Posts filed under ‘Uncategorized’

ವರ್ಷದ ಮೇಲೊಂದು ಬರಹ…..

Imageಕಳೆದ ಹದಿನೈದು ದಿನಗಳಿಂದ ಹುಬ್ಬಳ್ಳಿಯಲ್ಲಿ ಮಳೆ ಬಿಟ್ಟೂಬಿಡದೇ ಸುರಿಯುತ್ತಿದೆ. ಮಳೆ ಎಂದರೆ ಖುಷಿ ಪಡುವವರೂ ಸಾಕೆನಿಸುವಷ್ಟು ಮಳೆ. ರಾತ್ರಿ ಕೆಲಸ ಮುಗಿಸಿ ಕಚೇರಿಯಿಂದ ಹೊರಬಿದ್ದು ವರುಣ ಸಿಂಚನವನ್ನು ಮೈತುಂಬಿಸಿಕೊಂಡು ನೆನೆಯುವ ಸುಖ ಅನುಭವಿಸುತ್ತಾ ಮನೆ ಸೇರುವ ಹೊತ್ತಿಗೆ, ಅದೆಷ್ಟೋತ್ತಿಗೆ ರಗ್ಗಿನ ಒಳಗೆ ಸೇರಿಕೊಳ್ಳುತ್ತೇನೋ ಅನಿಸಿಬಿಟ್ಟಿರುತ್ತದೆ.
ಇಂತಹದ್ದೇ ಒಂದು ಮಳೆಗಾಲಕ್ಕೆ ಮುನ್ನ ಈ ಬ್ಲಾಗ್ ಅಪ್ಡೇಟ್ ಮಾಡಿದ್ದು ಬಿಟ್ಟರೆ ಇತ್ತ ತಲೆ ಹಾಕಿರಲಿಲ್ಲ. ಈಗ ಬಂದು ನೋಡಿದರೆ ಎಲ್ಲವೂ ಹೊಸತು. ನಾನೇ ಬರೆದಿದ್ದಾ ಅನ್ನುವ ಸಂದೇಹ. ಮೊನ್ನೆ ‘ಕೆಂಡಸಂಪಿಗೆ’ ನೋಡುವಾಗಲೂ ಹೀಗೆ ಆಯಿತು. ವರ್ಷಗಳ ಮೇಲೆ ಸಂಪಿಗೆ ವನ ಹೊಕ್ಕು ಅಘ್ರಾಣಿಸಿದರೆ ಅದೇ ಘಮ! ವೆಬ್ ತಾಣದ ವಿಷಯ, ಬಣ್ಣ, ವಿಷಯ ಎಲ್ಲವೂ ಹಾಗೆಯೇ ಇದೆ, ಫ್ರೋಫೈಲ್ ಪಟ್ಟಿಯಲ್ಲಿರುವ ನನ್ನ ವಿವರಗಳೂ! ಅದರಂತೆ ನಾನಿನ್ನೂ ಕೆಂಡಸಂಪಿಗೆಯ ವರದಿಗಾರ. ಸುಮ್ಮನೆ ಹಳೆಯ ಲೇಖನಗಳನ್ನೆಲ್ಲ ಓದುತ್ತಾ ಕೂತೆ. ವೆಬ್ ಸೈಟಿನಲ್ಲಿ ಕೆಲಸ ಮಾಡುವ ದಿನಗಳಲ್ಲಿ ಹೆಚ್ಚು ಮನೋರಂಜನೆ ಖು಼ಷಿ ಕೊಟ್ಟಿದ್ದು ಜೋಗಿ ಅಂಕಣಗಳು. ಅದರಲ್ಲೂ ಜೋಗಿ ಭೈರಪ್ಪನವರ ಬಗ್ಗೆ ಬರೆದ ಲೇಖನಕ್ಕೆ ಎಷ್ಟೆಲ್ಲ ಕಮೆಂಟು, ಚರ್ಚೆ. ‘ನಮ್ಮಪ್ಪನ್ನ ಬೇಕಿದ್ದರೆ ಬಯ್ಯಿ. ಆದ್ರೆ ಭೈರಪ್ಪನವರನ್ನ ಮಾತ್ರ…’ ಅಂದೆಲ್ಲ ಓದುಗರು ಬಯ್ದರು ಅಂತ ಜೋಗಿ ಬರೆದುಕೊಂಡದ್ದು ನೆನಪಿಸಿಕೊಂಡು ನಗು ಬಂತು.
ಇಂತಹ ಒಂದಿಷ್ಟು ಚರ್ಚೆಗಳೂ, ಅವರಿವರ ಪರ-ವಿರೋಧ ವಾದಗಳು ಕನ್ನಡ ಅಂತರ್ಜಾಲ ತಾಣಗಳಲ್ಲಿ ನಡೆಯುತ್ತಾ ಇವೆಯಾದರೂ ಅವು ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಎನ್ನುವುದು ನನ್ನ ಅನಿಸಿಕೆ. ಆರು ಕೋಟಿ ಕನ್ನಡಿಗರ ಪೈಕಿ ಸಾಕಷ್ಟು ಮಂದಿ ಈಗೀಗ ಬ್ಲಾಗ್ ಆರಂಭಿಸುತ್ತಿದ್ದಾರೆ. ಹೊಸ ಹೊಸ ಬ್ಲಾಗ್ ಗಳೂ ಹುಟ್ಟಿಕೊಳ್ಳುತ್ತಿವೆ. ಆದರೆ ಹೀಗೆ ಹುಟ್ಟುವ ಬ್ಲಾಗ್ ಗಳಿಗಿಂತ ಸಾಯುತ್ತಿರುವ ಬ್ಲಾಗ್ ಗಳ ಸಂಖ್ಯೆಯೇ ಹೆಚ್ಚಿರಬಹುದು. ನಿರಂತರ ಬರೆಯುವ ಬ್ಲಾಗಿಗಳ ಸಂಖ್ಯೆ ಎಷ್ಟು ಎಂಬುದು ಅಗೋಚರ. ವೆಬ್ ತಾಣಗಳ ಸ್ಠಿತಿ ಇದಕ್ಕಿಂತ ಭಿನ್ನ ಏನಿಲ್ಲ. ‘ಸಂಪದ’ ಕಳೆದ ದಶಕದಲ್ಲಿ ಹೊಸ ಪಯತ್ನಗಳ ಮೂಲಕ ಸಾಕಷ್ಟು ಮಂದಿಯನ್ನು ಬ್ಲಾಗ್ ಲೋಕಕ್ಕೆ ಕರೆತಂದಿತ್ತು. ಮತ್ತೆ ಅಂತಹ ಪಯತ್ನಗಳು ನಡೆದಿಲ್ಲ. ಸಂಪದ ಸಹ ಹಿಂದಿನಷ್ಟು ಕ್ರಿಯಾಶೀಲವಾಗಿಲ್ಲ ಎಂದೆನಿಸುತ್ತದೆ. ಕೆಂಡಸಂಪಿಗೆಯಲ್ಲಿ ಒಂಥರ ಏಕತಾನತೆ ಹೆಚ್ಚು. ಅದು ಆರಂಭವಾದಾಗಿನಿಂದ ಬರೆಯುತ್ತಿರುವ ಲೇಖಕರೇ ಈಗಲೂ ಹೆಚ್ಚಾಗಿ ಬರೆಯುತ್ತಿದ್ದಾರೆ. ಹೆಚ್ಚಿನ ಕಮೆಂಟುದಾರರೂ ಹಳಬರೇ ಆಗಿದ್ದಾರೆ. ಅನಾಮಧೇಯ ಕಮೆಂಟುದಾರರ ಬೈಗುಳ, ಕಿರುಕುಳ ತಪ್ಪಿಲ್ಲ. ಒಂಥರ ಸಿದ್ಡ ಮಾದರಿಯ ಪತ್ರಿಕೆ ಎಂಬಂತಾಗಿದೆ.
ವರ್ಷಗಳ ಹಿಂದೆ ಬ್ಲಾಗ್ ಆಗಿದ್ದ ಅವಧಿ ಈಗ ವೆಬ್ ತಾಣವಾಗಿದೆ. ಒಂದಿಷ್ಟು ಹೊಸ ಪ್ರಯತ್ನಗಳು ನಡೆಯುತ್ತವೆಯಾದರೂ ಗಿಮಿಕ್ ಗಳೇ ಹೆಚ್ಚು ಎನಿಸುತ್ತದೆ.
ಸುಮಾರು ಹದಿನೈದು ದಿನದ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ವಿಕಿಪೀಡಿಯಾ ಕಾರ್ಯಾಗಾರಕ್ಕೆ ಹೋಗಿದ್ದೆ. ಅಲ್ಲಿ ಯು.ಬಿ. ಪವನಜ ಹೇಳುತ್ತಿದ್ದರು. ‘ಕನ್ನಡದಲ್ಲಿ ವಿಕಿಪೀಡಿಯಾ ೨೦೦೩ರ ಜುಲೈನಲ್ಲಿ ಆರಂಭಗೊಂಡರೂ ಈವರೆಗೆ ಬರೆದದ್ದು ೧೪ ಸಾವಿರ ಲೇಖನ ಮಾತ್ರ. ಅವುಗಳಲ್ಲಿ ಬಹಳಷ್ಟು ಅಪೂರ್ಣ. ಕನ್ನಡ ವಿಕಿಪೀಡಿಯಾಕ್ಕೆ ೩೦೦ಕ್ಕೂ ಹೆಚ್ಚು ಸಂಪಾದಕರು ಇರುವರಾದರೂ ಸಕ್ರಿಯರು ೨೫ ಮಂದಿ. ಅವರಲ್ಲಿ ಅತಿ ಸಕ್ರಿಯರು ಐವರು ಮಾತ್ರ!’

ಆಗಷ್ಟ್ 2, 2013 at 9:09 ಫೂರ್ವಾಹ್ನ ನಿಮ್ಮ ಟಿಪ್ಪಣಿ ಬರೆಯಿರಿ

ಮಾವಿನ ಕನವರಿಕೆ…

ಯುಗಾದಿ ಬಂತು. ಊರ ತುಂಬೆಲ್ಲ ಹಸಿರ ತೋರಣ ಹೊಸೆಯಲು ಮರಗಳು ಸಿದ್ಡವಾದಂತಿವೆ. ಈಗಾಗಲೇ ಗುಲ್ಮೊಹರುಗಳು ಮೈತುಂಬ ಹೂ ತುಂಬಿಕೊಂಡು ಮದುವಣಗಿತ್ತಿಯರಂತೆ ಶೋಭಿಸುತ್ತಿವೆ. ಇನ್ನೂ ಅವುಗಳಿಂದ ಹೂ ಉದುರುತ್ತ ಬಯಲಲ್ಲೇ ಹೂವಿನ ಹಾಸಿಗೆ ಹೊಸೆಯುವುಷ್ಟೆ ಬಾಕಿ. 

ಆದರೆ ಯಾಕೋ ನಮ್ಮ ಆಫೀಸಿನ ಮುಂದಣ ಎರಡು ಮಾವಿನ ಮರಗಳು ಈ ಬಾರಿ ವಸಂತನ ಜೊತೆ ಮುನಿಸಿಕೊಂಡಂತಿವೆ. ಒಂದು ಚಿಗುರೆಲೆಯಿಲ್ಲ, ಹೂವಿಲ್ಲ. ಈ ಬಾರಿ ಮಾವಿನ ಕಾಯಿ ಬಿಡುವ ಲಕ್ಷಣಗಳೇ ಇಲ್ಲ. ಸಂಜೆ ಟೀಗೆ ಹೊರಹೋಗುವ ಮುನ್ನ ಇವುಗಳತ್ತಲೊಮ್ಮೆ ನೋಡಿ ಹೂ ಹುಡುಕಿ ನಿರಾಶನಾಗುವುದು ನಡೆದೇ ಇದೆ.

ಸುಮ್ಮನೆ ನೆನಪಿಸಿಕೊಂಡೆ, ನಾನು ಕಳೆದ ವರ್ಷ ಎಷ್ಟು ಮಾವಿನ ಹಣ್ಣು ತಿಂದಿರಬಹುದು ಅಂತ. ಒಂದೇ ಹೋಳು! ಅದು ಮೈಸೂರಿನಲ್ಲಿ. ವರ್ಷವೆಲ್ಲ ಹುಬ್ಬಳ್ಳಿಯಲ್ಲೇ ಇದ್ದರೂ ಒಂದು ಮಾವಿನಹಣ್ಣು ತಿನ್ನಲಾಗಲಿಲ್ಲ. ತಮಾಷೆ ಅಂದರೆ ಇಲ್ಲಿನ ’ಮೆಟ್ರೊ’ಪುರವಣಿಗೆ ಮಾವಿನ ಬಗ್ಗೆ ಎರಡೆರಡು ಲೇಖನ ಬರೆದರೂ ಒಂದು ಹಣ್ಣು ತಿನ್ನಲಾಗಲಿಲ್ಲ ಅಂತ.

ಹಾಗಂತ ನಂಗೆ ಮಾವು ಇಷ್ಟಯಿಲ್ಲ ಅಂತಲ್ಲ. ಈ ಮಾವಿಗೂ ನನ್ನ ಬಾಲ್ಯಕ್ಕೂ ಒಂಥರ ನಂಟು ಬೆಳೆದಿದೆ. ಚಿಕ್ಕವನಿದ್ದಾಗ ಶಾಲೆಗೆ ರಜ ಬಂತೆಂದರೆ ಬಹುಹೊತ್ತು ಕಳೆಯುತ್ತಿದ್ದುದು ಮಾವಿನ ತೋಟದಲ್ಲೇ.
ಮರದ ತುಂಬೆಲ್ಲ ಚಿಟ್ಟೆಗಳಂತೆ ತುಂಬಿಕೊಂಡ ಮಾವಿನ ಕಾಯಿಗಳನ್ನು ನೋಡುವುದೇ ಒಂದು ಸೊಗಸು. ಚಿಕ್ಕ ಗಿಡದಲ್ಲಿ ನೇತಾಡುವ ಮಾವುಗಳನ್ನು ನೇವರಿಸುವುದು ಇನ್ನಷ್ಟು ಸೊಗಸು. ನಮ್ಮಲ್ಲಿ ತೋಟವಿರದಿದ್ದರೂ ಪಕ್ಕದ ಮನೆಯವರು ತೋಟಕ್ಕೆ ಹೊರಟಾಗ ಅವರ ಬೆನ್ನು ಹತ್ತುತ್ತಿದುದು ಇದೇ ಕಾರಣಕ್ಕೆ.
ಆಮೇಲೆ ಜೋಡಿ ಬದಲಾಯಿತು. ದೊಡ್ಡವನಾದಂತೆ ಗೆಳೆಯರ ಮಾವಿನ ತೋಟಗಳು ಸೆಳೆದವು. ಕಂಡವರ ಮಾವಿನ ಮರಕ್ಕೆ ಕಲ್ಲು ಹೊಡೆದು ಮಾವಿನ ಕಾಯಿ ಉದುರಿಸುವುದು ಅಭ್ಯಾಸವಾಯಿತು. ಹತ್ತನೇ
ಕ್ಲಾಸಿನ ಪರೀಕ್ಷೆಗೆ, ಪಿಯುಸಿ ಪರೀಕ್ಷೆಗೆ ಓದಿಕೊಂಡಿದ್ದು ಇಂತಹದ್ದೇ ಮಾವಿನ ತೋಪುಗಳ ಕೆಳಗೆ ಎಂಬುದು ಈಗ ಸವಿನೆನಪು.
ಆಗೆಲ್ಲ ಏನೆಲ್ಲ ಮಾಡಿ ಸವಿಯುತಿದ್ದ ಮಾವಿನ ರುಚಿ ಈಗ್ಯಾಕೆ ನಾಲಿಗೆಗೆ ಹತ್ತುತ್ತಿಲ್ಲ ಎಂಬ ಗೊಂದಲ. ಈ ಬಾರಿ ಒಂದಷ್ಟು ಮಾವು ತಿನ್ನಲೇಬೇಕು ಎಂಬುದು ಸದ್ಯದ ಹಂಬಲ.

