ನಿತ್ಯ ಬದುಕಿನ ಒಡನಾಡಿಗಳು…
ಮೇ 8, 2012 at 7:11 ಅಪರಾಹ್ನ 3 comments
ಮನೆ ಬದಲಿಸಿ ತಿಂಗಳಾಗುತ್ತಾ ಬಂತು. ಮೊದಲ ಮಹಡಿಯಲ್ಲಿರುವ ಮನೆಯ ಮುಂಭಾಗವೇ ಸಂಪಿಗೆ ಮರವಿದೆ. ಬಾಲ್ಕನಿಯಲ್ಲಿ ನಿಂತು ಕೈಚಾಚಿದರೆ ಸಂಪಿಗೆ ಹೂವುಗಳು ಸಿಗುತ್ತವೆ. ಅಡುಗೆಮನೆಯ ಹತ್ತಿರದ ಕೊಂಬೆಯಲ್ಲಿ ಆಗಾಗ್ಗೆ ಹೂವುಗಳು ಅರಳಿ ಒಗ್ಗರಣೆಯನ್ನೂ ಮೀರಿ ಕಂಪು ಸೂಸುತ್ತಿರುತ್ತವೆ.
ಇಷ್ಟು ದೊಡ್ಡಮನೆಯ ಮುಂದೆ ಒಬ್ಬನೇ ಮರದ ನೆರಳಿನ ಕೆಳಗೆ ಚಹಾ ಹೀರುವಾಗ ಆಗಾಗ್ಗೆ ಅತಿಥಿಯೊಬ್ಬ ಕಾಣಸಿಗುತ್ತಾನೆ. ಕದ್ದು ನೋಡುತ್ತ, ಕೊಂಬೆಗಳ ತುಂಬೆಲ್ಲ ಓಡೋಡಿ ಆಡುವ ಈ ಅಳಿಲನ್ನು ಕಂಡರೆ ಏನೋ ಮುದ್ದು. ಮೊದಮೊದಲು ನನ್ನನ್ನು ಕಂಡರೆ ಹೆದರಿ ಮರ ಇಳಿಯುತ್ತಿದ್ದ ಈತ ಈಗ ಪರಿಚಿತನಾಗಿದ್ದಾನೆ. ಅಡುಗೆ ಕೋಣೆಯ ಕಿಟಕಿಯೆಡೆಗೆ ಬಂದು ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ಎಂದು ಬಗ್ಗಿ ನೋಡುವಷ್ಟು ಸಲಿಗೆ ಬೆಳೆಸಿಕೊಂಡಿದ್ದಾನೆ.
ಬೆಳಿಗ್ಗೆ ಎದ್ದಕೂಡಲೇ ರಾಕೆಟ್ ಹಿಡಿದು ಶಟಲ್ ಆಡಲು ಹೋಗುವುದಿದೆ. ಅರಳಿಮರದ ಕೆಳಗಿನ ರಸ್ತೆಯಲ್ಲಿ ನಮ್ಮ ಆಟ. ಹೀಗೆ ಆಡುವಾಗೆಲ್ಲ ನಮಗೆ ರಕ್ಷಣೆ ನೀಡಲೆಂದೇ ಈ ಏರಿಯಾದ ಡಾನ್ ಪರಿಚಿತನಾಗಿದ್ದಾನೆ. ನಾವು ಹೋಗುವ ವೇಳೆಗಾಗಲೇ ತನ್ನೆಲ್ಲ ಪ್ರೇಯಸಿಯರು, ಮಕ್ಕಳೊಡನೆ ರಸ್ತೆಯ ಬದಿಯಲ್ಲಿ ಚಿನ್ನಾಟವಾಡುತ್ತಿರುವ ಈತ ನಮ್ಮನ್ನು ಕಂಡ ಕೂಡಲೇ ಬಾಲ ಅಳ್ಳಾಡಿಸುತ್ತ ನಮಗೆ ದಾರಿ ಬಿಡುತ್ತಾನೆ. ಬಳಿ ಬಂದು ಮುದ್ದು ಮಾಡುವ ನೆಪದಲ್ಲಿ ತನ್ನ ಪಾಲಿನ ಬಿಸ್ಕತ್ತಿಗಾಗಿ ತಡುಕಾಡುತ್ತಾನೆ.
ಈಗಿನ್ನೂ ತನ್ನ ತರುಣಾವಸ್ತೆಯಲ್ಲಿರುವ, ಆದರೂ ಹತ್ತಾರು ಮಕ್ಕಳ ತಂದೆಯಾಗಿರುವ, ಮೈ ಪೂರ ಗೋಧಿ ಬಣ್ಣದ, ಕರಿಯ ಬಣ್ಣದ ಮೂತಿ ಹೊಂದಿರುವ ಈ ಸುಂದರ ಈ ಭಾಗದ ಶ್ವಾನಗಳ ಒಡೆಯ. ಒಂದೇ ನೆಗೆತಕ್ಕೆ ಅರಳೀಮರದ ಕಟ್ಟೆಯ ಮೇಲಣ ದೇವರ ಬೆನ್ನ ಮೇಲೆ ನೆಗೆಯುತ್ತಲೋ, ಬಳಿ ಬರುವ ಹಸುಗಳನ್ನು ಹೆದರಿಸಿ ಓಡಿಸುತ್ತಲೋ ಇಲ್ಲ ಅತ್ತಿಂತಿದ್ದ ಪುಟಿಯುವ ಕಾಕಿನ ವೇಗಕ್ಕೆ ತಕ್ಕಂತೆ ಕತ್ತು ತಿರುಗಿಸುತ್ತ ಅದನ್ನು ಹಿಡಿಯಲು ಹೊಂಚು ಹಾಕುವ ಈತ ಇರುವ ಹೊತ್ತಷ್ಟು ಪುಕ್ಕಟೆ ಮನೋರಂಜನೆ.
