದ ಜ್ವರ ತಪ್ತರನ್ನು ಮನೆಗೆ ಕಳುಹಿಸಿಬಿಡುತ್ತಿದ್ದರು. ಮನೆಯವರಿಗೂ ನಮ್ಮಂಥವರ ಪೂರ್ವಾಪರಗಳೆಲ್ಲ ಚೆನ್ನಾಗಿ ಗೊತ್ತಿದ್ದ ಕಾರಣ ಅದೊಂದು ದಿನ ಮನೆಯಲ್ಲಿ ಇರಿಸಿಕೊಂಡು ಮಾರನೇ ದಿನವೇ ಹಳೇ ಗಂಡನ ಪಾದದೆಡೆಗೆ ತಂದೊಪ್ಪಿಸುತ್ತಿದ್ದುದು ಉಂಟು.
ಕಾಲ ಬದಲಾದಂತೆ ಹಾಸ್ಟೆಲ್ ಹತ್ತಿರವಾಯಿತು. ಸೀನಿಯರ್ ಗಿರಿ ಬಂದ ಮೇಲೆ ಮನೆಗಿಂತ ಇದೇ ವಾಸಿ ಅನಿಸಿತು. ಆದರೆ ಗಣಿತದ ಭೂತ ಬಿಡಬೇಕಲ್ಲ. ಈ ಕಬ್ಬಿಣದ ಕಡಲೆಯ ಬಗ್ಗೆ ಇದ್ದ ಫೋಬಿಯಾ ಮತ್ತೆ ಜ್ವರವನ್ನು ನೆನೆಯುವಂತೆ ಮಾಡಿತು. ಹೈಸ್ಕೂಲಿನ ಎರಡನೇ ಪಿರಿಯಡ್ ಗಣಿತದ್ದಾಗಿತ್ತು.  ಸ್ಕೂಲಿನ ಎದುರಿಗೇ ಹಾಸ್ಟೆಲ್ ಇತ್ತು. ಹೀಗಾಗಿ ಉಳಿದ ಗೆಳೆಯರೆಲ್ಲ ಬೆಳಿಗ್ಗೆ ನಾಷ್ಟಾ ತಿಂದು ಸ್ಕೂಲಿಗೆ ಹೋದರೆ ನಾವು ರಗ್ಗು ಹೊದ್ದು ಮಲಗುತ್ತಿದ್ದೆವು. ಕ್ಲಾಸು ಆರಂಭವಾದ ನಂತರ ಮುಸುಕು ತೆಗೆದು, ಆಸ್ಪತ್ರೆಗೆ ಹೋಗುವುದಾಗಿ ಅಡುಗೆಯವರಿಗೆ ವರದಿ ಒಪ್ಪಿಸಿ ಊರ ಮಧ್ಯದಲ್ಲಿನ ಕೇಬಲ್ ರೂಮಿನಲ್ಲಿ ಕ್ರಿಕೆಟ್ ನೋಡಲು ತಪ್ಪದೇ ಹಾಜರಾಗುತ್ತಿದ್ದೆವು.
ಅಲ್ಲಿಂದ ಮುಂದುವರೆದು ಮೊನ್ನೆಮೊನ್ನೆವರೆಗೂ ಈ ಬೇಡಿಕೆ ಹಾಗೇ ಮುಂದುವರಿದಿತ್ತು. ಕಡೆಗೆ, ಕಳೆದ ಡಿಸೆಂಬರ್ ನಲ್ಲಿ ಇದ್ದ ರಜೆಯೆಲ್ಲ ಕಳೆದುಹೋಗಿ ಇನ್ನು ಮೂರು ಸಿಎಲ್ಲುಗಳು ಮಾತ್ರವೇ ಉಳಿದು, ರಜೆ ಕೇಳಲು ಕಾರಣವೇ ಇಲ್ಲದಿರುವಾಗ, ಹಾಳು ಜ್ವರ ಯಾರ್ಯಾರಿಗೋ ಬಂದು ವಕ್ಕರಿಸುತ್ತದೆ. ನನಗೂ ಒಮ್ಮೆ ಇಂತಹ ಹೊತ್ತಲ್ಲಿ ಬರಬಾರದಾ? ಅಂತ ಕೊರಗಿದ್ದು ಉಂಟು. ಆಗ್ಗೆ ಯಾವಾಗಲೂ ಬರದ ಜ್ವರ, ಈ ಗದುಗಿನ ಧೂಳಿನಲ್ಲಿ ಹುದುಗಿ ಕುಂತಾಗಲೇ ಬರಬೇಕೆ?