ಮಾರ್ಚ್ 20, 2012 at 5:55 ಅಪರಾಹ್ನ 2 comments

ಒಂಟಿಯಾಗಿ ನಡೆಯುತ್ತಾ…..

ಇವತ್ತು ಮತ್ತೆ ವಾರದ್ ರಜೆ. ಮೊನ್ನೆ ಭಾನುವಾರವೂ ಹೀಗೆ ಒಂದ್ ದಿನ ರಜೆ ಸಿಕ್ಕಿತ್ತು. ಅವತ್ತು ದಿನ ಪೂರ್ತಿ ನಿದ್ದೆ ಮಾಡಿದ್ದೆ ಆಯಿತು. ಇವತ್ತು ಏನ್ ಮಾಡೋದಪ್ಪ ಅನ್ನೋ ಚಿಂತೆ. ಮುಂಚೆ ೧೫ ದಿನಕ್ಕೊಮ್ಮೆ

ನಾನೇ!

ಊರಿಗೆ ಹೋಗುವ ಅಭ್ಯಾಸ ಇತ್ತು. ಎರಡೂ ರಜೆಗಳನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುತ್ತಿದ್ದೆ. ನಂತರ ಈ ಅವಧಿ ತಿಂಗಳಿಗೆ ಏರಿಕೆಯಾಯಿತು. ಈಗ ಊರು ಮರೆತೇಹೋಗಿದೆ ಅನ್ನುವ ಹಾಗೇ ಮನಸ್ಸು ಬಂದಾಗ ಊರಿಗೆ ಹೋಗುವುದು ಅಭ್ಯಾಸವಾಗುತ್ತಿದೆ. ಆದರೆ ನಮ್ಮದಲ್ಲದ ಊರಲ್ಲಿ ಒಂಟಿಯಾಗಿ ದಿನ ಕಳೆಯುವುದಿದೆಯಲ್ಲ ಅದಕ್ಕಿಂತ ಬೇಜಾರಿನ ಹಾಗೂ ಖುಷಿಯ ಕೆಲಸ ಇನ್ನೊಂದಿಲ್ಲ. (ಬೇಕಿದ್ರೆ ಸಂಸಾರಿಗಳಲ್ಲದ, ಗರ್ಲ್ ಫ್ರೆಂಡುಗಳಿಲ್ಲದ ಹುಡುಗರನ್ನು ಕೇಳಿ ನೋಡಿ). ಮೈಸೂರಿನಲ್ಲಿ ಇರುವಾಗಲೆಲ್ಲ ಇ಼ಷ್ಟಪಟ್ಟು ಮಾಡುವ ಕೆಲಸ ಅಂದರೆ ಸಂಜೆಯಾಗುತ್ತಿದ್ದಂತೆಯೇ ಸಿಟಿ ಬಸ್ ಹತ್ತಿ ಬಸ್ ಸ್ಯ್ಟಾಂಡಿನಲ್ಲಿ ಇಳಿದು ಅಲ್ಲಿಂದ ಅರಸು ರಸ್ತೆಯಲ್ಲಿ ಎರಡೂ ಜೇಬಲ್ಲಿ ಕೈ ಹಾಕಿಕೊಂಡು (ಹಣ ಪೋಲಾಗದಿರಲಿ ಅಂತ!) ನಡೆಯುತ್ತಾ ಮಹಾರಾಣಿ ಕಾಲೇಜಿನ ಕಂಪೌಂಡ್ ಮುಟ್ಟಿ ವಾಪಸ್ ಅದೇ ರಸ್ತೆಯಲ್ಲಿ ಬರುವುದು. ಪ್ರತಿ ಸಲ ಹೀಗೆ ನಡೆವಾಗಲೂ ಕಣ್ಣಲ್ಲಿ ಹೊಸ ಅಚ್ಚರಿ ತುಂಬಿರುತ್ತದೆ.

ಈ ಅಭ್ಯಾಸ ಶುರುವಾದದ್ದು ಪದವಿ ಕಾಲೇಜಿನ ಕೊನೆಯೆರಡು ವರ್ಷಗಳಲ್ಲಿ ರಂಗಾಯಣದ ಸಹವಾಸ ಆರಂಭವಾದಂದಿನಿಂದ. ಮಧ್ಯಾಹ್ನ ಆದ ಕೂಡಲೇ ರಂಗಾಯಣ ಕ್ಯಾಂಟಿನಿನಲ್ಲಿ ವಕ್ಕರಿಸಿ ಉಂಡು-ತಿಂದು, ಸ್ಕ್ರ್ಲಿಪ್ಟ್ ರೀಡಿಂಗ್ ಅನ್ನುವ ನಾಟಕವಾಡಿ, ಮತ್ತೆ ಚಾ ಹೀರಿ ಹರಟೆ ಹೊಡೆಯುತ್ತ, ಕತ್ತಲಾದ ಮೇಲೆ ಮನೆಯ ನೆನಪಾದಾಗ ಬಸ್ ಸ್ಯ್ಟಾಂಡಿಗೆ ಇದೇ ಅರಸು ರಸ್ತೆಯಲ್ಲಿ ಹೋಗಬೇಕಿತ್ತು. ಅದೇ ಮಹಾರಾಣಿ ಕಾಲೇಜು ಹಾಸ್ಟೆಲ್ಲಿನ ಕಂಪೌಂಡ್ ಗೆ ಅಂಟಿಕೊಂಡಿರುವ ಐಷಾರಾಮಿ ಕಾಫಿ ಡೇಯ ಪಕ್ಕದಲ್ಲೇ ಇರುವ ಚಾ ದುಕಾನಿನಲ್ಲಿ ಗೆಳೆಯರೆಲ್ಲ ಬೈ-ಟು ಟೀ ಕುಡಿದು ರಸ್ತೆಗೆ ಇಳಿದೆವೆಂದರೆ ಮತ್ತೆ ನೆಲ ನೋಡುತ್ತಿದ್ದುದು ಕೆ.ಆರ್.ಸರ್ಕಲ್ ಸಮೀಪಿಸಿದ ಮೇಲೆ!

ಹುಬ್ಬಳ್ಳಿಗೆ ಬಂದ ಮೇಲೆ ಹೀಗೆ ಸೆಳೆದದ್ದು ಇಲ್ಲಿನ “ಎಂ.ಜಿ. ರೋಡ್” ಉರುಫ್ ಕೊಪ್ಪಿಕರ ರಸ್ತೆ. ಇವತ್ತು ಸಂಜೆ ಹೀಗೆ ಇದೇ ರಸ್ತೆಯಲ್ಲಿ ನಡೆಯುತ್ತಿರುವಾಗ ಇನ್ನೇನು ಡಿಕ್ಕಿ ಹೊಡೆಯುವಷ್ಟು ಸಮೀಪದಲ್ಲಿ ಇಲ್ಲಿನ ಗೆಳೆಯರೊಬ್ಬರು ಎದುರಾದರು. ಉಭಯ ಕುಶಲೋಪರಿಯ ನಂತರ “ಮದುವೆ” ಅಂದರು. ಅವರಿಗೆ ಈ ಬ್ರಹ್ಮಚರ್ಯದ ಸುಖವನ್ನೂ, ಹೀಗೆ ಅಲೆಯುವ ಹಿಂದಿರುವ ಸ್ವಾತಂತ್ರ್ಯವನ್ನೂ ವಿವರಿಸಿದೆ. ನಿಮ್ಮ ಪರಿಸ್ಥಿತಿ ನೋಡಿದ ಮೇಲೂ ಮದುವೆಯಾಗುವುದೇ, ಅದಕ್ಕಿಂತ ಹೀಗೆ ಇದ್ದುಬಿಡುವುದೇ ಲೇಸು ಅಂತೆಲ್ಲ ಛೇಡಿಸಿದೆ. ಅದಕ್ಕವರು “ತಮ್ಮ ಯಾವ್ಯಾವ ಕಾಲದಾಗ ಏನೇನ್ ಆಗ್ಬೇಕೊ ಅದೇ ಆಗ್ಬೇಕು ನೋಡು. ಅದ್ ಬಿಟ್ಟು ಹಿಂಗ ಸಂಸಾರ ಮಾಡೋ ಹೊತ್ನಾಗ ಸನ್ಯಾಸದ ಮಾತಾಡ್ತೀ ಅಂದ್ರ ನಿನ್ನಲ್ಲೇ ಏನೋ ತಾಂತ್ರಿಕ ದೋಷ ಇರಬೇಕು ಅಂತ ಮಂದಿ ತಪ್ಪು ತಿಳಿತಾರಾ” ಅಂತ ಮಾತಲ್ಲೇ ಬಾಂಬ್ ಸಿಡಿಸಿದರು. ಆಮೇಲೆ ಇಬ್ಬರೂ ರಾಜೀ ಆಗಿ ಸಮೀಪದ ಹೋಟೆಲ್ ನಲ್ಲಿ ಚಾ ಹೀರಿ ನಮ್ಮ ದಾರಿ ಹಿಡಿದದ್ದಾಯಿತು.

ಜನವರಿ 10, 2012 at 4:42 ಅಪರಾಹ್ನ 1 comment

ಮರೆತುಹೋದ ಪಾಸ್ ವರ್ಡ್ ನೆನಪಿಸಿಕೊಳ್ಳುತ್ತ

೨೦೦೯ರ ಅಕ್ಟೋಬರ್ ನಲ್ಲಿ ಕೆಂಡಸಂಪಿಗೆಯ ಬಾಗಿಲು ಮುಚ್ಚುವ ಜೊತೆಗೆ ಈ ಬ್ಲಾಗಿನ ಬಾಗಿಲೂ ಮುಚ್ಚಿತ್ತು. ಉದ್ಯೋಗವಿಲ್ಲದೆ ಬದುಕೇ ಗೊಂದಲವಾಗಿ ಹೋಗಿತ್ತು. ಆ ಹೊತ್ತಿಗೆ ಕೈ ಹಿಡಿದು ಮೇಲೆತ್ತಿದ್ದು ಪ್ರಜಾವಾಣಿ. ಅಲ್ಲಿಂದ ಆರಂಭವಾದ ವಿಶ್ವಾಸಾರ್ಹ ಪತ್ರಿಕೆಯೊಟ್ಟಿಗಿನ ಪಯಣ ಮುಂದುವರಿದಿದೆ. ಬದುಕಿನ ರೈಲು ಮೈಸೂರಿನಿಂದ ಹುಬ್ಬಳ್ಳಿಗೆ ಬಂದು ನಿಂತಿದೆ.
ಈ ನಡುವೆ ಕಳೆದುಕೊಂಡಿದ್ದು ಉಂಟು. ಗಳಿಸಿದ್ದೂ ಉಂಟು. ಹೊಸ ಜಾಗ, ಹೊಸ ಸ್ನೇಹಿತರ ಸಹವಾಸದ ಖುಷಿ ತಂದುಕೊಟ್ಟಿದ್ದರೂ ಒಮ್ಮೊಮ್ಮೆ “ಮತ್ತದೇ ಬೇಸರ ಅದೇ ಸಂಜೆ, ಅದೇ ಏಕಾಂತ”.
ಬ್ಲಾಗೂ, ಸ್ಲೇಟು-ನನ್ನ ಪಾಲಿಗೆ ಎರಡೂ ಒಂದೇ. ಬೇಕಾದ್ದನ್ನು ಬರೆಯಬಹುದು. ಬೇಡೆಂದಾಗ ಅಳಿಸಬಹುದು. ಇಲ್ಲವೇ ಸ್ಲೇಟು ಬದಲಿಸಬಹುದು. ಸರಿಸುಮಾರು ಎರಡೂವರೆ ವರ್ಷಗಳ ನಂತರ ಈಗ್ಗೆ ಇಲ್ಲಿನ ಬರಹಗಳನ್ನು ಓದುವಾಗ ಕೆಲವನ್ನು ಅಳಿಸಿಹಾಕುವ ಮನಸ್ಸೂ, ಜೊತೆಗೆ ಖುಷಿಯೂ ಆಗಿ ಗೊಂದಲವಾಗುತ್ತಿದೆ. ಇದನ್ನೆಲ್ಲ ಪಕ್ಕಕ್ಕಿಟ್ಟು, ಮತ್ತೆ ಬರೆಯುವ ಹಠ ತೊಟ್ಟಿದ್ದೇನೆ. ಮರೆತುಹೋಗಿದ್ದ ಪಾಸ್ ವರ್ಡ್ ನೆನಪಿಸಿಕೊಳ್ಳುತ್ತಿದ್ದೇನೆ.

ಜನವರಿ 8, 2012 at 8:32 ಅಪರಾಹ್ನ ನಿಮ್ಮ ಟಿಪ್ಪಣಿ ಬರೆಯಿರಿ

ಮುಂದುವರಿದ ಬಾಂಡ್ ಕಾದಂಬರಿ

ರಸ್ಕಿನ್ ಬಾಂಡ್ ರ `Dehli is not far’ ಕಾದಂಬರಿಯ ಇನ್ನೊಂದು ಅಧ್ಯಾಯ.

ರಸ್ಕಿನ್ ಬಾಂಡ್

ರಸ್ಕಿನ್ ಬಾಂಡ್

‘ನೋಡು ಗಣಪತಿ’ ಒಂದು ದಿನ ನಾನವನನ್ನ ಕೇಳಿದೆ. ‘ನಾನು ನಿನ್ನ ಬಗ್ಗೆ ಸಾಕಷ್ಟು ಕಥೆಗಳನ್ನ ಕೇಳಿದ್ದೇನೆ. ಆದರೆ ಅದರಲ್ಲಿ ಯಾವುದು ಸುಳ್ಳು, ಯಾವುದು ಸತ್ಯ ಅಂತ ಗೊತ್ತಿಲ್ಲ. ನಿನ್ನ ಈ ಬೆನ್ನು ಗೂನಾದದ್ದಾದರೂ ಹೇಗೆ?’

‘ಅದೊಂದು ದೊಡ್ಡ ಕಥೆ’ ಅಂತಂದ ಗಣಪತಿ. ಅದು ಅವನ ಕಥೆ ಬಗ್ಗೆ ಇನ್ನಷ್ಟು ಕುತೂಹಲ ಕೆರಳಿಸಿತು. ‘ಅದನ್ನೆಲ್ಲ ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ. ಅಲ್ಲದೆ, ಹಾಗೇ ಯಾರಿಗೂ ನನ್ನ ಕಥೆಯನ್ನ ಬಿಟ್ಟಿಯಾಗಿ ಹೇಳುವುದೂ ಇಲ್ಲ.’

