ಒಂಟಿಯಾಗಿ ನಡೆಯುತ್ತಾ…..

ಇವತ್ತು ಮತ್ತೆ ವಾರದ್ ರಜೆ. ಮೊನ್ನೆ ಭಾನುವಾರವೂ ಹೀಗೆ ಒಂದ್ ದಿನ ರಜೆ ಸಿಕ್ಕಿತ್ತು. ಅವತ್ತು ದಿನ ಪೂರ್ತಿ ನಿದ್ದೆ ಮಾಡಿದ್ದೆ ಆಯಿತು. ಇವತ್ತು ಏನ್ ಮಾಡೋದಪ್ಪ ಅನ್ನೋ ಚಿಂತೆ. ಮುಂಚೆ ೧೫ ದಿನಕ್ಕೊಮ್ಮೆ

ನಾನೇ!

ಊರಿಗೆ ಹೋಗುವ ಅಭ್ಯಾಸ ಇತ್ತು. ಎರಡೂ ರಜೆಗಳನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುತ್ತಿದ್ದೆ. ನಂತರ ಈ ಅವಧಿ ತಿಂಗಳಿಗೆ ಏರಿಕೆಯಾಯಿತು. ಈಗ ಊರು ಮರೆತೇಹೋಗಿದೆ ಅನ್ನುವ ಹಾಗೇ ಮನಸ್ಸು ಬಂದಾಗ ಊರಿಗೆ ಹೋಗುವುದು ಅಭ್ಯಾಸವಾಗುತ್ತಿದೆ. ಆದರೆ ನಮ್ಮದಲ್ಲದ ಊರಲ್ಲಿ ಒಂಟಿಯಾಗಿ ದಿನ ಕಳೆಯುವುದಿದೆಯಲ್ಲ ಅದಕ್ಕಿಂತ ಬೇಜಾರಿನ ಹಾಗೂ ಖುಷಿಯ ಕೆಲಸ ಇನ್ನೊಂದಿಲ್ಲ. (ಬೇಕಿದ್ರೆ ಸಂಸಾರಿಗಳಲ್ಲದ, ಗರ್ಲ್ ಫ್ರೆಂಡುಗಳಿಲ್ಲದ ಹುಡುಗರನ್ನು ಕೇಳಿ ನೋಡಿ). ಮೈಸೂರಿನಲ್ಲಿ ಇರುವಾಗಲೆಲ್ಲ ಇ಼ಷ್ಟಪಟ್ಟು ಮಾಡುವ ಕೆಲಸ ಅಂದರೆ ಸಂಜೆಯಾಗುತ್ತಿದ್ದಂತೆಯೇ ಸಿಟಿ ಬಸ್ ಹತ್ತಿ ಬಸ್ ಸ್ಯ್ಟಾಂಡಿನಲ್ಲಿ ಇಳಿದು ಅಲ್ಲಿಂದ ಅರಸು ರಸ್ತೆಯಲ್ಲಿ ಎರಡೂ ಜೇಬಲ್ಲಿ ಕೈ ಹಾಕಿಕೊಂಡು (ಹಣ ಪೋಲಾಗದಿರಲಿ ಅಂತ!) ನಡೆಯುತ್ತಾ ಮಹಾರಾಣಿ ಕಾಲೇಜಿನ ಕಂಪೌಂಡ್ ಮುಟ್ಟಿ ವಾಪಸ್ ಅದೇ ರಸ್ತೆಯಲ್ಲಿ ಬರುವುದು. ಪ್ರತಿ ಸಲ ಹೀಗೆ ನಡೆವಾಗಲೂ ಕಣ್ಣಲ್ಲಿ ಹೊಸ ಅಚ್ಚರಿ ತುಂಬಿರುತ್ತದೆ.

ಈ ಅಭ್ಯಾಸ ಶುರುವಾದದ್ದು ಪದವಿ ಕಾಲೇಜಿನ ಕೊನೆಯೆರಡು ವರ್ಷಗಳಲ್ಲಿ ರಂಗಾಯಣದ ಸಹವಾಸ ಆರಂಭವಾದಂದಿನಿಂದ. ಮಧ್ಯಾಹ್ನ ಆದ ಕೂಡಲೇ ರಂಗಾಯಣ ಕ್ಯಾಂಟಿನಿನಲ್ಲಿ ವಕ್ಕರಿಸಿ ಉಂಡು-ತಿಂದು, ಸ್ಕ್ರ್ಲಿಪ್ಟ್ ರೀಡಿಂಗ್ ಅನ್ನುವ ನಾಟಕವಾಡಿ, ಮತ್ತೆ ಚಾ ಹೀರಿ ಹರಟೆ ಹೊಡೆಯುತ್ತ, ಕತ್ತಲಾದ ಮೇಲೆ ಮನೆಯ ನೆನಪಾದಾಗ ಬಸ್ ಸ್ಯ್ಟಾಂಡಿಗೆ ಇದೇ ಅರಸು ರಸ್ತೆಯಲ್ಲಿ ಹೋಗಬೇಕಿತ್ತು. ಅದೇ ಮಹಾರಾಣಿ ಕಾಲೇಜು ಹಾಸ್ಟೆಲ್ಲಿನ ಕಂಪೌಂಡ್ ಗೆ ಅಂಟಿಕೊಂಡಿರುವ ಐಷಾರಾಮಿ ಕಾಫಿ ಡೇಯ ಪಕ್ಕದಲ್ಲೇ ಇರುವ ಚಾ ದುಕಾನಿನಲ್ಲಿ ಗೆಳೆಯರೆಲ್ಲ ಬೈ-ಟು ಟೀ ಕುಡಿದು ರಸ್ತೆಗೆ ಇಳಿದೆವೆಂದರೆ ಮತ್ತೆ ನೆಲ ನೋಡುತ್ತಿದ್ದುದು ಕೆ.ಆರ್.ಸರ್ಕಲ್ ಸಮೀಪಿಸಿದ ಮೇಲೆ!

ಹುಬ್ಬಳ್ಳಿಗೆ ಬಂದ ಮೇಲೆ ಹೀಗೆ ಸೆಳೆದದ್ದು ಇಲ್ಲಿನ “ಎಂ.ಜಿ. ರೋಡ್” ಉರುಫ್ ಕೊಪ್ಪಿಕರ ರಸ್ತೆ. ಇವತ್ತು ಸಂಜೆ ಹೀಗೆ ಇದೇ ರಸ್ತೆಯಲ್ಲಿ ನಡೆಯುತ್ತಿರುವಾಗ ಇನ್ನೇನು ಡಿಕ್ಕಿ ಹೊಡೆಯುವಷ್ಟು ಸಮೀಪದಲ್ಲಿ ಇಲ್ಲಿನ ಗೆಳೆಯರೊಬ್ಬರು ಎದುರಾದರು. ಉಭಯ ಕುಶಲೋಪರಿಯ ನಂತರ “ಮದುವೆ” ಅಂದರು. ಅವರಿಗೆ ಈ ಬ್ರಹ್ಮಚರ್ಯದ ಸುಖವನ್ನೂ, ಹೀಗೆ ಅಲೆಯುವ ಹಿಂದಿರುವ ಸ್ವಾತಂತ್ರ್ಯವನ್ನೂ ವಿವರಿಸಿದೆ. ನಿಮ್ಮ ಪರಿಸ್ಥಿತಿ ನೋಡಿದ ಮೇಲೂ ಮದುವೆಯಾಗುವುದೇ, ಅದಕ್ಕಿಂತ ಹೀಗೆ ಇದ್ದುಬಿಡುವುದೇ ಲೇಸು ಅಂತೆಲ್ಲ ಛೇಡಿಸಿದೆ. ಅದಕ್ಕವರು “ತಮ್ಮ ಯಾವ್ಯಾವ ಕಾಲದಾಗ ಏನೇನ್ ಆಗ್ಬೇಕೊ ಅದೇ ಆಗ್ಬೇಕು ನೋಡು. ಅದ್ ಬಿಟ್ಟು ಹಿಂಗ ಸಂಸಾರ ಮಾಡೋ ಹೊತ್ನಾಗ ಸನ್ಯಾಸದ ಮಾತಾಡ್ತೀ ಅಂದ್ರ ನಿನ್ನಲ್ಲೇ ಏನೋ ತಾಂತ್ರಿಕ ದೋಷ ಇರಬೇಕು ಅಂತ ಮಂದಿ ತಪ್ಪು ತಿಳಿತಾರಾ” ಅಂತ ಮಾತಲ್ಲೇ ಬಾಂಬ್ ಸಿಡಿಸಿದರು. ಆಮೇಲೆ ಇಬ್ಬರೂ ರಾಜೀ ಆಗಿ ಸಮೀಪದ ಹೋಟೆಲ್ ನಲ್ಲಿ ಚಾ ಹೀರಿ ನಮ್ಮ ದಾರಿ ಹಿಡಿದದ್ದಾಯಿತು.

January 10, 2012 at 4:42 pm 1 comment

ಮರೆತುಹೋದ ಪಾಸ್ ವರ್ಡ್ ನೆನಪಿಸಿಕೊಳ್ಳುತ್ತ

೨೦೦೯ರ ಅಕ್ಟೋಬರ್ ನಲ್ಲಿ ಕೆಂಡಸಂಪಿಗೆಯ ಬಾಗಿಲು ಮುಚ್ಚುವ ಜೊತೆಗೆ ಈ ಬ್ಲಾಗಿನ ಬಾಗಿಲೂ ಮುಚ್ಚಿತ್ತು. ಉದ್ಯೋಗವಿಲ್ಲದೆ ಬದುಕೇ ಗೊಂದಲವಾಗಿ ಹೋಗಿತ್ತು. ಆ ಹೊತ್ತಿಗೆ ಕೈ ಹಿಡಿದು ಮೇಲೆತ್ತಿದ್ದು ಪ್ರಜಾವಾಣಿ. ಅಲ್ಲಿಂದ ಆರಂಭವಾದ ವಿಶ್ವಾಸಾರ್ಹ ಪತ್ರಿಕೆಯೊಟ್ಟಿಗಿನ ಪಯಣ ಮುಂದುವರಿದಿದೆ. ಬದುಕಿನ ರೈಲು ಮೈಸೂರಿನಿಂದ ಹುಬ್ಬಳ್ಳಿಗೆ ಬಂದು ನಿಂತಿದೆ.
ಈ ನಡುವೆ ಕಳೆದುಕೊಂಡಿದ್ದು ಉಂಟು. ಗಳಿಸಿದ್ದೂ ಉಂಟು. ಹೊಸ ಜಾಗ, ಹೊಸ ಸ್ನೇಹಿತರ ಸಹವಾಸದ ಖುಷಿ ತಂದುಕೊಟ್ಟಿದ್ದರೂ ಒಮ್ಮೊಮ್ಮೆ “ಮತ್ತದೇ ಬೇಸರ ಅದೇ ಸಂಜೆ, ಅದೇ ಏಕಾಂತ”.
ಬ್ಲಾಗೂ, ಸ್ಲೇಟು-ನನ್ನ ಪಾಲಿಗೆ ಎರಡೂ ಒಂದೇ. ಬೇಕಾದ್ದನ್ನು ಬರೆಯಬಹುದು. ಬೇಡೆಂದಾಗ ಅಳಿಸಬಹುದು. ಇಲ್ಲವೇ ಸ್ಲೇಟು ಬದಲಿಸಬಹುದು. ಸರಿಸುಮಾರು ಎರಡೂವರೆ ವರ್ಷಗಳ ನಂತರ ಈಗ್ಗೆ ಇಲ್ಲಿನ ಬರಹಗಳನ್ನು ಓದುವಾಗ ಕೆಲವನ್ನು ಅಳಿಸಿಹಾಕುವ ಮನಸ್ಸೂ, ಜೊತೆಗೆ ಖುಷಿಯೂ ಆಗಿ ಗೊಂದಲವಾಗುತ್ತಿದೆ. ಇದನ್ನೆಲ್ಲ ಪಕ್ಕಕ್ಕಿಟ್ಟು, ಮತ್ತೆ ಬರೆಯುವ ಹಠ ತೊಟ್ಟಿದ್ದೇನೆ. ಮರೆತುಹೋಗಿದ್ದ ಪಾಸ್ ವರ್ಡ್ ನೆನಪಿಸಿಕೊಳ್ಳುತ್ತಿದ್ದೇನೆ.

January 8, 2012 at 8:32 pm Leave a comment

ಮುಂದುವರಿದ ಬಾಂಡ್ ಕಾದಂಬರಿ

ರಸ್ಕಿನ್ ಬಾಂಡ್ ರ `Dehli is not far’ ಕಾದಂಬರಿಯ ಇನ್ನೊಂದು ಅಧ್ಯಾಯ.

ರಸ್ಕಿನ್ ಬಾಂಡ್

ರಸ್ಕಿನ್ ಬಾಂಡ್

‘ನೋಡು ಗಣಪತಿ’ ಒಂದು ದಿನ ನಾನವನನ್ನ ಕೇಳಿದೆ. ‘ನಾನು ನಿನ್ನ ಬಗ್ಗೆ ಸಾಕಷ್ಟು ಕಥೆಗಳನ್ನ ಕೇಳಿದ್ದೇನೆ. ಆದರೆ ಅದರಲ್ಲಿ ಯಾವುದು ಸುಳ್ಳು, ಯಾವುದು ಸತ್ಯ ಅಂತ ಗೊತ್ತಿಲ್ಲ. ನಿನ್ನ ಈ ಬೆನ್ನು ಗೂನಾದದ್ದಾದರೂ ಹೇಗೆ?’

‘ಅದೊಂದು ದೊಡ್ಡ ಕಥೆ’ ಅಂತಂದ ಗಣಪತಿ. ಅದು ಅವನ ಕಥೆ ಬಗ್ಗೆ ಇನ್ನಷ್ಟು ಕುತೂಹಲ ಕೆರಳಿಸಿತು. ‘ಅದನ್ನೆಲ್ಲ ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ. ಅಲ್ಲದೆ, ಹಾಗೇ ಯಾರಿಗೂ ನನ್ನ ಕಥೆಯನ್ನ ಬಿಟ್ಟಿಯಾಗಿ ಹೇಳುವುದೂ ಇಲ್ಲ.’

ಆತ ನನ್ನಿಂದ ಏನನ್ನಾದರೂ ಗಿಟ್ಟಿಸಿಕೊಳ್ಳುವ ತನ್ನ ಉದ್ದೇಶವನ್ನು ವ್ಯಕ್ತಪಡಿಸಿದ. ನಾನಂದೆ ‘ನೀನು ನಿನ್ನ ಕಥೆಯನ್ನ ಹೇಳಿದ್ದೇ ಆದಲ್ಲಿ, ನಿನಗೆ ನಾಲ್ಕು ಆಣೆಗಳನ್ನ ಕೊಡುತ್ತೇನೆ. ಹೇಳು, ಇದೆಲ್ಲ ಹೇಗಾಯಿತು?’