ಮೊದಲ ದಿನ ಬಂದಾಗ ಅಷ್ಟು ಅನುಭವವಾಗಲಿಲ್ಲ. ಸಂಜೆಯಾದಂತೆ ಕೊಂಚ ಮೈ ಬಿಸಿಯಾಗಿ ಸುಸ್ತಾದರೂ ಕೆಲಸದೊತ್ತಡದಲ್ಲಿ ಅಷ್ಟು ಗೊತ್ತಾಗಲಿಲ್ಲ.. ಎರಡನೇ ದಿನವೂ ಸುಸ್ತು ಹೆಚ್ಚಾಗಿ, ಮೈ ಬಿಸಿಯಾದರೂ “ಇದುವೇ ಜ್ವರ” ಅಂತ ಮನಸ್ಸು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಮೂರನೇ ದಿನ ದೇಹ ಕೈಕೊಡುವ ಎಲ್ಲ ಲಕ್ಷಣಗಳೂ ಕಂಡುಬಂದ ಕಾರಣ, ಅನಿವಾರ್ಯವಾಗಿ ವೈದ್ಯರ ಮೊರಹೋಗಬೇಕಾಯಿತು. ಅವರೋ ಇಂಜೆಕ್ಷನ್ನಿನ ಜೊತೆಗೆ ಒಂದಿಷ್ಟು ಸಲಹೆಗಳನ್ನೂ ಕೊಟ್ಟರು. ಬಿಸಿ ನೀರನ್ನೇ ಕುಡಿಯಿರಿ, ಕಡ್ಡಾಯವಾಗಿ ವಿಶ್ರಾಂತಿ ಪಡೆಯಿರಿ ಎಂದರು. ಮತ್ತೊಬ್ಬರ ಜಾಗಕ್ಕೆ ಬಂದು ಇಲ್ಲಿನ ಏಕಸದಸ್ಯ ಬ್ಯುರೋದ ಮುಖ್ಯಸ್ಥನೂ, ಕಾರ್ಮಿಕನೂ ಆಗಿರುವಾಗ ವಿಶ್ರಾಂತಿ ಎಲ್ಲಿಂದ ಸಿಗಬೇಕು! ಹೀಗಾಗಿ ಜ್ವರದ ನಡುವೆಯೇ ಕೆಲಸ ಮುಂದುವರೆಯಿತು.
ಹೀಗೆ ಪರ ಊರಿನಲ್ಲಿ ಒಂಟಿಯಾಗಿರುವಾಗ ಜ್ವರ ಬಂದವರ ಪಾಡು ನಾಯಿಪಾಡೇ ಸರಿ. “ಬಿಸಿ ನೀರು, ಏಳನೀರು ಕುಡಿ, ಅನ್ನ ತಿನ್ನಬೇಡ, ಜಿಡ್ಡು, ಖಾದ್ಯ ಬೇಡವೇ ಬೇಡ…” ಏನೆಲ್ಲ ಪಥ್ಯಗಳು. ಗದುಗಿನ ಯಾವ ಹೋಟೆಲಿನಲ್ಲಿ ಗಂಜಿ ಹುಡುಕಲಿ! ಹೀಗಾಗಿ ಜ್ವರವಿದ್ದರೂ, ತೋಂಟದಾರ್ಯ ಮಠದ ಎದುರಿನ ನೇಸರ ಹೋಟೆಲ್ಲಿನ ಪಲಾವು, ಸಂಜೆಗಳಲ್ಲಿ ಅದೇ ಬೀದಿಯ ಗಿರಮಿಟ್ಟು, ಮಿರ್ಚಿಗಳೇ ಗತಿಯಾದವು. ಕಹಿಯಾದರೂ ಬೇರೆ ರುಚಿ ದೊರದಂತಾಯಿತು. ಬಿಸಿ ನೀರಿನ ಬದಲೂ ೨ ರೂಪಾಯಿಗೆ ೨೦ ಲೀಟರಿನ “ಶುದ್ಡ ನೀರು” ಜೊತೆಯಾಯಿತು.
ಇಂತಿಪ್ಪ ಪರಿಸ್ಠಿತಿಯೊಳಗೆ ತನಗೇ ಬೇಜಾರಾಗಿ ಜ್ವರ ನನ್ನನ್ನು ಬಿಟ್ಟುಹೋಗುವ ವೇಳೆಗೆ ವಾರ ಕಳೆದಿತ್ತು!