ಆತ ನನ್ನಿಂದ ಏನನ್ನಾದರೂ ಗಿಟ್ಟಿಸಿಕೊಳ್ಳುವ ತನ್ನ ಉದ್ದೇಶವನ್ನು ವ್ಯಕ್ತಪಡಿಸಿದ. ನಾನಂದೆ ‘ನೀನು ನಿನ್ನ ಕಥೆಯನ್ನ ಹೇಳಿದ್ದೇ ಆದಲ್ಲಿ, ನಿನಗೆ ನಾಲ್ಕು ಆಣೆಗಳನ್ನ ಕೊಡುತ್ತೇನೆ. ಹೇಳು, ಇದೆಲ್ಲ ಹೇಗಾಯಿತು?’

ಆತ ತನ್ನ ಗಡ್ಡದ ಮೇಲೊಮ್ಮೆ ಕೈಯಾಡಿಸುತ್ತಲೇ, ನನ್ನ ಬೇಡಿಕೆಯನ್ನ ಒಪ್ಪಿಕೊಂಡ. ‘ಆದರೆ ಇದೆಲ್ಲ ನಡೆದಿದ್ದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ. ಯಾವಾಗ ಅಂತ ಮಾತ್ರ ಖರಾರುವಕ್ಕಾಗಿ ಹೇಳುವುದಕ್ಕೆ ಆಗೋದಿಲ್ಲ.’

‘ಆ ದಿನಗಳಲ್ಲಿ ನಾನಿನ್ನು ಯುವಕನಾಗಿದ್ದೆ. ಆಗಷ್ಟೇ ಮದುವೆ ಕೂಡ ಆಗಿದ್ದೆ. ನನಗೆ ಒಂದಿಷ್ಟು ಜಮೀನು ಇದ್ದಾಗ್ಯೂ , ಬಡತನ ಇರದೇ ಇರಲಿಲ್ಲ. ನಾನು ಬೆಳೆದಿದ್ದನ್ನೆಲ್ಲ ನನ್ನೂರಿನಿಂದ ಐದು ಮೈಲು ದೂರದಲ್ಲಿದ್ದ ಮಾರುಕಟ್ಟೆಗೆ ತೆಗೆದುಕೊಂಡು ಹಾಕುತ್ತಿದ್ದೆ. ಎತ್ತುಗಳನ್ನ ಗಾಡಿಗೆ ಕಟ್ಟಿ, ಹೊಂಡ ಬಿದ್ದ ರಸ್ತೆಯಲ್ಲೇ ಓಡಿಸಿಕೊಂಡು ಹೋಗುತ್ತಿದ್ದೆ. ರಾತ್ರಿ ಮನೆಗೆ ಮರಳುತ್ತಿದ್ದೆ.

ಪ್ರತಿದಿನ ನಾನು ಒಂದು ಹುಣಸೇಮರದ ಹತ್ತಿರ ಹಾದು ಬರುವಾಗ ಅಲ್ಲಿ ಏನೋ ಸದ್ದಾದಂತೆ ಆಗುತ್ತಿತ್ತು. ನಾನು ಯಾವತ್ತೂ ಆ ದೆವ್ವವನ್ನ ಕಂಡಿರಲಿಲ್ಲ. ಅದನ್ನ ನಂಬುತ್ತಲೂ ಇರಲಿಲ್ಲ. ನಾನು ಕೇಳಿದಂತೆ, ಅಲ್ಲಿ ಬಿಪಿನ್ ಎನ್ನುವ ವ್ಯಕ್ತಿಯನ್ನ ಬಹಳ ವರ್ಷಗಳ ಹಿಂದೆ ಒಂದು ಡಕಾಯಿತರ ಗುಂಪು ನೇಣು ಹಾಕಿ ಕೊಂದಿತ್ತು. ಅಲ್ಲಿಂದ ಆತನ ಆತ್ಮ ಆ ಮರದಲ್ಲಿಯೇ ವಾಸಿಸುತ್ತಿದ್ದು, ಆ ದಾರಿಯಲ್ಲಿ ತಿರುಗಾಡುವ, ನೋಡಲು ಡಕಾಯಿತರಂತೆಯೇ ಕಾಣುವವರನ್ನೆಲ್ಲ ಹಿಡಿದು ಥಳಿಸುತ್ತಿತ್ತು. ಒಂದು ರಾತ್ರಿ ಹಾಗೇ ನನ್ನನ್ನು ಥಳಿಸಲು ಮುಂದಾಯಿತು. ಮರದಿಂದ ಕೆಳಗಿಳಿದು ಬಂದು, ರಸ್ತೆಗೆ ಅಡ್ಡವಾಗಿ ನಿಂತಿತ್ತು.

‘ಎಲಾ ಇವನೇ, ಗಾಡಿಯಿಂದ ಕೆಳಗೆ ಇಳಿ. ನಾನು ನಿನ್ನನ್ನ ಕೊಲ್ಲುತ್ತೇನೆ.’

ನಾನು ಇದರಿಂದ ಕೊಂಚ ಹೆದರಿದೆನಾದರೂ, ಅದರ ಆಜ್ಞೆಯನ್ನ ಪಾಲಿಸಬೇಕಾದ ಯಾವುದೇ ಅಗತ್ಯತೆ ತೋರಲಿಲ್ಲ.

‘ನಾನು ಕೊಲೆಯಾಗುವ ಯಾವ ಕಾರಣಗಳೂ ಇಲ್ಲ. ಬೇಕಾದರೆ ನೀನೇ ಗಾಡಿ ಮೇಲೆ ಬಾ.’ ಅಂದೆ.

‘ಒಳ್ಳೆ ಮನುಷ್ಯನ ಹಾಗೆ ಮಾತನಾಡುತ್ತೀಯಾ!’ ಬಿಪಿನ್ ಕಿರುಚಿದ. ಗಾಡಿ ಮೇಲಕ್ಕೆ ನೆಗೆದು ನನ್ನ ಬೆನ್ನ ಹಿಂದೆಯೇ ನಿಂತ. ‘ಹಾಗಾದರೆ, ನಿನ್ನನ್ನ ಯಾಕೆ ಕೊಲ್ಲಬಾರದು ಅಂತ ಒಂದು ಕಾರಣ ಹೇಳು’
‘ನಾನು ಡಕಾಯಿತನಲ್ಲ.’
‘ಆದರೆ ನೀನು ಡಕಾಯಿತನ ಹಾಗೇ ಕಾಣುತ್ತೀಯಾ!’
‘ಒಂದು ವೇಳೆ ನೀನು ನನ್ನನ್ನ ಕೊಂದಿದ್ದೇ ಆದಲ್ಲಿ, ಆಮೇಲೆ ಪಶ್ಚಾತಾಪ ಪಡುತ್ತೀಯಾ. ನಾನು, ಹೆಂಡತಿಯೂ ಜೊತೆಗಿರುವ ಒಬ್ಬ ಬಡ ಮನುಷ್ಯ.’
‘ನೀನು ಬಡವನಾಗಿರುವುದಕ್ಕೆ ಸಾಧ್ಯವೇ ಇಲ್ಲ’ ಬಿಪಿನ್ ಕೋಪದಿಂದ ಅಂದ.
‘ಹಾಗಾದರೆ, ನಿನಗೆ ತಾಕತ್ತಿದ್ದರೆ ನನ್ನನ್ನ ಶ್ರೀಮಂತನನ್ನಾಗಿ ಮಾಡು ನೋಡೋಣ?’
‘ನನಗೆ ಆ ಶಕ್ತಿಯಿಲ್ಲ ಅಂತೀಯಾ? ನಿನ್ನನ್ನ ಶ್ರೀಮಂತನನ್ನಾಗಿ ಮಾಡೋದಕ್ಕೆ ಆಗಲ್ಲ ಅಂತೀಯಾ?’
‘ಹೌದು, ಖಂಡಿತ. ನನ್ನನ್ನ ನೀನು ಶ್ರೀಮಂತನನ್ನಾಗಿ ಮಾಡೋದಕ್ಕೆ ಆಗೋದಿಲ್ಲ.’
‘ಹಾಗಾದರೆ ನೋಡೇ ಬಿಡೋಣ. ನಾನು ನಿನ್ನ ಜೊತೆಗೇ ನಿನ್ನ ಮನೆಗೆ ಬರ್ತೀನಿ’ ಅಂದ. ನಾನು ಗಾಡಿಯನ್ನ ಊರಿನತ್ತ ಹೊಡೆದೆ.

‘ನಾನದಕ್ಕೆ ತಕ್ಕ ವ್ಯವಸ್ಥೆ ಮಾಡಿಕೊಳ್ಳಬೇಕು’ ಅಂದ. ‘ಇನ್ನೊಂದು ವಿಷಯ. ನಿನ್ನನ್ನ ಬಿಟ್ಟು ಬೇರೆ ಯಾರ ಕಣ್ಣಿಗೂ ನಾನು ಕಾಣಿಸುವುದಿಲ್ಲ. ನಾನು ಪ್ರತಿದಿನ ನಿನ್ನ ಪಕ್ಕದಲ್ಲೇ ಮಲಗುತ್ತೇನೆ. ಆದರೆ ಇದು ಯಾರಿಗೂ ಗೊತ್ತಾಗಕೂಡದು. ನನ್ನ ಬಗ್ಗೆ ಯಾರ ಹತ್ತಿರವಾದರೂ ಹೇಳಿದ್ರೆ, ಅವತ್ತೇ ನಿನ್ನನ್ನ ಕೊಂದು ಬಿಡ್ತೀನಿ!’
‘ಚಿಂತಿಸಬೇಡ. ಯಾರಿಗೂ ಹೇಳೋಲ್ಲ.’
‘ಒಳ್ಳೆಯದು. ಹಾಗಾದರೆ ನಾನಿನ್ನು ನಿನ್ನೊಟ್ಟಿಗೇ ಜೀವಿಸ್ತೀನಿ. ನನಗೂ ಈ ಮರದ ಮೇಲೆ ಒಬ್ಬನೇ ಇದ್ದು ಬೇಜಾರಾಗಿ ಹೋಗಿದೆ.’

ಅಂದಿನಿಂದ ಬಿಪಿನ್ ನನ್ನೊಟ್ಟಿಗೆ ಬಂದ. ಪ್ರತಿರಾತ್ರಿ ನನ್ನೊಂದಿಗೇ ಮಲಗುತ್ತಿದ್ದ. ನಾವಿಬ್ಬರೂ ಚೆನ್ನಾಗಿಯೇ ಹೊಂದಿಕೊಂಡಿದ್ದೆವು. ಅವನು ತನ್ನ ಮಾತಿನಂತೆಯೇ ನಡೆದುಕೊಂಡಿದ್ದ. ಯಾವ್ಯಾವುದೋ ಮೂಲಗಳಿಂದ ಹಣ ಹರಿದುಬರಲು ಶುರುವಾಗಿತ್ತು. ಅದರಿಂದ ಒಂದಿಷ್ಟು ಜಮೀನು, ಆಸ್ತಿಯನ್ನ ಕೊಂಡೆ. ನಮ್ಮೀ ಸಹವಾಸದ ಬಗ್ಗೆ ಯಾರೊಬ್ಬರಿಗೂ ಗೊತ್ತಿರಲಿಲ್ಲ. ಆದಾಗ್ಯೂ, ನಾನು ಹೀಗೆ ದಿಢೀರ್ ಶ್ರೀಮಂತನಾಗುತ್ತಿರುವ ಕುರಿತು ನನ್ನ ಕೆಲವು ಗೆಳೆಯರಿಗೆ ಮತ್ತು ಸಂಬಂಧಿಕರಿಗೆ ಅನುಮಾನಗಳು ಶುರುವಾದವು. ಅದೇ ವೇಳೆ, ನನ್ನ ಹೆಂಡತಿಯ ಜೊತೆ ರಾತ್ರಿ ಕಳೆಯಲು ನಿರಾಕರಿಸುತ್ತಿದ್ದೆನಾದ್ದರಿಂದ ಆಕೆ ಕೂಡ ನಿರಾಸೆಗೊಂಡಿದ್ದಳು. ಆದರೇನು ಮಾಡಲಿ, ದೆವ್ವ ಪಕ್ಕದಲ್ಲಿರುವಾಗ ಆಕೆಯನ್ನ ಒಂದೇ ಹಾಸಿಗೆಯಲ್ಲಿ ಹೇಗೆ ಮಲಗಿಸಿಕೊಳ್ಳಲಿ! ಈ ಬಿಪಿನ್ ಕೂಡ ಈ ಮಲಗೋ ವಿಷಯದಲ್ಲಿ ಬಹಳ ಕಟ್ಟುನಿಟ್ಟಾಗಿದ್ದ. ಮೊದಮೊದಲು ವರಾಂಡದಲ್ಲಿ ಮಲಗುತ್ತಿದ್ದೆ. ಆಮೇಲೆ ಯಾರೋ ನಮ್ಮ ಹಸುಗಳನ್ನೆಲ್ಲ ಕದಿಯಲು ಪ್ರಯತ್ನಿಸುತ್ತಿದ್ದಾರೆ, ಅದನ್ನೆಲ್ಲ ಕಾಯಬೇಕು ಅಂತಂದು ಕೊಟ್ಟಿಗೆಯಲ್ಲಿ ಬಿಪಿನ್‌ನೊಟ್ಟಿಗೆ ಮಲಗತೊಡಗಿದೆ.

ಹೆಂಡತಿಗೆ ಅನುಮಾನ ಬಂದು, ನಾನು ಬೇರೆ ಹೆಂಗಸಿನ ಜೊತೆ ಮಲಗುತ್ತಿರಬಹುದಾ ಅಂತ ಕದ್ದು ನೋಡುತ್ತಿದ್ದಳು. ಆದರೆ ಕೊಟ್ಟಿಗೆಯಲ್ಲಿ ಹುಲ್ಲಿನ ಮೇಲೆ ಒಬ್ಬನೇ ಮಲಗುತ್ತಿದ್ದುದನ್ನು ಕಂಡು ಅವಳಿಗೆ ಏನೂ ತೋಚದಾಗಿ, ಇದನ್ನೆಲ್ಲ ತನ್ನ ತವರು ಮನೆಯವರಲ್ಲಿ ಹೇಳಿಕೊಂಡಳು. ಅವರು ಬಂದವರೇ ಇದಕ್ಕೆಲ್ಲ ಕಾರಣ ಹೇಳು ಅಂತ ಒತ್ತಾಯ ಪಡಿಸತೊಡಗಿದರು.

ಇದೇ ವೇಳೆ, ನನ್ನ ಸಂಬಂಧಿಕರು ಕೂಡ ನನ್ನೀ ದಿಢೀರ್ ಶ್ರೀಮಂತಿಕೆ ಬಗ್ಗೆ ತಿಳಿದುಕೊಳ್ಳಬಯಸಿದರು. ಎಲ್ಲರೂ ಒಂದಾಗಿ ಒಂದು ದಿನ ನನ್ನನ್ನ ಪಟ್ಟಾಗಿ ಹಿಡಿದುಕೊಂಡರು. ಇದೆಲ್ಲದಕ್ಕೂ ಕಾರಣ ಹೇಳು ಅಂತ ಬಲವಂತ ಮಾಡತೊಡಗಿದರು.

‘ನಾನು ಸಾಯೋದು ನಿಮಗೆಲ್ಲ ಇಷ್ಟನಾ?’ ತಾಳ್ಮೆ ಕಳೆದುಕೊಂಡು ಒದರಿದೆ. ‘ನನ್ನೀ ಶ್ರೀಮಂತಿಕೆಯ ಬಗ್ಗೆ ಹೇಳಿಕೊಂಡಿದ್ದೇ ಆದಲ್ಲಿ, ನನ್ನ ಸಾವು ಖಂಡಿತ!’

