ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆಯ ನೆನಪು

ನಾನಾಗ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಅದೇ ವೇಳೆ ಜೊತೆಗೊಬ್ಬ ಗೆಳೆಯನಿದ್ದ. ನನಗಿಂತ ಮೂರು ವರ್ಷ ದೊಡ್ಡವ. ನನ್ನೂರಿನ ಕಾಲೇಜಿನಲ್ಲೇ ಎರಡನೇ ಪಿಯುಸಿ ಓದುತ್ತಿದ್ದ. ನಮ್ಮಲ್ಲಿ ಹೈಸ್ಕೂಲು, ಕಾಲೇಜು ಎಲ್ಲ ಒಟ್ಟಿಗೆ ಇದ್ದಿದ್ದರಿಂದ ದಿನ ಒಟ್ಟಿಗೆ ಬೆರೆಯುವಂತ ಅವಕಾಶ. ಸ್ಕೂಲಿನಲ್ಲಿ ಅಷ್ಟೇನು ಭೇಟಿಯಾಗದಿದ್ದರೂ, ನಾಲ್ಕರ ನಂತರ ತಪ್ಪದೇ ಸೇರುತ್ತಿದ್ದೆವು.  ಮಾಸ್ಟರ್, ಮೇಡಮ್ಮುಗಳೆಲ್ಲ ಈಚೆ ಹೊರಟು, ಗೇಟಿಗೆ ಬೀಗ ಬಿದ್ದದ್ದೇ ತಡ ಅದರ ಮೇಲೆ ನೆಗೆಯುತ್ತಾ ಮೈದಾನ ಹೊಕ್ಕವೆಂದರೇ ಅಲ್ಲಿಂದ ಹೊರಗೆ ಬರುತ್ತಿದ್ದುದು ಕತ್ತಲಾದ ಮೇಲೆ.

ಪ್ರತಿ ಸಂಜೆ ಅಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. ನಮ್ಮ ಪಾಲಿಗೆ ಭಾರೀ ಬೆಟ್ಟಿಂಗಿನ ತಾಣ. ಗೆಳೆಯ ಊರಿನಲ್ಲೇ ಒಳ್ಳೆಯ ಕ್ರಿಕೆಟ್ ಆಟಗಾರನಾಗಿದ್ದ. ಇದ್ದಬದ್ದವರನ್ನೆಲ್ಲ ಒಟ್ಟುಗೂಡಿಸಿ ಸಾಮರ್ಥ್ಯಕ್ಕೆ ಅನುಸಾರಗಾಗಿ ತಂಡ ಹಂಚಲಾಗುತ್ತಿತ್ತು. ಕೆಲವೊಮ್ಮೆ ದೊಡ್ಡವರೆಲ್ಲ ಸೇರಿಕೊಂಡಾಗ ನನ್ನಂತ ಹುಡುಗರಿಗೆ ಕೋಕ್.

ಆರು ಓವರುಗಳಿಂದ ಹೆಚ್ಚೆಂದರೆ ಹತ್ತು-ಹನ್ನೆರಡು ಓವರುಗಳ ಪಂದ್ಯ. (ಈಗಿನ ಟ್ವೆಂಟಿ೨೦ ಹಾಗೇ) ದಿನಕ್ಕೆ ಮೂರು-ನಾಲ್ಕು ಪಂದ್ಯಗಳು ನಡೆಯುತ್ತಿತ್ತು. ಪ್ರತಿ ಮ್ಯಾಚಿಗೂ ಐವತ್ತು-ನೂರು ರೂಪಾಯಿಗಳಷ್ಟು ಬೆಟ್ಟಿಂಗ್. ಗೆಳೆಯ ಒಳ್ಳೆಯ ಆಟಗಾರ. ಅವನ ಸಾಮರ್ಥ್ಯ ನಂಬಿಕೊಂಡೇ ನಮ್ಮೆಲ್ಲರ ಹಣ ಹೂಡಿಕೆಯಾಗುತ್ತಿತ್ತು. ಲಾಭ ಅಲ್ಲದಿದ್ದರೂ ನಷ್ಟವಾಗಿದ್ದು ಮಾತ್ರ ಗೊತ್ತಿಲ್ಲ. ಅವತ್ತಿನ ಖರ್ಚುಗಳಿಗಂತೂ ಮೋಸವಾಗುತ್ತಿರಲಿಲ್ಲ.

ಆಟ ಮುಗಿದ ಕೂಡಲೇ ಊರ ಒಳಗೊಂದು ಸುತ್ತು. ರಾಮಮಂದಿರದ ಒಳಗೊಮ್ಮೆ ಹೋಗಿ ರಾಮ ಇದ್ದಾನೆಯೇ ಅಂತ ನೋಡಿಕೊಂಡು ಬರುವುದು ಕಡ್ಡಾಯ. ಅದಾದ ಬಳಿಕ ಊರಿನ ಏಕೈಕ ಪಾನಿಪೂರಿ ಅಂಗಡಿಯ ಮೇಲೆ ನಮ್ಮ ಠಿಕಾಣಿ. ಖಾಯಂ ಗಿರಾಕಿಗಳಾದ್ದರಿಂದ ಸ್ವಲ್ಪ ಹೆಚ್ಚಿಗೆ ಈರುಳ್ಳಿ ಹಾಕಿ, ಮೀಡಿಯಂ ಖಾರ ಸೇರಿಸಿ ಕೊಡಬೇಕು ಅನ್ನುವುದು ಅಲಿಖಿತ ನಿಯಮ.

ಹಾಗೇ ಬಸ್ ಸ್ಟ್ಯಾಂಡಿನ ಅರಳೀಕಟ್ಟೆ ಹತ್ತಿರಕೊಮ್ಮೆ ಬಂದು, ಆಸ್ಪತ್ರೆಗೂ ಒಂದು ಭೇಟಿ ಕೊಡುವ ಹೊತ್ತಿಗೆ ಸಂಜೆ ಏಳರ ಸಮಯ. ಹಾಗೇ ಅಂಗಡಿಯತ್ತ ಹೋದವರೇ ಎರಡು ಲೀಟರ್ ಕಡಲೇಪುರಿಯೊಂದಿಗೆ ಒಂದಿಷ್ಟು ಖಾರ ಬೂಂದಿ ಬೆರೆಸಿಕೊಂಡು, ಜೊತೆಗೆ ಮೆಣಸಿನಕಾಯಿ ಬಜ್ಜಿ ಹಿಡಿದು ಮತ್ತೆ ಕಾಲೇಜಿನ ಗೇಟು ಹಾರಿದವೆಂದರೆ ಇನ್ನು ಈಚೆ ಬರುವುದು ರಾತ್ರಿ ಒಂಭತ್ತಕ್ಕೆ. ಈ ಮಧ್ಯೆ ನಮ್ಮ ಮಾತಿಗೆ ಬಾರದ ವಿಷಯವಿಲ್ಲ.

ಆಗ ನಮ್ಮೂರಲ್ಲಿ ವರ್ಷಕ್ಕೊಮ್ಮೆ ಗೋಲಿ ಸೀಜನ್ನು ಅಂತ ಬರುತ್ತಿತ್ತು. ಆಗಲಂತೂ ಸಾಕ್ಷಾತ್ ಲಕ್ಷ್ಮಿ ಒಲಿದಂಥ ಅನುಭವ. ಸೀಜನ್ನು ಇರುವ ತನಕ ಸಂಪಾದನೆಗೆ ಕುತ್ತಿಲ್ಲ.

ಹೀಗಿರುವ ನಮಗೆ ಒಮ್ಮೆ ವಾಕ್ ಮನ್ ಕೊಂಡುಕೊಳ್ಳುವ ಯೋಗ ಸಹ ಕೂಡಿಬಂತು. ಆದರೆ ಕೇಳೋದಕ್ಕೆ ಮಾತ್ರ ಒಂದೂ ಕ್ಯಾಸೆಟ್ಟುಗಳಿರದೇ ತೊಂದರೆಯಾಗಿತ್ತು. ಅದೇ ಹೊತ್ತಿನಲ್ಲಿ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ  ‘ಸ್ಪರ್ಶ’ ಚಿತ್ರ ಬಿಡುಗಡೆಯಾಗಿತ್ತು. ಆವತ್ತಿಗೆ ನಮ್ಮ ಮಟ್ಟಿಗೆ ಅತ್ಯದ್ಭುತ ಅನ್ನುವಂಥ ಸಂಗೀತ. ಅದರದ್ದೊಂದು ಕ್ಯಾಸೆಟ್ ರೆಕಾರ್ಡ್ ಮಾಡಿಸಿಕೊಂಡು ಬರಬೇಕು ಅಂತ ಹಳೆಯದ್ದೊಂದು ಕ್ಯಾಸೆಟ್ ಹಿಡಿದು ಹನ್ನೆರಡು ಕಿ.ಮೀ ಸೈಕಲ್ ಹೊಡೆದು ಎರಡೆರಡೂ ದಿನ ಸುತ್ತಿ, ಕಡೆಗೂ  ಕ್ಯಾಸೆಟ್ಟು ಕೈ ಸೇರಿತ್ತು.

‘ಚಂದಕ್ಕಿಂತ ಚಂದ ನೀನೆ ಸುಂದರ…’ ಹಾಡೆಂದರೆ ಪ್ರಾಣ ಬಿಡುವಷ್ಟು ಇಷ್ಟ. ಪಂಕಜ್ ಉದಾಸ್ ಅನ್ನುವ ಗಾಯಕನ ಹೆಸರು ನೆನಪಿನಲ್ಲಿ ಉಳಿದುಕೊಂಡಿದ್ದು ಇದೇ ಹಾಡಿನಿಂದ. ಹಾಡು ಅದೆಷ್ಟು ಮೆಚ್ಚುಗೆಯಾಗಿತ್ತು ಎಂದರೆ, ಗೆಳೆಯ ಇದನ್ನ ಬಿಡದೇ ಹಾಡಿ ಹಾಡಿ, ಕಡೆಗೆ ಅಪ್ಪಪಕ್ಕದವರಿಗೆಲ್ಲ ನಾವು ಈ ಹಾಡಿನಿಂದಲೇ ಜನಪ್ರಿಯವಾಗಿ, ಅವ ಅದನ್ನೇ ಕಾಲೇಜಿನ ಚಿತ್ರಗೀತೆ ಸ್ಪರ್ಧೆಯಲ್ಲೂ ಹಾಡಿ, ತೀರ್ಪುಗಾರರು ತಾಳಲಾರದೇ ಎಂಬಂತೆ ಬಹುಮಾನವನ್ನೇ ಘೋಷಿಸಿದ್ದು ಉಂಟು. ಆಗಂತೂ ನಮ್ಮ ಸಂಭ್ರಮಕ್ಕೆ ಎಲ್ಲೆ ಇರಲಿಲ್ಲ. ಚಿತ್ರದ ಬಹುತೇಕ ಹಾಡುಗಳು ಕಂಠಪಾಠ ಆಗಿದ್ದವು.