ಜನವರಿ 30, 2012 at 3:19 ಅಪರಾಹ್ನ 1 comment

ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆಯ ನೆನಪು

ನಾನಾಗ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಅದೇ ವೇಳೆ ಜೊತೆಗೊಬ್ಬ ಗೆಳೆಯನಿದ್ದ. ನನಗಿಂತ ಮೂರು ವರ್ಷ ದೊಡ್ಡವ. ನನ್ನೂರಿನ ಕಾಲೇಜಿನಲ್ಲೇ ಎರಡನೇ ಪಿಯುಸಿ ಓದುತ್ತಿದ್ದ. ನಮ್ಮಲ್ಲಿ ಹೈಸ್ಕೂಲು, ಕಾಲೇಜು ಎಲ್ಲ ಒಟ್ಟಿಗೆ ಇದ್ದಿದ್ದರಿಂದ ದಿನ ಒಟ್ಟಿಗೆ ಬೆರೆಯುವಂತ ಅವಕಾಶ. ಸ್ಕೂಲಿನಲ್ಲಿ ಅಷ್ಟೇನು ಭೇಟಿಯಾಗದಿದ್ದರೂ, ನಾಲ್ಕರ ನಂತರ ತಪ್ಪದೇ ಸೇರುತ್ತಿದ್ದೆವು.  ಮಾಸ್ಟರ್, ಮೇಡಮ್ಮುಗಳೆಲ್ಲ ಈಚೆ ಹೊರಟು, ಗೇಟಿಗೆ ಬೀಗ ಬಿದ್ದದ್ದೇ ತಡ ಅದರ ಮೇಲೆ ನೆಗೆಯುತ್ತಾ ಮೈದಾನ ಹೊಕ್ಕವೆಂದರೇ ಅಲ್ಲಿಂದ ಹೊರಗೆ ಬರುತ್ತಿದ್ದುದು ಕತ್ತಲಾದ ಮೇಲೆ.

ಪ್ರತಿ ಸಂಜೆ ಅಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. ನಮ್ಮ ಪಾಲಿಗೆ ಭಾರೀ ಬೆಟ್ಟಿಂಗಿನ ತಾಣ. ಗೆಳೆಯ ಊರಿನಲ್ಲೇ ಒಳ್ಳೆಯ ಕ್ರಿಕೆಟ್ ಆಟಗಾರನಾಗಿದ್ದ. ಇದ್ದಬದ್ದವರನ್ನೆಲ್ಲ ಒಟ್ಟುಗೂಡಿಸಿ ಸಾಮರ್ಥ್ಯಕ್ಕೆ ಅನುಸಾರಗಾಗಿ ತಂಡ ಹಂಚಲಾಗುತ್ತಿತ್ತು. ಕೆಲವೊಮ್ಮೆ ದೊಡ್ಡವರೆಲ್ಲ ಸೇರಿಕೊಂಡಾಗ ನನ್ನಂತ ಹುಡುಗರಿಗೆ ಕೋಕ್.

ಆರು ಓವರುಗಳಿಂದ ಹೆಚ್ಚೆಂದರೆ ಹತ್ತು-ಹನ್ನೆರಡು ಓವರುಗಳ ಪಂದ್ಯ. (ಈಗಿನ ಟ್ವೆಂಟಿ೨೦ ಹಾಗೇ) ದಿನಕ್ಕೆ ಮೂರು-ನಾಲ್ಕು ಪಂದ್ಯಗಳು ನಡೆಯುತ್ತಿತ್ತು. ಪ್ರತಿ ಮ್ಯಾಚಿಗೂ ಐವತ್ತು-ನೂರು ರೂಪಾಯಿಗಳಷ್ಟು ಬೆಟ್ಟಿಂಗ್. ಗೆಳೆಯ ಒಳ್ಳೆಯ ಆಟಗಾರ. ಅವನ ಸಾಮರ್ಥ್ಯ ನಂಬಿಕೊಂಡೇ ನಮ್ಮೆಲ್ಲರ ಹಣ ಹೂಡಿಕೆಯಾಗುತ್ತಿತ್ತು. ಲಾಭ ಅಲ್ಲದಿದ್ದರೂ ನಷ್ಟವಾಗಿದ್ದು ಮಾತ್ರ ಗೊತ್ತಿಲ್ಲ. ಅವತ್ತಿನ ಖರ್ಚುಗಳಿಗಂತೂ ಮೋಸವಾಗುತ್ತಿರಲಿಲ್ಲ.

ಆಟ ಮುಗಿದ ಕೂಡಲೇ ಊರ ಒಳಗೊಂದು ಸುತ್ತು. ರಾಮಮಂದಿರದ ಒಳಗೊಮ್ಮೆ ಹೋಗಿ ರಾಮ ಇದ್ದಾನೆಯೇ ಅಂತ ನೋಡಿಕೊಂಡು ಬರುವುದು ಕಡ್ಡಾಯ. ಅದಾದ ಬಳಿಕ ಊರಿನ ಏಕೈಕ ಪಾನಿಪೂರಿ ಅಂಗಡಿಯ ಮೇಲೆ ನಮ್ಮ ಠಿಕಾಣಿ. ಖಾಯಂ ಗಿರಾಕಿಗಳಾದ್ದರಿಂದ ಸ್ವಲ್ಪ ಹೆಚ್ಚಿಗೆ ಈರುಳ್ಳಿ ಹಾಕಿ, ಮೀಡಿಯಂ ಖಾರ ಸೇರಿಸಿ ಕೊಡಬೇಕು ಅನ್ನುವುದು ಅಲಿಖಿತ ನಿಯಮ.