ಆದರೆ ಅವರೆಲ್ಲ ಸುಮ್ಮನೆ ನಕ್ಕರು. ನಾನು ಏನನ್ನೂ ಹೇಳದೆ ಎಲ್ಲವನ್ನೂ ನನ್ನೊಳಗೆ ಬಚ್ಚಿಡಲು ಪ್ರಯತ್ನಿಸುತ್ತಿದ್ದೀನಿ ಅಂದುಕೊಂಡರು. ನನ್ನ ಹೆಂಡತಿಯ ಸಂಬಂಧಿಕರು, ನಾನು ಇನ್ನೊಬ್ಬಳನ್ನ ಇಟ್ಟುಕೊಂಡಿದ್ದೀನಿ ಅಂತಲೂ ಅನುಮಾನ ಪಟ್ಟರು. ಅವರ ಒತ್ತಾಯಗಳಿಗೆಲ್ಲ ಮಣಿದು ನಾನು ಕಡೆಗೂ ನಿಜ ಹೇಳಿಬಿಟ್ಟೆ.

ಈ ಸತ್ಯವನ್ನ ಮಾತ್ರ ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. (ಯಾರು ತಾನೇ ನಂಬುತ್ತಾರೆ ಹೇಳಿ!) ಇದರ ಬಗ್ಗೆ ಯೋಚನೆ ಮಾಡಿ ಹೇಳಿ ಅಂದೆ. ಆಯ್ತು ಅಂತ ತಮ್ಮ ಮನೆಗಳಿಗೆ ಹೊರಟುಹೋದರು.

ಆ ರಾತ್ರಿ ಬಿಪಿನ್ ನನ್ನೊಟ್ಟಿಗೆ ಮಲಗಲು ಬರಲಿಲ್ಲ. ನಾನು ಹಸುಗಳ ಪಕ್ಕದಲ್ಲಿ ಒಬ್ಬನೇ ಮಲಗಿದೆ. ಎಲ್ಲಿ ನಾನು ಮಲಗಿಕೊಂಡಿದ್ದಾಗ ಆತ ನನ್ನನ್ನ ಕೊಂದುಬಿಡುತ್ತಾನೋ ಅಂತ ಹೆದರಿಕೊಂಡಿದ್ದೆ. ಆದರೆ ಆತ ತನ್ನ ಪಾಡಿಗೆ ತಾನು ಹೊರಟುಹೋಗಿದ್ದ. ನನ್ನ ಒಳ್ಳೆಯ ದಿನಗಳು ಮುಗಿದವು ಅಂದುಕೊಳ್ಳುತ್ತ  ಹೆಂಡತಿಯೊಟ್ಟಿಗೆ ಮಲಗಲು ಶುರುಮಾಡಿದೆ.

ಮುಂದಿನ ಸಲ ನಾನು ಅದೇ ರಸ್ತೆಯಲ್ಲಿ ಬರುವಾಗ, ಬಿಪಿನ್ ಅದೇ ಹುಣಸೇಮರದ ಕೆಳಗೆ ಅಡ್ಡಲಾದ.

‘ಮೋಸದ ಗೆಳೆಯ’ ಜೋರಾಗಿ ಕಿರುಚಿದ. ಎತ್ತುಗಳನ್ನು ಎಳೆದು ನಿಲ್ಲಿಸಿದ. ‘ನೀನು ಬಯಸಿದ್ದನ್ನೆಲ್ಲ ಕೊಟ್ಟೆ. ಆದರೆ ನೀನು ಮೋಸ ಮಾಡಿಬಿಟ್ಟೆ!’

‘ಕ್ಷಮಿಸು. ತಪ್ಪಾಗಿದ್ದರೆ ನನ್ನನ್ನು ಕೊಂದುಬಿಡು.’
‘ಇಲ್ಲ ನಿನ್ನನ್ನ ಕೊಲ್ಲೋದಿಲ್ಲ. ನಾವು ಬಹಳ ದಿನಗಳ ಕಾಲ ಸ್ನೇಹಿತರಾಗಿದ್ದೆವು. ಆದರೆ ನಿನ್ನನ್ನ ಶಿಕ್ಷಿಸದೇ ಬಿಡೋದಿಲ್ಲ.’ ಹಾಗಂದವನೇ ಒಂದು ದಪ್ಪನೆಯ ದೊಣ್ಣೆಯನ್ನ ಎತ್ತಿಕೊಂಡು ನನಗೆ ಬಲವಾಗಿ ಮೂರೇಟು ಬಿಗಿದ. ಅಷ್ಟೇ, ನನ್ನ ಬೆನ್ನು ನೆಲ ಮುಟ್ಟುತ್ತಿತ್ತು.’

‘ಆಮೇಲೆ…..’ ಗಣಪತಿ ದೊಡ್ಡದೊಂದು ನಿಟ್ಟುಸಿರು ಬಿಟ್ಟ. ‘ಆಮೇಲೆ ನನ್ನ ಬೆನ್ನು ಮತ್ತೆ ನೆಟ್ಟಗಾಗಲೇ ಇಲ್ಲ. ನಾನು ಗೂನು ಬೆನ್ನಿನವನಾದೆ. ಹೆಂಡತಿ ನನ್ನನ್ನ ತೊರೆದು ತವರುಮನೆ ಸೇರಿಕೊಂಡಳು. ಕೆಲಸ ಮಾಡಲಾರದ ಕಾರಣ ಜಮೀನು ಹಾಳಾಯ್ತು. ಆಸ್ತಿಯನ್ನೂ ಮಾರಬೇಕಾಯಿತು. ನಾನು ಹಳ್ಳಿ ತೊರೆದು ನಗರಕ್ಕೆ ಬಂದೆ. ಒಂದೂರಿನಿಂದ ಇನ್ನೊಂದೂರಿಗೆ ಭಿಕ್ಷೆ ಬೇಡುತ್ತಾ ಅಲೆದೆ. ಈಗ ಪೀಪಲ್ ನಗರದಲ್ಲಿ ಇದ್ದೀನಿ. ಉಳಿದ ಊರಿಗಿಂತ ಇಲ್ಲಿನವರು ಹೆಚ್ಚು ಜಿಪುಣರು ಅಂತ ನನಗನ್ನಿಸುತ್ತೆ. ಖಾಸೇ ಬಿಚ್ಚೋದಿಲ್ಲ.’

ನನ್ನತ್ತ ನೋಡಿ ನಕ್ಕವನೇ, ನಾಲ್ಕು ಆಣೆಗಾಗಿ ಕಣ್ಣರಳಿಸಿ ಕೂತ.

‘ನಾನೀ ಕಥೆಯನ್ನ ನಂಬುತ್ತೀನಿ ಅಂದುಕೊಳ್ಳಬೇಡ. ಆದರೂ ಚೆನ್ನಾಗಿ ಹೇಳಿದ್ದೀಯಾ. ಹೀಗಾಗಿ, ತಕೋ ನಿನ್ನ ಹಣ.’
‘ಬೇಡ, ಬೇಡ’ ಅಂದವನೇ ಹಣ ಪಡೆಯಲು ನಿರಾಕರಿಸಿದ. ‘ನನ್ನನ್ನ ನಂಬದೇ ಹೋದರೆ ನಿಮ್ಮೀ ಹಣ ಖಂಡಿತ ಬೇಡ. ನಾಲ್ಕು ಆಣೆಗಾಗಿ ಸುಳ್ಳು ಹೇಳುವ ಆಸಾಮಿ ನಾನಲ್ಲ.’

ಕಡೆಗೂ ಕೊಟ್ಟೆ. ಈಸಿಕೊಂಡವನೇ ಶುಭದಿನ ಅನ್ನುತ್ತ ಹೊರಟ.

(ಮುಂದುವರಿಯುವುದು)

ಅಕ್ಟೋಬರ್ 2, 2009 at 6:45 ಫೂರ್ವಾಹ್ನ ನಿಮ್ಮ ಟಿಪ್ಪಣಿ ಬರೆಯಿರಿ

ಜೋಕೆ ಜಾಣೆ ಇದು ಜಾಹಿರಾ…ಥೂ!

(ಸದ್ಯಕ್ಕೆ ಏನೂ ಬರೆಯಲಾಗದ ನನ್ನ ಸೋಮಾರಿತನಕ್ಕೆ ಕ್ಷಮೆ ಇರಲಿ. ಈ ಸಲ ಸಣ್ಣದೊಂದು ಬದಲಾವಣೆ. ನನ್ನ ಬದಲಾಗಿ ಗೆಳೆಯ ಚೈತನ್ಯ ಹೆಗಡೆ ಮುಗಿಲಕಂಪಿಗಾಗಿ ಬರೆದಿದ್ದಾನೆ. ಓದಿ ನಿಮಗೇನನ್ನಿಸಿತು ನಾಲ್ಕು ಸಾಲು ಬರೆಯುವುದು ಮರೆಯದಿರಿ.)

ಚೆಲುವೆ ಜಾಹಿರಾ
ಥೂ ಎಂದು ಉಗಿದರೆ ಅದೇ ಒಂದು ಜಾಹಿರಾತು..

ಹಾಗಂತ ವೈಯೆನ್ಕೆ ಬರೆದಿದ್ದರು. ತಮಾಷೆಯ ಮಾತೀಗ ತೀರ ವಾಸ್ತವ. ಎಲ್ಲ ಜಾಹಿರಾತುಗಳಲ್ಲೂ ಇದೀಗ ಉಗಿಯಲು, ಉಲಿಯಲು, ಉನ್ಮಾದಿಸಲು ಮಾನಿನಿಯರೇ ಬೇಕು. ಶೇವಿಂಗ್ ಕ್ರೀಮ್ ಜಾಹಿರಾತಿಗೂ ಬೇಕು ಸುಹಾಸಿನಿಯರ ಹಾಜರಿ. ಆದರೆ, ತಕರಾರಿನ ವಿಷಯ ಅದಲ್ಲ.

ದೃಶ್ಯ ಮಾಧ್ಯಮದಲ್ಲಿ  ಮಹಿಳೆಯರ ಚಿತ್ರಣ ಮೊದಲಿಂದಲೂ ಚರ್ಚೆಯ ವಸ್ತುವೇ. ಸೌಂದರ್ಯದ ಹೆಸರಲ್ಲಿ ಮಹಿಳೆಯನ್ನು ಅತಿಕಡಿಮೆ ಬಟ್ಟೆಯಲ್ಲಿ ತೋರಿಸುವುದು ಅಬಾತ ಬೆಳವಣಿಗೆ. ಅದು ಜಾಹಿರಾತು ಕ್ಷೇತ್ರದಲ್ಲೂ ಮುಂದುವರಿದಿದೆ. ಅದಕ್ಕೂ ಮಿಕ್ಕಿ ಗಮನಿಸಬೇಕಾದ ಕೆಲ ಅಂಶಗಳಿಲ್ಲಿವೆ.

*ಸುವಾಸನಾ ಸಿಂಪಡಿಕೆ ಉತ್ಪನ್ನವೊಂದರ ಜಾಹಿರಾತು ಹೀಗಿದೆ. ಮೇಕಪ್ ವ್ಯಾನ್‌ನಿಂದ ಹೊರಬರುತ್ತಿರುವ ಹುಡುಗಿ. ಅದನ್ನೇ ಕಾಯುತ್ತಿದ್ದ ಹುಡುಗ ತನ್ನ ಮೈಗೆಲ್ಲಾ ‘ಆ’ ಸೆಂಟ್ ಪೂಸಿಕೊಳ್ಳುತ್ತಾನೆ. ಆ ಹುಡುಗಿ ಸೆಂಟ್‌ನ ಘಮಕ್ಕೆ ಮೋಹಿತಳಾಗಿ ಜಗದ ಪರಿವೆಯೇ ಇಲ್ಲದಂತೆ ಅವನ ತೆಕ್ಕೆಗೆ ಬೀಳುತ್ತಾಳೆ.

*ಅಂಥದ್ದೇ ಇನ್ನೊಂದು ಜಾಹಿರಾತಿನಲ್ಲಿ ಮೈಗೆಲ್ಲಾ ಕೆಸರು ಪೂಸಿಕೊಂಡ ಯುವಕನನ್ನು ಮುತ್ತಿಕೊಳ್ಳುವ ಹುಡುಗಿಯರು ಎಗ್ಗಿಲ್ಲದೇ ಆತನ ಮುಖ-ಮೈಗಳ ಕೆಸರು ಕಚ್ಚುತ್ತಾರೆ. ಯಾಕೆಂದರೆ ಆತ ಸೆಂಟ್ ಪುಸಿಕೊಂಡಿರುತ್ತಾನೆ. ಅದು ಹುಡುಗಿಯರು ಹತ್ತಿಕ್ಕಿಕ್ಕೊಳ್ಳಲಾಗದ ಅತ್ತರು

*ಇಂಥದೇ ಸುಗಂಧ ಉತ್ಪನ್ನದ ಕುರಿತ ಇನ್ನೊಂದು ಜಾಹಿರಾತಂತೂ ಇನ್ನೂ ಒಂದು ಹೆಜ್ಜೆ ಮುಂದಿರಿಸಿದೆ. ಸೆಂಟ್ ಪೂಸಿಕೊಂಡ ಹುಡುಗನೊಬ್ಬನಿಗೆ ಅಕಸ್ಮಾತ್ ಢಿಕ್ಕಿ ಹೊಡೆದ ಮಹಿಳೆಯೋರ್ವಳು ಅಲ್ಲೇ ಮೋಹಿತಳಾಗಿ ಅವನೊಂದಿಗೆ ರೊಮಾನ್ಸ್  ಮಾಡಿದಂತೆ ಕನಸಿಗೆ ಜಾರುತ್ತಾಳೆ.

*ಬ್ಯೂಟಿ ಕ್ರೀಂಗಳ ಕುರಿತ ಜಾಹಿರಾತುಗಳಂತೂ ಕಪ್ಪು ಬಣ್ಣದವರು ಭೂಮಿಯಲ್ಲಿ ಬದುಕಲಿಕ್ಕೇ ಅಯೋಗ್ಯರು ಎಂದು ಸೂಚಿಸುವಂತಿರುತ್ತವೆ. ಹುಡುಗಿಗೆ ನೌಕರಿ ಸಿಗಲು, ಹುಡುಗ ಒಲಿಯಲು ಎಲ್ಲವಕ್ಕೂ ಬೆಳ್ಳಗಾಗಿರಬೇಕು. ಹಾಗೆ ಶ್ವೇತವರ್ಣೀಯರಾಗಿರಲು ಮಹಿಳೆಯರು ತಮ್ಮ ಬ್ಯೂಟಿಕ್ರೀಂ ಲೇಪಿಸಿಕೊಳ್ಳಬೇಕು ಎಂಬ ಧಾಟಿ ಇವುಗಳದ್ದು.

ಇವನ್ನೆಲ್ಲ ಆ ಕ್ಷಣದಲ್ಲಿ ಒಂದು ತಮಾಷೆಯನ್ನಾಗಿ ನೋಡಿ ಮರೆತುಬಿಡಬಹುದು. ಆದರೆ ಒಂದೊಮ್ಮೆ ಸಿನಿಮಾಗಳು ಮಾಡಿದಂತೆ ಇವತ್ತಿನ ಜಾಹಿರಾತುಗಳೂ ಸಹ ಮಹಿಳೆಯ ಕುರಿತಾದ ಒಂದಷ್ಟು ‘ಸ್ಟಿರಿಯೋಟೈಪ್’ಗಳನ್ನು ಹುಟ್ಟುಹಾಕುತ್ತಿವೆ. ಅವು ಹೊರಹಾಕುತ್ತಿರುವ ಸಂದೇಶಗಳು ಮಾತ್ರ ಭಯಾನಕವಾಗಿವೆ.