ಹೀಗೆ ಈ ನಾಯಿಯ ಸರ್ಕಸ್ ನಡೆದಿರುವಾಗಲೇ ಇಲ್ಲಿಗೆ ಮುದ್ದಾದ ಕರುವೊಂದರ ಆಗಮನವಾಗುತ್ತದೆ. ಒಂದೆರಡು ತಿಂಗಳು ವಯಸ್ಸಾಗಿರಬಹುದಾದ, ನಾಡಹಸುವಿನ ಜಾತಿಯ ಈ ಕರು ನಿತ್ಯ ತನ್ನ ಅಮ್ಮನೊಂದಿಗೆ ಮುಂಜಾನೆ ಅರಳೀಮರದ ಬಳಿ ಮೇಯಲು ಬರುತ್ತದೆ. ಸಂಕೋಚದ ಮುದ್ದೆಯಂಬಂತಿರುವ ಇದು ಮುಟ್ಟಹೋದಷ್ಟು ದೂರಕ್ಕೆ ಓಡುತ್ತದೆ.
ಇದೇ ಹೊತ್ತಿಗೆ ಎದುರು ಮನೆಯಿಂದ ಕರುವಿನಷ್ಟೇ ಮುದ್ದಾದ ಮಗು ತನ್ನ ಅಜ್ಜಿಯೊಡನೆ ವಾಕಿಂಗಿಗೆಂದು ರಸ್ತೆಗೆ ಬರುತ್ತದೆ. ಎರಡು ವರ್ಷವಿರಬಹುದಾದ ಈ ಹುಡುಗಿ ನಮ್ಮನ್ನು ಕಂಡು ಮಾಮ, ಅಣ್ಣ, ಅಪ್ಪ ಅಂತೆಲ್ಲ ತನಗೆ ತಿಳಿದುರುವ ಸಂಬಂಧಗಳ ಹೆಸರಿಡಿದು ಕೂಗುತ್ತದೆ. ಬಾ ಎಂದು ನಾವು ಕರೆಯುವುದು, ವಾಹನಗಳ ಓಡಾಟಕ್ಕೆ ಹೆದರಿ ಆಕೆ ಅಜ್ಜಿಯ ಪಕ್ಕದಲ್ಲೇ ನಿಲ್ಲುವುದು ನಡೆಯುತ್ತಿರುತ್ತ್ತದೆ. ನಮ್ಮ ಆಟ ನೋಡುತ್ತ ಆಕೆ, ಅವಳ ತುಂಟಾಟ ಸವಿಯುತ್ತ ನಾವು ಮುಂದುವರಿಯುತ್ತೇವೆ.
ಹೀಗೆ ನಿತ್ಯ ಓಡನಾಡಿಗಳಾಗುತ್ತಿರುವ ಆ ಅಳಿಲು, ನಾಯಿ, ಕರು ಮತ್ತು ಆ ಮಗು ಬಹುಶ್ಃ ಹಿಂದಿನ ಜನುಮದ ಗೆಳೆಯರಾಗಿರಬಹುದೇನೋ ಎಂಬ ಭ್ರಮೆ ಕಾಡುತ್ತದೆ.
.
Entry filed under: ಅರಳೀಕಟ್ಟೆ.
3 ಟಿಪ್ಪಣಿಗಳು Add your own
ನಿಮ್ಮದೊಂದು ಉತ್ತರ
Trackback this post | Subscribe to the comments via RSS Feed
1.
arun kumar m.a. | ಮೇ 9, 2012 ರಲ್ಲಿ 2:24 ಅಪರಾಹ್ನ
good one
2.
SURESH | ಮೇ 10, 2012 ರಲ್ಲಿ 6:47 ಫೂರ್ವಾಹ್ನ
maga squrrel dog and cow ok a magu ninge appa andiddu yake….heegu unte..
3.
ಜಿತೇಂದ್ರ ಸಿ.ರಾ.ಹುಂಡಿ | ಮೇ 10, 2012 ರಲ್ಲಿ 7:49 ಅಪರಾಹ್ನ
ಗೆಳೆಯ,
ಅಪ್ಪನಾಗಲಿಕ್ಕೆ ನಡೆಯಬೇಕಾದ ಕ್ರಿಯೆ-ಪ್ರಕ್ರಿಯೆಗಳು ಯಾವುದೂ ಪುಟ್ಟ ಮಕ್ಕಳಿಗೆ ತಿಳಿದಿರುವುದಿಲ್ಲ. ಮುಗ್ದತೆ ಎನ್ನುವುದು ಅದಕ್ಕೇ!