ಹಾಗೇ ಬಸ್ ಸ್ಟ್ಯಾಂಡಿನ ಅರಳೀಕಟ್ಟೆ ಹತ್ತಿರಕೊಮ್ಮೆ ಬಂದು, ಆಸ್ಪತ್ರೆಗೂ ಒಂದು ಭೇಟಿ ಕೊಡುವ ಹೊತ್ತಿಗೆ ಸಂಜೆ ಏಳರ ಸಮಯ. ಹಾಗೇ ಅಂಗಡಿಯತ್ತ ಹೋದವರೇ ಎರಡು ಲೀಟರ್ ಕಡಲೇಪುರಿಯೊಂದಿಗೆ ಒಂದಿಷ್ಟು ಖಾರ ಬೂಂದಿ ಬೆರೆಸಿಕೊಂಡು, ಜೊತೆಗೆ ಮೆಣಸಿನಕಾಯಿ ಬಜ್ಜಿ ಹಿಡಿದು ಮತ್ತೆ ಕಾಲೇಜಿನ ಗೇಟು ಹಾರಿದವೆಂದರೆ ಇನ್ನು ಈಚೆ ಬರುವುದು ರಾತ್ರಿ ಒಂಭತ್ತಕ್ಕೆ. ಈ ಮಧ್ಯೆ ನಮ್ಮ ಮಾತಿಗೆ ಬಾರದ ವಿಷಯವಿಲ್ಲ.

ಆಗ ನಮ್ಮೂರಲ್ಲಿ ವರ್ಷಕ್ಕೊಮ್ಮೆ ಗೋಲಿ ಸೀಜನ್ನು ಅಂತ ಬರುತ್ತಿತ್ತು. ಆಗಲಂತೂ ಸಾಕ್ಷಾತ್ ಲಕ್ಷ್ಮಿ ಒಲಿದಂಥ ಅನುಭವ. ಸೀಜನ್ನು ಇರುವ ತನಕ ಸಂಪಾದನೆಗೆ ಕುತ್ತಿಲ್ಲ.

ಹೀಗಿರುವ ನಮಗೆ ಒಮ್ಮೆ ವಾಕ್ ಮನ್ ಕೊಂಡುಕೊಳ್ಳುವ ಯೋಗ ಸಹ ಕೂಡಿಬಂತು. ಆದರೆ ಕೇಳೋದಕ್ಕೆ ಮಾತ್ರ ಒಂದೂ ಕ್ಯಾಸೆಟ್ಟುಗಳಿರದೇ ತೊಂದರೆಯಾಗಿತ್ತು. ಅದೇ ಹೊತ್ತಿನಲ್ಲಿ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ  ‘ಸ್ಪರ್ಶ’ ಚಿತ್ರ ಬಿಡುಗಡೆಯಾಗಿತ್ತು. ಆವತ್ತಿಗೆ ನಮ್ಮ ಮಟ್ಟಿಗೆ ಅತ್ಯದ್ಭುತ ಅನ್ನುವಂಥ ಸಂಗೀತ. ಅದರದ್ದೊಂದು ಕ್ಯಾಸೆಟ್ ರೆಕಾರ್ಡ್ ಮಾಡಿಸಿಕೊಂಡು ಬರಬೇಕು ಅಂತ ಹಳೆಯದ್ದೊಂದು ಕ್ಯಾಸೆಟ್ ಹಿಡಿದು ಹನ್ನೆರಡು ಕಿ.ಮೀ ಸೈಕಲ್ ಹೊಡೆದು ಎರಡೆರಡೂ ದಿನ ಸುತ್ತಿ, ಕಡೆಗೂ  ಕ್ಯಾಸೆಟ್ಟು ಕೈ ಸೇರಿತ್ತು.

‘ಚಂದಕ್ಕಿಂತ ಚಂದ ನೀನೆ ಸುಂದರ…’ ಹಾಡೆಂದರೆ ಪ್ರಾಣ ಬಿಡುವಷ್ಟು ಇಷ್ಟ. ಪಂಕಜ್ ಉದಾಸ್ ಅನ್ನುವ ಗಾಯಕನ ಹೆಸರು ನೆನಪಿನಲ್ಲಿ ಉಳಿದುಕೊಂಡಿದ್ದು ಇದೇ ಹಾಡಿನಿಂದ. ಹಾಡು ಅದೆಷ್ಟು ಮೆಚ್ಚುಗೆಯಾಗಿತ್ತು ಎಂದರೆ, ಗೆಳೆಯ ಇದನ್ನ ಬಿಡದೇ ಹಾಡಿ ಹಾಡಿ, ಕಡೆಗೆ ಅಪ್ಪಪಕ್ಕದವರಿಗೆಲ್ಲ ನಾವು ಈ ಹಾಡಿನಿಂದಲೇ ಜನಪ್ರಿಯವಾಗಿ, ಅವ ಅದನ್ನೇ ಕಾಲೇಜಿನ ಚಿತ್ರಗೀತೆ ಸ್ಪರ್ಧೆಯಲ್ಲೂ ಹಾಡಿ, ತೀರ್ಪುಗಾರರು ತಾಳಲಾರದೇ ಎಂಬಂತೆ ಬಹುಮಾನವನ್ನೇ ಘೋಷಿಸಿದ್ದು ಉಂಟು. ಆಗಂತೂ ನಮ್ಮ ಸಂಭ್ರಮಕ್ಕೆ ಎಲ್ಲೆ ಇರಲಿಲ್ಲ. ಚಿತ್ರದ ಬಹುತೇಕ ಹಾಡುಗಳು ಕಂಠಪಾಠ ಆಗಿದ್ದವು.