ಊರಿಗೊಂದೇ ವಾಕ್ ಮನ್ ಅನ್ನುವ ಕಾರಣಕ್ಕೋ ಏನೋ ನಮಗೆ ಈ ಎಲ್ಲದರ ಜೊತೆಗೇ ಕೊಂಚ ಲೆವಲ್ಲು, ಅಹಮ್ಮು ಎಲ್ಲ ಬಂದಿದ್ದು ಸುಳ್ಳಲ್ಲ. ಆಮೇಲೆ ಅದ್ಯಾಕೋ ಸ್ಪರ್ಶವೂ ಬೇಜಾರಿಡಿಸತೊಡಗಿ ಬೇರೆ ಹಾಡುಗಳಿಗಾಗಿ ಹುಡುಕಾಟ ನಡೆಸಿದೆವು. ಅದೇ ಹೊತ್ತಿಗೆ ಆಗ ಜನಪ್ರಿಯವಾಗುತ್ತಿದ್ದ ‘soldier’ ಅನ್ನುವ ಹಿಂದಿ ಸಿನಿಮಾ ಹಾಡುಗಳು ಸಿಕ್ಕು ಒಂದಿಷ್ಟು ದಿನ ಹಿಂದಿ ಹಾಡುಗಳನ್ನ ಗುನುಗುವಂತಾಯ್ತು.

ಆಮೇಲೆ ಅವನು ಪಿಯುಸಿ ಮುಗಿಸಿ ಡಿಗ್ರಿ ಓದಿಗೆ ಅಂತ ಮೈಸೂರಿಗೆ ಹೊರಟ. ಆಮೇಲೆ ನನ್ನ ರೀತಿನೀತಿಗಳೂ ಬದಲಾಗುತ್ತಾ ಹೋದವು.

ಅದೇ ಗೆಳೆಯ ನಿನ್ನೆ ಭಾನುವಾರ ಊರಿನಲ್ಲಿ ಮತ್ತೆ ಸಿಕ್ಕಿದ್ದ. ಆತನೀಗ ಹೈಸ್ಕೂಲೊಂದರಲ್ಲಿ ಟೀಚರ್. ಹೀಗೇ ಸಿಕ್ಕವರೇ ನೇರ ಬೈಕ್ ಏರಿ ಹೊಳೆಯತ್ತ ಹೋಗಿ, ದಡದಲ್ಲಿ ಕೂತು ಸಂಜೆಯಾಗುವವರೆಗೂ ಅದುಇದು ಅಂತ ಮಾತನಾಡುತ್ತ, ಕತ್ತಲಾದ ಮೇಲೆ ಊರ ಕಡೆ ಬಂದಿದ್ದೆವು.

ಇಲ್ಲಿ ಮತ್ತೆ ರೂಮಿಗೆ ಬಂದು, ರಾತ್ರಿ ಹನ್ನೆರಡರ ಹೊತ್ತಲ್ಲಿ, ಯಾವುದೋ ಹಾಡಿನ ಗುಚ್ಛಗಳ ನಡುವೆ ಅದೇ ಸ್ಪರ್ಶದ ಹಾಡುಗಳು ಸಿಕ್ಕು ಮತ್ತೆ ಹಳೆಯದ್ದೆಲ್ಲ ನೆನಪಾಗುತ್ತಿವೆ. ಮತ್ತೆ ಮೆಲುಕು ಹಾಕುವಂಥ ಗೀತೆಗಳು. ಹಂಸಲೇಖ ಇಂತಹದ್ದೊಂದು ಮಾಂತ್ರಿಕ ಸಂಗೀತ ಚಿತ್ರ ನೀಡಿದ್ದು ಅದೇ ಕೊನೆ ಇರಬೇಕು, ಆದಾದ ಮೇಲೆ ಹೇಳಿಕೊಳ್ಳುವಂತ ಸಂಗೀತ ಅವರಿಂದ ಬಂದಿಲ್ಲ ಅನ್ನಿಸುತ್ತೆ.

ಇದನ್ನೆಲ್ಲ ನೆನೆದು, ಮತ್ತೆ ಹಾಡು ಗುನುಗುತ್ತಾ ಹೊರಗೆ ಬಾಲ್ಕನಿಯಲ್ಲೊಮ್ಮೆ ಬಂದರೆ ಇಲ್ಲಿ ಕಗ್ಗತ್ತಲು. ಆದರೂ ತಣ್ಣನೆ ಮೈ ತಬ್ಬಿದಂತೆ ಬೀಸುವ ಗಾಳಿ ಹಾಯೆನಿಸುತ್ತಿದೆ. ‘ಈಗೀಗ ನೀನು ನಿಶಾಚರಿ ಆಗುತ್ತಿದ್ದೀಯಾ ಗುರುವೇ’ ಅಂತ ಗೆಳೆಯರು ಎಚ್ಚರಿಸುತ್ತಾ ಇರುವುದು ನೆನಪಿಗೆ ಬಂದು ಸಣ್ಣಗೊಂದು ನಗುವೂ ತೇಲುತ್ತಿದೆ.  ಹಾಗೇ ಗಾಳಿಗೆ ಮೈ ಒಡ್ಡಿಕೊಂಡೇ ನಿಂತಿದ್ದೇನೆ.

ಫೆಬ್ರವರಿ 23, 2009 at 8:00 ಅಪರಾಹ್ನ 2 comments

ಈ ಹೊತ್ತಿಗೆ ಈ ಕವಿತೆಯ ನೆನಪು

l1

ಒಲವೆಂಬ ಹೊತ್ತಿಗೆಯ ನೋದಬಯಸುತ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ, ಹುಚ್ಚ!
ಹಗಲಿರುಳು ದುಡಿದರೂ, ಹಲವು ಜನುಮ ಕಳೆದರೂ
ನೀ ತೆತ್ತಲಾರೆ ಬರಿಯ ಅಂಚೆವೆಚ್ಚ!

ಬಹುಶಃ ಬೇಂದ್ರೆಯದ್ದಿದ್ದಿರಬೇಕು. ಹತ್ತನೇ ತರಗತಿಯಲ್ಲಿದ್ದಾಗ ಡೈರಿಯ ಮೊದಲ ಪುಟದಲ್ಲಿ ಬರೆದುಕೊಂಡಿದ್ದೆ. ನಿಜಕ್ಕೂ ಅದರರ್ಥ ತಿಳಿದೇ ಬರೆದುಕೊಂಡಿದ್ದನಾ? ಗೊತ್ತಿಲ್ಲ. ಹಾಗೇ ಬರೆದುಕೊಂಡ ಮೇಲೆ ಅದೆಷ್ಟೋ ಬಾರಿ ಇದನ್ನ ಓದಿಕೊಂಡಿದ್ದೇನೆ. ಓದಿದ ಪ್ರತಿ ಸಾರಿಯೂ ಖುಷಿ ಪಟ್ಟುಕೊಂಡಿದ್ದೇನೆ.

ಈ ಅಪರಾತ್ರಿಯಲ್ಲಿ, ನೆನಪುಗಳು ಒತ್ತೊತ್ತಿ ಬರುತ್ತಿರುವ ಹೊತ್ತಲ್ಲಿ ಈ ಕವಿತೆ ಮತ್ತೆ ಮತ್ತೆ ಕಾಡುತ್ತಿದೆ. ಹಾಗೇ ಎದ್ದುಕುಂತವನೇ ಹೊತ್ತಲ್ಲದ ಹೊತ್ತು ಅನ್ನುವ ಹೊತ್ತಲ್ಲೇ ಇದನ್ನೆಲ್ಲ ಬ್ಲಾಗಿಸುತ್ತಿದ್ದೇನೆ. ಈ ಹೊತ್ತಿಗೆ ಈ ಕವಿತೆಯ ನೆನಪು.

ಫೆಬ್ರವರಿ 13, 2009 at 7:42 ಅಪರಾಹ್ನ 2 comments

ಸತ್ತು ಬದುಕಿದವರು, ಬದುಕಿ ಸತ್ತವರು

‘ವಾಜಪೇಯಿ ತೀರಿಕೊಂಡರಂತೆ’ ಹೀಗೊಂದು ದಿಡೀರ್ ‘ಸುದ್ದಿ’ ಕೇಳಿದ್ದೇ ನಿನ್ನೆ ಒಂದು ಕ್ಷಣ ಆಶ್ಚರ್ಯ ಆಯ್ತು. ರಸ್ತೆಯಲ್ಲಿ ನಡೆಯುತ್ತಿದ್ದವನಿಗೆ ವಾಜಪೇಯಿ ಮುಖವೇ ಕಣ್ಮುಂದೆ ಬಂದಂತಿತ್ತು. ಮನೆಗೆ ಹೋದದ್ದೇ ಟೀವಿ ಹಾಕಿ ನೋಡಿದರೆ, ‘ವಾಜಪೇಯಿ ಚೇತರಿಕೆಗೆ ಹೋಮ, ಹವನ…’ ಅಂತ ಸ್ಲಗ್ ಬರುತ್ತಿತ್ತು. ಮಾಜಿ ಪ್ರಧಾನಿಗಳು ಹುಷಾರಾಗಿದ್ದಾರೆ ಅಂತಂದುಕೊಂಡು ಚಾನಲ್ ಬದಲಿಸಿದೆ.