ಆತ ತನ್ನ ಗಡ್ಡದ ಮೇಲೊಮ್ಮೆ ಕೈಯಾಡಿಸುತ್ತಲೇ, ನನ್ನ ಬೇಡಿಕೆಯನ್ನ ಒಪ್ಪಿಕೊಂಡ. ‘ಆದರೆ ಇದೆಲ್ಲ ನಡೆದಿದ್ದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ. ಯಾವಾಗ ಅಂತ ಮಾತ್ರ ಖರಾರುವಕ್ಕಾಗಿ ಹೇಳುವುದಕ್ಕೆ ಆಗೋದಿಲ್ಲ.’

‘ಆ ದಿನಗಳಲ್ಲಿ ನಾನಿನ್ನು ಯುವಕನಾಗಿದ್ದೆ. ಆಗಷ್ಟೇ ಮದುವೆ ಕೂಡ ಆಗಿದ್ದೆ. ನನಗೆ ಒಂದಿಷ್ಟು ಜಮೀನು ಇದ್ದಾಗ್ಯೂ , ಬಡತನ ಇರದೇ ಇರಲಿಲ್ಲ. ನಾನು ಬೆಳೆದಿದ್ದನ್ನೆಲ್ಲ ನನ್ನೂರಿನಿಂದ ಐದು ಮೈಲು ದೂರದಲ್ಲಿದ್ದ ಮಾರುಕಟ್ಟೆಗೆ ತೆಗೆದುಕೊಂಡು ಹಾಕುತ್ತಿದ್ದೆ. ಎತ್ತುಗಳನ್ನ ಗಾಡಿಗೆ ಕಟ್ಟಿ, ಹೊಂಡ ಬಿದ್ದ ರಸ್ತೆಯಲ್ಲೇ ಓಡಿಸಿಕೊಂಡು ಹೋಗುತ್ತಿದ್ದೆ. ರಾತ್ರಿ ಮನೆಗೆ ಮರಳುತ್ತಿದ್ದೆ.

ಪ್ರತಿದಿನ ನಾನು ಒಂದು ಹುಣಸೇಮರದ ಹತ್ತಿರ ಹಾದು ಬರುವಾಗ ಅಲ್ಲಿ ಏನೋ ಸದ್ದಾದಂತೆ ಆಗುತ್ತಿತ್ತು. ನಾನು ಯಾವತ್ತೂ ಆ ದೆವ್ವವನ್ನ ಕಂಡಿರಲಿಲ್ಲ. ಅದನ್ನ ನಂಬುತ್ತಲೂ ಇರಲಿಲ್ಲ. ನಾನು ಕೇಳಿದಂತೆ, ಅಲ್ಲಿ ಬಿಪಿನ್ ಎನ್ನುವ ವ್ಯಕ್ತಿಯನ್ನ ಬಹಳ ವರ್ಷಗಳ ಹಿಂದೆ ಒಂದು ಡಕಾಯಿತರ ಗುಂಪು ನೇಣು ಹಾಕಿ ಕೊಂದಿತ್ತು. ಅಲ್ಲಿಂದ ಆತನ ಆತ್ಮ ಆ ಮರದಲ್ಲಿಯೇ ವಾಸಿಸುತ್ತಿದ್ದು, ಆ ದಾರಿಯಲ್ಲಿ ತಿರುಗಾಡುವ, ನೋಡಲು ಡಕಾಯಿತರಂತೆಯೇ ಕಾಣುವವರನ್ನೆಲ್ಲ ಹಿಡಿದು ಥಳಿಸುತ್ತಿತ್ತು. ಒಂದು ರಾತ್ರಿ ಹಾಗೇ ನನ್ನನ್ನು ಥಳಿಸಲು ಮುಂದಾಯಿತು. ಮರದಿಂದ ಕೆಳಗಿಳಿದು ಬಂದು, ರಸ್ತೆಗೆ ಅಡ್ಡವಾಗಿ ನಿಂತಿತ್ತು.

‘ಎಲಾ ಇವನೇ, ಗಾಡಿಯಿಂದ ಕೆಳಗೆ ಇಳಿ. ನಾನು ನಿನ್ನನ್ನ ಕೊಲ್ಲುತ್ತೇನೆ.’

ನಾನು ಇದರಿಂದ ಕೊಂಚ ಹೆದರಿದೆನಾದರೂ, ಅದರ ಆಜ್ಞೆಯನ್ನ ಪಾಲಿಸಬೇಕಾದ ಯಾವುದೇ ಅಗತ್ಯತೆ ತೋರಲಿಲ್ಲ.

‘ನಾನು ಕೊಲೆಯಾಗುವ ಯಾವ ಕಾರಣಗಳೂ ಇಲ್ಲ. ಬೇಕಾದರೆ ನೀನೇ ಗಾಡಿ ಮೇಲೆ ಬಾ.’ ಅಂದೆ.

‘ಒಳ್ಳೆ ಮನುಷ್ಯನ ಹಾಗೆ ಮಾತನಾಡುತ್ತೀಯಾ!’ ಬಿಪಿನ್ ಕಿರುಚಿದ. ಗಾಡಿ ಮೇಲಕ್ಕೆ ನೆಗೆದು ನನ್ನ ಬೆನ್ನ ಹಿಂದೆಯೇ ನಿಂತ. ‘ಹಾಗಾದರೆ, ನಿನ್ನನ್ನ ಯಾಕೆ ಕೊಲ್ಲಬಾರದು ಅಂತ ಒಂದು ಕಾರಣ ಹೇಳು’
‘ನಾನು ಡಕಾಯಿತನಲ್ಲ.’
‘ಆದರೆ ನೀನು ಡಕಾಯಿತನ ಹಾಗೇ ಕಾಣುತ್ತೀಯಾ!’
‘ಒಂದು ವೇಳೆ ನೀನು ನನ್ನನ್ನ ಕೊಂದಿದ್ದೇ ಆದಲ್ಲಿ, ಆಮೇಲೆ ಪಶ್ಚಾತಾಪ ಪಡುತ್ತೀಯಾ. ನಾನು, ಹೆಂಡತಿಯೂ ಜೊತೆಗಿರುವ ಒಬ್ಬ ಬಡ ಮನುಷ್ಯ.’
‘ನೀನು ಬಡವನಾಗಿರುವುದಕ್ಕೆ ಸಾಧ್ಯವೇ ಇಲ್ಲ’ ಬಿಪಿನ್ ಕೋಪದಿಂದ ಅಂದ.
‘ಹಾಗಾದರೆ, ನಿನಗೆ ತಾಕತ್ತಿದ್ದರೆ ನನ್ನನ್ನ ಶ್ರೀಮಂತನನ್ನಾಗಿ ಮಾಡು ನೋಡೋಣ?’
‘ನನಗೆ ಆ ಶಕ್ತಿಯಿಲ್ಲ ಅಂತೀಯಾ? ನಿನ್ನನ್ನ ಶ್ರೀಮಂತನನ್ನಾಗಿ ಮಾಡೋದಕ್ಕೆ ಆಗಲ್ಲ ಅಂತೀಯಾ?’
‘ಹೌದು, ಖಂಡಿತ. ನನ್ನನ್ನ ನೀನು ಶ್ರೀಮಂತನನ್ನಾಗಿ ಮಾಡೋದಕ್ಕೆ ಆಗೋದಿಲ್ಲ.’
‘ಹಾಗಾದರೆ ನೋಡೇ ಬಿಡೋಣ. ನಾನು ನಿನ್ನ ಜೊತೆಗೇ ನಿನ್ನ ಮನೆಗೆ ಬರ್ತೀನಿ’ ಅಂದ. ನಾನು ಗಾಡಿಯನ್ನ ಊರಿನತ್ತ ಹೊಡೆದೆ.

‘ನಾನದಕ್ಕೆ ತಕ್ಕ ವ್ಯವಸ್ಥೆ ಮಾಡಿಕೊಳ್ಳಬೇಕು’ ಅಂದ. ‘ಇನ್ನೊಂದು ವಿಷಯ. ನಿನ್ನನ್ನ ಬಿಟ್ಟು ಬೇರೆ ಯಾರ ಕಣ್ಣಿಗೂ ನಾನು ಕಾಣಿಸುವುದಿಲ್ಲ. ನಾನು ಪ್ರತಿದಿನ ನಿನ್ನ ಪಕ್ಕದಲ್ಲೇ ಮಲಗುತ್ತೇನೆ. ಆದರೆ ಇದು ಯಾರಿಗೂ ಗೊತ್ತಾಗಕೂಡದು. ನನ್ನ ಬಗ್ಗೆ ಯಾರ ಹತ್ತಿರವಾದರೂ ಹೇಳಿದ್ರೆ, ಅವತ್ತೇ ನಿನ್ನನ್ನ ಕೊಂದು ಬಿಡ್ತೀನಿ!’
‘ಚಿಂತಿಸಬೇಡ. ಯಾರಿಗೂ ಹೇಳೋಲ್ಲ.’
‘ಒಳ್ಳೆಯದು. ಹಾಗಾದರೆ ನಾನಿನ್ನು ನಿನ್ನೊಟ್ಟಿಗೇ ಜೀವಿಸ್ತೀನಿ. ನನಗೂ ಈ ಮರದ ಮೇಲೆ ಒಬ್ಬನೇ ಇದ್ದು ಬೇಜಾರಾಗಿ ಹೋಗಿದೆ.’

ಅಂದಿನಿಂದ ಬಿಪಿನ್ ನನ್ನೊಟ್ಟಿಗೆ ಬಂದ. ಪ್ರತಿರಾತ್ರಿ ನನ್ನೊಂದಿಗೇ ಮಲಗುತ್ತಿದ್ದ. ನಾವಿಬ್ಬರೂ ಚೆನ್ನಾಗಿಯೇ ಹೊಂದಿಕೊಂಡಿದ್ದೆವು. ಅವನು ತನ್ನ ಮಾತಿನಂತೆಯೇ ನಡೆದುಕೊಂಡಿದ್ದ. ಯಾವ್ಯಾವುದೋ ಮೂಲಗಳಿಂದ ಹಣ ಹರಿದುಬರಲು ಶುರುವಾಗಿತ್ತು. ಅದರಿಂದ ಒಂದಿಷ್ಟು ಜಮೀನು, ಆಸ್ತಿಯನ್ನ ಕೊಂಡೆ. ನಮ್ಮೀ ಸಹವಾಸದ ಬಗ್ಗೆ ಯಾರೊಬ್ಬರಿಗೂ ಗೊತ್ತಿರಲಿಲ್ಲ. ಆದಾಗ್ಯೂ, ನಾನು ಹೀಗೆ ದಿಢೀರ್ ಶ್ರೀಮಂತನಾಗುತ್ತಿರುವ ಕುರಿತು ನನ್ನ ಕೆಲವು ಗೆಳೆಯರಿಗೆ ಮತ್ತು ಸಂಬಂಧಿಕರಿಗೆ ಅನುಮಾನಗಳು ಶುರುವಾದವು. ಅದೇ ವೇಳೆ, ನನ್ನ ಹೆಂಡತಿಯ ಜೊತೆ ರಾತ್ರಿ ಕಳೆಯಲು ನಿರಾಕರಿಸುತ್ತಿದ್ದೆನಾದ್ದರಿಂದ ಆಕೆ ಕೂಡ ನಿರಾಸೆಗೊಂಡಿದ್ದಳು. ಆದರೇನು ಮಾಡಲಿ, ದೆವ್ವ ಪಕ್ಕದಲ್ಲಿರುವಾಗ ಆಕೆಯನ್ನ ಒಂದೇ ಹಾಸಿಗೆಯಲ್ಲಿ ಹೇಗೆ ಮಲಗಿಸಿಕೊಳ್ಳಲಿ! ಈ ಬಿಪಿನ್ ಕೂಡ ಈ ಮಲಗೋ ವಿಷಯದಲ್ಲಿ ಬಹಳ ಕಟ್ಟುನಿಟ್ಟಾಗಿದ್ದ. ಮೊದಮೊದಲು ವರಾಂಡದಲ್ಲಿ ಮಲಗುತ್ತಿದ್ದೆ. ಆಮೇಲೆ ಯಾರೋ ನಮ್ಮ ಹಸುಗಳನ್ನೆಲ್ಲ ಕದಿಯಲು ಪ್ರಯತ್ನಿಸುತ್ತಿದ್ದಾರೆ, ಅದನ್ನೆಲ್ಲ ಕಾಯಬೇಕು ಅಂತಂದು ಕೊಟ್ಟಿಗೆಯಲ್ಲಿ ಬಿಪಿನ್‌ನೊಟ್ಟಿಗೆ ಮಲಗತೊಡಗಿದೆ.

ಹೆಂಡತಿಗೆ ಅನುಮಾನ ಬಂದು, ನಾನು ಬೇರೆ ಹೆಂಗಸಿನ ಜೊತೆ ಮಲಗುತ್ತಿರಬಹುದಾ ಅಂತ ಕದ್ದು ನೋಡುತ್ತಿದ್ದಳು. ಆದರೆ ಕೊಟ್ಟಿಗೆಯಲ್ಲಿ ಹುಲ್ಲಿನ ಮೇಲೆ ಒಬ್ಬನೇ ಮಲಗುತ್ತಿದ್ದುದನ್ನು ಕಂಡು ಅವಳಿಗೆ ಏನೂ ತೋಚದಾಗಿ, ಇದನ್ನೆಲ್ಲ ತನ್ನ ತವರು ಮನೆಯವರಲ್ಲಿ ಹೇಳಿಕೊಂಡಳು. ಅವರು ಬಂದವರೇ ಇದಕ್ಕೆಲ್ಲ ಕಾರಣ ಹೇಳು ಅಂತ ಒತ್ತಾಯ ಪಡಿಸತೊಡಗಿದರು.

ಇದೇ ವೇಳೆ, ನನ್ನ ಸಂಬಂಧಿಕರು ಕೂಡ ನನ್ನೀ ದಿಢೀರ್ ಶ್ರೀಮಂತಿಕೆ ಬಗ್ಗೆ ತಿಳಿದುಕೊಳ್ಳಬಯಸಿದರು. ಎಲ್ಲರೂ ಒಂದಾಗಿ ಒಂದು ದಿನ ನನ್ನನ್ನ ಪಟ್ಟಾಗಿ ಹಿಡಿದುಕೊಂಡರು. ಇದೆಲ್ಲದಕ್ಕೂ ಕಾರಣ ಹೇಳು ಅಂತ ಬಲವಂತ ಮಾಡತೊಡಗಿದರು.

‘ನಾನು ಸಾಯೋದು ನಿಮಗೆಲ್ಲ ಇಷ್ಟನಾ?’ ತಾಳ್ಮೆ ಕಳೆದುಕೊಂಡು ಒದರಿದೆ. ‘ನನ್ನೀ ಶ್ರೀಮಂತಿಕೆಯ ಬಗ್ಗೆ ಹೇಳಿಕೊಂಡಿದ್ದೇ ಆದಲ್ಲಿ, ನನ್ನ ಸಾವು ಖಂಡಿತ!’