ಊರಿಗೊಂದೇ ವಾಕ್ ಮನ್ ಅನ್ನುವ ಕಾರಣಕ್ಕೋ ಏನೋ ನಮಗೆ ಈ ಎಲ್ಲದರ ಜೊತೆಗೇ ಕೊಂಚ ಲೆವಲ್ಲು, ಅಹಮ್ಮು ಎಲ್ಲ ಬಂದಿದ್ದು ಸುಳ್ಳಲ್ಲ. ಆಮೇಲೆ ಅದ್ಯಾಕೋ ಸ್ಪರ್ಶವೂ ಬೇಜಾರಿಡಿಸತೊಡಗಿ ಬೇರೆ ಹಾಡುಗಳಿಗಾಗಿ ಹುಡುಕಾಟ ನಡೆಸಿದೆವು. ಅದೇ ಹೊತ್ತಿಗೆ ಆಗ ಜನಪ್ರಿಯವಾಗುತ್ತಿದ್ದ ‘soldier’ ಅನ್ನುವ ಹಿಂದಿ ಸಿನಿಮಾ ಹಾಡುಗಳು ಸಿಕ್ಕು ಒಂದಿಷ್ಟು ದಿನ ಹಿಂದಿ ಹಾಡುಗಳನ್ನ ಗುನುಗುವಂತಾಯ್ತು.

ಆಮೇಲೆ ಅವನು ಪಿಯುಸಿ ಮುಗಿಸಿ ಡಿಗ್ರಿ ಓದಿಗೆ ಅಂತ ಮೈಸೂರಿಗೆ ಹೊರಟ. ಆಮೇಲೆ ನನ್ನ ರೀತಿನೀತಿಗಳೂ ಬದಲಾಗುತ್ತಾ ಹೋದವು.

ಅದೇ ಗೆಳೆಯ ನಿನ್ನೆ ಭಾನುವಾರ ಊರಿನಲ್ಲಿ ಮತ್ತೆ ಸಿಕ್ಕಿದ್ದ. ಆತನೀಗ ಹೈಸ್ಕೂಲೊಂದರಲ್ಲಿ ಟೀಚರ್. ಹೀಗೇ ಸಿಕ್ಕವರೇ ನೇರ ಬೈಕ್ ಏರಿ ಹೊಳೆಯತ್ತ ಹೋಗಿ, ದಡದಲ್ಲಿ ಕೂತು ಸಂಜೆಯಾಗುವವರೆಗೂ ಅದುಇದು ಅಂತ ಮಾತನಾಡುತ್ತ, ಕತ್ತಲಾದ ಮೇಲೆ ಊರ ಕಡೆ ಬಂದಿದ್ದೆವು.

ಇಲ್ಲಿ ಮತ್ತೆ ರೂಮಿಗೆ ಬಂದು, ರಾತ್ರಿ ಹನ್ನೆರಡರ ಹೊತ್ತಲ್ಲಿ, ಯಾವುದೋ ಹಾಡಿನ ಗುಚ್ಛಗಳ ನಡುವೆ ಅದೇ ಸ್ಪರ್ಶದ ಹಾಡುಗಳು ಸಿಕ್ಕು ಮತ್ತೆ ಹಳೆಯದ್ದೆಲ್ಲ ನೆನಪಾಗುತ್ತಿವೆ. ಮತ್ತೆ ಮೆಲುಕು ಹಾಕುವಂಥ ಗೀತೆಗಳು. ಹಂಸಲೇಖ ಇಂತಹದ್ದೊಂದು ಮಾಂತ್ರಿಕ ಸಂಗೀತ ಚಿತ್ರ ನೀಡಿದ್ದು ಅದೇ ಕೊನೆ ಇರಬೇಕು, ಆದಾದ ಮೇಲೆ ಹೇಳಿಕೊಳ್ಳುವಂತ ಸಂಗೀತ ಅವರಿಂದ ಬಂದಿಲ್ಲ ಅನ್ನಿಸುತ್ತೆ.