ಇತ್ತೀಚೆಗೆ ಈ ರೀತಿ ಸುದ್ದಿ ಕೇಳುತ್ತಿರುವುದು ಇದು ಎರಡನೆಯ ಬಾರಿ. ಮಾಜಿ ರಾಷ್ಟ್ರಪತಿ ವೆಂಕಟರಾಮನ್ ವಿಷಯದಲ್ಲೂ ಹೀಗಾಗಿತ್ತು. ಆದರೆ ಇದಕ್ಕಿಂತ ಕೊಂಚ ಭಿನ್ನ. ಜನವರಿ ಇಪ್ಪತ್ತೈದರ ಭಾನುವಾರ ಮನೆಯಲ್ಲೇ ಟೀವಿ ನೋಡ್ತಾ ಇದ್ದೆ. ಅಷ್ಟರಲ್ಲೇ, ಪಕ್ಕದ ಮನೆಯ ಅಂಕಲ್ ಇಂತಹುದ್ದೇ ಒಂದು ಸುದ್ದಿ ಹೇಳಿದ್ರು. ಅದರಂತೆ,  “ವೆಂಕಟರಾಮನ್ ತೀರಿಹೋಗಿದ್ದಾರಂತೆ. ಆದ್ರೆ ಅದಿನ್ನೂ ಅಧಿಕೃತವಾಗಿ ಪ್ರಕಟ ಆಗಿಲ್ಲ. ನಾಳೆ ಗಣರಾಜ್ಯೋತ್ಸವ. ಸತ್ತಿರೋರು ಮಾಜಿ ರಾಷ್ಟ್ರಪತಿ ಗಳಾಗಿರೋದ್ರಿಂದ ಯಾವುದೇ ಆಚರಣೆ ಮಾಡುವ ಹಾಗಿಲ್ಲ, ರಾಷ್ಟ್ರಧ್ವಜವನ್ನ ಅರ್ಧಕ್ಕೆ ಇಳಿಸಿ ಹಾರಿಸಬೇಕು. ವಾರಗಳ ಕಾಲ ಶೋಕಚರಣೆ ಮಾಡಬೇಕಾಗಿತ್ತೆ. ಆದ್ರೆ ಏನ್ ಮಾಡೋದು ಗಣರಾಜೋತ್ಸವವನ್ನ ಆಚರಿಸದೇ ಇರೋದು ಸರಿ ಅಲ್ಲ. ಅದಕ್ಕೆ ಈ ವಿಷಯವನ್ನ ಹೀಗೆ ಮುಚ್ಚಿಡಲಾಗುತ್ತೆ. ಗಣರಾಜೋತ್ಸವದ ಬಳಿಕ ಅಧಿಕೃತವಾಗಿ ಪ್ರಕಟಿಸೋದಕ್ಕೆ ಏರ್ಪಾಡು ನಡೆದಿದೆ”

ನ್ಯೂಸ್ ಚಾನಲ್ ಗಳಲ್ಲಿ ನೋಡಿದ್ರೆ ಈ ಬಗ್ಗೆ ಸುಳಿವೂ ಇಲ್ಲ. ಈಗೀಗ ತೀರ ‘ಕುಟುಕು ಕಾರ್ಯಾಚರಣೆ’ ಗಳಿಗೆ ಹೆಸರಾಗ್ತಾ ಇರೋ ಚಾನಲ್ ಗಳಿಗಾದ್ರು ಇದರ ಸುಳಿವು ಸಿಕ್ಕಿ ಹೋಗಿರುತ್ತೆ ಅಂತಂದುಕೊಂಡು ನೋಡಿದರೆ ಅವುಗಳಲ್ಲೂ ಏನೂ ಇಲ್ಲ.

ಅಂಕಲ್ ಗೆ ಯಾರೋ ಏನೋ ಸುಳ್ಳು ಹೇಳಿರಬೇಕು. ಹೀಗೊಂದು ವದಂತಿ ಹಬ್ಬಿರಬೇಕು ಅಂದುಕೊಂಡೆ. ಈ ಬಗ್ಗೆ ಯಾರನ್ನಾದರೂ ಕೇಳಲು ಮುಜುಗರ ಅಂತನಿಸಿ ಸುಮ್ಮನಾದೆ.

ಅದಾದ ಎರಡು ದಿನಗಳ ನಂತರ, ಮತ್ತದೇ ಚಾನಲ್ಲುಗಳಲ್ಲಿ ವೆಂಕಟರಾಮನ್ ನಿಧನ ವಾರ್ತೆ ಪ್ರಸಾರ ಆಗ್ತಾ ಇತ್ತು. ಶ್ರದ್ಧಾಂಜಲಿ ಶುರುವಾಗಿತ್ತು. ಅಧಿಕೃತ ಪ್ರಕಟಣೆಯಂತೆ, ಆರ್. ವೆಂಕಟರಾಮನ್ ಜನವರಿ ೨೭ರ ಮಧ್ಯಾಹ್ನ ೨.೩೦ ವೇಳೆಗೆ ಅನಾರೋಗ್ಯದಿಂದ ನಿಧನ ಹೊಂದಿದ್ದರು.

ಅವತ್ತು ಸಂಜೆ ಒಬ್ಬರೊಡನೆ ಹೀಗೇ ಮಾತನಾಡುತ್ತಿರುವಾಗ, ‘ಸರ್ ಹೀಗೊಂದು ಸುದ್ದಿ ಹಬ್ಬಿತ್ತು ಅದು ನಿಜವಾ’ ಅಂತ ಕೇಳಿದರೆ, ‘ಹೌದು ನಂಗೂ ಈ ಸುದ್ದಿ ಶನಿವಾರನೇ ಕಿವಿಗೆ ಬಿದ್ದಿತ್ತು’ ಅಂದವರ ಮಾತಿಗೆ ಏನು ಹೇಳಬೇಕೋ ತೋಚದೆ ಸುಮ್ಮನಾಗಿದ್ದೆ.

ನಿನ್ನೆ, ಇಲ್ಲಿ ಮೈಸೂರಲ್ಲಿ ವಾಜಪೇಯಿ ಸತ್ತೇ ಹೋದ್ರು ಅಂತ ತಿಳಿದುಕೊಂಡ ಒಂದಿಷ್ಟು ಜನ ಸಭೆ ಸೇರಿ ಶ್ರದ್ಧಾಂಜಲಿ ಕೂಡ ಅರ್ಪಿಸಿದ್ದರಂತೆ! ಹಾಗಂತ ಈಗಷ್ಟೆ ತಿಳಿದುಬಂತು.

ಇಷ್ಟಕ್ಕೂ ಈ ಸುದ್ದಿಗಳೆಲ್ಲ ಹೀಗೆ ಹಬ್ಬೋದು ಹೇಗೆ? ವಯಸ್ಸಾದವರು ಆಸ್ಪತ್ರೆ ಸೇರಿದ್ರು ಅಂದ್ರೆ ಸತ್ತೇ ಹೋದ್ರು ಅಂತ ಅರ್ಥಾನ? ಇನ್ಯಾರೋ ಹೇಳ್ತಿದ್ರು, ಹೀಗೆ ಆಸ್ಪತ್ರೆ ಸೇರಿದ್ದನ್ನೇ ನ್ಯೂಸ್ ಚಾನಲ್ ಗಳು ರೋಚಕವಾಗಿ ಪದೇ ಪದೇ ತೋರಿಸ್ತಾ ಇರೋದ್ರಿಂದ ನಿಜಕ್ಕೂ ಅವರಿಗೆ ಏನೋ ಆಗಿಹೋಗಿದೆ ಅಂತ ಸಾಮಾನ್ಯ ಜನ ಯೋಚನೆ ಮಾಡ್ತಾರೆ ಅಂತ.

ಫೆಬ್ರವರಿ 8, 2009 at 4:51 ಅಪರಾಹ್ನ 2 comments

ಹೀಗೆ ಸುಮ್ಮನೆ ಒಂದು ಹನಿ

teertha-halli-230

ಯಾಕೋ ಗೊತ್ತಾಗುತ್ತಿಲ್ಲ

ಬೇಡವೆಂದರೂ ತನ್ ತಾನೇ
ಸುರಿಯುತ್ತಿದೆ ಕಣ್ಣೀರು
ನೆನಪುಗಳ ತೋಯಿಸುತ್ತಾ.

ರೆಪ್ಪೆ ತೆರೆದಿಟ್ಟರೆ
ತೊಟ್ಟಿಕ್ಕುವ ಜಲಪಾತ
ಮುಚ್ಚಿದರೆ,
ಒಳಗೆ ಜಲಪ್ರಳಯ.
ಹರಿವ ನೀರೊಳಗೂ
ಕೆಂಡದಷ್ಟು ಕಾವು.

ಒಮ್ಮೆ
ಮುಗಿಲೇ ಅಪ್ಪಳಿಸುವಷ್ಟು
ಅಥವಾ
ನೆಲ ಕಚ್ಚುವಷ್ಟು
ಮಳೆ ಬಂದು

ಈ ರಾಡಿಯನ್ನೆಲ್ಲ ತೊಳೆದು
ಶುದ್ಧಮಾಡಬಾರದೇ
ಅನ್ನುವ ತವಕ.

[ಚಿತ್ರ- ಪ್ರವೀಣ್ ಬಣಗಿ, ಚಿತ್ರಕುಲುಮೆ ]

ಫೆಬ್ರವರಿ 4, 2009 at 11:47 ಫೂರ್ವಾಹ್ನ 6 comments

ಇನ್ನು ಮುಂದಾದರೂ ಬರೆಯಬೇಕು ಅಂತ….

ತಿಂಗಳಿಂದ ಏನನ್ನೂ ಬರೆಯಲಾಗಿಲ್ಲ. ಬರೆಯಬೇಕು ಅಂತ ಅನ್ನಿಸಲಿಲ್ಲ. ಅನ್ನಿಸಿದರೂ ಅದಕ್ಕೆ ಮನಸ್ಸು, ಮನಸೇ ಮಾಡಲಿಲ್ಲ. ಮೈ ಮನಸ್ಸಿಗೂ ರಿಸೆಷನ್ನಿನ ಗರ ಬಡಿದಂತಾಗಿ ಇನ್ನಿಲ್ಲದ ಜಡತ್ವ ಬಂದು ಕುಂತಿದೆ. ಸುಮ್ಮನೆ ಏನೇನೋ ನೆಪ ಹೇಳುವ ಬದಲು, ಕನಿಷ್ಟ ಹೊಸ ವರ್ಷದಿಂದಾದರೂ ಹೊಸದಾಗಿ ಬರೆಯಬೇಕು ಅಂದುಕೊಂಡಿದ್ದೇನೆ. ಶಾಸ್ತ್ರಕ್ಕೆ ಹೇಳಬೇಕು ಅಂದರೆ,  ಬಹುಶಃ ಇದೇ ನನ್ನ ಈ ವರ್ಷದ ಪ್ರತಿಜ್ಝೆ !

ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.

ಡಿಸೆಂಬರ್ 31, 2008 at 2:17 ಅಪರಾಹ್ನ 2 comments

ಬಡಕಲು ಒಂಟೆ ಬಂದುಹೋದ ಪ್ರಸಂಗ

dsc03027

ನಿನ್ನೆ ಭಾನುವಾರ ತೀರ ಅಪರೂಪಕ್ಕೆಂಬಂತೆ ಹೊರಗೆಲ್ಲೂ ಹೋಗದೆ ಮನೆಯಲ್ಲೇ ಇದ್ದೆ. ಭಾರತ-ಇಂಗ್ಲೆಂಡ್ ಮ್ಯಾಚ್ ನೋಡ್ಬೇಕು ಅಂತಂದುಕೊಂಡು ಕೂತರೆ ಅಲ್ಲಿ ಬೆಂಗಳೂರಿನಲ್ಲಿ ಮಳೆರಾಯ ಬಿಟ್ಟು ಬಿಟ್ಟು ಸುರಿಯುತ್ತಿದ್ದ. ಮ್ಯಾಚು ಶುರುವಾಗೋ ಹೊತ್ತಿಗೆ ಹಾಳಾದ್ದು ಕರೆಂಟು ಕಣ್ಣಾಮುಚ್ಚಾಲೆ ಆಡಿಸುತ್ತಿತ್ತು. ಎರಡಕ್ಕೂ ಸುಮ್ಮನೆ ಶಪಿಸಿ, ಅಲ್ಲಿ ಬೀಳುವ ಮಳೆ ಇಲ್ಲಿ ನಮ್ಮ ಹೊಲಗಳಲ್ಲಿ ಬಿದ್ದು ಇನ್ನೊಂದೆರಡು ಹೆಚ್ಚಿಗೆ ಪೈರು ಹುಟ್ಟಬಾರದ ಅಂತ ಯೋಚಿಸುತ್ತಿದ್ದೆ.