ಆದರೆ ಅವರೆಲ್ಲ ಸುಮ್ಮನೆ ನಕ್ಕರು. ನಾನು ಏನನ್ನೂ ಹೇಳದೆ ಎಲ್ಲವನ್ನೂ ನನ್ನೊಳಗೆ ಬಚ್ಚಿಡಲು ಪ್ರಯತ್ನಿಸುತ್ತಿದ್ದೀನಿ ಅಂದುಕೊಂಡರು. ನನ್ನ ಹೆಂಡತಿಯ ಸಂಬಂಧಿಕರು, ನಾನು ಇನ್ನೊಬ್ಬಳನ್ನ ಇಟ್ಟುಕೊಂಡಿದ್ದೀನಿ ಅಂತಲೂ ಅನುಮಾನ ಪಟ್ಟರು. ಅವರ ಒತ್ತಾಯಗಳಿಗೆಲ್ಲ ಮಣಿದು ನಾನು ಕಡೆಗೂ ನಿಜ ಹೇಳಿಬಿಟ್ಟೆ.

ಈ ಸತ್ಯವನ್ನ ಮಾತ್ರ ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. (ಯಾರು ತಾನೇ ನಂಬುತ್ತಾರೆ ಹೇಳಿ!) ಇದರ ಬಗ್ಗೆ ಯೋಚನೆ ಮಾಡಿ ಹೇಳಿ ಅಂದೆ. ಆಯ್ತು ಅಂತ ತಮ್ಮ ಮನೆಗಳಿಗೆ ಹೊರಟುಹೋದರು.

ಆ ರಾತ್ರಿ ಬಿಪಿನ್ ನನ್ನೊಟ್ಟಿಗೆ ಮಲಗಲು ಬರಲಿಲ್ಲ. ನಾನು ಹಸುಗಳ ಪಕ್ಕದಲ್ಲಿ ಒಬ್ಬನೇ ಮಲಗಿದೆ. ಎಲ್ಲಿ ನಾನು ಮಲಗಿಕೊಂಡಿದ್ದಾಗ ಆತ ನನ್ನನ್ನ ಕೊಂದುಬಿಡುತ್ತಾನೋ ಅಂತ ಹೆದರಿಕೊಂಡಿದ್ದೆ. ಆದರೆ ಆತ ತನ್ನ ಪಾಡಿಗೆ ತಾನು ಹೊರಟುಹೋಗಿದ್ದ. ನನ್ನ ಒಳ್ಳೆಯ ದಿನಗಳು ಮುಗಿದವು ಅಂದುಕೊಳ್ಳುತ್ತ  ಹೆಂಡತಿಯೊಟ್ಟಿಗೆ ಮಲಗಲು ಶುರುಮಾಡಿದೆ.

ಮುಂದಿನ ಸಲ ನಾನು ಅದೇ ರಸ್ತೆಯಲ್ಲಿ ಬರುವಾಗ, ಬಿಪಿನ್ ಅದೇ ಹುಣಸೇಮರದ ಕೆಳಗೆ ಅಡ್ಡಲಾದ.

‘ಮೋಸದ ಗೆಳೆಯ’ ಜೋರಾಗಿ ಕಿರುಚಿದ. ಎತ್ತುಗಳನ್ನು ಎಳೆದು ನಿಲ್ಲಿಸಿದ. ‘ನೀನು ಬಯಸಿದ್ದನ್ನೆಲ್ಲ ಕೊಟ್ಟೆ. ಆದರೆ ನೀನು ಮೋಸ ಮಾಡಿಬಿಟ್ಟೆ!’

‘ಕ್ಷಮಿಸು. ತಪ್ಪಾಗಿದ್ದರೆ ನನ್ನನ್ನು ಕೊಂದುಬಿಡು.’
‘ಇಲ್ಲ ನಿನ್ನನ್ನ ಕೊಲ್ಲೋದಿಲ್ಲ. ನಾವು ಬಹಳ ದಿನಗಳ ಕಾಲ ಸ್ನೇಹಿತರಾಗಿದ್ದೆವು. ಆದರೆ ನಿನ್ನನ್ನ ಶಿಕ್ಷಿಸದೇ ಬಿಡೋದಿಲ್ಲ.’ ಹಾಗಂದವನೇ ಒಂದು ದಪ್ಪನೆಯ ದೊಣ್ಣೆಯನ್ನ ಎತ್ತಿಕೊಂಡು ನನಗೆ ಬಲವಾಗಿ ಮೂರೇಟು ಬಿಗಿದ. ಅಷ್ಟೇ, ನನ್ನ ಬೆನ್ನು ನೆಲ ಮುಟ್ಟುತ್ತಿತ್ತು.’

‘ಆಮೇಲೆ…..’ ಗಣಪತಿ ದೊಡ್ಡದೊಂದು ನಿಟ್ಟುಸಿರು ಬಿಟ್ಟ. ‘ಆಮೇಲೆ ನನ್ನ ಬೆನ್ನು ಮತ್ತೆ ನೆಟ್ಟಗಾಗಲೇ ಇಲ್ಲ. ನಾನು ಗೂನು ಬೆನ್ನಿನವನಾದೆ. ಹೆಂಡತಿ ನನ್ನನ್ನ ತೊರೆದು ತವರುಮನೆ ಸೇರಿಕೊಂಡಳು. ಕೆಲಸ ಮಾಡಲಾರದ ಕಾರಣ ಜಮೀನು ಹಾಳಾಯ್ತು. ಆಸ್ತಿಯನ್ನೂ ಮಾರಬೇಕಾಯಿತು. ನಾನು ಹಳ್ಳಿ ತೊರೆದು ನಗರಕ್ಕೆ ಬಂದೆ. ಒಂದೂರಿನಿಂದ ಇನ್ನೊಂದೂರಿಗೆ ಭಿಕ್ಷೆ ಬೇಡುತ್ತಾ ಅಲೆದೆ. ಈಗ ಪೀಪಲ್ ನಗರದಲ್ಲಿ ಇದ್ದೀನಿ. ಉಳಿದ ಊರಿಗಿಂತ ಇಲ್ಲಿನವರು ಹೆಚ್ಚು ಜಿಪುಣರು ಅಂತ ನನಗನ್ನಿಸುತ್ತೆ. ಖಾಸೇ ಬಿಚ್ಚೋದಿಲ್ಲ.’

ನನ್ನತ್ತ ನೋಡಿ ನಕ್ಕವನೇ, ನಾಲ್ಕು ಆಣೆಗಾಗಿ ಕಣ್ಣರಳಿಸಿ ಕೂತ.

‘ನಾನೀ ಕಥೆಯನ್ನ ನಂಬುತ್ತೀನಿ ಅಂದುಕೊಳ್ಳಬೇಡ. ಆದರೂ ಚೆನ್ನಾಗಿ ಹೇಳಿದ್ದೀಯಾ. ಹೀಗಾಗಿ, ತಕೋ ನಿನ್ನ ಹಣ.’
‘ಬೇಡ, ಬೇಡ’ ಅಂದವನೇ ಹಣ ಪಡೆಯಲು ನಿರಾಕರಿಸಿದ. ‘ನನ್ನನ್ನ ನಂಬದೇ ಹೋದರೆ ನಿಮ್ಮೀ ಹಣ ಖಂಡಿತ ಬೇಡ. ನಾಲ್ಕು ಆಣೆಗಾಗಿ ಸುಳ್ಳು ಹೇಳುವ ಆಸಾಮಿ ನಾನಲ್ಲ.’

ಕಡೆಗೂ ಕೊಟ್ಟೆ. ಈಸಿಕೊಂಡವನೇ ಶುಭದಿನ ಅನ್ನುತ್ತ ಹೊರಟ.

(ಮುಂದುವರಿಯುವುದು)

October 2, 2009 at 6:45 am Leave a comment

ರಸ್ಕಿನ್ ಬಾಂಡ್ ರ `Dehli is not far’: ಮುಂದುವರಿದ ಕಾದಂಬರಿ

ರಸ್ಕಿನ್ ಬಾಂಡ್ ರ `Dehli is not far’ ಕಾದಂಬರಿಯ ಇನ್ನೊಂದು ಅಧ್ಯಾಯ.

ಒಂದು ರಾತ್ರಿ ಸೂರಜ್ ಮತ್ತು dehನಾನು ಟೀ ಶಾಪ್ ಒಂದರಲ್ಲಿ ಕೂತಿದ್ದೆವು. ಬಹುತೇಕ ಗಿರಾಕಿಗಳು ಬೆಂಚಿನ ಹೊರಗೆ, ಅಲ್ಲಿನ ಪ್ರಸಿದ್ದ ಕಥೆಗಾರನೂ ಆದ ಅಂಗಡಿಯವನ ಸುತ್ತ ಸುತ್ತಿಕೊಂಡಿದ್ದರು. ಅಲ್ಲೇ, ತಲೆಯಲ್ಲಿ ಒಂದೂ ಕೂದಲಿಲ್ಲದ, ಕಿವಿಯೂ ಕೇಳಿಸದ ವ್ಯಕ್ತಿಯೊಬ್ಬ ನಿಂತಿದ್ದ. ಎಲ್ಲರೂ ಅವನನ್ನ ‘ಗೂಂಗ’ ಅಂತಲೇ ಕರೆಯುತ್ತಿದ್ದರು. ಅವನನ್ನ ಅಲ್ಲಿಂದ ಇಲ್ಲಿಗೆ ಓಡಿಸುವುದು, ಬೈಯ್ಯುವುದು, ತಲೆ ಮೇಲೊಂದು ಹೊಡೆದು ಸುಮ್ಮನಾಗುವುದು ಇನ್ನಿತರ ಚೇಷ್ಟೆ ಮಾಡುತ್ತಿದ್ದರು. ಆದರೆ ಆತ ಮಾತ್ರ ಇದಕ್ಕೆಲ್ಲ ಬೇಜಾರು ಮಾಡಿಕೊಳ್ಳುವ ವ್ಯಕ್ತಿ ಅಲ್ಲ. ಯಾರು ಏನೇ ಅಂದರೂ ಅದಕ್ಕೆ ಪ್ರತಿಯಾಗಿ ಅವರ ಕಡೆಗೊಂದು ನಗೆ ಬೀರುತ್ತಿದ್ದ. ಅವನಿಗೆ ಮಾತನಾಡಲು ಗೊತ್ತಿದ್ದ ಪದವೊಂದೇ ‘ಗೂ…….’ ಆತ ಹಾಗೆ ಕೂಗಿದ್ದೇ ತಡ ಎಲ್ಲರೂ ಇನ್ನೊಮ್ಮೆ ಜೋರಾಗಿ ನಗುತ್ತಿದ್ದರು.

ನಾವು ಟೀ ಅಂಗಡಿಯೊಳಗೆ ಹೋಗುವ ಹೊತ್ತಲ್ಲೂ ಆತ ಸೂರಜ್ ನನ್ನ ನೋಡಿದ್ದೇ ‘ಗೂ….’ ಅಂತ ಜೋರಾಗಿ ಕೂಗಿದ. ಎಲ್ಲರೂ ನಕ್ಕರು. ಯಾರೋ ಒಬ್ಬರು ಎದ್ದದ್ದೇ , ಅವನ ಬೋಳು ತಲೆಯ ಮೇಲೊಂದು ಏಟು ಕೊಟ್ಟರು. ಕಡೆಗೆ ಆತನನ್ನ ಅಂಗಡಿಯ ಆಚೆಗೆ ಕಳುಹಿಸಲಾಯಿತು.

ನಾವು ಟೇಬಲ್ಲಿನ ಮೇಲೆ ಕೂತಿದ್ದೆವು. ಪ್ರತಿಯೊಬ್ಬರು ಟೀ ಹೀರುತ್ತಿದ್ದರು. ಗೂಂಗನನ್ನ ಬಿಟ್ಟು.

‘ಆ ಗೂಂಗನಿಗೊಂದು ಟೀ ಕೊಡು’ ಅಂದೆ. ಅಂಗಡಿಯಾತ ಕೊಂಚ ಕಸಿವಿಸಿ ಮಾಡಿಕೊಳ್ಳುತ್ತಲೇ ಅವನಿಗೂ ಒಂದು ಟೀ ಕೊಟ್ಟ. ಗೂಂಗ ನನ್ನತ್ತ ನೋಡಿ ಒಮ್ಮೆ ‘ಗೂ….’ ಅಂದ.

ನಾವು ಅಂಗಡಿ ಬಿಟ್ಟು ಹೊರಟಾಗ, ಬೆಳದಿಂಗಳ ಬೆಳಕು ಚೆಲ್ಲಿತ್ತು. ನಕ್ಷತ್ರಗಳು ಮಿಂಚುತ್ತಿದ್ದವು. ರೂಮಿನ ದಾರಿಯ ಮೈದಾನಕ್ಕುಂಟ ನಡೆಯಲು ಶುರು ಮಾಡಿದೆವು. ಬಜಾರ್ ಪೂರ್ತಿ ಖಾಲಿ ಹೊಡೆಯುತ್ತಿತ್ತು. ಎಲ್ಲ ಅಂಗಡಿಗಳೂ ಮುಚ್ಚಿದ್ದವು.

ಇನ್ನೊಂದಿಷ್ಟು ದೂರ ನಡೆಯುವಷ್ಟರಲ್ಲಿ ನಮ್ಮ ಹಿಂದೆ ಯಾರದೋ ಹೆಜ್ಜೆ ಸಪ್ಪಳಗಳು ಕೇಳಿಬಂತು. ತಿರುಗಿ ನೋಡಿದರೆ ಗೂಂಗ ನಮ್ಮನ್ನು ಹಿಂಬಾಲಿಸುತ್ತಿದ್ದ.

ನಮ್ಮನ್ನ ನೋಡಿದವನೇ ‘ಗೂ…’ ಅಂದ.

‘ನೀನೇಕೆ ಅವನಿಗೆ ಟೀ ಕೊಡಿಸಿದೆ. ಈಗ ನೋಡು. ನಾವು ಶ್ರೀಮಂತರಿರಬಹುದು ಅಂತ ಆತ ನಮ್ಮನ್ನ ಹಿಂಬಾಲಿಸುತ್ತಾ ಇದ್ದಾನೆ.’ ಸೂರಜ್ ತನ್ನ ಕಳವಳ ವ್ಯಕ್ತಪಡಿಸಿದ.

‘ಅವನಿಂದ ನಮಗೇನು ತೊಂದರೆ ಇಲ್ಲ’ ಅಂದವನೇ ಇಬ್ಬರೂ ನಮ್ಮ ನಡೆಯನ್ನ ಜೋರುಗೊಳಿಸಿದೆವು. ‘ನಾವು ಮೈದಾನದಲ್ಲೇ ಮಲಗಿದಂತೆ ಮಾಡೋಣ.  ಆಗ ಆತ ನಮ್ಮನ್ನು ಹಿಂಬಾಲಿಸುವುದನ್ನ ನಿಲ್ಲಿಸಬಹುದು.’