ಇದನ್ನೆಲ್ಲ ನೆನೆದು, ಮತ್ತೆ ಹಾಡು ಗುನುಗುತ್ತಾ ಹೊರಗೆ ಬಾಲ್ಕನಿಯಲ್ಲೊಮ್ಮೆ ಬಂದರೆ ಇಲ್ಲಿ ಕಗ್ಗತ್ತಲು. ಆದರೂ ತಣ್ಣನೆ ಮೈ ತಬ್ಬಿದಂತೆ ಬೀಸುವ ಗಾಳಿ ಹಾಯೆನಿಸುತ್ತಿದೆ. ‘ಈಗೀಗ ನೀನು ನಿಶಾಚರಿ ಆಗುತ್ತಿದ್ದೀಯಾ ಗುರುವೇ’ ಅಂತ ಗೆಳೆಯರು ಎಚ್ಚರಿಸುತ್ತಾ ಇರುವುದು ನೆನಪಿಗೆ ಬಂದು ಸಣ್ಣಗೊಂದು ನಗುವೂ ತೇಲುತ್ತಿದೆ.  ಹಾಗೇ ಗಾಳಿಗೆ ಮೈ ಒಡ್ಡಿಕೊಂಡೇ ನಿಂತಿದ್ದೇನೆ.

ಫೆಬ್ರವರಿ 23, 2009 at 8:00 ಅಪರಾಹ್ನ 2 comments

ಈ ಹೊತ್ತಿಗೆ ಈ ಕವಿತೆಯ ನೆನಪು

l1

ಒಲವೆಂಬ ಹೊತ್ತಿಗೆಯ ನೋದಬಯಸುತ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ, ಹುಚ್ಚ!
ಹಗಲಿರುಳು ದುಡಿದರೂ, ಹಲವು ಜನುಮ ಕಳೆದರೂ
ನೀ ತೆತ್ತಲಾರೆ ಬರಿಯ ಅಂಚೆವೆಚ್ಚ!

ಬಹುಶಃ ಬೇಂದ್ರೆಯದ್ದಿದ್ದಿರಬೇಕು. ಹತ್ತನೇ ತರಗತಿಯಲ್ಲಿದ್ದಾಗ ಡೈರಿಯ ಮೊದಲ ಪುಟದಲ್ಲಿ ಬರೆದುಕೊಂಡಿದ್ದೆ. ನಿಜಕ್ಕೂ ಅದರರ್ಥ ತಿಳಿದೇ ಬರೆದುಕೊಂಡಿದ್ದನಾ? ಗೊತ್ತಿಲ್ಲ. ಹಾಗೇ ಬರೆದುಕೊಂಡ ಮೇಲೆ ಅದೆಷ್ಟೋ ಬಾರಿ ಇದನ್ನ ಓದಿಕೊಂಡಿದ್ದೇನೆ. ಓದಿದ ಪ್ರತಿ ಸಾರಿಯೂ ಖುಷಿ ಪಟ್ಟುಕೊಂಡಿದ್ದೇನೆ.

ಈ ಅಪರಾತ್ರಿಯಲ್ಲಿ, ನೆನಪುಗಳು ಒತ್ತೊತ್ತಿ ಬರುತ್ತಿರುವ ಹೊತ್ತಲ್ಲಿ ಈ ಕವಿತೆ ಮತ್ತೆ ಮತ್ತೆ ಕಾಡುತ್ತಿದೆ. ಹಾಗೇ ಎದ್ದುಕುಂತವನೇ ಹೊತ್ತಲ್ಲದ ಹೊತ್ತು ಅನ್ನುವ ಹೊತ್ತಲ್ಲೇ ಇದನ್ನೆಲ್ಲ ಬ್ಲಾಗಿಸುತ್ತಿದ್ದೇನೆ. ಈ ಹೊತ್ತಿಗೆ ಈ ಕವಿತೆಯ ನೆನಪು.

ಫೆಬ್ರವರಿ 13, 2009 at 7:42 ಅಪರಾಹ್ನ 2 comments

ಇನ್ನು ಮುಂದಾದರೂ ಬರೆಯಬೇಕು ಅಂತ….

ತಿಂಗಳಿಂದ ಏನನ್ನೂ ಬರೆಯಲಾಗಿಲ್ಲ. ಬರೆಯಬೇಕು ಅಂತ ಅನ್ನಿಸಲಿಲ್ಲ. ಅನ್ನಿಸಿದರೂ ಅದಕ್ಕೆ ಮನಸ್ಸು, ಮನಸೇ ಮಾಡಲಿಲ್ಲ. ಮೈ ಮನಸ್ಸಿಗೂ ರಿಸೆಷನ್ನಿನ ಗರ ಬಡಿದಂತಾಗಿ ಇನ್ನಿಲ್ಲದ ಜಡತ್ವ ಬಂದು ಕುಂತಿದೆ. ಸುಮ್ಮನೆ ಏನೇನೋ ನೆಪ ಹೇಳುವ ಬದಲು, ಕನಿಷ್ಟ ಹೊಸ ವರ್ಷದಿಂದಾದರೂ ಹೊಸದಾಗಿ ಬರೆಯಬೇಕು ಅಂದುಕೊಂಡಿದ್ದೇನೆ. ಶಾಸ್ತ್ರಕ್ಕೆ ಹೇಳಬೇಕು ಅಂದರೆ,  ಬಹುಶಃ ಇದೇ ನನ್ನ ಈ ವರ್ಷದ ಪ್ರತಿಜ್ಝೆ !

ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.

ಡಿಸೆಂಬರ್ 31, 2008 at 2:17 ಅಪರಾಹ್ನ 2 comments

ನಿಮ್ಮ ಸಹಾಯ-ಸಲಹೆ ಬೇಕಿದೆ

ಸುಮಾರು ಒಂದು ತಿಂಗಳಿಂದ ಹೀಗಾಗಿದೆ. ವಿಷಯ ಇಷ್ಟೆ ನನ್ನ ಬ್ಲಾಗಿನ ಆರ್ ಎಸ್ ಎಸ್ ಫೀಡ್ ಕೈಕೊಟ್ಟಿದೆ. ಫೈರ್ ಫಾಕ್ಸ್ ನಲ್ಲಿ ಚೆನ್ನಾಗಿ ಕೆಲಸ ಮಾಡುವ ಫೀಡ್ ಇಂಟರ್ ನೆಟ್ ಎಕ್ಸ್ ಫ್ಲೋರ್ ನಲ್ಲಿ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಅದ್ಯಾವುದೂ ಲೇಖನದಲ್ಲಿ ಎರರ್ ಆಗಿದೆ. ಅದನ್ನು ಸರಿಪಡಿಸಿ ನಂತರ ರೀಫ್ರೆಶ್ ಮಾಡಿ ಅಂತ ತೋರಿಸುತ್ತದೆ. ಹಾಗೇ ಮಾಡಿದರೂ ಸರಿಯಾಗುತ್ತಿಲ್ಲ. ಅದು ತೋರಿಸಿದ ಎರರ್ ಲೇಖನವನ್ನು ತಿದ್ದಿ ತೀಡಿ ಒಪ್ಪಗೊಳಿಸಿ ಏನೆಲ್ಲ ಮಾಡಿದರೂ ಪ್ರಯೋಜನವಾಗಿಲ್ಲ.

ಮೊನ್ನೆ ಮೊನ್ನೆ ಅಪರೂಪಕ್ಕೆ ಕರೆ ಹಚ್ಚಿದ ಬ್ಲಾಗ್ ಗೆಳೆಯರೊಬ್ಬರಿಂದ ಈ ಸಂಗತಿ ಬಯಲಾಯಿತು. ಅದೇನಂದರೆ ಅವರು ಕನ್ನಡದಲ್ಲಿ ಅಪ್ ಲೋಡ್ ಆಗುವ ಎಲ್ಲ ಹೊಸ ಲೇಖನಗಳನ್ನೂ ಬರಹದ ಕನ್ನಡಲೋಕದ ಲಿಂಕಿನಲ್ಲಿ ತಪ್ಪದೇ ನೋಡುತ್ತಾರಂತೆ. ಅಲ್ಲಿ ಒಂದೂವರೆ ತಿಂಗಳಿನಿಂದ ನನ್ನ ಲೇಖನದ ಲಿಂಕ್ ಕಾಣಿಸಿಕೊಂಡಿಲ್ಲವಂತೆ. ಕರೆ ಮಾಡಿದ್ದೇ ‘ಏನಪ್ಪ ದೊಡ್ಡ ಮನುಷ್ಯ, ಬರೆಯೋದು ಎಷ್ಟು ಕಷ್ಟ ಅಂತ ಈಗಾಗಲಾದರೂ ತಿಳಿತೋ?’ ಅಂತ ಕ್ಲಾಸ್ ತೆಗೆದುಕೊಂಡರು. ಯಾಕೆ ಅಂತದ್ದಕ್ಕೆ ‘ಮತ್ತೇನಪ್ಪ ತಿಂಗಳಿಂದ ಏನೂ ಬರೆದಿಲ್ಲ. ನಮಗ್ ಮಾತ್ರ ಬರೀತಿರಿ ಅಂತ ಉಪದೇಶ ಮಾಡ್ತಿ’ ಅಂದ್ರು. ನಾನು ಇಲ್ಲ ಸರ್ ವಾರಕ್ಕೊಂದು ಸಾರಿ ಬರೀತಿದೀನಿ… ಅಂತ ರಾಗ ಎಳೆದೆ. ಆಮೇಲೆ ಗೊತ್ತಾಗಿದ್ದು ಬರಹ ಲಿಂಕ್ ನಲ್ಲಿ ನನ್ನ ಬರಹ ಲಿಂಕ್ ಕಾಣಿಸಿಕೊಳ್ಳದ ಕಾರಣ ನಾನು ಬರೀತಾನೇ ಇಲ್ಲ ಅಂತ ಅವರು ತೀರ್ಮಾನ ಮಾಡಿದ್ರು ಅಂತ!