ಅದೆಷ್ಟೇ ಸ್ವರ್ಗಾನುಭೂತಿಯ ಸೆಂಟ್ ಆಗಿರಲಿ. ಯಾವ ಮಹಿಳೆಯಾದರೂ ಹಿಂದು-ಮುಂದು ಯೋಚಿಸದೇ ಸೆಂಟ್ ಪೂಸಿಕೊಂಡ ಹುಡುಗನನ್ನು ತಬ್ಬಿಕೊಂಡು ಬಿಡುತ್ತಾಳೆಯೇ? ಕೇವಲ ಸೆಂಟ್ ಪೂಸಿಕೊಂಡ ಮಾತ್ರಕ್ಕೆ ಹುಡುಗಿಯರನ್ನೆಲ್ಲಾ ವಶವಾಗಿಸಿಕೊಂಡುಬಿಡಬಹುದು ಎನ್ನಲು ಅವರೇನು ಅಷ್ಟು ಅಗ್ಗಕ್ಕೆ ಬಿದ್ದವರಾ?

ಇದನ್ನು ಕೇವಲ ಒಂದು ತಮಾಷೆಯ ಜಾಹಿರಾತು ಎಂದುಕೊಳ್ಳುವುದಕ್ಕೆ ಮೊದಲು ತುಸು ಯೋಚಿಸಬೇಕಾಗಿದೆ. ಉತ್ಪನ್ನದ ಹೆಚ್ಚುಗಾರಿಕೆ ಚಿತ್ರಿಸುವ ಭರದಲ್ಲಿ ವ್ಯಕ್ತಿತ್ವವನ್ನು ಇಷ್ಟು ಕೇವಲವಾಗಿ ತೋರ್ಪಡಿಸಿದರೆ ಹೇಗೆ? ಇದನ್ನು ಗೌರವಯುತವಾಗಿ ಚಿತ್ರಿಸುವ ಎಲ್ಲ ಅವಕಾಶಗಳಿದ್ದವು. ಸೆಂಟ್ ಪೂಸಿಕೊಂಡವನತ್ತ ಒಂದು ವಾರೆ ನೋಟ, ಮುಗಳ್ನಗು.. ಇಷ್ಟರ ಬಗ್ಗೆ ತಕರಾರಿಲ್ಲ. ಒಂದು ಉತ್ತಮ ಸುಗಂಧಕ್ಕೆ ಅಷ್ಟರಮಟ್ಟಿಗಿನ ತಾಕತ್ತಿದ್ದರೆ ಅದರಲ್ಲೇನು ಅಸಹಜವಿಲ್ಲ ಬಿಡಿ. ತೀರ ತನ್ನತನವನ್ನೇ ಮರೆತು ಸೆಂಟ್ ಹಾಕಿಕೊಂಡವನಿಗೆ ಸರ್ವಸ್ವವನ್ನೂ ಅರ್ಪಿಸುವ ಗತಿ ಯಾವ ಹುಡುಗಿಗೂ ಬಂದಿಲ್ಲ.

ಆಕರ್ಷಣೆ ಎನ್ನೋದು ಒಟ್ಟಾರೆ ವ್ಯಕ್ತಿತ್ವದ ಪ್ರಭಾವದಿಂದ ಹುಟ್ಟೋದು. ಒಬ್ಬ ವ್ಯಕ್ತಿಯ ಮಾತು, ನಡೆ, ಆತನ ಹವ್ಯಾಸ ಇವೆಲ್ಲ ಒಟ್ಟುಗೊಂಡರೆ  ಆತನೆಡೆಗೆ ಒಂದು ಆಕರ್ಷಣೆ ಬೆಳೆಯುತ್ತದೆ ಎನ್ನುವ ಅಂಶ ಒಪ್ಪಬಹುದು. ಈ ಹಂತದಲ್ಲಿ ಆತನ ಉಡುಗೆ-ತೊಡುಗೆಗಳೂ ಒಂದಷ್ಟು  ಪ್ರಭಾವ ಬೀರುತ್ತವೆ ಅನ್ನೋದನ್ನು ಒಪ್ಪೋಣ. ಆದರೆ ಬಾಹ್ಯ ಸೌಂದರ್ಯವೇ ವ್ಯಕ್ತಿತ್ವವಲ್ಲವಲ್ಲ? ಬಾಹ್ಯ ಸೌಂದರ್ಯವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಶರಣಾಗುತ್ತಾನೆ ಎನ್ನುವುದು ಆತನ ಬುದ್ಧಿಮಟ್ಟವನ್ನೇ ಗೇಲಿ ಮಾಡಿದಂತೆ.

ನೌಕರಿಗಾಗಿ ಹುಡುಕಾಡುತ್ತಿರುವ ಹುಡುಗಿ ಸುಂದರಿಯಾಗಿರಲೇಬೇಕು. ಹಾಗಂತ ಹೇಳುವಂತಿರುತ್ತವೆ ಬ್ಯೂಟಿ ಕ್ರೀಂ ಜಾಹಿರಾತುಗಳು. ಅಂದರೆ ಅವಳ ಬುದ್ಧಿವಂತಿಕೆ, ಪಡೆದ ಮಾರ್ಕ್ಸು, ವ್ಯವಹಾರ ಕುಶಲತೆ ಇತ್ಯಾದಿ ಗುಣಗಳೆಲ್ಲವೂ ಗೌಣ ಎಂದಂತಾಯಿತು. ವಾಸ್ತವದಲ್ಲಿ ಕಪ್ಪು ಸೌಂದರ್ಯವೇ ಅಲ್ಲ ಎಂದಂತಾಯಿತು. ಇನ್ನೂ ಕೆಟ್ಟದೆನಿಸುವುದೇನೆಂದರೆ, ಇಂಥ ಜಾಹಿರಾತುಗಳು ಬಿಂಬಿಸುವ ಪ್ರಕಾರ ಮೇಲಧಿಕಾರಿಗಳನ್ನು ಮೆಚ್ಚಿಸಲು ನಿಮ್ಮ ಸೌಂದರ್ಯವೊಂದೇ ಮಾರ್ಗ!

ನೋಡಲು ಕಪ್ಪಾಗಿರುವ ಆದರೆ ವಿಷಯಜ್ಞಾನ ಉತ್ತಮವಾಗಿರುವ ಹುಡುಗಿಯರದೇನು ಕತೆ? ಅವರೆಲ್ಲ ನಮ್ಮ ಕಂಪನಿಯ ಕ್ರೀಂ ಹಚ್ಚಿಕೊಳ್ಳಲಿ ಎಂಬುದು ವ್ಯಾಪಾರದ ಮಾತಾಯಿತು. ಆದರೆ ಹಾಗೆ ಹೇಳುವವರಿಗೂ ಗೊತ್ತಿರುವ ವಿಷಯವೆಂದರೆ ಕ್ರಿಂ ಹಚ್ಚಿಕೊಂಡ ಮಾತ್ರಕ್ಕೆ ಯಾರೂ ಸುರ ಸುಂದರಿಯರಾಗುವುದಿಲ್ಲ. ಬೆಳ್ಳಗಾದರೂ ತೀರಾ ಜಾಹಿರಾತು ತೋರಿಸಿದ ಮಟ್ಟಕ್ಕೆ ತ್ವಚೆ ಬದಲಾಗುವುದಿಲ್ಲ. ಅಂದ ಮೇಲೆ ಕೊನೆಗೂ ಕಪ್ಪಾಗಿಯೇ ಉಳಿಯುವವರ ಮನದಲ್ಲಿ ಈ ರೀತಿಯ ಸಂದೇಶಗಳು ಎಂಥ ಭಾವನೆ ಹುಟ್ಟು ಹಾಕಬಹುದು? ಕಪ್ಪೆಂಬ ಕೀಳರಿಮೆ ಅವರನ್ನು ಕಿತ್ತು ತಿನ್ನದಿರದೇ?

ಇದೂ ಒಂದು ಸಂಚು..

ಜಾಹಿರಾತಿನಲ್ಲಿ ಮಹಿಳೆಗೆ ಪ್ರಾಮುಖ್ಯತೆ ಬಂದು ಆಕೆ ಕೈತುಂಬ ಕಮಾಯಿಸುವಂತಾದರೆ ನಿಮಗೇನು ಹೊಟ್ಟೆ ಉರಿ? ಹೀಗೂ ಒಂದು ವಾದ ಹೂಡಿಬಿಡಬಹುದು. ಆದರೆ, ಸ್ವಾತಂತ್ರ್ಯದ ಹೆಸರಲ್ಲಿ ಮಹಿಳೆಯನ್ನು ಬೇಕಾಬಿಟ್ಟಿ ಚಿತ್ರಿಸುವುದರಲ್ಲೂ ಮತ್ತದೇ ಪುರುಷ ಪ್ರಧಾನ ವ್ಯವಸ್ಥೆಯ ಸಂಚಿದೆ. ಮಹಿಳೆಗೆ ವಿದ್ಯಾಭ್ಯಾಸ ನಿರಾಕರಿಸಿ ಅವಳನ್ನು ಒಳಮನೆಯಲ್ಲಿ ಕೂಡಿಹಾಕಿದ್ದರಲ್ಲಿ ಆಕೆಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳಬಹುದೆಂಬ ಧೂರ್ತತೆಯಿತ್ತು. ಇದೀಗ ಸ್ವಾತಂತ್ರ್ಯದ ಹೆಸರಲ್ಲಿ ನೀನು ಎಷ್ಟಾದರೂ ಬಟ್ಟೆ ಬಿಚ್ಚು , ಸೌಂದರ್ಯವೇ ಎಲ್ಲ ಅನ್ನುತ್ತಿರುವುದರಲ್ಲೂ ಸಹ ಆಕೆಯನ್ನು ಸ್ವೇಚ್ಛೆಗೆ ತಿರುಗಿಸಿ ತನ್ನಿಷ್ಟಕ್ಕೆ ಬಳಸಿಕೊಳ್ಳುವ ಧೋರಣೆಯಿದೆ.
ಸ್ಟಿರಿಯೋಟೈಪ್
ಯಾವುದೋ ಒಂದು ವ್ಯತಿರಿಕ್ತ ಸನ್ನಿವೇಶವನ್ನಿರಿಸಿ ಹೆಣ್ಣನ್ನು ಚಿತ್ರಿಸುವುದು ಮಾಧ್ಯಮಗಳಿಗೆ ಮೊದಲಿನಿಂದಲೂ ಬೆಳೆದು ಬಂದಿರುವ ವ್ಯಾ. ಹಳೆಯ ಚಲನಚಿತ್ರಗಳನ್ನು ಗಮನಿಸಿದರೆ ಅಲ್ಲಿ ಅಸಹಾಯಕಳಾಗಿ ಭೋರಿಡುವ ಹೆಣ್ಣಿನ ಪಾತ್ರ ದಂಡಿಯಾಗಿ ಬಂದು ಹೋಗಿದೆ. ಯಾವತ್ತೂ ಗಂಡನಿಗೆ ವಿಧೇಯಳಾಗಿರುವ ಮತ್ತು ಹಾಗೆಯೇ ಇರಬೇಕಾದ ಚಿತ್ರಣ. ಗಂಡ ಸತ್ತು ಹೋದರೆ ನಂತರ ಬದುಕೇ ಇಲ್ಲದಂತೆ ಬವಣೆ ಪಡುವ, ಗೋಳು ತಾಳಲಾರದೇ ಆತ್ಮಹತ್ಯೆಗೆ ಎಳಸಿಬಿಡುವ ಪಾತ್ರಗಳಲ್ಲಿ ಸಾಕಷ್ಟು ಸಾರಿ ಆಕೆಯನ್ನು ನೋಡಿಯಾಗಿದೆ. ತಮಾಷೆಯೆಂದರೆ, ಒಬ್ಬ ಬಾಸ್‌ನ ಪರ್ಸನಲ್ ಸೆಕ್ರೆಟರಿ ಎಂದರೆ ಅವಳು ಹೆಣ್ಣೇ ಆಗಿರಬೇಕು. ಅದರಲ್ಲೂ ಸುರಸುಂದರಿಯಾಗಿದ್ದಿರಬೇಕು ಎಂಬ ಮಟ್ಟಿಗೆ ಕಾದಂಬರಿ ಹಾಗೂ ಸಿನಿಮಾಗಳು ನಮಗೆ ಕಲ್ಪನೆಯನ್ನು ಕಟ್ಟಿಕೊಟ್ಟಿವೆ.
ಅಂಥದೇ ಒಮ್ಮುಖದ ಚಿತ್ರಣ ನೀಡುವತ್ತ ಈಗಿನ ಜಾಹಿರಾತುಗಳೂ ಹೆಜ್ಜೆ  ಇಟ್ಟಿವೆ. ನಿರ್ದಿಷ್ಟ ಉತ್ಪನ್ನವೊಂದನ್ನು ಬಳಸುವ ಪುರುಷನ ಬಗಲಿಗೆ ಹಿಂದೆ ಮುಂದೆ ಯೋಚಿಸದೆ ಜೋತು ಬೀಳುವವರಂತೆ ಹುಡುಗಿಯರನ್ನು ಚಿತ್ರಿಸಲಾಗುತ್ತಿದೆ.

-ಚೈತನ್ಯ ಹೆಗಡೆ

ಅಕ್ಟೋಬರ್ 14, 2008 at 8:02 ಫೂರ್ವಾಹ್ನ 9 comments

ಬಿಳಿ ಕಾಗೆ ಹಿಡಿಯಲು ಬರುವಿರಾ?

 

‘ಶ್ರೀರಂಗಪಟ್ಟಣದ ರಂಗನ ಮೇಲೆ (ಅಥವಾ ದೇವಸ್ಥಾನ) ಬಿಳಿಕಾಗೆ ಕೂತು ನೀರು ಕುಡಿಯುತ್ತದೆ. ಹಾಗಾದ ದಿನ ಕೆಆರ್ ಎಸ್ ಅಣೆಕಟ್ಟೆ ಒಡೆದು ಮೈಸೂರು ನೀರಿನಲ್ಲಿ ಮುಳುಗುತ್ತದೆ.’ ಹಾಗಂತ ಯಾರೋ ಸ್ವಾಮಿಗಳು ಹೇಳಿದ್ದು, ಮುನ್ನೆಚ್ಚರಿಕೆ ಕೈಗೊಳ್ಳಿ ಅಂತ ಎಚ್ಚರಿಸಿದ್ದು ಗೊತ್ತಿರಬಹುದು. ಪತ್ರಿಕೆಗಳು, ಟೀವಿ ಚಾನಲ್ಲುಗಳೂ ಈ ಸುದ್ದಿಯನ್ನ ಪ್ರಕಟ ಮಾಡಿದ್ದವು.