‘ಗೂ…’ ಅಂದವನೇ ಆತ ಕೂಡ ಜೋರಾಗಿ ಹೆಜ್ಜೆ ಹಾಕತೊಡಗಿದ. ಹಾಗೇ ಕೆಳಕ್ಕಿಳಿದು , ಅಡ್ಡದಾರಿ ಹಿಡಿದೆವು. ಆತ ಮರೆಯಾದ. ಮತ್ತೆ ಮುಖ್ಯರಸ್ತೆಗೆ ಕೂಡಿಕೊಳ್ಳುವ ಹೊತ್ತಲ್ಲಿ ನಮ್ಮ ಬೆನ್ನಿಗೆ ಬಿದ್ದ. ಮೈದಾನದ ತುದಿಯಲ್ಲಿ ನಿಂತ ನಾನು ಹಿಂದಕ್ಕೆ ತಿರುಗಿದೆ. ‘ಇಲ್ಲಿಂದ ಹೊರಟುಹೋಗು ಗೂಂಗ. ನಮ್ಮ ಹತ್ತಿರವೇ ಏನೂ ಇಲ್ಲ. ನಿನಗೇನು ಕೊಡೋಣ.’

‘ಗೂ..’ ಅಂದವನೇ ಇನ್ನೊಂದೆರಡು ಹೆಜ್ಜೆ ಮುಂದೆ ಬಂದ.

ನಾನು ಸೂರಜ್‌ನನ್ನ ಕರೆದುಕೊಂಡು ಮುಂದೆ ಹೊರಟೆ.

ನಾವು ಹುಲ್ಲಿನ ಮೇಲೆ ಹೆಜ್ಜೆ ಹಾಕುತ್ತಾ ಇನ್ನಷ್ಟು ದೂರ ಹೋಗುವವರೆಗೂ ಆತ ನಮ್ಮನ್ನು ನೋಡುತ್ತಲೇ ಇದ್ದ. ನಾವು ಒಂದು ಬೆಂಚಿನ ಮೇಲೆ ಕೂತೆವು. ಆತ ‘ಗೂ…’ ಅನ್ನುತ್ತ ತಿರುಗಿ ಹೊರಟುಹೋದ.

*******

ಪೀಪಲ್ ನಗರದ ಭಿಕ್ಷುಕರಿಗೆ ಅವರದ್ದೇ ಆದ ಆದಾಯವೂ ಇದೆ, ಸಂಘಟನೆಯೂ ಇದೆ. ಹೀಗಾಗಿಯೇ ಭಿಕ್ಷಾಟನೆ ಮೇಲೆ ತೆರಿಗೆ ವಿಧಿಸುವುದಾಗಿ ಪುರಸಭೆ ನಿರ್ಧರಿಸಿದೆ ಅಂತ ಗೊತ್ತಾದಾಗ ನನಗೆ ಆಶ್ಚರ್ಯ ಆಗಲಿಲ್ಲ. ನನಗೆ ಗೊತ್ತು ಕೆಲವು ಭಿಕ್ಷುಕರು ದಿನವೊಂದಕ್ಕೆ ಒಬ್ಬ ಕೂಲಿ ಅಥವಾ ಗುಮಾಸ್ತನಿಗಿಂತ ಹೆಚ್ಚು ಸಂಪಾದಿಸುತ್ತಾರೆ ಅಂತ. ಇಲ್ಲಿನ ಒಂಟಿ ಕಾಲಿನ ಭಿಕ್ಷುಕನೊಬ್ಬ ಭಿಕ್ಷೆ ಬೇಡಿಯೇ ಪ್ರತಿ ತಿಂಗಳೂ ತನ್ನ ಮನೆಗೆ ಮನಿ ಆರ್ಡರ್ ಕಳಿಸುವುದನ್ನ ನಾನು ನೋಡಿದ್ದೇನೆ. ಭಿಕ್ಷಾಟನೆ ಎಷ್ಟರಮಟ್ಟಿಗೆ ಒಂದು ವೃತ್ತಿಯಾಗಿ ಪರಿವರ್ತನೆಯಾಗಿದೆ ಎಂದರೆ , ಆ ಕಾರಣದಿಂದಲೇ ಪುರಸಭೆ ಅದರ ಮೇಲೆ ತೆರಿಗೆ ವಿಧಿಸುವ ನಿರ್ಧಾರಕ್ಕೆ ಬಂದಿದ್ದು.

ತನ್ನ ಬೆನ್ನುಗಳು ಪೂರ ನೆಲಕ್ಕೆ ಬಗ್ಗಿರುವ ಮತ್ತು ಅದು ಎಂದೂ ನೆಟ್ಟಗಾಗದ ಗಣಪತಿ ರಾಮ್‌ಗೆ ಮಾತ್ರ ಈ ತೆರಿಗೆಯ ವಿಚಾರ ಅಷ್ಟು ಹಿಡಿಸಲಿಲ್ಲ. ‘ಹೀಗೆಲ್ಲ ಆಗುತ್ತೆ ಅಂತ ಗೊತ್ತಿದ್ದರೆ ಬೇರೆ ಯಾವುದಾದರೂ ಕೆಲಸ ಹುಡುಕಿಕೊಳ್ಳುತ್ತಿದ್ದೆ’ ಅಂತ ಆತ ಬೇಸರ ಪಟ್ಟುಕೊಂಡ.

ಗಣಪತಿ ರಾಮ್ ಇದ್ದದ್ದರಲ್ಲಿ ಉಳಿದ ಭಿಕ್ಷುಕರಿಗಿಂತ ಭಿನ್ನವಾದ ಮನುಷ್ಯ. ಆತ ಹಿಂದೊಮ್ಮೆ ಸಾಕಷ್ಟು ಆಸ್ತಿಯನ್ನು ,ಮತ್ತು ವಿದೇಶಿ ಹೆಂಡತಿಯೊಬ್ಬಳನ್ನ ಹೊಂದಿದ್ದ ಅನ್ನುವ ವದಂತಿಗಳನ್ನ ನಾನು ಕೇಳಿದ್ದೇನೆ. ಆತನ ಹೆಂಡತಿ ಇದ್ದಬದ್ದ ಹಣವನ್ನೆಲ್ಲ ಎತ್ತಿಕೊಂಡು ವಿದೇಶಕ್ಕೆ ಹಾರಿಹೋದಳಂತೆ. ಅದೇ ಆಘಾತದಲ್ಲಿ ಕುಸಿದು ಬಿದ್ದವನು ಮತ್ತೆ ಚೇತರಿಸಿಕೊಳ್ಳಲೇ ಇಲ್ಲವಂತೆ. ಕಡೆಗೆ ಆತನ ಆರೋಗ್ಯ ಎಷ್ಟು ಹದಗೆಟ್ಟಿತೆಂದರೆ , ಆತ ಸ್ವಲ್ಪ ನಡೆದಾಡಲೂ ಕೋಲು ಬಳಸಬೇಕಾದ ಪರಿಸ್ಥಿತಿ ಬಂತಂತೆ.

ಅವನೆಂದೂ ಹಣಕ್ಕಾಗಿ ನೇರವಾಗಿ ಬೇಡಿಕೊಂಡಿದ್ದನ್ನ ನಾನು ಕಂಡಿಲ್ಲ. ಆತ ಇವತ್ತಿನ ಹವಾಮಾನದ ಬಗ್ಗೆ ಮಾತನಾಡುತ್ತಲೋ, ಬೆಲೆ ಏರಿಕೆ ಬಗ್ಗೆ ಹೇಳುತ್ತಲೋ ಹೇಗೋ ನಮ್ಮ ಗಮನವನ್ನ ತನ್ನತ್ತ ಸೆಳೆಯುತ್ತಾನೆ.

ಆತನ ಹಿಂದಿರುವ ಕಥೆಗಳಲ್ಲಿ ಅರ್ಧ ನಿಜವೂ ಅರ್ಧ ಸುಳ್ಳು ಆಗಿರಬಹುದು ಅಂತ ನನ್ನ ಅಂದಾಜು. ಯಾಕೆಂದರೆ, ಯಾರಾದರೂ ಒಳ್ಳೆಯ ಬಟ್ಟೆ ಹಾಕಿರುವ ಜನರನ್ನ ಮಾತನಾಡಿಸುವಾಗ ಆತ ಇಂಗ್ಲಿಷಿನಲ್ಲೇ ಮಾತನಾಡುತ್ತಾನೆ. ಬಿಳೀಯ ಗಡ್ಡ ಮತ್ತು ಕೆಂಚು ಕಣ್ಣುಗಳುಳ್ಳ ಆತ ಬೇರೆ ಭಿಕ್ಷುಕರ ಹಾಗೆ ದೇವರ ಹೆಸರುಗಳನ್ನ ಹೇಳಿಕೊಂಡು ಬೇಡುವುದಿಲ್ಲ. ಗಣಪತಿಯ ಕುರಿತು ಇನ್ನೂ ಸಾಕಷ್ಟು ಸುದ್ದಿಗಳೂ ಹಬ್ಬಿವೆ. ಆತ ಗೂಢಾಚಾರಿ ಅಥವಾ ಪೊಲೀಸಿನವನಾಗಿರಬಹುದು ಅನ್ನುವುದು ಕೆಲವರ ಅನುಮಾನ. ಆದರೆ ಆತ ಈ ವೃತ್ತಿಗೆ ನಿಷ್ಟನಾಗಿರುವ ಪರಿಯನ್ನ ನೋಡಿದರೆ, ಇನ್ನೊಂದು ಐದು ವರ್ಷ ಆತ ಇದೇ ವೃತ್ತಿಯಲ್ಲಿ ಮುಂದುವರಿಯಬಹುದು ಅನ್ನಿಸುತ್ತೆ.

ಆ ಕುರುಡು ಮನುಷ್ಯ ನಿಜವಾಗಿಯೂ ಕುರುಡ ಅಂತ ನನಗೆ ಅನಿಸುವುದಿಲ್ಲ. ಆತ ಯಾವಾಗಲೂ ಬೀದಿಯಲ್ಲಿ ನಡೆಯಬೇಕಾದರೆ ನನ್ನ ಗುರುತು ಹಿಡಿಯುತ್ತಾನೆ, ಆತ ಒಬ್ಬನೇ ಇದ್ದಾಗಲೂ. ನನ್ನ ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದೇ ಒಂದಿಷ್ಟು ಚಿಲ್ಲರೆ ಬೇಡುತ್ತಾನೆ. ಆತ ನನಗೆ ಅಷ್ಟು ಇಷ್ಟ ಆಗೋಲ್ಲ. ಅವನು ನನ್ನ ಗಮನವನ್ನ ತನ್ನತ್ತ ಸೆಳೆಯುವ ಸಲುವಾಗಿ ಅತಿಯಾಗಿ ವರ್ತಿಸುತ್ತಾನೆ.

ಇತರ ಅಂಧರ ಜೊತೆ ಸೇರಿ ಕೆಲಸ ಮಾಡುವ ಸಾಕಷ್ಟು ಅವಕಾಶಗಳು ಇದ್ದಾಗ್ಯೂ , ಆತ ಮಾತ್ರ ಈ ಭಿಕ್ಷಾಟನೆಯಲ್ಲೇ ಹೆಚ್ಚಿನ ಲಾಭ ಕಂಡುಕೊಂಡಿದ್ದಾನೆ. ಕೆಲವೊಮ್ಮೆ ಆತನನ್ನ ಪಟ್ಟಣದಲ್ಲಿ ತಿರುಗಾಡಿಸುವ ಹುಡುಗ ಮಾತ್ರ ನನ್ನಿಂದ ಭಿಕ್ಷೆ ಬೇಡುವುದಿಲ್ಲ. ಬದಲಾಗಿ ಕೇಳುತ್ತಾನೆ. ‘ನಿಮ್ಮ ಹತ್ತಿರ ಒಂದು ಆಣೆ ಇದೆಯಾ?’ ಅಂತ, ಸಾಲ ಪಡೆದು ಹಿಂತಿರುಗಿಸುವವನಂತೆ.

ಆತ ಸ್ವಲ್ಪ ಸ್ನೇಹಮಯಿ. ಕೆಲವೊಮ್ಮೆ ನನ್ನ ರೂಮಿಗೂ ಬಂದಿದ್ದಾನೆ. ನನ್ನ ಆರೋಗ್ಯದ ಕುರಿತು ಅವನಿಗೆ ಇನ್ನಿಲ್ಲದ ಕಾಳಜಿ. ನಾನು ಅವನ ಕಣ್ಣಿಗೆ ಎಲ್ಲೇ ಕಾಣಿಸಿಕೊಂಡರೂ ಓಡಿಬಂದು ನನ್ನ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಾನೆ. ಪುರಸಭೆಯ ತೆರಿಗೆ ನಿರ್ಧಾರ ಇವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಇವರೇನು ವೃತ್ತಿನಿರತ ಭಿಕ್ಷುಕರಲ್ಲ!

ಆ ಹುಡುಗ ನನ್ನ ಹತ್ತಿರ ಮತ್ತೆ ಬಂದು ಕೇಳುತ್ತಾನೆ ‘ನಿಮ್ಮ ಹತ್ತಿರ ಒಂದು ಆಣೆ ಇದೆಯಾ?’
‘ಇಲ್ಲ. ನನ್ನಲ್ಲಿ ಚಿಲ್ಲರೆ ಇಲ್ಲ.’
‘ಹಾಗಾದರೆ ನೋಟನ್ನೆ ಕೊಡಿ. ಚಿಲ್ಲರೆ ಮುರಿಸಿ ಕೊಡ್ತೀನಿ.’
‘ನನ್ನಲ್ಲಿ ನೋಟಿಲ್ಲ. ಐವತ್ತು ಪೈಸೆ ನಾಣ್ಯ ಇದೆ.’
‘ಹಾಗಾದರೆ ಚಿಲ್ಲರೆ ಯಾಕೆ ಬೇಕು? ಆ ನಾಣ್ಯವನ್ನು ನನಗೆ ಕೊಡಿ. ಇನ್ನೊಂದು ವಾರ ನಿಮ್ಮ ಹತ್ತಿರ ಕಾಸು ಕೇಳಲ್ಲ.’

ನಾನವನಿಗೆ ಎಷ್ಟೇ ಹಣವನ್ನ ಕೊಟ್ಟರೂ ಆತ ಮತ್ತೆ ನನ್ನ ಪರ್ಸಿನಿಂದ ಇನ್ನಷ್ಟು ಗಿಟ್ಟಿಸಿಕೊಳ್ಳುವುದನ್ನೇ ಎದುರು ನೋಡುತ್ತಿರುತ್ತಾನೆ. ಒಂದು ಕಾಲದಲ್ಲಿ ಭಿಕ್ಷುಕರು ಕೇವಲ ಒಂದು ಅಥವಾ ಎರಡು ಪೈಸೆಗಾಗಿ ಬೇಡುತ್ತಾ ಇದ್ದರು. ಆದರೆ ಇವತ್ತು ಬದುಕು ಎಷ್ಟು ದುಬಾರಿ ಆಗಿಬಿಟ್ಟಿದೆ ಅಂದರೆ , ಅವರು ಒಂದು ಆಣೆಗಿಂತ ಕಡಿಮೆ ಹಣವನ್ನ ಕೇಳುವುದೇ ಇಲ್ಲ.