ಅಷ್ಟರಲ್ಲೇ ನಮ್ಮ ಅಕ್ಕಪಕ್ಕದ ಮನೆ ಮಕ್ಕಳೆಲ್ಲ ಸಣ್ಣಗೆ ಕೂಗು ಹಾಕಲು ಶುರುಮಾಡಿದ್ದು ಕಿವಿಗೆ ಬಿತ್ತು. ನೋಡಹೋದರೆ ಅಲ್ಲೊಂದು ಸಣ್ಣಕಲು ಒಂಟೆ ಬಂತುನಿಂತಿದೆ! ಪಕ್ಕದ ಮನೆಯ ಪುಟ್ಟಿ ನನ್ನನ್ನು ಕಂಡವಳೇ, ತನ್ನ ಪ್ರತಿಭಾ ಪ್ರದರ್ಶನಕ್ಕೆ ಇದೇ ಸೂಕ್ತ ಸಮಯ ಅಂದುಕೊಂಡು ಹಾಡಲು ಶುರುಮಾಡಿದಳು. ‘ಆನೆ ಬಂತೊಂದಾನೆ….ಯಾವುರಾನೆ….. ಸಿದ್ದಾಪುರದ ಆನೆ…. ಇಲ್ಲಿಗೇಕೆ ಬಂತು…..’ ಒಂದೆರಡು ಬಾರಿ ಇವಳಿಗೆ ಟ್ಯೂಶನ್ ತೆಗೆದುಕೊಂಡು ಅದೂ ಇದು ಹೇಳಿಕೊಟ್ಟಿದ್ದೆ. ಅದಕ್ಕೆ ಪ್ರತಿಯಾಗಿ ತಾನೀಗ ಕಲಿತಿರುವುದನ್ನೂ ನನಗೊಪ್ಪಿಸಿ ಮೆಚ್ಚುಗೆ ಪಡೆಯುವ ತಂತ್ರ ಅವಳದ್ದು… ‘ಆನೆ ಅಲ್ಲಾ ಪುಟ್ಟಿ ಅದು ಒಂಟೆ…. ಬೇಕಾದರೆ ನಿನ್ನ ಹಾಡನ್ನ ಹೀಗೆ ಬದಲಾಯಿಸಿಕೋ. ಒಂಟೆ ಒಂಟೆ ಬಂತೊಂದು ಒಂಟೆ…’ ಅಂತ ತಿದ್ದುಪಡಿ ಮಾಡಿದೆ. ಅವಳೂ ಖುಷಿಯಾಗಿ ಅದನ್ನೇ ಹಾಡಿದಳು.

ಹೀಗೆ ಏಕಾಏಕಿ ಒಂಟೆ ಮನೆ ಬಾಗಿಲಿಗೆ ಬಂದದ್ದನ್ನು ಕಂಡು ಮಕ್ಕಳಿಗೆಲ್ಲ ಇನ್ನಿಲ್ಲದ ಖುಷಿ. ಹೋ ಅಂತ ಕಿರುಚಿದರು. ಕೆಲವರು ಅದರ ಬಾಲ ಹಿಡಿಯಲೂ ಮುಂದಾದರು. ಅದು ಮಾತ್ರ ಅದ್ಯಾಕೋ ಇವರತ್ತ ತಿರುಗಿಯೂ ನೋಡದೆ ಸುಮ್ಮನೆ ಕತ್ತೆತ್ತಿ ಮೇಯಲೂ ಶುರುಮಾಡಿತ್ತು. ನೋಡಿದರೆ ಬರೀ ಎಲುಬಿನಿಂದಲೇ ತುಂಬಿರುವ ನರಪೇತಲ ಬಡಪಾಯಿ ಒಂಟೆ. ಹಸಿರು ತಿಂದು ಅದೆಷ್ಟೂ ದಿನ ಆಗಿದ್ದಂತೆ ಒಮ್ಮೆಲೇ ಸಿಕ್ಕಿದಷ್ಟನ್ನು ಎಳೆದು ಬಾಯಿಗೆ ಹಾಕಿಕೊಳ್ಳುತ್ತಿತ್ತು. ಒಂಟೆಯವ ಅದು ತಿನ್ನು ಇದು ತಿನ್ನು ಅಂತ ಅದಕ್ಕೆ ಗೈಡ್ ಮಾಡುತ್ತಿದ್ದ.

dsc03032ಅಷ್ಟರಲ್ಲೇ ಅದೆಲ್ಲಿದ್ದವೋ ಅಷ್ಟೊಂದು ನಾಯಿಗಳು. ದಂಡುದಾಳಿ ಸಮೇತ ಪ್ರತ್ಯಕ್ಷವಾಗಿಬಿಟ್ಟವು. ಹೀಗೆ ಬಂದಿರುವ ಒಂಟೆ ತಮ್ಮ ಬದ್ಧವೈರಿಯೆಂದು, ಇದನ್ನು ಇಲ್ಲಿ ಬಿಟ್ಟರೆ ತಮ್ಮ ಅಸ್ಥಿತ್ವಕ್ಕೆ ದಕ್ಕೆ ಆಗಿಬಿಡುತ್ತದೆ ಅಂತ ಅವೆಲ್ಲಾ ಗುಂಪಾಗಿ ಚರ್ಚಿಸಿಯೇ ಒಗ್ಗಟ್ಟಾಗಿ ಬಂದಿರಬೇಕು. ಅರೆ ಇಷ್ಟೊಂದು ನಾಯಿ ಇವೆಯಾ ನಮ್ಮ ಅಕ್ಕಪಕ್ಕ ಅಂತ ಸುಮ್ಮನೆ ಅವುಗಳ ಲೆಕ್ಕ ಮಾಡುತ್ತಿದ್ದೆ. ಮಕ್ಕಳ ಕೂಗು ಅದನ್ನೂ ಮೀರಿ ನಾಯಿಗಳ ಬೊಗಳುವಿಕೆ ಎಲ್ಲಾ ಸೇರಿ ದೊಂಬಿ ಆಗುತ್ತಿರುವಂತೆ ಕೇಳಿಸುತ್ತಿತ್ತು. ಕಡೆಗೆ ಒಂದಿಬ್ಬರು ಆ ನಾಯಿಗಳಿಗೆಲ್ಲ ಕಲ್ಲುಬೀಸಿ ಓಡಿಸಿದರು.

ಇದನ್ನೆಲ್ಲ ಕ್ಲಿಕ್ಕಿಸಿಬಿಡಬೇಕು ಅಂತ ಒಳಗೋಡಿ ಕ್ಯಾಮರಾ ಎತ್ತಿಕೊಂಡು ಬಂದರೆ, ಒಂದೆರಡು ಫೋಟೊ ತೆಗೆಯುವಷ್ಟರಲ್ಲೇ ಅದು ಜೀವ ಹೋದವರಂತೆ ಪಕ್ ಪಕ್ ಅಂತ ಆಫ್ ಆಗಿಬಿಡಬೇಕೆ!

ಮಕ್ಕಳಿಗೆಲ್ಲ ಒಂಟೆ ಸವಾರಿ ಮಾಡಿಸೋದು ಅಂತ ನಿರ್ಧಾರ ಆಯ್ತು. ಒಂಟೆ ಮೇಲೆ ಕೂರಿಸಿ ಒಂದು ರೌಂಡು ಸುತ್ತಿಸೋಕೆ ತಲೆಗೆ ಹತ್ತು ರೂಪಾಯಿ ಅಂದವನ ಹತ್ತಿರ ಹಾಗೂ ಹೀಗೂ ಚೌಕಾಸಿ ಮಾಡಿ ಐದಕ್ಕಿಳಿಸಿ ಕಡೆಗೂ ಸವಾರಿ ನಡೆಯಿತು. ಥೇಟ್ ದಸರಾ ದರ್ಬಾರಿನ ಥರ!

ಆಮೇಲೆ ಅವನು ತನ್ನ ಒಂಟೆ ಕರೆದುಕೊಂಡು ಹೊರಟ. ನಮ್ಮ ಐಕಳು ಒಂದಿಷ್ಟು ದೂರ ಹೋಗಿ ಟಾಟಾ ಹೇಳಿ ಬಂದವು.

ನವೆಂಬರ್ 24, 2008 at 9:30 ಫೂರ್ವಾಹ್ನ 5 comments

ನಮ್ಮ ಆಯಸ್ಸು ಇನ್ನೆಂಟೇ ವರ್ಷ!

ಈ ಸಲ ಅಮ್ಮನಿಗೊಂದು ಮೊಬೈಲ್ ಕೊಡಿಸಬೇಕು ಅಂತ ನಿರ್ಧಾರವಾಯಿತು. ಬರೀ ಮೊಬೈಲ್ ಕೊಡಿಸೋದಕ್ಕೆ ಆಗ್ತದಾ? ಅದಕ್ಕೆ ಅದರ ಜೊತೆಗೇ ಸಿಮ್ ಕೂಡ ತಗೋಬೇಕು ಅಂತ ತೀರ್ಮಾನ ಮಾಡ್ಕೊಂಡು ಸಿಮ್ ಅಂಗಡಿ ಹುಡುಕಿ ಹೊರಟೆ.

ಇಲ್ಲೇ ಸಿಟಿಯಲ್ಲೇ ಟವರುಗಳ ಕೆಳಗೇ ಕೂತು ಮಾತನಾಡಿದರೂ ನಿಮಿಷಕ್ಕೊಮ್ಮೆ ಕಟ್ ಆಗುವ , ಅರ್ಧಂಬರ್ಧ ಧ್ವನಿ ಕೇಳಿಸಿ ಕುಯ್…ಗುಟ್ಟುವ ಸ್ಪೈಸ್ ನೆಟ್ ವರ್ಕ್ ನಮ್ಮೂರಿನಲ್ಲಿ ಮಾತ್ರ ಸಖತ್ತಾಗಿ ಸಿಗುತ್ತೆ. ಉಳಿದೆಲ್ಲ ಕಂಪನಿಗಳಿಗಿಂತಾ ಫುಲ್ ಕವರೇಜ್. ಅದಕ್ಕೆ ಅದೇ ತೆಗೆದುಕೊಳ್ಳೋದು ಅಂತ ನಿರ್ಧಾರ ಮಾಡಿದ್ದು.