ಹೀಗೆ ಹಬ್ಬಿದ ಸುದ್ದಿ ಹೇಗೆಲ್ಲ ರೂಪ ಪಡೆದು ಕಡೆಗೆ ಮತ್ತೇನೇನೋ ಸೇರಿಸಿಕೊಂಡು ಒಂದು ಭಯಂಕರ ಸುದ್ದಿಯಾಗಿ ಬಿಟ್ಟಿದೆ. ಸದ್ಯ ಇಲ್ಲಿ ಮೈಸೂರಿನ ಯಾವುದೇ ಹಳ್ಳಿಗೆ ಹೋದರೂ, ಇಲ್ಲಿನ ಟೀ ಅಂಗಡಿಯಲ್ಲಿ, ಅರಳೀಕಟ್ಟೆಯಲ್ಲಿ ಇದೇ ಮಾತು. ತಮಾಷೆ ಅಂದ್ರೆ ಮೈಸೂರಿನಲ್ಲಿ ಜಲಪ್ರಳಯವಾಗುತ್ತದೆ ಅನ್ನುವುದರಿಂದ ಹಿಡಿದು , ಈಗ ನಡಿತಿರೋ ಬಿಗ್ ಬ್ಯಾಂಗ್ ನ ಪ್ರಯೋಗದಿಂದ ಭೂಮಿ ನಾಶ ಆಗುತ್ತೆ ಅನ್ನುವವರೆಗೂ, ಅದಕ್ಕೂ ಬಿಳಿಕಾಗೆಗೂ ಸಂಬಂಧ ಕಟ್ಟಿ ಮಾತನಾಡುತ್ತಿರುವುದು!

ಮೊನ್ನೆ ಮೊನ್ನೆ ಸ್ವಾಮಿಗಳು ಹೇಳಿದ ರೀತಿಯಲ್ಲೇ ಶ್ರೀರಂಗಪಟ್ಟಣದಲ್ಲಿ ಬಿಳಿಕಾಗೆ ಕಾಣಿಸಿಕೊಂಡಿದ್ದು, ಅದಕ್ಕೆ ಅಪಶಕುನವೇನೋ ಎಂಬಂತೆ ಯಾವತ್ತು ಹೊರಗೆ ತರದಿದ್ದ ದೇವರ ಮೂರ್ತಿಯೊಂದು ಬಿದ್ದು ಮುಕ್ಕಾದದ್ದು ಎಲ್ಲವನ್ನೂ ಪತ್ರಿಕೆಗಳು ವರದಿ ಮಾಡಿ ಜನರಲ್ಲಿ ಇನ್ನಷ್ಟು ಭಯ ಹುಟ್ಟಿಸಿದ್ದಂತೂ ನಿಜ. ಹಾಗಾದ ಮರುದಿನವೇ ನಮ್ಮ ಪಕ್ಕದ ಮನೆಗಳಲ್ಲಿ (ನಮ್ಮ ಮನೆಯೂ ಸೇರಿ) ಈ ಬಗ್ಗೆ ಭಾರೀ ಚರ್ಚೆ ನಡೀತು. ಇದ್ದಬದ್ದ ಹೆಂಗಸರೆಲ್ಲ ಸೇರಿ ಮುಂಬರುವ ಜಪಪ್ರಳಯದ ಸಾಧಕ- ಭಾದಕ ಕುರಿತು ಗಂಭೀರ ಚರ್ಚೆಗೆ ತೊಡಗಿದ್ರು. ಚಿನ್ನ-ಗಿನ್ನ ಮಾಡಿಸೋದು , ಆಸ್ತಿ ಮಾಡೋದು ಬಿಟ್ಟು ಇರೋವಷ್ಟು ದಿನ ಸುಖವಾಗಿ ತಿಂದುಂಡು ಬದುಕಬೇಕಪ್ಪಾ ಅಂತೆಲ್ಲ ನಿರ್ಧಾರಕ್ಕೆ ಬರೋಕೆ ಶುರುಮಾಡಿದ್ರು.

ಇಷ್ಟೆಲ್ಲವನ್ನೂ ಕೇಳಿಸಿಯೂ ಕೇಳಿಸದವನಂತಿದ್ದ ನನಗೆ ಅದ್ಯಾಕೋ ಈ ಬಗ್ಗೆ ಭಾರೀ ಕುತೂಹಲ ಬಂದುಬಿಟ್ಟಿದೆ. ಮೊನ್ನೆ ಶ್ರೀರಂಗಪಟ್ಟಣದಲ್ಲಿ ನಿಜವಾಗಿ ಬಿಳಿಕಾಗೆ ಕಾಣಿಸಿಕೊಂಡಿತಾ? ಅಥವಾ ಯಾರೋ ಕಾಣಿಸಿಕೊಂಡಂತೆ ಮಾಡಿ ಸುದ್ದಿ ಹಬ್ಬಿಸಿದರಾ? ಇದೆಲ್ಲ ಜನರನ್ನು ತಮ್ಮತ್ತ ಸೆಳೆಯಲು ಪವಾಡದಾರಿಗಳು ಮಾಡುತ್ತಿರುವ ಸಂಚಾ? ಒಂದು ವೇಳೆ ಕಾಣಿಸಿಕೊಂಡಿದ್ದೇ ಆದ್ರೆ ಅದು ಎಲ್ಲಿಂದ ಬಂತು? (ಯಾರೋ ಹೇಳಿದ್ರು ಶಿವಾಜಿನಗರ ಮಾರ್ಕೆಟ್ ನಲ್ಲಿ ಬೇಕಾದಷ್ಟು ಬಿಳಿಕಾಗೆಗಳು ಸಿಕ್ಕುತ್ವೆ ಅಂತ) ಯಾರಾದರೂ ಬೇಕಂತ ತಂದು ಬಿಟ್ರಾ? ಅಥವಾ ಅಷ್ಟು ಶ್ರಮ ತೆಗೆದುಕೊಳ್ಳದೇ ಕಪ್ಪು ಕಾಗೆಯೊಂದನ್ನ ಹಿಡಿದು ಅದಕ್ಕೇ ಬಿಳಿ ಬಣ್ಣ ಬಳೆದು ದೇವಸ್ಥಾನಕ್ಕೆ ತಂದು ಬಿಟ್ರಾ? (ಯಾಕಂದ್ರೆ ತಿಂಗಳಿಗೊಮ್ಮೆಯಾದರೂ ಶ್ರೀರಂಗಪಟ್ಟಣಕ್ಕೆ ಹೋಗ್ತಿರ್ತಿನಿ. ಎಂದೂ ಬಿಳಿಕಾಗೆ ಕಾಣಿಸಿಕೊಂಡಿದ್ದಿಲ್ಲ)  ಹೀಗೆ ತರಾವರಿ ಕುತೂಹಲೀ ಪ್ರಶ್ನೆಗಳು ನನ್ನನ್ನ ಕಾಡತೊಡಗಿವೆ.

ಅದಕ್ಕೆ ಒಂದು ನಿರ್ಧಾರಕ್ಕೆ ಬಂದಿದ್ದೀನಿ. ಆದದ್ದಾಗಲೀ, ಒಂದು ಭಾನುವಾರ ಪಟ್ಟಣಕ್ಕೆ ಲಗ್ಗೆ ಇಟ್ಟು, ಇಡೀ ದಿನ ಬಿಳಿಕಾಗೆಯನ್ನ ಹುಡುಕೋ ಪ್ರಯತ್ನ ಮಾಡ್ಬೇಕು. ಒಂದು ವೇಳೆ ಸಿಕ್ಕಿದ್ರೆ ಅದನ್ನೊಮ್ಮೆ ನೀರಿನಲ್ಲಿ ತೊಳೆದು ಬಿಡಬೇಕು (ಸರ್ಫ್ ಎಕ್ಸೆಲ್ ಬಳಸಿ). (ಕಾಗೆ ಎಂದಾದರೂ ಕೈಗೆ ಸಿಗುತ್ತಾ, ಅದೂ ಬಿಳಿ ಕಾಗೆ!) ಹಾಗಾದ ಮೇಲೂ ಅದರ ಬಣ್ಣ ಬಯಲಾಗದಿದ್ರೆ , ಅದು ದೇವಸ್ಥಾನದಲ್ಲಿ ಕೂತದ್ದೇಕೆ ಕೇಳಬೇಕು. ಇದೆಲ್ಲ ನಿಜಕ್ಕೂ ನಿಜ ಅನಿಸಿದ್ರೆ , ಭವಿಷ್ಯ ಹೇಳಿದ ಸ್ವಾಮಿಯ ಕಾಲಿನ ಮುಂದೆ ಉದ್ದುದ್ದ ಅಡ್ಡಬಿದ್ದು , ಹಿಂಗೆಲ್ಲ ಯೋಚಿಸಿದಕ್ಕೆ ನನ್ನನ್ನ ಕ್ಷಮಿಸಿ ಅಂತ ಕೇಳ್ಬೇಕು!

ನನ್ನೀ ಹುಚ್ಚು ಸಾಹಸದಲ್ಲಿ ಭಾಗವಹಿಸುವ, (ನನ್ನಂತೇ ಹುಚ್ಚಿರುವ!) ಆಸಕ್ತರು, ಬಿಳಿ ಕಾಗೆ ಹಿಡಿಯಲು ಬರಬಹುದು.

(ವಿ.ಸೂ.: ನಾನಿನ್ನೂ, ಪಟ್ಟಣದ ಕಾಗೆ ಕಪ್ಪೋ, ಬಿಳಿಯೋ ಎಂಬ ದ್ವಂದ್ವದಲ್ಲಿರುವುದರಿಂದ ಸದ್ಯಕ್ಕೆ ಎರಡು ಬಣ್ಣಗಳುಳ್ಳ ಕಾಗೆಯ ಚಿತ್ರ ಕೊಡಲಾಗಿದೆ. ಬಿಳಿಯ ಕಾಗೆ ಸಿಕ್ಕ ನಂತರ (ಸಿಕ್ಕರೆ!, ಅದು ನನ್ನ ಕ್ಯಾಮರಾಕ್ಕೆ ಪೋಸು ಕೊಟ್ಟರೆ) ಅದರ ಚಿತ್ರವನ್ನು ತಪ್ಪದೆ ಪ್ರಕಟಿಸಲಾಗುವುದು.)

ಚಿತ್ರ ಕೃಪೆ: Azmi Bogart

ಸೆಪ್ಟೆಂಬರ್ 19, 2008 at 10:51 ಫೂರ್ವಾಹ್ನ 4 comments

ಇಲ್ಲಿ ಬಂದವರು ಅಲ್ಲಿಗೂ ಹೋಗಿಬನ್ನಿ

ಹೊಸ ಚಿತ್ರ ಬರೆಯುವ ಮನಸ್ಸಿತ್ತು. ಬ್ರಶ್, ಕ್ಯಾನ್‌ವಾಸ್ ಎಲ್ಲವೂ ಸಿದ್ಧವಿದ್ದವು. ಮೆತ್ತುವುದೊಂದು ಬಾಕಿಯಿತ್ತು. ಈಗ ಅದೂ ಆಗಿದೆ. ‘ಚಿತ್ರ’ ನಿಮ್ಮ ಮುಂದಿದೆ, ‘ಕುಲುಮೆ’ಯೊಟ್ಟಿಗೆ.

ಕುಲುಮೆಯ ಕೊಂಡಿ ಇಲ್ಲಿದೆ: http://chitrakulume.wordpress.com/

ಇಲ್ಲಿ ಬರುವವರು ಅಲ್ಲಿಗೂ ಹೋಗಿಬನ್ನಿ.

ಸೆಪ್ಟೆಂಬರ್ 15, 2008 at 2:51 ಅಪರಾಹ್ನ ನಿಮ್ಮ ಟಿಪ್ಪಣಿ ಬರೆಯಿರಿ

ಪರೀಕ್ಷೆ ಹೊತ್ತಲ್ಲಿ ಒಂಟಿ ಹುಡುಗಿಯ ಧ್ಯಾನ

ಇವತ್ತು ಕತ್ತಲು ಕಳೆದು ಬೆಳಕು ಮೂಡಿ ನಾಳೆಯಾದರೆ ಎಂಎ ಪರೀಕ್ಷೆ. ಹಾಗಂತ ಒಬ್ಬರಮೇಲೊಬ್ಬರು ಮೆಸೇಜು ಮಾಡಿ ಎಚ್ಚರಿಸುತ್ತಿದ್ದಾರೆ! ನಾನಿನ್ನು ಪುಸ್ತಕದ ಧೂಳು ಕೆಡವಿ ಪುಟ ತೆರೆಯುವ ಸಾಹಸವನ್ನೂ ಕೈಗೊಂಡಿಲ್ಲ! ಯಾವತ್ತೂ ಅಷ್ಟೆ. ಈ ಪರೀಕ್ಷೆಗೆ ಓದೋದು ಅಂದ್ರೆ ನಂಗೆ ಎಲ್ಲಿಲ್ಲದ ಜಿಗುಪ್ಸೆ, ವೈರಾಗ್ಯ. ಪಠ್ಯ ಪುಸ್ತಕಗಳು ಅಂತಂದ್ರೆ ಒಂದ್ ರೀತಿ ಮುಜುಗರ. ಸಿಲಬಸ್ ಅನ್ನೋ ಒಂದೇ ಕಾರಣಕ್ಕೆ ಅದೆಷ್ಟೋ ಒಳ್ಳೊಳ್ಳೆ ಪುಸ್ತಕಗಳನ್ನೆಲ್ಲ ಓದದೇ ಹಾಗೇ ಮಡಿಸಿಟ್ಟಿದ್ದೀನಿ. ಡಿಗ್ರಿ ಎರಡನೇ ವರ್ಷದಲ್ಲಿದ್ದಾಗ ‘ಶಬ್ದಮಣಿದರ್ಪಣಂ’ ನನ್ನ ಸಿಲಬಸ್ಸಾಗಿತ್ತು. ಮೊದಲ ದಿನ ಕ್ಲಾಸಿಗೆ ಹೋಗಿದ್ದೇ ಕಡೆ. ಇನ್ಯಾವತ್ತೂ ಆ ಪಾಠ ಕೇಳಿಲ್ಲ. ದರ್ಪಣಂ ಮುಟ್ಲಿಲ್ಲ. ಕಡೆ ದಿನ ಜೆರಾಕ್ಸ್ ನೋಟ್ಸೇ ಗತಿಯಾಯ್ತು. ಇಂತಹದ್ದೊಂದು ಭಂಡಧೈರ್ಯ ಅದ್ಯಾಗೋ ನನಗೆ ಗೊತ್ತಿಲ್ಲದೆ ನನ್ನೊಳಗೆ ಸೇರಿಕೊಂಡಿದೆ.