******

ಅಂತೂ ಪುರಸಭೆ ಈ ಭಿಕ್ಷಾಟನೆಯ ಮೇಲೆ ತೆರಿಗೆ ವಿಧಿಸಲು ನಿರ್ಧರಿಸಿದಂದಿನಿಂದ ಇವರೆಲ್ಲ ಒಂದುಗೂಡುತ್ತಿದ್ಧಾರೆ. ಒಂದು ಸಂಘಟನೆಯನ್ನೂ ಕಟ್ಟಿಕೊಳ್ಳುತ್ತಿದ್ದಾರೆ. ಒಂದು ದಿನ ನೂರಕ್ಕೂ ಹೆಚ್ಚು ಜನ ಭಿಕ್ಷುಕರು ಒಂದು ದಿನ ಬೀದಿಯಲ್ಲಿ ಪ್ರತಿಭಟನೆಗಿಳಿದು ಪುರಸಭೆ ಆಡಳಿತದ ವಿರುದ್ದ ಧಿಕ್ಕಾರ ಕೂಗಲು ಶುರು ಮಾಡಿದ್ದರು. ಭಿಕ್ಷುಕರ ಮೇಲೆ ಮಾಡಹೊರಟಿರುವ ದೌರ್ಜನ್ಯವನ್ನ ನಿಲ್ಲಿಸಿ ಅಂತ ದೊಡ್ಡ ಬ್ಯಾನರುಗಳನ್ನ ಕಟ್ಟಿಕೊಂಡಿದ್ದರು. ನಗರದಲ್ಲೆಡೆ ಮೆರವಣಿಗೆ ಹೊರಟು , ಕಡೆಗೆ ಪುರಸಭೆಯ ಕಛೇರಿಗಳನ್ನ ಸುತ್ತುವರಿದು ಯಾರೂ ಒಳಹೋಗದ ಹಾಗೆ ದಿಗ್ಭಂದನ ಹಾಕಿದ್ದರು.

ಅಷ್ಟರಲ್ಲೇ, ಕಛೇರಿಯಿಂದ ಹೊರಬಂದ ಅಧಿಕಾರಿಗಳು ‘ಇದೆಲ್ಲ ಕೇವಲ ವದಂತಿ. ಅಂತಹ ಯಾವುದೇ ತೆರಿಗೆಯನ್ನ ಹಾಕಲಾಗುತ್ತಿಲ್ಲ, ಅದಕ್ಕೆ ಅವಕಾಶವೂ ಇಲ್ಲ’ ಅಂತ ಸ್ಪಷ್ಟಪಡಿಸಿದರು. ಭಿಕ್ಷುಕರೆಲ್ಲ ತಮ್ಮ ಮನೆಗಳಿಗೆ ಹೋಗಿ, ಯಾವುದೇ ಅಧಿಕಾರಿಗಳ ಭಯವಿಲ್ಲದೇ ನಿರ್ಭೀತಿಯಿಂದ ತಮ್ಮ ಸಂಪಾದನೆಗಳನ್ನ ಲೆಕ್ಕ ಹಾಕಬಹುದು ಅಂದರು.

ಇದನ್ನ ತಮ್ಮ ಹೋರಾಟಕ್ಕೆ ಸಿಕ್ಕ ನೈತಿಕ ಜಯ ಅಂದುಕೊಂಡ ಭಿಕ್ಷುಕರು, ತಮ್ಮ ಸಂಘಟನೆಯನ್ನ ಹೀಗೆ ಉಳಿಸಿಕೊಳ್ಳಬೇಕು ಅಂತ ನಿರ್ಧರಿಸಿದರು. ಪರಿಣಾಮ ಈಗ ‘ಭಿಕ್ಷುಕರ ಸಂಘ’ ಸ್ಥಾಪನೆಯಾಗಿದೆ. ಒಂದೊಂದು ಪ್ರದೇಶವನ್ನ ಒಬ್ಬೊಬ್ಬರಿಗೆ ವಹಿಸಿಕೊಡಲಾಗಿದ್ದು, ಒಬ್ಬರ ಪ್ರದೇಶದಲ್ಲಿ ಇನ್ನೊಬ್ಬರು ಭಿಕ್ಷೆ ಬೇಡುವಂತಿಲ್ಲ. ಅಲ್ಲದೆ ಇತ್ತೀಚೆಗೆ , ಭಿಕ್ಷೆ ಕೊಡದವರ ಮನೆ ಮುಂದೆ ಕೂತು ಪ್ರತಿಭಟನೆಯನ್ನ ಕೂಡ ಮಾಡಲಾರಂಭಿಸಿದ್ಧಾರೆ ಅಂತ ವದಂತಿ ಹಬ್ಬಿದೆ.

(ಮುಂದುವರಿಯುವುದು)

September 30, 2009 at 1:12 pm Leave a comment

ಬಹು ದಿನಗಳ ನಂತರ: ಒಂದು ಅನುವಾದದೊಂದಿಗೆ

ಅದೆಷ್ಟೋ ತಿಂಗಳುಗಳ ನಂತರ ಮತ್ತೆ ‘ಮುಗಿಲ ಕಂಪು’ ತುಂಬುತ್ತಿದೆ. ಈ ಬಾರಿ ಒಂದು ಅನುವಾದದೊಂದಿಗೆ.

ಇಂಗ್ಲೀಷಿನಲ್ಲಿ ಬರೆಯುತ್ತಿರುವ ಭಾರತೀಯ ಲೇಖಕರ ಪೈಕಿ ರಸ್ಕಿನ್ ಬಾಂಡ್ ಸಹ ಒಬ್ಬರು. ಆರು ದಶಕಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಬಾಂಡ್ , ನೂರಕ್ಕೂ ಹೆಚ್ಚು ಸಣ್ಣ ಕಥೆಗಳನ್ನ, ಕೆಲವು ಕಾದಂಬರಿಗಳನ್ನ , ಪ್ರಬಂಧಗಳನ್ನ, ಮಕ್ಕಳ ಪುಸ್ತಕಗಳನ್ನ ಬರೆದಿದ್ದಾರೆ.

ರಸ್ಕಿನ್ ಬಾಂಡ್
ರಸ್ಕಿನ್ ಬಾಂಡ್

ಅಂತೆಯೇ, ‘Delhi is not Far’ ಅನ್ನುವ ಕಾದಂಬರಿಯನ್ನ ಬಾಂಡ್ ಬರೆದದ್ದು ೬೦ರ ದಶಕದಲ್ಲಿ. ಡೆಹ್ರಾಡೂನ್ ನಿಂದ ದೆಹಲಿಗೆ ಬಂದ ಸಂದರ್ಭ. ರಾಜಧಾನಿಯಲ್ಲಿ ಬದುಕು ಕಂಡುಕೊಳ್ಳುವ ಕನಸು ಹೊತ್ತು ಬಂದಾಗ. ಕಾದಂಬರಿಯೊಳಗಣ ಕಥೆಯಾದರೂ ಇದಕ್ಕಿಂತ ಭಿನ್ನವಿಲ್ಲ. ಯುವಕನೊಬ್ಬ ತನ್ನ ಬರವಣಿಗೆಯ ಮೇಲೆ ಬದುಕು ಕಂಡುಕೊಳ್ಳುವ ಅವಕಾಶಕ್ಕಾಗಿ ದೆಹಲಿಗೆ ಹೊರಟುನಿಂತ ಕಥೆ.

ಕಾದಂಬರಿಯಲ್ಲಿನ ‘ಪೀಪಲ್ ನಗರ’ ಒಂದರ್ಥದಲ್ಲಿ ಆರ್.ಕೆ. ನಾರಾಯಣರ ‘ಮಾಲ್ಗುಡಿ’ ಯಂತೆ. ಯಾವ ಭೂಪಟದಲ್ಲೂ ಕಾಣದ ಊರು. ಆದರೆ ಇಂದಿಗೂ ಇಂತಹ ಸಾಕಷ್ಟು ಹಳ್ಳಿಗಳು ನಮ್ಮಲ್ಲಿವೆ. ಮತ್ತು ಇಲ್ಲಿನ ಪಾತ್ರಗಳೂ ನಮ್ಮೊಳಗಿವೆ.

ಅನುವಾದ ಪ್ರಾಜೆಕ್ಟೊಂದರ ಸಲುವಾಗಿ ಪುಸ್ತಕವೊಂದರ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದು ಈ ಕಾದಂಬರಿ. ಅದರ ಕೆಲವು ಅಧ್ಯಾಯಗಳು ನನ್ನೀ ಬ್ಲಾಗಿನಲ್ಲಿ ಕಾಣಿಸಿಕೊಳ್ಳಲಿವೆ.

******

೧.

Dehli is not farಭವಿಷ್ಯವನ್ನು ರೂಪಿಸಿಕೊಳ್ಳುವ ದಿಸೆಯಲ್ಲಿ ನನ್ನ ಪ್ರಯತ್ನಗಳು ಹಲವು ಮತ್ತು ಎಲ್ಲ ವಿಫಲವಾದವು. ಒಂದು ಸಲ, ಮೂರು ದಿನದ ಮಟ್ಟಿಗೆ ತರಕಾರಿ ಇಟ್ಟಿದ್ದೆ; ಟೀ ಅಂಗಡಿ ಹಾಕಿ ಬಂಡವಾಳ ಹೂಡಿದೆ; ಕಡೆಗೆ ಹಸ್ತ ನೋಡಿ ಭವಿಷ್ಯ ಹೇಳುವ ಪ್ರಯತ್ನ ಮಾಡಿದೆ. ಈ ಕಡೆಯ ಪ್ರಯತ್ನ ಮಾತ್ರ ಚೂರೂ ಯಶಸ್ವಿಯಾಗಲಿಲ್ಲ. ಹಾಗಂತ ನಾನು ಕೆಟ್ಟದಾಗಿ ಭವಿಷ್ಯ ಹೇಳುತ್ತಿದ್ದೆ ಅಂತ ಅಲ್ಲ-ಒಬ್ಬ ಗಂಡಸು ಅಥವಾ ಹೆಂಗಸು ಯಾವ ವಿಚಾರಗಳನ್ನ ಹೆಚ್ಚು ಕೇಳಲಿಕ್ಕೆ ಇಷ್ಟ ಪಡುತ್ತಾರೆ ಅಂತ ನನಗೂ ಗೊತ್ತಿತ್ತು. ಆದರೆ ಹೀಗೆ ಭವಿಷ್ಯ ಕೇಳುವವರ ಸಂಖ್ಯೆ ಮಾತ್ರ ಪೀಪಲ್ ನಗರದಲ್ಲಿ ಬಹಳ ಕಡಿಮೆ ಇತ್ತು. ನನ್ನ ಗೆಳೆಯರು ಮತ್ತು ನೆರೆಹೊರೆಯವರು ಈ ಭವಿಷ್ಯವನ್ನು ಮೀರಿದ ಹಂತಕ್ಕೆ ಬೆಳೆಯಲು ಇಷ್ಟ ಪಡುತ್ತಿದ್ದರು.

‘ಒಂದು ಮಗು ಹುಟ್ಟಿದಾಗ ಅದರ ಜಾತಕವನ್ನ ಬರೆಯುತ್ತಾರೆ ಅಲ್ಲವಾ?’ ಹಾಗಂತ ದೀಪ್ ಚಾಂದ್ ಕೇಳಿದ. ‘ಒಂದು ಸಣ್ಣ ಪತ್ರದಲ್ಲಿ ಅದರ ಇಡೀ ಭವಿಷ್ಯವನ್ನ ಬರೆಯಲಾಗುತ್ತೆ. ಹಾಗಂತ ನಿಜಕ್ಕೂ ಅದೇ ಆ ಮಗುವಿನ ಭವಿಷ್ಯವನ್ನ ನಿರ್ಧರಿಸುತ್ತ?’

ದೀಪ್ ಚಾಂದ್ ನ ಮಾತುಗಳು ನನಗೂ ನಿಜ ಅನಿಸಿದ್ದವು. ಆದರೆ ಭವಿಷ್ಯ ಹೇಳುವುದು ಹಣ ಸಂಪಾದನೆಯ ಸುಲಭ ಮಾರ್ಗಗಳಲ್ಲಿ ಒಂದು ಅನ್ನುವುದು ನನ್ನ ಯೋಚನೆ ಆಗಿತ್ತು. ಒಬ್ಬ ಅನಕ್ಷರಸ್ತ ಕೂಡ ಸಾಧುವಿನ ವೇಷ ಧರಿಸಿ ಬಿ.ಎ. ಬಿ.ಕಾಂ. ಪಧವೀಧರರಂತೆ ಮಾತಾಡಿ ಮೋಡಿ ಮಾಡುವಾಗ, ನಾನೇಕೆ ಆ ಪ್ರಯತ್ನ ಮಾಡಬಾರದು ಅನಿಸಿತ್ತು. ಒಂದು ವಿಷಯದ ಬಗ್ಗೆ ಪುಸ್ತಕವನ್ನ ಓದಿಕೊಳ್ಳುವುದು, ನನ್ನ ಮನೆಯ ಮುಂದೆ ಬೋರ್ಡೋದನ್ನ ನೇತುಹಾಕಿ ‘ನಾನು ಭವಿಷ್ಯ ಹೇಳ್ತೀನಿ’ ಅಂತ ತಿಳಿಸೋದಕ್ಕೆ ಹೆಚ್ಚು ಸಮಯ ಬೇಕಿರಲಿಲ್ಲ. ಆದಾಗ್ಯೂ, ನಾನು ಈ ಕೆಲಸದಲ್ಲಿ ಯಶಸ್ಸು ಕಾಣಲಿಲ್ಲ.ಏಕೆಂದರೆ, ನಾನು ಆಗಲೇ ಪೀಪಲ್ ನಗರದಲ್ಲಿ ಸಾಕಷ್ಟು ಜನರಿಗೆ ಪರಿಚಿತನಾಗಿದ್ದೆ. ಮೊಹಲ್ಲಾದ ಅರ್ಧಭಾಗ ಇದೊಂದು ಜೋಕು ಅಂತ ಭಾವಿಸಿದರೆ, ಇನ್ನರ್ಧ ಭಾಗಕ್ಕೆ ಬಹುಶಃ ನನ್ನ ಬುದ್ಧಿವಂತಿಕೆಯ ಮೇಲೆ ನಂಬಿಕೆಯೇ ಇರಲಿಲ್ಲ.

ತರಕಾರಿ ಮಳಿಗೆ ಇಟ್ಟ ಕಥೆ ಕೊಂಚ ಭಿನ್ನ. ರಸ್ತೆಯ ಇಳಿಜಾರಿನಲ್ಲಿ, ದೊಡ್ಡ ಗಡಿಯಾರದ ಹತ್ತಿರ ಒಬ್ಬ ವಿಧವೆ ಒಂದು ದಿನಸಿ ಅಂಗಡಿ ಇಟ್ಟುಕೊಂಡಿದ್ದಳು. ಅಕ್ಕಿ, ದವಸ ಧಾನ್ಯಗಳು ಎಲ್ಲವೂ ಅವಳ ಆ ಅಂಗಡಿಯಲ್ಲಿ ಸಿಗುತ್ತಿತ್ತು. ತರಕಾರಿ ಮತ್ತು ಮಾಂಸವನ್ನು ಹೊರತುಪಡಿಸಿ. ತರಕಾರಿ ವ್ಯಾಪಾರಕ್ಕೆ ಕೊಂಚ ಹೆಚ್ಚಿನ ಬಂಡವಾಳ, ಶ್ರಮ ಬೇಕಾಗುತ್ತೆ ಅನ್ನುವುದು ಅವಳ ವಾದ. ಮತ್ತು ಅದನ್ನ ಪ್ರಯತ್ನ ಕೂಡ ಮಾಡಬಯಸಿದ್ದ ಆಕೆ, ಆ ವ್ಯಾಪಾರಕ್ಕಾಗಿ ನನ್ನನ್ನ ಹಣ ತೊಡಗಿಸುವಂತೆ ಒತ್ತಾಯ ಪಡಿಸಿದ್ದಳು.