ಸರಿ ಸ್ಪೈಸ್ ಕೇರ್ ಆಫೀಸಿಗೆ ಹೋದದ್ದಾಯಿತು. ಅದೃಷ್ಟಕ್ಕೆ ಚಂದನೆ ಹುಡುಗಿ ಸಿಕ್ಕಳು. ತುಸು ಹೆಚ್ಚೇ ಸ್ಮೈಲ್ ಮಾಡಿ ಸ್ವಾಗತಿಸಿದಳು. ಏನು ಎತ್ತ ಅಂತ ವಿಚಾರಿಸಿ, ಇದ್ದಬದ್ದ ಆಫರ್ ಗಳ ಕಥೆಯನ್ನೆಲ್ಲ ತೆರೆದಿಟ್ಟಳು. ಅಮ್ಮ ಔಟ್ ಗೋಯಿಂಗ್ ಕರೆಗಳನ್ನ ಮಾಡುವುದಿಲ್ಲವಾದ್ದರಿಂದ ಲೈಫ್ ಟೈಮ್ ವ್ಯಾಲಿಡಿಟಿ ಉತ್ತಮ ಅಂತಂದುಕೊಂಡು ಅದನ್ನೇ ಆಯ್ಕೆ ಮಾಡಿ ದುಡ್ಡು ತೆತ್ತದ್ದೂ ಆಯಿತು.

ಹುಡುಗಿ ಬಿಲ್ ಸಿದ್ಧಪಡಿಸಿದವಳೇ, ಸಿಮ್ ಜೊತೆಗಿತ್ತಳು. ‘ಸರ್ ನೀವು ಆಕ್ಟಿವೆಟ್ ಮಾಡಿರುವುದು ಲೈಫ್ ಟೈಮ್ ಪ್ಲಾನ್. ೨೦೧೬ರ ತನಕ ವ್ಯಾಲಿಡಿಟಿ ಇರುತ್ತೆ!’. ‘ಅರೆ! ಲೈಫ್ ಟೈಮ್ ಅಂದರೆ ಲೈಫ್ ಇರುವ ತನಕ ಅಲ್ವಾ?’ , ‘ಹಾಗಲ್ಲ ಸರ್ ಈಗ ಎಲ್ಲ ಕಂಪನಿಗಳು ಇದೇ ಆಫರ್ ನೀಡ್ತಾ ಇರೋದು. ೨೦೧೬ರ ನಂತರ ನಿಮ್ಮ ಸಿಮ್ ಅನ್ನ ಮತ್ತೆ ಆಕ್ಟಿವೇಟ್ ಮಾಡಿಸಬೇಕು’.

ಮರು ಮಾತಿಗೆ ಅವಕಾಶನೇ ಇರ್ಲಿಲ್ಲ. ಟೇಬಲ್ ಮೇಲಿದ್ದ ಸಿಮ್ ಹ್ಹಿಹ್ಹಿಹ್ಹಿ… ಅಂತ ಅಣಕಿಸಿ ನಗುತ್ತಿರುವ ಹಾಗೆ ಅನಿಮೇಶನ್ ಎಫೆಕ್ಟ್ ಕಣ್ಮುಂದೆ ಬಂದು, ಅದರ ತಲೆ ಮೇಲೆ ಮೊಟಕಿ, ಎತ್ತಿ ಜೇಬಿಗಿಳಿಸಿಕೊಂಡು ಬಂದೆ. ಕುತೂಹಲಕ್ಕೆ ಅಂತ ಬೇರೆ ಕಂಪನಿಗಳ ಲೈಫ್ ಟೈಮ್ ಬಗ್ಗೆ ವಿಚಾರಿಸಿದರೆ, ಅವುಗಳ ಕಥೆಯೂ ಇಷ್ಟೆ!

ಒಟ್ಟಿನಲ್ಲಿ ಈ ಮೊಬೈಲ್ ಕಂಪನಿಗಳ ಪ್ರಕಾರ ನಮ್ಮ ಆಯಸ್ಸು ಎಂಟೇ ವರ್ಷ ಅಷ್ಟೆ. ಆಮೇಲೆ ನಾವು ಬದುಕಿದ್ದೀವಿ ಅಂತ ಅವರಿಗೆ ಖಾತ್ರಿ ಮಾಡಿಸಿ ಜೀವಿತಾವಧಿಯನ್ನ ನವೀಕರಿಸಿಕೊಳ್ಳಬೇಕು. ಅದಕ್ಕೆ ಅವರು ಲೈಫ್ ಟೈಮ್ ವ್ಯಾಲಿಡಿಟಿ ಅಂತ ನಮ್ಮ ಆಯಸ್ಸು ನಿರ್ಧರಿಸಿ ಎಂಟು ವರ್ಷ ನೀಡೋದು!

ನವೆಂಬರ್ 5, 2008 at 11:02 ಫೂರ್ವಾಹ್ನ 6 comments

ನಾನೀಗ ಮೊದಲಿನಂತಿಲ್ಲ

ನೀ ಸಿಗಲಿಲ್ಲ ಅಂತ
ಖಂಡಿತ ಬೇಜಾರಿಲ್ಲ

ಈಗ ನಾನು ಮೊದಲಿನಂತಿಲ್ಲ
ನಿನ್ನನ್ನೇ ನೆನೆಸಿ ಕೊರಗುತ್ತಿಲ್ಲ
ನೀ ಕಾಡಿದಾಗಲೆಲ್ಲ
ಮನಸ್ಸು ನಿನ್ನ ಸಂಗ ಬೇಡಿದಾಗಲೆಲ್ಲ
ಸುಮ್ಮನೆ ಮೌನಕ್ಕೆ ಶರಣಾಗುತ್ತೇನೆ

ಇಲ್ಲಸಲ್ಲದ ಉಪಮೆಗಳ ಕೆತ್ತಿ
ನಿನ್ನ ಮೇಲೆ ಪದ್ಯ ಕಟ್ಟುವುದ ಬಿಟ್ಟಿದ್ದೇನೆ
ಹಾಗೆ ಬರೆದ ಕವಿತೆಗಳ
ಗಂಟುಕಟ್ಟಿ ಅಟ್ಟಕ್ಕೆಸೆದು
ನಿಟ್ಟುಸಿರು ಬಿಟ್ಟಿದ್ದೇನೆ

ನೆನಪುಗಳು ಒತ್ತೊತ್ತಿ ಬಂದಾಗ
ದುಃಖಗಳ ಭಾರ ಅತಿಯಾಯಿತು ಅನಿಸಿದಾಗ
ಎಂದಾದರೊಮ್ಮೆ ಅತ್ತು ಹಗುರಾಗುತ್ತೇನೆ

ಅಷ್ಟಕ್ಕೂ ಸಮಾಧಾನವಾಗದಿದ್ದರೆ
ಹೊದ್ದು ಮಲಗುತ್ತೇನೆ
ಕನಸಿನಲ್ಲಾದರೇ ನೀನು ಖಂಡಿತ ಸಿಗುತ್ತಿ
ನನ್ನೊಂದಿಗೇ ಮಾತನಾಡುತ್ತಿ, ಲಲ್ಲೆ ಗರಿಯುತ್ತಿ,
ಅಷ್ಟರಲ್ಲೇ ನಿದ್ದೆಯ ಮಂಪರು ಕಣ್ಣಿಗತ್ತಿ
ನಾನು ಕೊಸರತೊಡಗಿದಾಗ
ಹಣೆ, ಕಣ್ಣು, ಕೆನ್ನೆಗೆಲ್ಲ ಹೂಮುತ್ತನಿಡುತ್ತ
ನೀ ನನ್ನೊಳಗೆ ಕರಗಿಹೋಗುತ್ತಿ

ಮನಸ್ಸೀಗ ಅದೆಷ್ಟೋ ನಿರಾಳ

ಅಕ್ಟೋಬರ್ 30, 2008 at 11:25 ಫೂರ್ವಾಹ್ನ 5 comments

ನಾನು ಮಾದೇವಣ್ಣ ಮೀನಿಗೆ ಗಾಳಹಾಕಿ ಕುಂತದ್ದು

ಹೀಗೊಂದು ದಿನ ಶಿವನಸಮುದ್ರಕ್ಕೆ ಹೋಗಿದ್ದೆ. ಮಳೆಗಾಲದ ಸಮಯ. ಎಂದಿಗಿಂತ ಜೋರಾಗಿ ಹರಿಯೋ ಕಾವೇರಿ. ನದಿಯ ಮೊರೆತದ ಸದ್ದು ದೂರಕ್ಕೂ ಕೇಳಿಸುತ್ತಾ ಇತ್ತು. ಸಖತ್ ನೀರು. ಭರಚುಕ್ಕಿಯನ್ನು ಕಂಡವನೇ ಅದರ ತಳಕ್ಕೆ ಹೊರಟೆ. ಉದ್ದಕ್ಕೂ ಕಲ್ಲುಚಪ್ಪಡಿಯ ಕೊರಕಲು ಹಾದಿ. ಆದರೆ ನನ್ನಂಥವರು ಎಲ್ಲಾದರೂ ನೇರವಾಗಿ ಹೋಗೋದುಂಟಾ! ಅಡ್ಡದಾರಿ ಹಿಡಿದೆ. ಎಡಕ್ಕೆ ತಿರುಗಿದ್ದೇ ಕೆಳಕ್ಕಿಳಿಯತೊಡಗಿದೆ. ಮಳೆಯಿಂದ ತೋಯ್ದ ನೆಲ. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ಸುಯ್… ಅಂತ ಜಾರಿಸಿಕೊಂಡು ನೇರ ಜಲಪಾತಕ್ಕೇ ಹೊತ್ತೊಯ್ಯೊ ಅಷ್ಟು ಜಾರುತ್ತಿತ್ತು. ದುರಾದೃಷ್ಟಕ್ಕೆ ಒಬ್ಬನೇ ಬೇರೆ? ಹಿಂಗೆ ಬಿದ್ದರೂ, ಕೊಚ್ಚಿಕೊಂಡು ನೀರೊಳಗೆ ಹೋದರೂ ಎತ್ತುವವರಿಲ್ಲ. ಈ ಹುಡುಗ ಬಂದಿದ್ದ ಅನ್ನುವುದಕ್ಕೆ ಗುರುತೇ ಸಿಗದ ಹಾಗಾದರೆ ಕಷ್ಟ ಅನ್ನುತ್ತ ಎಚ್ಚರದಿಂದ ಹೆಜ್ಜೆ ಇಡುತ್ತಿದ್ದೆ. ಹೀಗೆ ಮುಂದೆ ಹೋಗಿ ನೋಡಿದರೆ ಅಲ್ಲೂ ಒಂದು ಮಿನಿ ಜಲಧಾರೆ. ಆಶ್ಚರ್ಯ ಅನ್ನುವಂತೆ ಅಲ್ಲಿ ಒಬ್ಬ ಮೀನುಗಳಿಗೆ ಗಾಳ ಹಾಕಿ ಕುಂತಿದ್ದಾನೆ. ಅರರೆ.. ಅಂತ ಹತ್ತಿರ ಓದವನೇ ಒಂದಿಷ್ಟು ಹೊತ್ತು ಅವನ ಪಕ್ಕದಲ್ಲೇ ನಿಂತೆ. ಹೆಂಗೆ ಗಾಳ ಹಾಕ್ತಾನೆ ಅಂತ ನೋಡಲಿಕ್ಕೆ! ಆಮೇಲೆ ಅವನನ್ನ ಮಾತನಾಡಿಸಿದೆ. ಸರ್ ಸ್ವಲ್ಪ ಬಿಜಿ ಇದ್ರು. ಮಾತಾಡೋದು ಲೇಟ್ ಆಯ್ತು. ಆಮೇಲೆ ಹಂಗೂ ಹಿಂಗೂ ಪರಿಚಯ ಮಾಡಿಕೊಂಡು ಗಾಳ ಹಾಕುವ ಪಾಠ ಹೇಳಿಸಿಕೊಳ್ಳಲು ಮುಂದಾದೆ.