ಈ ಅತಿಯಾದ ಆತ್ಮವಿಶ್ವಾಸ ಕೆಲವೊಮ್ಮೆ ಕೈ ಕೊಟ್ಟಿದ್ದೂ ಉಂಟು. ಐದನೇ ಸೆಮಿಸ್ಟಾರಿನಲ್ಲಿ ಹಿಂಗೇ ಆಯ್ತು. ‘ಭಾರತೀಯ ಕಾವ್ಯ ಮೀಮಾಂಸೆ’ ಯನ್ನ ಅರಗಿಸಿಕೊಳ್ಳಲಾರದೇ, ಬರೆದರಾಯಿತು ಅಂತನ್ನೋ ಅತೀ ವಿಶ್ವಾಸದೊಂದಿಗೆ ಪರೀಕ್ಷಾ ಹಾಲ್ ಗೆ ಹೋದೆ. ಪ್ರಶ್ನೆಪತ್ರಿಕೆ ನೋಡಿದ್ದೇ, ಕಣ್ಣು ಮಂಜಾಗಿ ತಲೆ ಸುತ್ತು ಬಂತು! ಇನ್ನೂ ಬರೆಯಲಾರೇ ಅನಿಸಿದ್ದೇ, ಮುಂದಿನ್ ಸೆಮ್ ನಲ್ಲಿ ಬರೆದರಾಯ್ತು ಅಂತಂದು , ಸಹಿ ಮಾಡಿದ ಖಾಲಿ ಉತ್ತರ ಪತ್ರಿಕೆ ನೀಡಿ ಹೊರಬಿದ್ದೆ. ರಿಸಲ್ಟ್ ದಿನ ನೋಡಿದ್ರೆ ಕನ್ನಡದಲ್ಲಿ ಪಾಸಾಗಿಬಿಟ್ಟಿದ್ದೆ (ಡಿಗ್ರಿ ಅಂತಿಮ ವರ್ಷದಲ್ಲಿ ನನ್ನಂತ ಸೋಮಾರಿಗಳು, ಪೆದ್ದರಿಗಾಗಿ ಒಂದು ಅನುಕೂಲ ಇದೆ. ಒಂದು ಐಚ್ಚಿಕ ವಿಷಯದಲ್ಲಿ ಮೂರು ಪತ್ರಿಕೆ ಇರುತ್ತೆ. ಒಟ್ಟಾರೆ ಗರಿಷ್ಟ ಅಂಕ ೩೦೦, ಯಾವ ಪತ್ರಿಕೆಯಲ್ಲಿ ಎಷ್ಟಾದರೂ ಅಂಕ ತೆಗೀರಿ ಬಿಡಿ. ಒಟ್ಟು ಮೂರರಿಂದ ೧೨೦ ಮಾರ್ಕ್ಸ್ ತೆಗಿದ್ರೆ ಸಾಕು. ನಂದು ಇಂಟರ್ನಲ್ಸ್ ಸೇರಿ ೧೯೫ ಮಾರ್ಕ್ಸ್ ಬಂತು!)

ನಿನ್ನೆ ಭಾನುವಾರ ಬೆಳಿಗ್ಗೆ ಒಂಭತ್ತಾದರೂ ಹಾಸಿಗೆಯಿಂದೇಳದೇ ನೆಮ್ಮದಿಯಿಂದಿದ್ದವನಿಗೆ ನಿದ್ರಾಭಂಗ ಮಾಡಿಸಲೆಂದೇ ಫೋನೊಂದು ಬಂದಿತ್ತು. ನನ್ನದೊಂದು ಬುಕ್ ಕಾಣ್ತಿಲ್ಲ, ನಿನ್ ಹತ್ರ ಇರೋ ಅದೇ ಸಿಲಬಸ್ ಬುಕ್ ನ ನಾಳೆ ತಕೊಂಡ್ ಬಾ, ಸಿಬಿಎಸ್ ಪಾಸ್ ಕೌಂಟರ್ ಹತ್ರ ಅಂತಂದು ಗೆಳೆಯ ಕಾಲ್ ಮಾಡಿದ್ದ. ಹೀಗಾಗಿ ಅನಿವಾರ್ಯವಾಗಿ ಪುಸ್ತಕ ಹುಡುಕೋ ಕಾರ್ಯ ಶುರುವಾಯ್ತು. ಹೀಗೆ ಹುಡುಕಲು ಶುರುಮಾಡಿದ್ದೇ ಮೊದಲು ಕೈಗೆ ಸಿಕ್ಕಿದ್ದು ಆಟೋಗ್ರಾಫ್ ಬುಕ್. ಅದನ್ನೆಲ್ಲ ಇಂಚಿಂಚು ಬಿಡದೇ ಓದಿ ಏನೋನೋ ನೆನಪಾಗಿ, ಸ್ವಲ್ಪ ಎಮೋಷನಲ್ ಆಗಿ, ಒಂದಿಬ್ಬರಿಗೆ ಕಾಲ್ ಮಾಡಿ ಸುಧಾರಿಸಿಕೊಳ್ಳೋ ಹೊತ್ತಿಗೆ ಒಂದೆರಡು ಗಂಟೆಗಳೇ ಬೇಕಾಯ್ತು. ಆಮೇಲೆ ನನ್ನ ಎಂಎ ಸಿಲಬಸ್ಸಿನ ಒಂದೊಂದೇ ಪುಸ್ತಕ ಕೈಗೆ ಸಿಗಲು ಶುರುವಾಯ್ತು. ಅಡ್ಮಿಷನ್ ಆಗಿ ಒಂದು ದೊಡ್ಡ ಗಂಟಿನ ಪುಸ್ತಕದ ಹೊರೆ ಪಡೆದಿದ್ದೆ ನೇರ ಮನೆಗೆ ತಂದು ಕಟ್ಟು ಬಿಚ್ಚಿ ಅಲ್ಲಲ್ಲಿ ಕೆಡವಿದ್ದೆ. ಆಮೇಲೆ ಹೀಗೊಂದು ಕಟ್ಟು ಇರೋದೆ ಮರೆತೋಯ್ತು. ಹಿಂಗೆ ಪುಸ್ತಕ ಹುಡುಕೋವಾಗ್ಲೆ ನಂಗೆ ಇನ್ನೊಂದು ಅಮೂಲ್ಯ ವಸ್ತು ಸಿಕ್ತು ಅದು ಅವಳ ಡೈರಿ!

ಈ ‘ಅವಳು’ ಅಂದ್ರೆ ಬೇರ್ಯಾರೂ ಅಲ್ಲ. ಅನ್ನಾ ಫ್ರಾಂಕ್. ಹಿಟ್ಲರನ ಕಾಲದಲ್ಲಿ ಬಲಿಯಾದ ಅದೆಷ್ಟೋ ಯಹೂದಿಗಳಲ್ಲಿ ಒಬ್ಬಳು. ಈಕೆ ತನ್ನ ಹದಿನಾಲ್ಕೊ- ಹದಿನೈದನೇ ವಯಸ್ಸಿನಲ್ಲಿ ಬರೆದುಕೊಂಡಿದ್ದ ಡೈರಿ ಅವಳು ಸತ್ತ ಅದೆಷ್ಟೋ ವರ್ಷಗಳ ಬಳಿಕ ಪ್ರಕಟ ಆಗಿ, ಜನಪ್ರಿಯ ಆಯ್ತು. ಆಗಷ್ಟೆ ಹರೆಯದ ಕಣ್ಣು ತೆರೆಯುತ್ತಿದ್ದ ಹೆಣ್ಣು ಮಗಳೊಬ್ಬಳು ಯುದ್ಧಾಕಾಂಕ್ಷಿ ಜರ್ಮನಿಯನ್ನು ತನ್ನ ಕಂಗಳಲ್ಲಿ ಕಂಡಬಗೆಯೇ ಭಿನ್ನ. ಈ ಡೈರಿಯದ್ದೊಂದು ಅಧ್ಯಾಯ ನಮಗೆ ಪಿಯುಸಿ ಯಲ್ಲಿ ಪಠ್ಯವಾಗಿತ್ತು. (ಹಾ! ಪಿಯುಸಿನಲ್ಲಿ ನಾನ್ ತಪ್ಪದೇ ಕ್ಲಾಸಿಗೆ ಹೋಗ್ತಿದ್ದೆ. ಅದಕ್ಕೆ ಬೇರೆ ಕಾರಣವೂ ಇತ್ತು ಬಿಡಿ). ಒಂದೆರಡು ವರ್ಷದ ಹಿಂದೆ ಗೆಳೆಯರೆಲ್ಲ ಒಟ್ಟಾಗಿ ಹರಟುತ್ತಿದ್ದಾಗ ನನಗೇಕೋ ಈಕೆಯ ನೆನಪಾಗಿ ಇವಳ ವಿಷಯ ಎತ್ತಿದ್ದೆ. ಆಮೇಲೆ ಮೊದಲನೇ ವರ್ಡ್ ವಾರ್, ಜರ್ಮನಿ, ಹಿಟರ್- ನಾಜಿ, ಯಹೂದಿಗಳ ನರಮೇಧ ಅಂತೆಲ್ಲ ಚರ್ಚೆಯಾಗಿ ಕಡೆಗೆ ಈ ಅನ್ನಾ ಫ್ರಾಂಕ್ ಳ ಡೈರಿ ಇಟ್ಟುಕೊಂಡೇ ಒಂದು ನಾಟಕ ಪ್ರಯೋಗ ಮಾಡಬೇಕು ಅನ್ನೋ ನಿರ್ಧಾರಕ್ಕೆ ಬಂದ್ವಿ. ಸ್ಕ್ರಿಪ್ಟ್ ಬರೆಯೋ ಕೆಲಸ ನನ್ನ ಹೆಗಲ ಮೇಲೆ ಬಿತ್ತು. ಹೀಗೆ ಬಂದಿದ್ದೇ ಒಂದ್ ದಿನ ಹತ್ತಿರದ ಬ್ರೌಸಿಂಗ್ ಸೆಂಟರಿಗೆ ನುಗ್ಗಿ, ಸತತ ಆರೂವರೆ ಗಂಟೆ ಕಾರ್ಯಚರಣೆ ನಡೆಸಿ, ಸಿಕ್ಕ ವಿಷಯಗಳು, ಒಂದಿಷ್ಟು ಫೋಟೊಗಳೆನ್ನೆಲ್ಲ ಪ್ರಿಂಟ್ ಔಟ್ ತೆಗೆಸಿ ಜೇಬು ಖಾಲಿಮಾಡಿಕೊಂಡು ಬಂದಿದ್ದೆ. ರಂಗಾಯಣದಲ್ಲಿ ಒಂದಿಷ್ಟು ಸಂಜೆ ಈ ಚರ್ಚೆಯ ನೆಪದಲ್ಲಿ ಟೀ ಕುಡಿಯುತ್ತಾ ಲೆಕ್ಕವಿಲ್ಲದಷ್ಟು ಭಜ್ಜಿ ತಿಂದಿದ್ವಿ. ನಾನೂ ಅದೇ ಉತ್ಸಾಹದಲ್ಲಿ ನಾಲ್ಕಾರು ಪುಟ ಬರೆದಿದ್ದೆ. ಆಮೇಲೆ ಕೆಲಸಕ್ಕೆ ಸೇರಿದ ಮೇಲೆ ನನ್ನ ಎಂದಿನ ಸೋಮಾರಿತನದಿಂದಾಗಿ ಹೆಚ್ಚೇನು ಬರೆಯಲಾಗಲಿಲ್ಲ.

ಈಗ ಪರೀಕ್ಷೆ ಹೊತ್ತಲ್ಲಿ ಆ ಪುಟಗಳೆಲ್ಲ ಒಂದೊಂದಾಗಿ ಸಿಕ್ಕಿ, ನೆನ್ನೆಯಲ್ಲಾ ಅದನ್ನ ಓದೋದ್ರಲ್ಲೇ ಕಾಲ ಕಳೆದದ್ದಾಯಿತು. ಅವಳ ಬಗ್ಗೆ ಶ್ರೀಘ್ರದಲ್ಲೇ ಒಂದು ನಾಟಕದ ಸ್ಕ್ರಿಪ್ಟ್ ಬರೆದುಕೊಡ್ತೀನಿ ಅಂತ ಮತ್ತೆ ಗೆಳೆಯರಿಗೆ ಭರವಸೆ ಕೊಟ್ಟದ್ದೂ ಆಯಿತು. ಈ ಸಲ ಆದ್ರೂ ಬರೀಬೇಕು ಅನ್ನೋ ದೂರದಾಸೆ ನನ್ನದು.

ಬೆಳಿಗ್ಗೆ ಮತ್ತೊಮ್ಮೆ ಎಲ್ಲ ಕೆದಕಿ ,ಬೆದಕಿ ಕೂಡಿ ಕಳೆದೂ ಲೆಕ್ಕ ಹಾಕಿದ್ರೆ ಇಪ್ಪತ್ತರಲ್ಲಿ ಹದಿನಾರು ಪುಸ್ತಕ ಮಾತ್ರ ಇವೆ. ಇನ್ನೂ ನಾಲ್ಕು ನಾಪತ್ತೆ.  ಏನಾದ್ರೂ ಬರೆದರೆ ಆಯ್ತು ಅಂತ ಇನ್ನೊಮ್ಮೆ ಭಂಡ ಧೈರ್ಯದೊಂದಿಗೆ ನಾಳೆ ಪರೀಕ್ಷೆ ಬರೀಲಿಕ್ಕೆ ಹೊರಟಿದ್ದೇನೆ. ನೀವೂ ಯಾರಾದ್ರೂ ಕೆ ಎಸ್ ಒ ಯು ನಲ್ಲಿ ಎಂಎ ಪರೀಕ್ಷೆ (ಓನ್ಲಿ ಜರ್ನಲಿಸಂ) ಕಟ್ಟಿದ್ರೆ, ನಾಳೆ ಪರೀಕ್ಷೆ ಬರೀಲಿಕ್ಕೆ ಬರ್ತಿದ್ರೆ, ಅಪ್ಪಿ ತಪ್ಪಿ ನನ್ನ ಪಕ್ಕ ಏನಾದ್ರೂ ಕುತ್ಕೋಂಡ್ರೆ ಸ್ವಲ್ಪ ಹೆಲ್ಪ್ ಮಾಡಿ ಪ್ಲೀಸ್!

ಆಗಷ್ಟ್ 25, 2008 at 3:09 ಅಪರಾಹ್ನ 1 comment

ವೀರಪ್ಪನ್ ಸಮಾಧಿ ಹುಡುಕಿ ತಮಿಳುನಾಡಿನಲ್ಲಿ ಅಲೆದದ್ದು

ೂತಣ್ಣ

ಭೂತಣ್ಣ

ಬೆಳಿಗ್ಗೆ ಗೆಳೆಯನೊಂದಿಗೆ ಬೈಕನ್ನೇರಿ ಮಹದೇಶ್ವರನ ಬೆಟ್ಟ ಬಿಟ್ಟವನು ಅಲ್ಲಿ ಇಲ್ಲಿ ಸುತ್ತಿ ಗೋಪಿನಾಥಂ ತಲುಪುವ ಹೊತ್ತಿಗೆ ಸಂಜೆಯಾಗತೊಡಗಿತ್ತು. ವೀರಪ್ಪನ್ ನ ಹುಟ್ಟೂರಿನ ಈ ಜನರನ್ನು ಮಾತನಾಡಿಸಬೇಕೆಂದೇ ಮೈಸೂರಿನಿಂದ ೧೮೦ ಕಿ.ಮೀ ಅಲೆದು ಇಲ್ಲಿಗೆ ಬಂದಿದ್ದೆ. ಬಹುತೇಕ ತಮಿಳರೇ ಇರುವ ಗಡಿನಾಡ ಕನ್ನಡದ ಊರಿದು. ಅಲ್ಲಿದ್ದ ಜನಕ್ಕೆ ನಮ್ಮ ಮಾತು ಕಂಡು ‘ಇವರು ಪತ್ರಿಕೆಯವರಿರಬೇಕು’ ಅಂತ ಖಾತ್ರಿಯಾಗಿರಬೇಕು. ವೀರಪ್ಪನ್ ಅಂದರೆ ಸಾಕು, ಅವರ್ಯಾರು ಎಂಬುದೇ ತಮಗೆ ಗೊತ್ತಿಲ್ಲ ಎಂಬರ್ಥದಲ್ಲಿ ಮಾತನಾಡತೊಡಗಿದರು. ಅವರಿಂದ ಒಂದಿಷ್ಟು ಅದೂ ಇದು ವಿಚಾರಗಳನ್ನು ಕೆದಕುವುದಕ್ಕೆ ಬೆವರಿಳಿಸಬೇಕಾಯಿತು.