ಅದನ್ನ ನಿರಾಕರಿಸುವುದು ಕಷ್ಟ ಅನಿಸಿತ್ತು. ಆ ಬಲಿಷ್ಠ ಹೆಂಗಸು, ಆಕೆಯಿಂದ ಬೇರೆ ಏನನ್ನಾದರೂ ಪಡೆಯಲೆತ್ನಿಸುವ ಯಾವುದೇ ಗಂಡಸಿನ ವಿರುದ್ಧವೂ ಬೀದಿಯಲ್ಲೇ ಕಾಳಗ ಹೂಡಬಲ್ಲವಳಾಗಿದ್ದಳು. ಜಗಳ ಆಡುವುದರಲ್ಲಿ ಆಕೆ ಇಲ್ಲೆಲ್ಲ ಹೆಸರುವಾಸಿ. ಅಲ್ಲದೆ, ಒಳ್ಳೆಯ ವ್ಯಾಪಾರಿ ಕೂಡ ಆಗಿದ್ದ ಆಕೆ, ನನ್ನ ಸ್ವಂತ ಖರ್ಚಿನಲ್ಲಿ ತರಕಾರಿ ಮತ್ತು ಹಣ್ಣುಗಳ ಅಂಗಡಿಯನ್ನ ಇಡುವಂತೆ ಕೇಳಿದಳು.

ಅಂಗಡಿಯೇನೋ ಇಟ್ಟಾಯಿತು. ಆದರೆ, ಆರಂಭದಿಂದ ಕೊನೆವರೆಗೂ ಒಂದೇ ಒಂದು ಕೋಸನ್ನಾಗಲಿ, ಗೆಡ್ಡೆಯನ್ನಾಗಲಿ ಮಾರಲಿಕ್ಕೂ ಆಗಲಿಲ್ಲ. ತರಕಾರಿಗಳು ಕೊಳೆತುಹೋಗುವ ಮುನ್ನ ನಾನು ಅವುಗಳನ್ನ ದೀಪ್ ಚಾಂದ್, ಪೀತಾಂಬರ್ ಮತ್ತು ಇನ್ನುಳಿದ ನನ್ನ ಸ್ನೇಹಿತರಿಗೆ ನೀಡಿದೆ. ಕಿಲೋ ಒಂದಕ್ಕೆ ಎಲ್ಲರಿಗಿಂತ ಹತ್ತು ಪೈಸೆ ಬೆಲೆ ಜಾಸ್ತಿ ಇಟ್ಟು ಮಾರಾಟ ಮಾಡುವಂತೆ ಆಕೆ ನನಗೆ ನಿರ್ದೇಶನ ನೀಡಿದ್ದಳು. ಗುಣಮಟ್ಟಕ್ಕಿಂತ ವಸ್ತುವಿನ ಪ್ರಮಾಣಕ್ಕೆ ಹೆಚ್ಚು ಬೆಲೆ ಕೊಡುವ ಪೀಪಲ್ ನಗರದಲ್ಲಿ ಇದು ನಡೆಯಲಿಲ್ಲ, ಹತ್ತು ಪೈಸೆಗಳ ಹೆಚ್ಚುವರಿ ಬೆಲೆಗೆ ಬದಲಾಗಿ ಗಿರಾಕಿಗಳು ಸ್ವಚ್ಛವಾದ ಮತ್ತು ತಾಜಾ ತರಕಾರಿಗಳನ್ನು ಪಡೆಯುತ್ತಾರೆ ಎಂಬುದು ಆಕೆಯ ವಾದವಾಗಿತ್ತು. ಆದರೆ ಅವಳ ಅಂದಾಜು ತಪ್ಪಾಗಿತ್ತು. ಗಿರಾಕಿಗಳು ತಾಜಾ, ಹಸಿರಾದ ತರಕಾರಿಗಳ ಜೊತೆಗೇ ಅವು ಕಡಿಮೆ ಬೆಲೆ ಕೂಡ ಆಗಿರಬೇಕೆಂದು ಬಯಸುತ್ತಿದ್ದರು.

ಆದರೂ ಮೊದಲ ದಿನದ ಅನುಭವ ತುಂಬಾ ಕುತೂಹಲಕಾರಿಯಾಗಿತ್ತು. ಬೆಳಿಗ್ಗೆ ಐದಕ್ಕೆ ಎದ್ದು (ವರ್ಷಗಳ ಹಿಂದಿನಿಂದಲೂ ನಾನು ಹೀಗೆ ಎದ್ದಿರಲಿಲ್ಲ) ರೈಲ್ವೆ ಸ್ಟೇಷನ್ನಿನ ಹತ್ತಿರವಿರೋ ತರಕಾರಿ ಮಾರುಕಟ್ಟೆಯಲ್ಲಿ ನಡೆದು, ಸಗಟು ವ್ಯಾಪಾರಿಗಳ ಜೊತೆ ಚೌಕಾಸಿಗಿಳಿದು ಕೊಂಡ ತರಕಾರಿಗಳನ್ನೆಲ್ಲ ಚೀಲಕ್ಕೆ ತುಂಬಿಕೊಂಡು , ಕೂಲಿ ಆಳಿನೊಂದಿಗೆ ಆ ಇಬ್ಬನಿ ಹೊತ್ತ ತಣ್ಣನೆಯ ಹವೆಯಲ್ಲಿ ಮತ್ತೆ ಬಜಾರಿನತ್ತ ನಡೆದು ಬರುವುದು ಆನಂದದಾಯಕವಾಗಿತ್ತು.

ಬಸ್ ಸ್ಟಾಪಿನಿಂದ ಕೇವಲ ಅರ್ಧ ಮೈಲು ದೂರವಿರೋ ರೈಲು ನಿಲ್ದಾಣ ನನ್ನನ್ನ ಯಾವಾಗಲೂ ಆಕರ್ಷಿಸುತ್ತದೆ. ನಾನು ಹುಡುಗನಾಗಿದ್ದಾಗ ಎಲ್ಲ ಮಕ್ಕಳಂತೆ ರೈಲುಗಳನ್ನ ನೋಡುತ್ತಲೇ ವಿಸ್ಮಯಗೊಳ್ಳುತ್ತಿದ್ದೆ. ರೈಲುಗಳು ಹೊಗೆ ಉಗುಳುತ್ತಾ ಮೈದಾನದಿಂದ ಹೊರಟಾಗ , ಅದರಲ್ಲಿನ ಜನರತ್ತ ಕಣ್ಣು ಮಿಟುಕಿಸದೇ ನೋಡುತ್ತಿದ್ದೆ. ಯಾರೊಬ್ಬರಾದರೂ ನನ್ನತ್ತ ನೋಡಿದರೂ ಪುಳಕಿತನಾಗುತ್ತಿದ್ದೆ. ಆ ಬೋಗಿಗಳಲ್ಲಿನ ಜನರೆಲ್ಲ ಎಲ್ಲಿಗೆ ಹೋಗುತ್ತಿದ್ದಾರೆ ಅಂತೆಲ್ಲ ಯೋಚಿಸುತ್ತಾ ಚಕಿತನಾಗುತ್ತಿದ್ದೆ. ರೈಲುಗಳು ಹೊಸತೊಂದು ರೋಂಮಾಂಚನ ಕೊಡುವ, ಇನ್ನೊಂದು ಲೋಕಕ್ಕೆ ಹೋಗಿಬರುವ ಸರಕುಗಳೇ ಆಗಿದ್ದವು, ನವಾಬ್‌ಗುಂಜ್ ಅವಘಡ ನನ್ನ ಪೋಷಕರನ್ನ ಬಲಿ ತೆಗೆದುಕೊಳ್ಳುವ ತನಕ.

ಅಲ್ಲಿಗೆ ರೈಲು ಮತ್ತು ನನ್ನ ನಡುವಿನ ರೋಮಾಂಚಕ ಅಧ್ಯಾಯಕ್ಕೆ ತೆರೆ ಬಿದ್ದಿತ್ತು.

‘ಮುಂದೆ ಏನು ಮಾಡಬೇಕು ಅಂದುಕೊಂಡಿದ್ದೀಯಾ?’ ದೀಪ್ ಚಾಂದ್ ನನ್ನ ಗಡ್ಡಕ್ಕೆ ಸೋಪು ಹಚ್ಚುತ್ತಲೇ ಕೇಳಿದ. (ನಾನೇಕೆ ಸ್ವತಃ ಗಡ್ಡ ಬೋಳಿಸಿಕೊಳ್ಳುವುದಿಲ್ಲ ಅನ್ನುವುದಕ್ಕೆ ಕಾರಣಗಳು ಹಲವು; ನನ್ನ ಆಲಸ್ಯ, ಸೋಮಾರಿತನ ಇನ್ನೂ ಮುಂತಾಗಿ. ನಿಜ ಎಂದರೆ ದೀಪ್ ಚಾಂದ್ ತನ್ನ ಕತ್ತಿಯನ್ನೇ ಕುಂಚದಂತೆ ಉಪಯೋಗಿಸುವುದು ನನಗೆ ಇಷ್ಟವಾಗಿಹೋಗಿತ್ತು)
‘ ನೀನೇಕೆ ಒಂದೊಳ್ಳೆ ಹುಡುಗಿಯನ್ನ ನೋಡಿ ಮದುವೆ ಆಗಬಾರದು. ಅದು ನಿನ್ನೆಲ್ಲ ಸಮಸ್ಯೆಗಳನ್ನ ಬಗೆಹರಿಸುತ್ತದೆ. ಒಬ್ಬಳು ಹೆಣ್ಣು ತರುಣನೊಬ್ಬನ ಲೈಂಗಿಕ ಅಗತ್ಯಗಳನ್ನ ಪೂರೈಸಿ, ಆತನನ್ನು ಖುಷಿಯಾಗಿ ನೋಡಿಕೊಳ್ಳಬಲ್ಲಳು. ನೀನು ತುಂಬಾ ಮಗ್ನನಾಗಿ ಬರೆಯುತ್ತಿರುವಾಗ, ಆಕೆ ತನ್ನ ಸೆರೆಗಿನಿಂದ ನಿನಗೆ ಗಾಳಿ ಬೀಸುತ್ತ, ಕಾಲುಗಳನ್ನ ಒತ್ತುತ್ತ ನಿನ್ನ ಸೇವೆಯನ್ನ ಮಾಡಬಲ್ಲಳು ಕೂಡ.’

‘ಇದು ಅಂತ ಕೆಟ್ಟ ಉಪಾಯವೇನಲ್ಲ.’ ನಾನಂದೆ. ‘ಆದರೆ ಅಂತಹ ಹುಡುಗಿಯನ್ನು ಎಲ್ಲಿ ಹುಡುಕುವುದು. ಸೇಠ್ ಗೋವಿಂದರಾಮ್ ನಿಗೆ ಒಬ್ಬಳು ಸುಂದರವಾದ ಹೆಂಡತಿ ಇದ್ದಾಳಂತೆ. ಆದರೆ ಆಕೆ ಎಂದೂ ನನ್ನ ಕಣ್ಣಿಗೆ ಬಿದ್ದಿಲ್ಲ. ಮತ್ತೆ ಆ ಸೇಠು ಸದ್ಯಕ್ಕೆ ಸಾಯೋ ಹಾಗೂ ಕಾಣಿಸ್ತಾ ಇಲ್ಲ.’

‘ನಿನಗಾಗಿ ಅವಳೇನು ವಿಧವೆ ಆಗಬೇಕಿಲ್ಲ. ಒಬ್ಬ ಬೊಜ್ಜುಹೊಟ್ಟೆಯ ಲಕ್ಷಾಧಿಪತಿಯನ್ನ ಮದುವೆಯಾಗಿರೋ ತರುಣಿಯನ್ನ ಹುಡುಕಿಕೋ ಸಾಕು. ಅವಳೇ ನಿನಗೆ ಸಹಕರಿಸುತ್ತಾಳೆ’ ದೀಪ್ ಚಾಂದ್ ಮದುವೆಯಾಗಿ, ಎರಡೂ ಮಕ್ಕಳನ್ನೂ ಹೊಂದಿರುವ ಗಂಡಸು. ನಾನಿದನ್ನು ಏಣಿಸಿಯೇ ಇರಲಿಲ್ಲ.

*****
ದೀಪ್ ಚಾಂದ್ ನ ಮಕ್ಕಳು ಸೇರಿದಂತೆ, ಪೀಪಲ್ ನಗರದಲ್ಲಿನ ಒಟ್ಟು ಮಕ್ಕಳ ಸಂಖ್ಯೆ ಇಲ್ಲಿನ ವಯಸ್ಕರ ಐದನೇ ಒಂದು ಭಾಗದಷ್ಟಿರುವುದು ಮೆಚ್ಚುಗೆಯ ವಿಷಯ. ಜನಗಣತಿಯ ಪ್ರಕಾರ ದೇಶದ ಜನಸಂಖ್ಯೆಯಲ್ಲಿನ ನಾಲ್ಕನೇ ಒಂದು ಭಾಗ, ಐದರಿಂದ ಹದಿನೈದರ ವಯೋಮಿತಿ ಒಳಗಿನವರಂತೆ. ಬೀದಿಗಳಲ್ಲಿ ನೆಗೆಯುತ್ತಾ, ಕುಣಿಯುತ್ತಾ ಆಡುವ, ಅಳುವ, ಕಿಲಕಿಲನೇ ನಗುವ ಮಕ್ಕಳು ಮುಂದೇ ತಮ್ಮ ಹುಟ್ಟಿನೊಂದಿಗೆ ಸ್ಪರ್ಧೆಗೆ ಬಿದ್ದಂತೆ ಆಡುತ್ತಾರೆ.