ಈ ಮೀನು ಹಿಡಿಯುವ ಸಾಹಸ ನಂಗೆ ಹೊಸದೇನಲ್ಲ. ಚಿಕ್ಕವನಿದ್ದಾಗ ಮನೆಯ ಮುಂದೆಯ ಬಚ್ಚಲು ಬಗೆದು, ಎರೆಹುಳು ತೆಗೆದು , ಗಾಳ ಹಿಡಿದು ಹೊಳೆಗೆ ಹೋಗುತ್ತಿದ್ದೆ. ಅಲ್ಲಿ ಗಾಳಕ್ಕೆ ಎರೆಹುಳು ಸಿಕ್ಕಿಸಿ ಹೊಳೆಗೆ ತೇಲಿಬಿಟ್ಟು ಗಂಟೆಗಟ್ಟಲೆ ಫಿಳಿ ಫಿಳಿ ಕಣ್ಣು ಬಿಟ್ಟು ಕುಂತರೂ, ಮುಂಡೇವೂ ಒಂದ್ ಮೀನು ಬೀಳ್ತಿರ್ಲಿಲ್ಲ. ಕಿಲಾಡಿ ಮೀನುಗಳು ಮೀನು ಹಿಡಿಯಲು ಬರದ ನನ್ನ ದಡ್ಡತನವನ್ನೇ ಬಂಡವಾಳ ಮಾಡಿಕೊಂಡು, ಇದ್ದ ಬದ್ದ ಹುಳವನ್ನೆಲ್ಲ ಗಾಳಕ್ಕೆ ಸಿಕ್ಕದ ಹಾಗೆ ಮೇದು ಹೋಗುತ್ತಿದ್ದವು. ಕವರಿನಲ್ಲಿದ್ದ ಹುಳುವೆಲ್ಲ ಖಾಲಿಯಾದ ಮೇಲೆ ನಾನು ಪೆಚ್ಚುಮುಖ ಹಾಕಿಕೊಂಡು ಮನೆಗೆ ಹೋಗೋದು ಖಾಯಂ ದಿನಚರಿ.

ಇಂತಿಪ್ಪ ನನಗೆ ಮೀನು ಹಿಡಿಯುವುದೆಂದರೆ ಇರುವ ಎರಡು ಕಣ್ಣುಗಳು ನಾಲ್ಕಾಗಿ ಅರಳಿ ಬಿಡುತ್ತವೆ. ಇಷ್ಟೆಲ್ಲ ನೆನಪಿಸಿಕೊಳ್ಳೋ ವಾಗಲೇ ಆತನ ಗಾಳಕ್ಕೆ ಮೀನೊಂದು ಬಿತ್ತು. ಅಷ್ಟೇನೂ ದಪ್ಪವಲ್ಲದ ಮೀನು. ಯಾವ ಜಾತಿಯದ್ದೋ. ಅವನು ಅದನ್ನ ಬುಟ್ಟಿಗಿರಿಸುವ ಮುನ್ನ ನಾನು ಒಂದ್ನಿಮಿಷ ಅಂತಂದು ಕ್ಯಾಮರಾವನ್ನ ತಿರುಗಿಸಿ ತಿರುಗಿಸಿ ಎರಡೆರಡು ಸಲ ಕ್ಲಿಕ್ಕಿಸಿದೆ. ಒಂದು ಚೆನ್ನಾಗಿ ಬರದಿದ್ರೆ ಇನ್ನೊಂದಾದ್ರೂ ಬರಲಿ ಅಂತ.

ಆಮೇಲೆ ಮೀನು ಬುಟ್ಟಿ ಸೇರಿತು. ಗಾಳ ನೀರಿಗಿಳಿಯಿತು. ನಮ್ಮ ಮಾತು ಶುರುವಾಯಿತು. ಈತನ ಹೆಸರು ಮಾದೇವ ಅಂತ. ಈ ಮಾದೇವಣ್ಣ ಅಲ್ಲೇ ಹತ್ತಿರದಲ್ಲಿರೋ ಸತ್ತೆಗಾಲ ಎಂಬ ಊರಿನವರು. ಆಗಾಗ್ಗೆ ಇಲ್ಲಿಗೆ ಮೀನು ಹಿಡಿಲಿಕ್ಕೆ ಬರ್ತಾರಂತೆ. ಅದು ಸರಿ ಆದ್ರೆ ಜಲಪಾತದಡಿಗೇ ಬಂದಿದ್ದೀರಲ್ಲಾ ಅಂದ್ರೆ ಮೀನುಗಳು ಎಲ್ಲೆಲ್ಲಿಂದಲೋ ಈಜುತ್ತಾ ಬಂದು ಇಲ್ಲಿ ಮೇಲಿಂದ ಬೀಳ್ತಾವಲ್ಲ ಅದಕ್ಕೆ ಅಂದ್ರು. ಯಾವ ಜಾತಿಯ ಮೀನು ಹಿಡಿತೀರಿ ಅಂದ್ರೆ ಗಾಳಕ್ಕೆ ಸಿಗುವ ಎಲ್ಲ ಜಾತಿಯದೂ ಅಂತ ‘ಜಾತಿ ವಿಜಾತಿಯೆನಬೇಡ….’ ಅನ್ನುವವರ ಹಾಗೇ ಸಣ್ಣದಾಗಿ ನಕ್ಕರು.

ಅಷ್ಟರಲ್ಲೇ ನನ್ನ ಕಣ್ಣು ಪಕ್ಕದಲ್ಲೇ ಹರಿಯುತ್ತಿದ್ದ ರೈಲು ಹುಳುವಿನ ಮೇಲೆ ಬಿತ್ತು. ಹೇಗಾದರೂ ಮಾಡಿ ಇದರದ್ದೊಂದು ಚಂದದ ಚಿತ್ರ ತೆಗೀಬೇಕಲ್ಲ ಅನ್ನೋ ತವಕ. ಅದೋ ನನ್ನನ್ನು ಕಂಡದ್ದೇ ಬೆಚ್ಚಿ ಬೀಳುತ್ತಾ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸುರುಳಿಯಾಗಿ ಸುತ್ತಿಕೊಂಡು, ಮತ್ತೆ ತೆರೆದುಕೊಳ್ಳುತ್ತ ಹರಿಯುತ್ತಿತ್ತು. ಚಿಮ್ಮುವ ಹನಿಗಳಿಂದ ಕ್ಯಾಮರಾ ಲೆನ್ಸ್ ರಕ್ಷಿಸಿಕೊಂಡು ಹೇಗೋ ಬಂದರಲ್ಲಿ ಒಂದೆರಡು ಫೋಟೊ ಕ್ಲಿಕ್ಕಿಸಿದೆ. ಅದರ ಪಾಡಿಗೆ ಅದನ್ನು ಬಿಟ್ಟೆ.

ಇಷ್ಟೊತ್ತಾದರೂ ಇನ್ನೊಂದು ಮೀನು ಗಾಳಕ್ಕೆ ಬೀಳಲಿಲ್ಲ. ಮತ್ತೆ ಮಾತು ಮುಂದುವರಿಯಿತು. ಹೀಗೆ ಒಂದೊಂದು ಬಾರಿ ಮೀನು ಹಿಡಿದಾಗಲೂ ಅವರಿಗೆ ಇನ್ನೂರರಿಂದ ಮುನ್ನೂರು ರುಪಾಯಿ ವ್ಯಾಪಾರ ಆಗುತ್ತಂತೆ. ಸತ್ತೆಗಾಲದಲ್ಲೇ ಮೀನು ಮಾರುತ್ತೀನಿ ಅಂತಂದ್ರು. ಅಷ್ಟರಲ್ಲೇ ಎಲ್ಲಿತ್ತೋ ನತದೃಷ್ಟ ಮೀನು. ಗಾಳಕ್ಕೆ ಬಂದು ಬಿತ್ತು. ಈ ಸಲದ ಮೀನು ಮೊದಲಿನದ್ದಕ್ಕಿಂತ ಸ್ವಲ್ಪ ದಪ್ಪದಿತ್ತು. ಆದ್ರೆ ಅಷ್ಟೇನೂ ದೊಡ್ಡ ಗಾತ್ರದ್ದಾಗಿರಲಿಲ್ಲ. ನನಗೆ ಕೊಂಚ ನಿರಾಸೆಯೇ ಆಯ್ತು. ಇರಲಿ ದೊಡ್ಡ ಮೀನುಗಳನ್ನು ನಾನೇ ಹಿಡಿಯುತ್ತೇನೆ ಅಂದುಕೊಂಡೆ. ಅದನ್ನೂ ಬಿಡದೇ ಕ್ಲಿಕ್ಕಿಸಿದೆ. ಎಂದಿನಂತೆ ಮೀನು ಬುಟ್ಟಿಗೆ ಗಾಳ ನೀರಿಗೆ.

ಅಷ್ಟರಲ್ಲೇ, ನಾನಿಲ್ಲಿಗೆ ಬಂದದ್ದರ ಉದ್ದೇಶ ನೆನಪಾಯಿತು. ಎದ್ದವನೇ ಅಲ್ಲಿಂದ ಹೊರಡಲು ಅನುವಾದೆ. ಹೋಗುವ ಮುನ್ನ ಮಾದೇವಣ್ಣನದ್ದೂ ಒಂದು ಫೋಟೊ ಕ್ಲಿಕ್ಕಿಸಿದೆ. ಸ್ಮೈಲ್ ಪ್ಲೀಸ್ ಅಂದದ್ದೆ, ಅವರೂ ಥೇಟ್ ಹಿರೋ ಥರಾನೇ ಫೋಸ್ ಕೊಟ್ಟರು. ಅವರಿಗೊಂದು ಬೈ ಹೇಳಿ ಅಲ್ಲಿಂದ ಮೇಲಕ್ಕೆ ಹೊರಟೆ.