ಇದೇನಾಯಿತಪ್ಪ . ಬರಹದವರು ಕಂಪಿನ ಲಿಂಕ್ ತೆಗೆದುಹಾಕಿದ್ರಾ? ಈ ಬಡವನ ಮೇಲೆ ಯಾಕೀ ಮುನಿಸು ಅಂತಂದುಕೊಂಡು ಕನ್ನಡಲೋಕದ ವಾಸು ಸರ್ ಗೆ ಒಂದು ಮೇಲ್ ಮಾಡಿ , ನನ್ನ ಬ್ಲಾಗ್ ಲಿಂಕ್ ಬಿಟ್ಟುಹೋಗಿದೆ. ದಯಮಾಡಿ ಸೇರಿಸಿಕೊಳ್ಳಿ ಅಂತ ಕೊರೆದೆ. ಅವರು ಸಾವಧಾನದಿಂದ ಪ್ರತಿಕ್ರಿಯಿಸಿ, ನಿಮ್ಮ ಬ್ಲಾಗ್ ನ ಆರ್ ಎಸ್ ಎಸ್ ಫೀಡ್ ಕೆಲಸ ಮಾಡ್ತಿಲ್ಲ ಅಂತ ಸಾಕ್ಷಿ ಸಮೇತ (ಲಿಂಕ್ ಕಳಿಸಿ) ತಿಳಿಸಿದ್ರು. ಆಗಾಲೇ ನನಗೀ ಸತ್ಯ ಗೊತ್ತಾಗಿದ್ದು.

ಈ ವಿಘ್ನ ನಿವಾರಣೆಗೆ ಒಂದಿಬ್ಬರು ತಕ್ಕ ತಜ್ಝರನ್ನು ಸಂಪರ್ಕಿಸಿದರೂ ಪರಿಹಾರ ಮಾತ್ರ ಸಿಕ್ಕಿಲ್ಲ. ಕೆಲವರು ನಿಮ್ಮ ಎಕ್ಸ್ ಫ್ಲೋರ್ ಅಪ್ ಡೇಟ್ ಆಗಿಲ್ಲ ಅನ್ಸುತ್ತೆ ಅಂದ್ರು. ಇನ್ನು ಇನ್ನೊಬ್ಬರು ವೈರೆಸ್ ಸೇರಿಕೊಂಡಿರಬೇಕು, ಹಿಸ್ಟರಿ ಡೆಲಿಟ್ ಮಾಡಿ ಮತ್ತೆ ರೀ ಸ್ಟಾರ್ಟ್ ಮಾಡಿ ಅಂದ್ರು. ಊಹು…. ಏನು ಮಾಡಿದ್ರು ಏನೂ ಆಗ್ತಾ ಇಲ್ಲ.

ನಾನು ಬಹುತೇಕ ಇಂಟರ್ ನೆಟ್ ಎಕ್ಸ್ ಫ್ಳೋರ್ ಬಳಸ್ತೀನಿ. ನಿಜಕ್ಕೂ ಇಲ್ಲಿ ಸಮಸ್ಯೆ ಇರೋದೆಲ್ಲಿ? ಇದರಿಂದೇನು ತೊಂದರೆ? ಈ ಎರರ್ ಸರಿಮಾಡೋದು ಹೇಗೆ? ಇತ್ಯಾದಿ ಸಂಗತಿಗಳ ಬಗ್ಗೆ, ಹಿರಿಯ, ಅನುಭವಸ್ಥ, ತಜ್ಝ ಬ್ಲಾಗಿಗರು ತಿಳಿಸಿಕೊಡುವುದಾದರೆ ನಾನು ರುಣಿ. ಇದರಿಂದ ನನಗೆ , ನನ್ನಂತ ನಾಲ್ಕಾರು ಕಿರೀ-ಮರಿ ಬ್ಲಾಗಿಗರಿಗೆ ಅನುಕೂಲವಾದೀತು…

(ಅಂದ ಹಾಗೆ ಈ ಲೇಖನವನ್ನು ಫೈರ್ ಫಾಕ್ಸ್ ನಿಂದ ಅಪ್ ಲೋಡ್ ಮಾಡುತ್ತಿದ್ದೇನೆ. )

ಸೆಪ್ಟೆಂಬರ್ 27, 2008 at 7:46 ಫೂರ್ವಾಹ್ನ 5 comments


ಕಾಲಮಾನ

ಜನವರಿ 2022
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930
31  

ಮುಗಿಲು ಮುಟ್ಟಿದವರು

  • 9,243 hits

ಪಕ್ಷಿ ನೋಟ

Feeds