ಸರಿ ಇನ್ನೇನು ಅಂತ ಹೊರಡುವಾಗ ಇನ್ನೊಂದಿಬ್ಬರು ಸಿಕ್ಕರು. ವೀರಪ್ಪನ್ ಸತ್ತ ಮೇಲೆ ತಮ್ಮೂರಿನ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ದು, ಎಷ್ಟೆಲ್ಲ ಅಭಿವೃದ್ದಿಯಾಗುತ್ತಿದೆ ಅಂತೆಲ್ಲ ತಮಿಳು ಮಿಶ್ರಿತ ಕನ್ನಡದಲ್ಲಿ ಪರಿಪರಿಯಾಗಿ ವಿವರಿಸತೊಡಗಿದರು. ಅವರನ್ನು ನೋಡಿದರೆ, ಮಾತುಗಳನ್ನು ಕೇಳಿದರೆ ಬಹುಷಃ ಇಲ್ಲಿನ ಗ್ರಾಮ ಪಂಚಾಯ್ತಿಯ ಸದಸ್ಯರೇ ಇರಬೇಕು ಅನ್ನಿಸಿತು. ಮತ್ತೆ ಬೈಕನ್ನೇರಿ ಹೊರಡಲು ಅನುವಾದಾಗ ‘ಇಲ್ಲೇ ಕೊಳತ್ತೂರು ಬಳಿ ವೀರಪ್ಪನ್ ಸಮಾಧಿ ಇದೆ. ಬೇಕಾದ್ರೆ ಹೋಗಿ ಫೋಟೊ ತಕೊಂಡು ಪೇಪರ್ರಿಗೆ ಹಾಕಿ. ಹೆಚ್ಚೇನೂ ಇಲ್ಲ. ಇಲ್ಲಿಂದ ಒಂದಿಪ್ಪತ್ತು ಕಿ.ಮೀ ಅಷ್ಟೆ’ ಅಂದ್ರು. ಇಲ್ಲಿಗೆ ಬಂದದ್ದೇ ಆಗಿದೆ. ಅಲ್ಲಿಗೆ ಹೋಗೊದೇನು ಮಹಾ! ಅಂತಂದು ಕೊಳತ್ತೂರಿನ ದಾರಿ ಹಿಡಿದೆವು.

ಹೀಗೆ ಹಿಂದಿರುಗಿದ್ದೇ ‘ ಈ ವೀರಪ್ಪನ್ ಸಮಾಧಿ ಹೇಗೆಲ್ಲ ಇರಬಹುದು. ಇಷ್ಟಕ್ಕೂ ಇದು ತಮಿಳುನಾಡಿನಲ್ಲಿ ಇರೋದೇಕೆ ಅಂತ ಮಾತಾಡುತ್ತಾ ’ ಅಲ್ಲಿಂದ ಮತ್ತೆ ಬೆಟ್ಟದ ರಸ್ತೆಗೆ ಬಂದ್ವಿ. ಅಲ್ಲೇ ಪಕ್ಕದಲ್ಲೇ ಪಾಲರ್ ಅನ್ನೋ ಊರು. ಕರ್ನಾಟಕಕ್ಕೂ ತಮಿಳುನಾಡಿಗೂ ಇದೇ ಗಡಿ. ಕೇವಲ ಸಣ್ಣದೊಂದು ಚೆಕ್ ಪೋಸ್ಟ್ ದಾಟಿದ್ರೆ ತಮಿಳುನಾಡು. ಮೈಸೂರು ಅನ್ನೋ ಸುಭದ್ರ ಊರೊಳಗೆ ಭದ್ರವಾಗಿರೋ ಹುಡುಗನಿಗೆ ಗಡಿ ಅನ್ನೋದು ಹೀಗಿರುತ್ತೆ ಅನ್ನೋ ಕಲ್ಪನೆ ಇರಲಿಲ್ಲ. ಅಂತೂ ಚೆಕ್ ಪೋಸ್ಟ್ ದಾಟಿದ್ದಾಯಿತು, ಅಲ್ಲಿದ್ದ ಕಾವಲುಗಾರ ಮಹಾಶಯ ನಾವ್ ಯಾರು , ಎತ್ತ ಅನ್ನೋದನ್ನ ವಿಚಾರಿಸಲೂ ಹೋಗದೆ ನೆಮ್ಮದಿಯಾಗಿ ಕುರ್ಚಿ ಮೇಲೆ ಕುಂತು ಸಿಗರೇಟು ಸೇದ್ತಿದ್ದ!

ಸರಿ ಅಂತೂ ತಮಿಳುನಾಡಿಗೆ ನುಗ್ಗಿದ್ವಿ. ಅಲ್ಲಿಂದ ಒಂದೆರಡು ಕಿ.ಮೀ ಕಾಡು. ಸಮಯ ಬೇರೆ ಹತ್ತಿರತ್ತಿರ ಸಂಜೆ ಐದೂವರೆ. ಗೆಳೆಯನ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲ. ಬೈಕು ನಮ್ಮದೂ ಅಂತ ಹೇಳಿಕೊಳ್ಳೋಕೆ ತಕ್ಕ ದಾಖಲೆಗಳೂ ಇಲ್ಲ. ನಂಬರ್ ಪ್ಲೇಟ್ ಬೇರೆ ಶುದ್ಧ ಕನ್ನಡದಲ್ಲಿದೆ! ಅಯ್ಯೋ ದುರ್ದೈವವೇ ಅಂತಂದು ರಾಗ ಎಳೆಯುತ್ತಾ ಹೋಗೊ ಹೊತ್ತಿಗೆ ಕಾಡು ಮುಗಿದು ಊರುಗಳು ಸಿಗತೊಡಗಿದವು. ತಮಿಳುನಾಡಿಗೆ ಬಂದದ್ದರ ಸಂಕೇತವೆಂಬಂತೆ ನೀಲಿ ಮಿಶ್ರಿತ ಸುಣ್ಣದ ಮನೆಗಳು ಕಣ್ಣಿಗೆ ಕಾಣಿಸತೊಡಗಿದವು. ಅಲ್ಲಲ್ಲಿ ಭೂತ ದೈವದ ವಿಗ್ರಹಗಳು ಕಣ್ಣಿಗೆ ಬಿದ್ವು. ಸರಿ ಈಗ ಯಾವೂರಿಗೆ ಬಂದ್ವಪ್ಪ ಅಂತ ರಸ್ತೆ ಬದಿ ಬೋರ್ಡು ನೋಡಿದ್ರೆ ಬರೀ ತಮಿಳು! ನಮಗೋ ತಮಿಳಿನ ತಲೆ ಬುಡ ಗೊತ್ತಿಲ್ಲ. ಇದೊಳ್ಳೆ ಪೇಚಿಗೆ ಸಿಕ್ಕಿದ್ವಲ್ಲ ಅಂತಂದು ಮುಂದೆ ಹೋದ್ವಿ. ಅಲ್ಲೇ ಒಂದಿಬ್ಬರು ಮಹಾನುಭಾವರು ಸಿಕ್ಕರು. ನಾವು ನಮ್ಮ ಭಾಷಾ ಪ್ರಾವೀಣ್ಯವನ್ನೆಲ್ಲ ಬಳಸಿ ಹೀಗಂದ್ರೆ ಹೀಗಿರಬಹುದಾ ಅಂತ ಲೆಕ್ಕಾಚಾರ ಹಾಕಿ ತಮಿಳು ಪ್ರಯೋಗಿಸಿದ್ವಿ. ನಮ್ಮ ಭಾಷೆ ಕಂಡ ಅವರಿಗೆ ‘ಈ ಮಕ್ಕಳು ತಮಿಳಿನವರಲ್ಲ’ ಅಂತನ್ನಿಸಿರಬೇಕು. ಕನ್ನಡದವ್ರ ಅಂತ ಕೇಳಿದ್ದೆ ಕೊಳತ್ತೂರು ಇನ್ನೂ ಇಪ್ಪತ್ತು ಕಿ.ಮೀ ಇದೆ ಅಂದ್ರು. ನಾವು ಒಮ್ಮೆ ಉಸಿರು ಬಿಟ್ವಿ!

ಮತ್ತೆ ಯಥಾ ಪ್ರಕಾರ ನಮ್ಮ ಕನ್ನಡಮಿಶ್ರಿತ ತಮಿಳಿನಲ್ಲಿ ಅವರಿವರನ್ನ ಕೇಳುತ್ತಾ ಕೊಳತ್ತೂರಿಗೆ ತಲುಪಿದ್ದಾಯಿತು. ಅಲ್ಲಿ ಕೇಳಿದ್ದಕ್ಕೆ, ವೀರಪ್ಪನ್ ಸಮಾಧಿ ಇಲ್ಲಿಂದ ನಾಲ್ಕೈದು ಕಿ.ಮೀ ಇರೋದಾಗಿಯೂ, ಮೊಳೈಕಾಡು ಎಂಬಲ್ಲಿ ಹೋದ್ರೆ ಸಿಗುತ್ತೆ ಅಂತ ಹೇಳಿದ್ರು. ಈಗ ಮೊಳೈಕಾಡಿನ ಅನ್ವೇಷಣೆ ಶುರುವಾಯ್ತು. ನಡುವೆ ನಮ್ಮ ಅದೃಷ್ಟಕ್ಕೆ ಅಲ್ಲೊಂದು ತಮಿಳಿನ ಜೊತೆಗೆ ಇಂಗ್ಲೀಷಿರೋ ದೂರಗಾಹಿ ಬೋರ್ಡು ಸಿಕ್ಕಿತು. ಅದರಂತೆ ಮೆಟ್ಟೂರು ಇಲ್ಲಿಂದ ಹತ್ತು ಕಿ.ಮೀ ದೂರದಲ್ಲಿತ್ತು.

ವೀರಪ್ಪನ್ ಸಮಾಧಿ

ವೀರಪ್ಪನ್ ಸಮಾಧಿ

ಅಂತೂ ಇಂತು ಮೊಳೈ ಕಾಡು ಬಂತು. ನಾವೋ ಗೊತ್ತಿಲ್ಲದೆ ಅಲ್ಲಿಂದ ಒಂದೆರಡು ಕಿ.ಮೀ ಮುಂದೆ ಹೋಗಿ , ಮತ್ತೆಯಾರನ್ನೋ ಕೇಳಿ ಹಿಂದೆ ಬಂದೆವು. ಅವರು ಹೇಳಿದಂತೆ ರಸ್ತೆ ಬದಿಯ ಟ್ರಾನ್ಸ್ ಫಾರ್ಮರ್ ನ ಗುರುತು ಹಿಡಿದು ಎಡಕ್ಕೆ ತಿರುಗಿದರೆ ಅಲ್ಲೊಂದು ಸಶ್ಮಾನ. ಪಕ್ಕದಲ್ಲೇ ಕಣ್ಣು ಕಾಣುವಷ್ಟು ದೂರ ಮೆಟ್ಟೂರು ಅಣೆಕಟ್ಟಿನ ನಿಂತ ನೀರು. ಎಷ್ಟೊಂದ್ ಸಮಾಧಿ, ಇದ್ರಲ್ಲಿ ಯಾವುದಿರಬಹುದು ವೀರಪ್ಪನ್ ಸಮಾಧಿ ಅಂತ ಹುಡುಕುತ್ತಿದ್ದೆವು. ದೂರದಲ್ಲಿ ಪುಂಡ ಹುಡುಗರ ಗುಂಪು ನಮ್ಮನ್ನು ಕರೆಯಿತು. ನಾವು ಹೋದ್ವಿ. ಬೈಕಿನ ಕನ್ನಡ ನಂಬರ್ ಪ್ಲೇಟ್ ನೋಡಿದ್ದೆ ‘ಇದೇನು ಜಿಲೇಬಿ ಇದ್ದಹಾಗಿದೆ’ ಅಂತಂದ್ರು. ಇದು ಕನ್ನಡ ಸ್ವಾಮಿ ಅಂದು, ವೀರಪ್ಪನ್ ಸಮಾಧಿ ಯಾವ್ದು ಅಂದ್ವಿ. ಅಲ್ಲಿ ಎಡಕ್ಕೆ ತಿರುಗಿ ಅಂದ್ರು. ಎಡಕ್ಕೆ ಹೋದರೆ ಅಲ್ಲೊಂದು ಮೋಟುಗೋಡೆ ಮತ್ತು ಮಣ್ಣಿನ ಸಮಾಧಿ. ವೀರಪ್ಪನ್ ಸಮಾಧಿ ಹೀಗಿರಬಹುದು , ಹಾಗಿರಬಹುದು ಅಂತೆಲ್ಲ ಏಣಿಸಿದ್ದ ನಮಗೆ ಇದು ವೀರಪ್ಪನ್ ಸಮಾಧಿ ಇರಲಾರದು ಅನಿಸಿತು. ಎಲಾ ಹುಡುಗ್ರಾ ಕನ್ನಡದವರು ಅನ್ನೋ ಕಾರಣಕ್ಕೆ ನಮಗೆ ಚಮಕ್ ಕೊಟ್ರ ಅಂತ ಅಂದುಕೊಂಡು ಬೇರೆಯವರ ಆಗಮನಕ್ಕೆ ಕಾಯುತ್ತ ನಿಂತ್ವಿ. ಅಷ್ಟರಲ್ಲೇ ಸ್ಕೂಲ್ ಹುಡುಗರು ಅದೇ ದಾರೀಲಿ ಬಂದ್ರು, ಇದೇ ವೀರಪ್ಪನ್ ಸಮಾಧಿ ಅಂದ್ರು! ಅರರೆ…. ಇದಾ! , ನಾನು ಹಾಗಿದೆ ಹೋಗಿದೆ ಅಂತೆಲ್ಲ ಕಲ್ಪಿಸಿಕೊಂಡಿದ್ನಲ್ಲ ಅಂತ ಹೇಳಿದ್ರೆ, ‘ವೀರಪ್ಪನ್ ಏನು ರಾಜ್ಕುಮಾರ? ಅವನಿಗೊಂದು ಸಮಾಧಿ, ಸೌಧ ಎಲ್ಲ ಕಟ್ಟಿಸೋಕೆ’ ಅಂತ ಗೆಳೆಯ ಅಣಕ ಮಾಡಿದ. ಇದ್ದದ್ದನ್ನೇ ಕ್ಯಾಮರಾದಲ್ಲಿ ಕ್ಲಿಕ್ಕಿಸಿದೆ.

ಅಲ್ಲಿಂದ ಹೊರಟು ಮುಖ್ಯರಸ್ತೆ ತಲುಪುವ ವೇಳೆಗೆ ಸಂಜೆ ಆರೂವರೆ. ಇಲ್ಲಿಂದ ಮೆಟ್ಟೂರು ಏಳೇ ಕಿ.ಮೀ. ಇಷ್ಟು ದೂರವೇ ಬಂದಿದ್ದೀವಿ. ಮೆಟ್ಟೂರಿಗೆ ಹೋಗದೆ ಇರುವುದಾ ಅಂತ ಮೆಟ್ಟೂರಿನ ರಸ್ತೆ ಕಡೆ ಹೊರಳಿದೆವು.

ಹೆಚ್ಚಿನ ಓದಿಗೆ: http://www.kendasampige.com/article.php?id=1235

ಆಗಷ್ಟ್ 22, 2008 at 12:52 ಅಪರಾಹ್ನ 1 comment

Older Posts


ಕಾಲಮಾನ

ಜನವರಿ 2022
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930
31  

ಮುಗಿಲು ಮುಟ್ಟಿದವರು

  • 9,243 hits

ಪಕ್ಷಿ ನೋಟ

Feeds