ಅಕ್ಟೋಬರ್ 22, 2008 at 11:05 ಫೂರ್ವಾಹ್ನ 1 comment

ಜೋಕೆ ಜಾಣೆ ಇದು ಜಾಹಿರಾ…ಥೂ!

(ಸದ್ಯಕ್ಕೆ ಏನೂ ಬರೆಯಲಾಗದ ನನ್ನ ಸೋಮಾರಿತನಕ್ಕೆ ಕ್ಷಮೆ ಇರಲಿ. ಈ ಸಲ ಸಣ್ಣದೊಂದು ಬದಲಾವಣೆ. ನನ್ನ ಬದಲಾಗಿ ಗೆಳೆಯ ಚೈತನ್ಯ ಹೆಗಡೆ ಮುಗಿಲಕಂಪಿಗಾಗಿ ಬರೆದಿದ್ದಾನೆ. ಓದಿ ನಿಮಗೇನನ್ನಿಸಿತು ನಾಲ್ಕು ಸಾಲು ಬರೆಯುವುದು ಮರೆಯದಿರಿ.)

ಚೆಲುವೆ ಜಾಹಿರಾ
ಥೂ ಎಂದು ಉಗಿದರೆ ಅದೇ ಒಂದು ಜಾಹಿರಾತು..

ಹಾಗಂತ ವೈಯೆನ್ಕೆ ಬರೆದಿದ್ದರು. ತಮಾಷೆಯ ಮಾತೀಗ ತೀರ ವಾಸ್ತವ. ಎಲ್ಲ ಜಾಹಿರಾತುಗಳಲ್ಲೂ ಇದೀಗ ಉಗಿಯಲು, ಉಲಿಯಲು, ಉನ್ಮಾದಿಸಲು ಮಾನಿನಿಯರೇ ಬೇಕು. ಶೇವಿಂಗ್ ಕ್ರೀಮ್ ಜಾಹಿರಾತಿಗೂ ಬೇಕು ಸುಹಾಸಿನಿಯರ ಹಾಜರಿ. ಆದರೆ, ತಕರಾರಿನ ವಿಷಯ ಅದಲ್ಲ.

ದೃಶ್ಯ ಮಾಧ್ಯಮದಲ್ಲಿ  ಮಹಿಳೆಯರ ಚಿತ್ರಣ ಮೊದಲಿಂದಲೂ ಚರ್ಚೆಯ ವಸ್ತುವೇ. ಸೌಂದರ್ಯದ ಹೆಸರಲ್ಲಿ ಮಹಿಳೆಯನ್ನು ಅತಿಕಡಿಮೆ ಬಟ್ಟೆಯಲ್ಲಿ ತೋರಿಸುವುದು ಅಬಾತ ಬೆಳವಣಿಗೆ. ಅದು ಜಾಹಿರಾತು ಕ್ಷೇತ್ರದಲ್ಲೂ ಮುಂದುವರಿದಿದೆ. ಅದಕ್ಕೂ ಮಿಕ್ಕಿ ಗಮನಿಸಬೇಕಾದ ಕೆಲ ಅಂಶಗಳಿಲ್ಲಿವೆ.

*ಸುವಾಸನಾ ಸಿಂಪಡಿಕೆ ಉತ್ಪನ್ನವೊಂದರ ಜಾಹಿರಾತು ಹೀಗಿದೆ. ಮೇಕಪ್ ವ್ಯಾನ್‌ನಿಂದ ಹೊರಬರುತ್ತಿರುವ ಹುಡುಗಿ. ಅದನ್ನೇ ಕಾಯುತ್ತಿದ್ದ ಹುಡುಗ ತನ್ನ ಮೈಗೆಲ್ಲಾ ‘ಆ’ ಸೆಂಟ್ ಪೂಸಿಕೊಳ್ಳುತ್ತಾನೆ. ಆ ಹುಡುಗಿ ಸೆಂಟ್‌ನ ಘಮಕ್ಕೆ ಮೋಹಿತಳಾಗಿ ಜಗದ ಪರಿವೆಯೇ ಇಲ್ಲದಂತೆ ಅವನ ತೆಕ್ಕೆಗೆ ಬೀಳುತ್ತಾಳೆ.

*ಅಂಥದ್ದೇ ಇನ್ನೊಂದು ಜಾಹಿರಾತಿನಲ್ಲಿ ಮೈಗೆಲ್ಲಾ ಕೆಸರು ಪೂಸಿಕೊಂಡ ಯುವಕನನ್ನು ಮುತ್ತಿಕೊಳ್ಳುವ ಹುಡುಗಿಯರು ಎಗ್ಗಿಲ್ಲದೇ ಆತನ ಮುಖ-ಮೈಗಳ ಕೆಸರು ಕಚ್ಚುತ್ತಾರೆ. ಯಾಕೆಂದರೆ ಆತ ಸೆಂಟ್ ಪುಸಿಕೊಂಡಿರುತ್ತಾನೆ. ಅದು ಹುಡುಗಿಯರು ಹತ್ತಿಕ್ಕಿಕ್ಕೊಳ್ಳಲಾಗದ ಅತ್ತರು

*ಇಂಥದೇ ಸುಗಂಧ ಉತ್ಪನ್ನದ ಕುರಿತ ಇನ್ನೊಂದು ಜಾಹಿರಾತಂತೂ ಇನ್ನೂ ಒಂದು ಹೆಜ್ಜೆ ಮುಂದಿರಿಸಿದೆ. ಸೆಂಟ್ ಪೂಸಿಕೊಂಡ ಹುಡುಗನೊಬ್ಬನಿಗೆ ಅಕಸ್ಮಾತ್ ಢಿಕ್ಕಿ ಹೊಡೆದ ಮಹಿಳೆಯೋರ್ವಳು ಅಲ್ಲೇ ಮೋಹಿತಳಾಗಿ ಅವನೊಂದಿಗೆ ರೊಮಾನ್ಸ್  ಮಾಡಿದಂತೆ ಕನಸಿಗೆ ಜಾರುತ್ತಾಳೆ.

*ಬ್ಯೂಟಿ ಕ್ರೀಂಗಳ ಕುರಿತ ಜಾಹಿರಾತುಗಳಂತೂ ಕಪ್ಪು ಬಣ್ಣದವರು ಭೂಮಿಯಲ್ಲಿ ಬದುಕಲಿಕ್ಕೇ ಅಯೋಗ್ಯರು ಎಂದು ಸೂಚಿಸುವಂತಿರುತ್ತವೆ. ಹುಡುಗಿಗೆ ನೌಕರಿ ಸಿಗಲು, ಹುಡುಗ ಒಲಿಯಲು ಎಲ್ಲವಕ್ಕೂ ಬೆಳ್ಳಗಾಗಿರಬೇಕು. ಹಾಗೆ ಶ್ವೇತವರ್ಣೀಯರಾಗಿರಲು ಮಹಿಳೆಯರು ತಮ್ಮ ಬ್ಯೂಟಿಕ್ರೀಂ ಲೇಪಿಸಿಕೊಳ್ಳಬೇಕು ಎಂಬ ಧಾಟಿ ಇವುಗಳದ್ದು.

ಇವನ್ನೆಲ್ಲ ಆ ಕ್ಷಣದಲ್ಲಿ ಒಂದು ತಮಾಷೆಯನ್ನಾಗಿ ನೋಡಿ ಮರೆತುಬಿಡಬಹುದು. ಆದರೆ ಒಂದೊಮ್ಮೆ ಸಿನಿಮಾಗಳು ಮಾಡಿದಂತೆ ಇವತ್ತಿನ ಜಾಹಿರಾತುಗಳೂ ಸಹ ಮಹಿಳೆಯ ಕುರಿತಾದ ಒಂದಷ್ಟು ‘ಸ್ಟಿರಿಯೋಟೈಪ್’ಗಳನ್ನು ಹುಟ್ಟುಹಾಕುತ್ತಿವೆ. ಅವು ಹೊರಹಾಕುತ್ತಿರುವ ಸಂದೇಶಗಳು ಮಾತ್ರ ಭಯಾನಕವಾಗಿವೆ.

ಅದೆಷ್ಟೇ ಸ್ವರ್ಗಾನುಭೂತಿಯ ಸೆಂಟ್ ಆಗಿರಲಿ. ಯಾವ ಮಹಿಳೆಯಾದರೂ ಹಿಂದು-ಮುಂದು ಯೋಚಿಸದೇ ಸೆಂಟ್ ಪೂಸಿಕೊಂಡ ಹುಡುಗನನ್ನು ತಬ್ಬಿಕೊಂಡು ಬಿಡುತ್ತಾಳೆಯೇ? ಕೇವಲ ಸೆಂಟ್ ಪೂಸಿಕೊಂಡ ಮಾತ್ರಕ್ಕೆ ಹುಡುಗಿಯರನ್ನೆಲ್ಲಾ ವಶವಾಗಿಸಿಕೊಂಡುಬಿಡಬಹುದು ಎನ್ನಲು ಅವರೇನು ಅಷ್ಟು ಅಗ್ಗಕ್ಕೆ ಬಿದ್ದವರಾ?

ಇದನ್ನು ಕೇವಲ ಒಂದು ತಮಾಷೆಯ ಜಾಹಿರಾತು ಎಂದುಕೊಳ್ಳುವುದಕ್ಕೆ ಮೊದಲು ತುಸು ಯೋಚಿಸಬೇಕಾಗಿದೆ. ಉತ್ಪನ್ನದ ಹೆಚ್ಚುಗಾರಿಕೆ ಚಿತ್ರಿಸುವ ಭರದಲ್ಲಿ ವ್ಯಕ್ತಿತ್ವವನ್ನು ಇಷ್ಟು ಕೇವಲವಾಗಿ ತೋರ್ಪಡಿಸಿದರೆ ಹೇಗೆ? ಇದನ್ನು ಗೌರವಯುತವಾಗಿ ಚಿತ್ರಿಸುವ ಎಲ್ಲ ಅವಕಾಶಗಳಿದ್ದವು. ಸೆಂಟ್ ಪೂಸಿಕೊಂಡವನತ್ತ ಒಂದು ವಾರೆ ನೋಟ, ಮುಗಳ್ನಗು.. ಇಷ್ಟರ ಬಗ್ಗೆ ತಕರಾರಿಲ್ಲ. ಒಂದು ಉತ್ತಮ ಸುಗಂಧಕ್ಕೆ ಅಷ್ಟರಮಟ್ಟಿಗಿನ ತಾಕತ್ತಿದ್ದರೆ ಅದರಲ್ಲೇನು ಅಸಹಜವಿಲ್ಲ ಬಿಡಿ. ತೀರ ತನ್ನತನವನ್ನೇ ಮರೆತು ಸೆಂಟ್ ಹಾಕಿಕೊಂಡವನಿಗೆ ಸರ್ವಸ್ವವನ್ನೂ ಅರ್ಪಿಸುವ ಗತಿ ಯಾವ ಹುಡುಗಿಗೂ ಬಂದಿಲ್ಲ.