ನನ್ನ ಕೋಣೆಯ ಅಕ್ಕಪಕ್ಕದಲ್ಲಿ ಸಾಕಷ್ಟು ಕುಟುಂಬಗಳು ವಾಸಿಸುತ್ತಿವೆ. ಪ್ರತಿ ಮನೆಯಲ್ಲೂ ಡಜನ್ ಗಟ್ಟಲೆ ಜನರಿದ್ದಾರೆ. ಪ್ರತಿದಿನ ಕುಟುಂಬವೂ ನನ್ನ ಕೋಣೆಗಿಂತ ಕೊಂಚ ದೊಡ್ಡದಾದ ಕೋಣೆಯಲ್ಲೇ ವಾಸಿಸುತ್ತದೆ. ಅಡಿಗೆಗೆ, ಊಟಕ್ಕೆ, ಮಲಗಲಿಕ್ಕೆ, ಪ್ರೇಮ,ಕಾಮಕ್ಕೆ ಎಲ್ಲದಕ್ಕೂ ಅದೇ ಜಾಗ. ಮನೆಯ ಗಂಡಸರು ಹತ್ತಿರದ ಸಕ್ಕರೆ ಕಾರ್ಖಾನೆಯೊಂದರಲ್ಲಿ ದುಡಿಯುತ್ತಾ ತಿಂಗಳಿಗೆ ಐವತ್ತು ರೂಪಾಯಿಗಳಷ್ಟು ಸಂಬಳ ಸಂಪಾದಿಸುತ್ತಾರೆ. ಪೀಪಲ್ ನಗರದ ಹೈಸ್ಕೂಲಿನಲ್ಲಿ ಓದುತ್ತಿರುವ ಈ ಮನೆಗಳ ಹಿರಿಮಕ್ಕಳು ಊಟಕ್ಕಷ್ಟೇ ಇಲ್ಲಿ ಬಂದು ಹೋಗುತ್ತಾರೆ. ಚಿಕ್ಕವರು ತಮ್ಮ ಜೇಬುಗಳಲ್ಲಿ ಕಲ್ಲುಗಳನ್ನ, ಸಣ್ಣ ನಾಣ್ಯಗಳನ್ನ ತುಂಬಿಕೊಂಡು ಇಡೀ ದಿನವೆಲ್ಲ ಆಟದಲ್ಲೇ ತೊಡಗುತ್ತಾರೆ. ಟ್ಯಾಗೋರ್ ಬರೆಯುತ್ತಾರೆ ‘ದೇವರು ಇನ್ನೂ ಮನುಷ್ಯನ ಮೇಲೆ ನಿರಾಸಕ್ತಿ ತಾಳಿಲ್ಲ ಅನ್ನುವ ಸಂದೇಶ ಗೊತ್ತು ಪ್ರತಿ ಮಗುವೂ ಹುಟ್ಟಿ ಬರುತ್ತದೆ. ’

ಮಧ್ಯಾಹ್ನ ಬಿಸಿಲು ರಸ್ತೆಯನ್ನ ಬಿಟ್ಟು ಹೊರಟ ಮೇಲೆ, ಒಂದಿಷ್ಟು ಮಕ್ಕಳ ಗುಂಪು ಈ ನಿರ್ಜನ , ನಿಶಬ್ದವಾದ ಬೀದಿಗಳಿಗೆ ದಾಂಗುಡಿ ಇಡುತ್ತಾರೆ. ಬೆಳಿಗ್ಗೆಯಿಂದಲೂ ಆ ಮಕ್ಕಳು ಶಾಲೆಯ ಮೇಜುಗಳ ಮೇಲೆ ಕೂತಿರುತ್ತವೆ. ಈಗ ಸೂರ್ಯ ತಣ್ಣಗಾಗತೊಡಗಿದ ಮೇಲೆ ,ಮರಗಳಡಿ ಮಲಗಿರುವ ತಮ್ಮ ಹಿರಿಕರ ಉಸ್ತುವಾರಿಯಲ್ಲಿ ಆಟವಾಡುತ್ತಾರೆ.

ನದಿ ತೀರದ ಮರಳ ಮೇಲೆ ಮಕ್ಕಳು ಕಪ್ಪೆಯಾಟವಾಡುತ್ತಾರೆ. ದೊಡ್ಡ ಬಿಲ್ಡಿಂಗುಗಳ ನಡುವಿನ ಗಲ್ಲಿಗಳಲ್ಲಿ ಚಿನ್ನಿ ಕೋಲಿನಾಟ ನಡೆಯುತ್ತದೆ. ವಿಶಾಲವಾದ ಮೈದಾನಗಳಲ್ಲಿ ಮಕ್ಕಳು ,ಯುವಕರೂ ಇಬ್ಬರೂ ಕಬಡ್ಡಿ ಆಟವಾಡುತ್ತಾರೆ. ಇದೊಂದು ಗ್ರಾಮೀಣ ಪ್ರದೇಶದ ಆಟ. ಉಸಿರನ್ನ ಬಿಗಿ ಹಿಡಿದು, ತಮ್ಮ ಶಕ್ತಿಯನ್ನ ಉಪಯೋಗಿಸಿ ಎದುರಾಳಿಯನ್ನು ಮಣಿಸುವ ತಂತ್ರ.

ಇತ್ತೀಚೆಗಷ್ಟೇ ,ಇಲ್ಲೇ ಹತ್ತಿರದ ಹಳ್ಳಿಯೊಂದರಿಂದ ಇಲ್ಲಿಗೆ ವಲಸೆ ಬಂದ ಪೀತಾಂಬರ ಒಳ್ಳೆಯ ಯುವ ಕುಸ್ತಿಪಟು. ಅವನಿಗೆ ಎಲ್ಲ ಥರನಾದ ಪಟ್ಟುಗಳೂ ಗೊತ್ತು. ಅದರಲ್ಲೂ ಎದುರಾಳಿಯನ್ನು ಹಿಡಿದಿಡುವ ತಂತ್ರವನ್ನು ಆತ ಕರಗತ ಮಾಡಿಕೊಂಡಿದ್ದಾನೆ. ಆತ ಒಂದು ಬಾರಿ ನನ್ನನ್ನ ಅವನೂರಿಗೆ ಕರೆದೊಯ್ದಿದ್ದ. ಅಲ್ಲಿನ ಎಲ್ಲ ಹುಡುಗರೂ ಎತ್ತರದ, ಕೆಂಪಗಿನ ಬಣ್ಣದವರು. ಆರಾಮವಾಗಿ ಆಡುತ್ತಿದ್ದರು. ಈ ಧೃಡತೆ ಮತ್ತು ವಿಶ್ವಾಸದ ಹುಡುಗರನ್ನ ನಾನು ಪೀಪಲ್ ನಗರದಲ್ಲಿ ಕಂಡಿಲ್ಲ.

ಪೀಪಲ್ ನಗರ ಒಂದರ್ಥದಲ್ಲಿ ಕಲ್ಪನೆಗಳಿಗೂ ನಿಲುಕದ ಪಟ್ಟಣ. ಈ ಊರು ಕೆಲವೊಮ್ಮೆ ನನಗೆ ತೀರ ಬೋರು ಹೊಡೆಸಿದ್ದು ಉಂಟು.

‘ಇಷ್ಟು ಸುಂದರ ಜಗತ್ತೇ ಆತನ ಕಣ್ಮುಂದೆ ಇರುವಾಗ ದೇವರು ಮನುಷ್ಯನನ್ನು ಸೃಷ್ಟಿಸುವ ಪ್ರಯತ್ನವನ್ನೇಕೆ ಮಾಡಿದ’ ಒಂದು ಬೇಸಿಗೆಯ ರಾತ್ರಿ ಸೂರಜ್ ನನ್ನ ಕೇಳಿದೆ. ‘ಅದನ್ನೆಲ್ಲ ಇನ್ನೊಬ್ಬರ ಜೊತೆ ಹಂಚಿಕೊಳ್ಳುವ ಅಗತ್ಯತೆ ಆತನಿಗೇಕೆ ಬಿತ್ತು?’

“ಬಹುಶಃ ಆತನಿಗೆ ಒಂಟಿತನ ಕಾಡಿದ್ದಿರಬಹುದು” ಎಂದಿದ್ದ ಸೂರಜ್.

(ಮುಂದುವರಿಯುವುದು)

September 24, 2009 at 6:45 am 2 comments

ಮತ್ತೆ ಕೇಳಿದ ಹಾಡು, ಒಂದಿಷ್ಟು ಹಳೆಯ ನೆನಪು

ನಾನಾಗ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಅದೇ ವೇಳೆ ಜೊತೆಗೊಬ್ಬ ಗೆಳೆಯನಿದ್ದ. ನನಗಿಂತ ಮೂರು ವರ್ಷ ದೊಡ್ಡವ. ನನ್ನೂರಿನ ಕಾಲೇಜಿನಲ್ಲೇ ಎರಡನೇ ಪಿಯುಸಿ ಓದುತ್ತಿದ್ದ. ನಮ್ಮಲ್ಲಿ ಹೈಸ್ಕೂಲು, ಕಾಲೇಜು ಎಲ್ಲ ಒಟ್ಟಿಗೆ ಇದ್ದಿದ್ದರಿಂದ ದಿನ ಒಟ್ಟಿಗೆ ಬೆರೆಯುವಂತ ಅವಕಾಶ. ಸ್ಕೂಲಿನಲ್ಲಿ ಅಷ್ಟೇನು ಭೇಟಿಯಾಗದಿದ್ದರೂ, ನಾಲ್ಕರ ನಂತರ ತಪ್ಪದೇ ಸೇರುತ್ತಿದ್ದೆವು.  ಮಾಸ್ಟರ್, ಮೇಡಮ್ಮುಗಳೆಲ್ಲ ಈಚೆ ಹೊರಟು, ಗೇಟಿಗೆ ಬೀಗ ಬಿದ್ದದ್ದೇ ತಡ ಅದರ ಮೇಲೆ ನೆಗೆಯುತ್ತಾ ಮೈದಾನ ಹೊಕ್ಕವೆಂದರೇ ಅಲ್ಲಿಂದ ಹೊರಗೆ ಬರುತ್ತಿದ್ದುದು ಕತ್ತಲಾದ ಮೇಲೆ.

ಪ್ರತಿ ಸಂಜೆ ಅಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. ನಮ್ಮ ಪಾಲಿಗೆ ಭಾರೀ ಬೆಟ್ಟಿಂಗಿನ ತಾಣ. ಗೆಳೆಯ ಊರಿನಲ್ಲೇ ಒಳ್ಳೆಯ ಕ್ರಿಕೆಟ್ ಆಟಗಾರನಾಗಿದ್ದ. ಇದ್ದಬದ್ದವರನ್ನೆಲ್ಲ ಒಟ್ಟುಗೂಡಿಸಿ ಸಾಮರ್ಥ್ಯಕ್ಕೆ ಅನುಸಾರಗಾಗಿ ತಂಡ ಹಂಚಲಾಗುತ್ತಿತ್ತು. ಕೆಲವೊಮ್ಮೆ ದೊಡ್ಡವರೆಲ್ಲ ಸೇರಿಕೊಂಡಾಗ ನನ್ನಂತ ಹುಡುಗರಿಗೆ ಕೋಕ್.

ಆರು ಓವರುಗಳಿಂದ ಹೆಚ್ಚೆಂದರೆ ಹತ್ತು-ಹನ್ನೆರಡು ಓವರುಗಳ ಪಂದ್ಯ. (ಈಗಿನ ಟ್ವೆಂಟಿ೨೦ ಹಾಗೇ) ದಿನಕ್ಕೆ ಮೂರು-ನಾಲ್ಕು ಪಂದ್ಯಗಳು ನಡೆಯುತ್ತಿತ್ತು. ಪ್ರತಿ ಮ್ಯಾಚಿಗೂ ಐವತ್ತು-ನೂರು ರೂಪಾಯಿಗಳಷ್ಟು ಬೆಟ್ಟಿಂಗ್. ಗೆಳೆಯ ಒಳ್ಳೆಯ ಆಟಗಾರ. ಅವನ ಸಾಮರ್ಥ್ಯ ನಂಬಿಕೊಂಡೇ ನಮ್ಮೆಲ್ಲರ ಹಣ ಹೂಡಿಕೆಯಾಗುತ್ತಿತ್ತು. ಲಾಭ ಅಲ್ಲದಿದ್ದರೂ ನಷ್ಟವಾಗಿದ್ದು ಮಾತ್ರ ಗೊತ್ತಿಲ್ಲ. ಅವತ್ತಿನ ಖರ್ಚುಗಳಿಗಂತೂ ಮೋಸವಾಗುತ್ತಿರಲಿಲ್ಲ.

ಆಟ ಮುಗಿದ ಕೂಡಲೇ ಊರ ಒಳಗೊಂದು ಸುತ್ತು. ರಾಮಮಂದಿರದ ಒಳಗೊಮ್ಮೆ ಹೋಗಿ ರಾಮ ಇದ್ದಾನೆಯೇ ಅಂತ ನೋಡಿಕೊಂಡು ಬರುವುದು ಕಡ್ಡಾಯ. ಅದಾದ ಬಳಿಕ ಊರಿನ ಏಕೈಕ ಪಾನಿಪೂರಿ ಅಂಗಡಿಯ ಮೇಲೆ ನಮ್ಮ ಠಿಕಾಣಿ. ಖಾಯಂ ಗಿರಾಕಿಗಳಾದ್ದರಿಂದ ಸ್ವಲ್ಪ ಹೆಚ್ಚಿಗೆ ಈರುಳ್ಳಿ ಹಾಕಿ, ಮೀಡಿಯಂ ಖಾರ ಸೇರಿಸಿ ಕೊಡಬೇಕು ಅನ್ನುವುದು ಅಲಿಖಿತ ನಿಯಮ.

ಹಾಗೇ ಬಸ್ ಸ್ಟ್ಯಾಂಡಿನ ಅರಳೀಕಟ್ಟೆ ಹತ್ತಿರಕೊಮ್ಮೆ ಬಂದು, ಆಸ್ಪತ್ರೆಗೂ ಒಂದು ಭೇಟಿ ಕೊಡುವ ಹೊತ್ತಿಗೆ ಸಂಜೆ ಏಳರ ಸಮಯ. ಹಾಗೇ ಅಂಗಡಿಯತ್ತ ಹೋದವರೇ ಎರಡು ಲೀಟರ್ ಕಡಲೇಪುರಿಯೊಂದಿಗೆ ಒಂದಿಷ್ಟು ಖಾರ ಬೂಂದಿ ಬೆರೆಸಿಕೊಂಡು, ಜೊತೆಗೆ ಮೆಣಸಿನಕಾಯಿ ಬಜ್ಜಿ ಹಿಡಿದು ಮತ್ತೆ ಕಾಲೇಜಿನ ಗೇಟು ಹಾರಿದವೆಂದರೆ ಇನ್ನು ಈಚೆ ಬರುವುದು ರಾತ್ರಿ ಒಂಭತ್ತಕ್ಕೆ. ಈ ಮಧ್ಯೆ ನಮ್ಮ ಮಾತಿಗೆ ಬಾರದ ವಿಷಯವಿಲ್ಲ.

ಆಗ ನಮ್ಮೂರಲ್ಲಿ ವರ್ಷಕ್ಕೊಮ್ಮೆ ಗೋಲಿ ಸೀಜನ್ನು ಅಂತ ಬರುತ್ತಿತ್ತು. ಆಗಲಂತೂ ಸಾಕ್ಷಾತ್ ಲಕ್ಷ್ಮಿ ಒಲಿದಂಥ ಅನುಭವ. ಸೀಜನ್ನು ಇರುವ ತನಕ ಸಂಪಾದನೆಗೆ ಕುತ್ತಿಲ್ಲ.