ಆಕರ್ಷಣೆ ಎನ್ನೋದು ಒಟ್ಟಾರೆ ವ್ಯಕ್ತಿತ್ವದ ಪ್ರಭಾವದಿಂದ ಹುಟ್ಟೋದು. ಒಬ್ಬ ವ್ಯಕ್ತಿಯ ಮಾತು, ನಡೆ, ಆತನ ಹವ್ಯಾಸ ಇವೆಲ್ಲ ಒಟ್ಟುಗೊಂಡರೆ  ಆತನೆಡೆಗೆ ಒಂದು ಆಕರ್ಷಣೆ ಬೆಳೆಯುತ್ತದೆ ಎನ್ನುವ ಅಂಶ ಒಪ್ಪಬಹುದು. ಈ ಹಂತದಲ್ಲಿ ಆತನ ಉಡುಗೆ-ತೊಡುಗೆಗಳೂ ಒಂದಷ್ಟು  ಪ್ರಭಾವ ಬೀರುತ್ತವೆ ಅನ್ನೋದನ್ನು ಒಪ್ಪೋಣ. ಆದರೆ ಬಾಹ್ಯ ಸೌಂದರ್ಯವೇ ವ್ಯಕ್ತಿತ್ವವಲ್ಲವಲ್ಲ? ಬಾಹ್ಯ ಸೌಂದರ್ಯವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಶರಣಾಗುತ್ತಾನೆ ಎನ್ನುವುದು ಆತನ ಬುದ್ಧಿಮಟ್ಟವನ್ನೇ ಗೇಲಿ ಮಾಡಿದಂತೆ.

ನೌಕರಿಗಾಗಿ ಹುಡುಕಾಡುತ್ತಿರುವ ಹುಡುಗಿ ಸುಂದರಿಯಾಗಿರಲೇಬೇಕು. ಹಾಗಂತ ಹೇಳುವಂತಿರುತ್ತವೆ ಬ್ಯೂಟಿ ಕ್ರೀಂ ಜಾಹಿರಾತುಗಳು. ಅಂದರೆ ಅವಳ ಬುದ್ಧಿವಂತಿಕೆ, ಪಡೆದ ಮಾರ್ಕ್ಸು, ವ್ಯವಹಾರ ಕುಶಲತೆ ಇತ್ಯಾದಿ ಗುಣಗಳೆಲ್ಲವೂ ಗೌಣ ಎಂದಂತಾಯಿತು. ವಾಸ್ತವದಲ್ಲಿ ಕಪ್ಪು ಸೌಂದರ್ಯವೇ ಅಲ್ಲ ಎಂದಂತಾಯಿತು. ಇನ್ನೂ ಕೆಟ್ಟದೆನಿಸುವುದೇನೆಂದರೆ, ಇಂಥ ಜಾಹಿರಾತುಗಳು ಬಿಂಬಿಸುವ ಪ್ರಕಾರ ಮೇಲಧಿಕಾರಿಗಳನ್ನು ಮೆಚ್ಚಿಸಲು ನಿಮ್ಮ ಸೌಂದರ್ಯವೊಂದೇ ಮಾರ್ಗ!

ನೋಡಲು ಕಪ್ಪಾಗಿರುವ ಆದರೆ ವಿಷಯಜ್ಞಾನ ಉತ್ತಮವಾಗಿರುವ ಹುಡುಗಿಯರದೇನು ಕತೆ? ಅವರೆಲ್ಲ ನಮ್ಮ ಕಂಪನಿಯ ಕ್ರೀಂ ಹಚ್ಚಿಕೊಳ್ಳಲಿ ಎಂಬುದು ವ್ಯಾಪಾರದ ಮಾತಾಯಿತು. ಆದರೆ ಹಾಗೆ ಹೇಳುವವರಿಗೂ ಗೊತ್ತಿರುವ ವಿಷಯವೆಂದರೆ ಕ್ರಿಂ ಹಚ್ಚಿಕೊಂಡ ಮಾತ್ರಕ್ಕೆ ಯಾರೂ ಸುರ ಸುಂದರಿಯರಾಗುವುದಿಲ್ಲ. ಬೆಳ್ಳಗಾದರೂ ತೀರಾ ಜಾಹಿರಾತು ತೋರಿಸಿದ ಮಟ್ಟಕ್ಕೆ ತ್ವಚೆ ಬದಲಾಗುವುದಿಲ್ಲ. ಅಂದ ಮೇಲೆ ಕೊನೆಗೂ ಕಪ್ಪಾಗಿಯೇ ಉಳಿಯುವವರ ಮನದಲ್ಲಿ ಈ ರೀತಿಯ ಸಂದೇಶಗಳು ಎಂಥ ಭಾವನೆ ಹುಟ್ಟು ಹಾಕಬಹುದು? ಕಪ್ಪೆಂಬ ಕೀಳರಿಮೆ ಅವರನ್ನು ಕಿತ್ತು ತಿನ್ನದಿರದೇ?

ಇದೂ ಒಂದು ಸಂಚು..

ಜಾಹಿರಾತಿನಲ್ಲಿ ಮಹಿಳೆಗೆ ಪ್ರಾಮುಖ್ಯತೆ ಬಂದು ಆಕೆ ಕೈತುಂಬ ಕಮಾಯಿಸುವಂತಾದರೆ ನಿಮಗೇನು ಹೊಟ್ಟೆ ಉರಿ? ಹೀಗೂ ಒಂದು ವಾದ ಹೂಡಿಬಿಡಬಹುದು. ಆದರೆ, ಸ್ವಾತಂತ್ರ್ಯದ ಹೆಸರಲ್ಲಿ ಮಹಿಳೆಯನ್ನು ಬೇಕಾಬಿಟ್ಟಿ ಚಿತ್ರಿಸುವುದರಲ್ಲೂ ಮತ್ತದೇ ಪುರುಷ ಪ್ರಧಾನ ವ್ಯವಸ್ಥೆಯ ಸಂಚಿದೆ. ಮಹಿಳೆಗೆ ವಿದ್ಯಾಭ್ಯಾಸ ನಿರಾಕರಿಸಿ ಅವಳನ್ನು ಒಳಮನೆಯಲ್ಲಿ ಕೂಡಿಹಾಕಿದ್ದರಲ್ಲಿ ಆಕೆಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳಬಹುದೆಂಬ ಧೂರ್ತತೆಯಿತ್ತು. ಇದೀಗ ಸ್ವಾತಂತ್ರ್ಯದ ಹೆಸರಲ್ಲಿ ನೀನು ಎಷ್ಟಾದರೂ ಬಟ್ಟೆ ಬಿಚ್ಚು , ಸೌಂದರ್ಯವೇ ಎಲ್ಲ ಅನ್ನುತ್ತಿರುವುದರಲ್ಲೂ ಸಹ ಆಕೆಯನ್ನು ಸ್ವೇಚ್ಛೆಗೆ ತಿರುಗಿಸಿ ತನ್ನಿಷ್ಟಕ್ಕೆ ಬಳಸಿಕೊಳ್ಳುವ ಧೋರಣೆಯಿದೆ.
ಸ್ಟಿರಿಯೋಟೈಪ್
ಯಾವುದೋ ಒಂದು ವ್ಯತಿರಿಕ್ತ ಸನ್ನಿವೇಶವನ್ನಿರಿಸಿ ಹೆಣ್ಣನ್ನು ಚಿತ್ರಿಸುವುದು ಮಾಧ್ಯಮಗಳಿಗೆ ಮೊದಲಿನಿಂದಲೂ ಬೆಳೆದು ಬಂದಿರುವ ವ್ಯಾ. ಹಳೆಯ ಚಲನಚಿತ್ರಗಳನ್ನು ಗಮನಿಸಿದರೆ ಅಲ್ಲಿ ಅಸಹಾಯಕಳಾಗಿ ಭೋರಿಡುವ ಹೆಣ್ಣಿನ ಪಾತ್ರ ದಂಡಿಯಾಗಿ ಬಂದು ಹೋಗಿದೆ. ಯಾವತ್ತೂ ಗಂಡನಿಗೆ ವಿಧೇಯಳಾಗಿರುವ ಮತ್ತು ಹಾಗೆಯೇ ಇರಬೇಕಾದ ಚಿತ್ರಣ. ಗಂಡ ಸತ್ತು ಹೋದರೆ ನಂತರ ಬದುಕೇ ಇಲ್ಲದಂತೆ ಬವಣೆ ಪಡುವ, ಗೋಳು ತಾಳಲಾರದೇ ಆತ್ಮಹತ್ಯೆಗೆ ಎಳಸಿಬಿಡುವ ಪಾತ್ರಗಳಲ್ಲಿ ಸಾಕಷ್ಟು ಸಾರಿ ಆಕೆಯನ್ನು ನೋಡಿಯಾಗಿದೆ. ತಮಾಷೆಯೆಂದರೆ, ಒಬ್ಬ ಬಾಸ್‌ನ ಪರ್ಸನಲ್ ಸೆಕ್ರೆಟರಿ ಎಂದರೆ ಅವಳು ಹೆಣ್ಣೇ ಆಗಿರಬೇಕು. ಅದರಲ್ಲೂ ಸುರಸುಂದರಿಯಾಗಿದ್ದಿರಬೇಕು ಎಂಬ ಮಟ್ಟಿಗೆ ಕಾದಂಬರಿ ಹಾಗೂ ಸಿನಿಮಾಗಳು ನಮಗೆ ಕಲ್ಪನೆಯನ್ನು ಕಟ್ಟಿಕೊಟ್ಟಿವೆ.
ಅಂಥದೇ ಒಮ್ಮುಖದ ಚಿತ್ರಣ ನೀಡುವತ್ತ ಈಗಿನ ಜಾಹಿರಾತುಗಳೂ ಹೆಜ್ಜೆ  ಇಟ್ಟಿವೆ. ನಿರ್ದಿಷ್ಟ ಉತ್ಪನ್ನವೊಂದನ್ನು ಬಳಸುವ ಪುರುಷನ ಬಗಲಿಗೆ ಹಿಂದೆ ಮುಂದೆ ಯೋಚಿಸದೆ ಜೋತು ಬೀಳುವವರಂತೆ ಹುಡುಗಿಯರನ್ನು ಚಿತ್ರಿಸಲಾಗುತ್ತಿದೆ.

-ಚೈತನ್ಯ ಹೆಗಡೆ

ಅಕ್ಟೋಬರ್ 14, 2008 at 8:02 ಫೂರ್ವಾಹ್ನ 9 comments

Older Posts Newer Posts


ಕಾಲಮಾನ

ಮಾರ್ಚ್ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

ಮುಗಿಲು ಮುಟ್ಟಿದವರು

  • 9,307 hits

ಪಕ್ಷಿ ನೋಟ

Feeds