ಹೀಗಿರುವ ನಮಗೆ ಒಮ್ಮೆ ವಾಕ್ ಮನ್ ಕೊಂಡುಕೊಳ್ಳುವ ಯೋಗ ಸಹ ಕೂಡಿಬಂತು. ಆದರೆ ಕೇಳೋದಕ್ಕೆ ಮಾತ್ರ ಒಂದೂ ಕ್ಯಾಸೆಟ್ಟುಗಳಿರದೇ ತೊಂದರೆಯಾಗಿತ್ತು. ಅದೇ ಹೊತ್ತಿನಲ್ಲಿ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ  ‘ಸ್ಪರ್ಶ’ ಚಿತ್ರ ಬಿಡುಗಡೆಯಾಗಿತ್ತು. ಆವತ್ತಿಗೆ ನಮ್ಮ ಮಟ್ಟಿಗೆ ಅತ್ಯದ್ಭುತ ಅನ್ನುವಂಥ ಸಂಗೀತ. ಅದರದ್ದೊಂದು ಕ್ಯಾಸೆಟ್ ರೆಕಾರ್ಡ್ ಮಾಡಿಸಿಕೊಂಡು ಬರಬೇಕು ಅಂತ ಹಳೆಯದ್ದೊಂದು ಕ್ಯಾಸೆಟ್ ಹಿಡಿದು ಹನ್ನೆರಡು ಕಿ.ಮೀ ಸೈಕಲ್ ಹೊಡೆದು ಎರಡೆರಡೂ ದಿನ ಸುತ್ತಿ, ಕಡೆಗೂ  ಕ್ಯಾಸೆಟ್ಟು ಕೈ ಸೇರಿತ್ತು.

‘ಚಂದಕ್ಕಿಂತ ಚಂದ ನೀನೆ ಸುಂದರ…’ ಹಾಡೆಂದರೆ ಪ್ರಾಣ ಬಿಡುವಷ್ಟು ಇಷ್ಟ. ಪಂಕಜ್ ಉದಾಸ್ ಅನ್ನುವ ಗಾಯಕನ ಹೆಸರು ನೆನಪಿನಲ್ಲಿ ಉಳಿದುಕೊಂಡಿದ್ದು ಇದೇ ಹಾಡಿನಿಂದ. ಹಾಡು ಅದೆಷ್ಟು ಮೆಚ್ಚುಗೆಯಾಗಿತ್ತು ಎಂದರೆ, ಗೆಳೆಯ ಇದನ್ನ ಬಿಡದೇ ಹಾಡಿ ಹಾಡಿ, ಕಡೆಗೆ ಅಪ್ಪಪಕ್ಕದವರಿಗೆಲ್ಲ ನಾವು ಈ ಹಾಡಿನಿಂದಲೇ ಜನಪ್ರಿಯವಾಗಿ, ಅವ ಅದನ್ನೇ ಕಾಲೇಜಿನ ಚಿತ್ರಗೀತೆ ಸ್ಪರ್ಧೆಯಲ್ಲೂ ಹಾಡಿ, ತೀರ್ಪುಗಾರರು ತಾಳಲಾರದೇ ಎಂಬಂತೆ ಬಹುಮಾನವನ್ನೇ ಘೋಷಿಸಿದ್ದು ಉಂಟು. ಆಗಂತೂ ನಮ್ಮ ಸಂಭ್ರಮಕ್ಕೆ ಎಲ್ಲೆ ಇರಲಿಲ್ಲ. ಚಿತ್ರದ ಬಹುತೇಕ ಹಾಡುಗಳು ಕಂಠಪಾಠ ಆಗಿದ್ದವು.

ಊರಿಗೊಂದೇ ವಾಕ್ ಮನ್ ಅನ್ನುವ ಕಾರಣಕ್ಕೋ ಏನೋ ನಮಗೆ ಈ ಎಲ್ಲದರ ಜೊತೆಗೇ ಕೊಂಚ ಲೆವಲ್ಲು, ಅಹಮ್ಮು ಎಲ್ಲ ಬಂದಿದ್ದು ಸುಳ್ಳಲ್ಲ. ಆಮೇಲೆ ಅದ್ಯಾಕೋ ಸ್ಪರ್ಶವೂ ಬೇಜಾರಿಡಿಸತೊಡಗಿ ಬೇರೆ ಹಾಡುಗಳಿಗಾಗಿ ಹುಡುಕಾಟ ನಡೆಸಿದೆವು. ಅದೇ ಹೊತ್ತಿಗೆ ಆಗ ಜನಪ್ರಿಯವಾಗುತ್ತಿದ್ದ ‘soldier’ ಅನ್ನುವ ಹಿಂದಿ ಸಿನಿಮಾ ಹಾಡುಗಳು ಸಿಕ್ಕು ಒಂದಿಷ್ಟು ದಿನ ಹಿಂದಿ ಹಾಡುಗಳನ್ನ ಗುನುಗುವಂತಾಯ್ತು.

ಆಮೇಲೆ ಅವನು ಪಿಯುಸಿ ಮುಗಿಸಿ ಡಿಗ್ರಿ ಓದಿಗೆ ಅಂತ ಮೈಸೂರಿಗೆ ಹೊರಟ. ಆಮೇಲೆ ನನ್ನ ರೀತಿನೀತಿಗಳೂ ಬದಲಾಗುತ್ತಾ ಹೋದವು.

ಅದೇ ಗೆಳೆಯ ನಿನ್ನೆ ಭಾನುವಾರ ಊರಿನಲ್ಲಿ ಮತ್ತೆ ಸಿಕ್ಕಿದ್ದ. ಆತನೀಗ ಹೈಸ್ಕೂಲೊಂದರಲ್ಲಿ ಟೀಚರ್. ಹೀಗೇ ಸಿಕ್ಕವರೇ ನೇರ ಬೈಕ್ ಏರಿ ಹೊಳೆಯತ್ತ ಹೋಗಿ, ದಡದಲ್ಲಿ ಕೂತು ಸಂಜೆಯಾಗುವವರೆಗೂ ಅದುಇದು ಅಂತ ಮಾತನಾಡುತ್ತ, ಕತ್ತಲಾದ ಮೇಲೆ ಊರ ಕಡೆ ಬಂದಿದ್ದೆವು.

ಇಲ್ಲಿ ಮತ್ತೆ ರೂಮಿಗೆ ಬಂದು, ರಾತ್ರಿ ಹನ್ನೆರಡರ ಹೊತ್ತಲ್ಲಿ, ಯಾವುದೋ ಹಾಡಿನ ಗುಚ್ಛಗಳ ನಡುವೆ ಅದೇ ಸ್ಪರ್ಶದ ಹಾಡುಗಳು ಸಿಕ್ಕು ಮತ್ತೆ ಹಳೆಯದ್ದೆಲ್ಲ ನೆನಪಾಗುತ್ತಿವೆ. ಮತ್ತೆ ಮೆಲುಕು ಹಾಕುವಂಥ ಗೀತೆಗಳು. ಹಂಸಲೇಖ ಇಂತಹದ್ದೊಂದು ಮಾಂತ್ರಿಕ ಸಂಗೀತ ಚಿತ್ರ ನೀಡಿದ್ದು ಅದೇ ಕೊನೆ ಇರಬೇಕು, ಆದಾದ ಮೇಲೆ ಹೇಳಿಕೊಳ್ಳುವಂತ ಸಂಗೀತ ಅವರಿಂದ ಬಂದಿಲ್ಲ ಅನ್ನಿಸುತ್ತೆ.

ಇದನ್ನೆಲ್ಲ ನೆನೆದು, ಮತ್ತೆ ಹಾಡು ಗುನುಗುತ್ತಾ ಹೊರಗೆ ಬಾಲ್ಕನಿಯಲ್ಲೊಮ್ಮೆ ಬಂದರೆ ಇಲ್ಲಿ ಕಗ್ಗತ್ತಲು. ಆದರೂ ತಣ್ಣನೆ ಮೈ ತಬ್ಬಿದಂತೆ ಬೀಸುವ ಗಾಳಿ ಹಾಯೆನಿಸುತ್ತಿದೆ. ‘ಈಗೀಗ ನೀನು ನಿಶಾಚರಿ ಆಗುತ್ತಿದ್ದೀಯಾ ಗುರುವೇ’ ಅಂತ ಗೆಳೆಯರು ಎಚ್ಚರಿಸುತ್ತಾ ಇರುವುದು ನೆನಪಿಗೆ ಬಂದು ಸಣ್ಣಗೊಂದು ನಗುವೂ ತೇಲುತ್ತಿದೆ.  ಹಾಗೇ ಗಾಳಿಗೆ ಮೈ ಒಡ್ಡಿಕೊಂಡೇ ನಿಂತಿದ್ದೇನೆ.

February 23, 2009 at 8:00 pm 2 comments

ಈ ಹೊತ್ತಿಗೆ ಈ ಕವಿತೆಯ ನೆನಪು

l1

ಒಲವೆಂಬ ಹೊತ್ತಿಗೆಯ ನೋದಬಯಸುತ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ, ಹುಚ್ಚ!
ಹಗಲಿರುಳು ದುಡಿದರೂ, ಹಲವು ಜನುಮ ಕಳೆದರೂ
ನೀ ತೆತ್ತಲಾರೆ ಬರಿಯ ಅಂಚೆವೆಚ್ಚ!

ಬಹುಶಃ ಬೇಂದ್ರೆಯದ್ದಿದ್ದಿರಬೇಕು. ಹತ್ತನೇ ತರಗತಿಯಲ್ಲಿದ್ದಾಗ ಡೈರಿಯ ಮೊದಲ ಪುಟದಲ್ಲಿ ಬರೆದುಕೊಂಡಿದ್ದೆ. ನಿಜಕ್ಕೂ ಅದರರ್ಥ ತಿಳಿದೇ ಬರೆದುಕೊಂಡಿದ್ದನಾ? ಗೊತ್ತಿಲ್ಲ. ಹಾಗೇ ಬರೆದುಕೊಂಡ ಮೇಲೆ ಅದೆಷ್ಟೋ ಬಾರಿ ಇದನ್ನ ಓದಿಕೊಂಡಿದ್ದೇನೆ. ಓದಿದ ಪ್ರತಿ ಸಾರಿಯೂ ಖುಷಿ ಪಟ್ಟುಕೊಂಡಿದ್ದೇನೆ.

ಈ ಅಪರಾತ್ರಿಯಲ್ಲಿ, ನೆನಪುಗಳು ಒತ್ತೊತ್ತಿ ಬರುತ್ತಿರುವ ಹೊತ್ತಲ್ಲಿ ಈ ಕವಿತೆ ಮತ್ತೆ ಮತ್ತೆ ಕಾಡುತ್ತಿದೆ. ಹಾಗೇ ಎದ್ದುಕುಂತವನೇ ಹೊತ್ತಲ್ಲದ ಹೊತ್ತು ಅನ್ನುವ ಹೊತ್ತಲ್ಲೇ ಇದನ್ನೆಲ್ಲ ಬ್ಲಾಗಿಸುತ್ತಿದ್ದೇನೆ. ಈ ಹೊತ್ತಿಗೆ ಈ ಕವಿತೆಯ ನೆನಪು.

February 13, 2009 at 7:42 pm 2 comments

ಸತ್ತು ಬದುಕಿದವರು, ಬದುಕಿ ಸತ್ತವರು

‘ವಾಜಪೇಯಿ ತೀರಿಕೊಂಡರಂತೆ’ ಹೀಗೊಂದು ದಿಡೀರ್ ‘ಸುದ್ದಿ’ ಕೇಳಿದ್ದೇ ನಿನ್ನೆ ಒಂದು ಕ್ಷಣ ಆಶ್ಚರ್ಯ ಆಯ್ತು. ರಸ್ತೆಯಲ್ಲಿ ನಡೆಯುತ್ತಿದ್ದವನಿಗೆ ವಾಜಪೇಯಿ ಮುಖವೇ ಕಣ್ಮುಂದೆ ಬಂದಂತಿತ್ತು. ಮನೆಗೆ ಹೋದದ್ದೇ ಟೀವಿ ಹಾಕಿ ನೋಡಿದರೆ, ‘ವಾಜಪೇಯಿ ಚೇತರಿಕೆಗೆ ಹೋಮ, ಹವನ…’ ಅಂತ ಸ್ಲಗ್ ಬರುತ್ತಿತ್ತು. ಮಾಜಿ ಪ್ರಧಾನಿಗಳು ಹುಷಾರಾಗಿದ್ದಾರೆ ಅಂತಂದುಕೊಂಡು ಚಾನಲ್ ಬದಲಿಸಿದೆ.

ಇತ್ತೀಚೆಗೆ ಈ ರೀತಿ ಸುದ್ದಿ ಕೇಳುತ್ತಿರುವುದು ಇದು ಎರಡನೆಯ ಬಾರಿ. ಮಾಜಿ ರಾಷ್ಟ್ರಪತಿ ವೆಂಕಟರಾಮನ್ ವಿಷಯದಲ್ಲೂ ಹೀಗಾಗಿತ್ತು. ಆದರೆ ಇದಕ್ಕಿಂತ ಕೊಂಚ ಭಿನ್ನ. ಜನವರಿ ಇಪ್ಪತ್ತೈದರ ಭಾನುವಾರ ಮನೆಯಲ್ಲೇ ಟೀವಿ ನೋಡ್ತಾ ಇದ್ದೆ. ಅಷ್ಟರಲ್ಲೇ, ಪಕ್ಕದ ಮನೆಯ ಅಂಕಲ್ ಇಂತಹುದ್ದೇ ಒಂದು ಸುದ್ದಿ ಹೇಳಿದ್ರು. ಅದರಂತೆ,  “ವೆಂಕಟರಾಮನ್ ತೀರಿಹೋಗಿದ್ದಾರಂತೆ. ಆದ್ರೆ ಅದಿನ್ನೂ ಅಧಿಕೃತವಾಗಿ ಪ್ರಕಟ ಆಗಿಲ್ಲ. ನಾಳೆ ಗಣರಾಜ್ಯೋತ್ಸವ. ಸತ್ತಿರೋರು ಮಾಜಿ ರಾಷ್ಟ್ರಪತಿ ಗಳಾಗಿರೋದ್ರಿಂದ ಯಾವುದೇ ಆಚರಣೆ ಮಾಡುವ ಹಾಗಿಲ್ಲ, ರಾಷ್ಟ್ರಧ್ವಜವನ್ನ ಅರ್ಧಕ್ಕೆ ಇಳಿಸಿ ಹಾರಿಸಬೇಕು. ವಾರಗಳ ಕಾಲ ಶೋಕಚರಣೆ ಮಾಡಬೇಕಾಗಿತ್ತೆ. ಆದ್ರೆ ಏನ್ ಮಾಡೋದು ಗಣರಾಜೋತ್ಸವವನ್ನ ಆಚರಿಸದೇ ಇರೋದು ಸರಿ ಅಲ್ಲ. ಅದಕ್ಕೆ ಈ ವಿಷಯವನ್ನ ಹೀಗೆ ಮುಚ್ಚಿಡಲಾಗುತ್ತೆ. ಗಣರಾಜೋತ್ಸವದ ಬಳಿಕ ಅಧಿಕೃತವಾಗಿ ಪ್ರಕಟಿಸೋದಕ್ಕೆ ಏರ್ಪಾಡು ನಡೆದಿದೆ”

ನ್ಯೂಸ್ ಚಾನಲ್ ಗಳಲ್ಲಿ ನೋಡಿದ್ರೆ ಈ ಬಗ್ಗೆ ಸುಳಿವೂ ಇಲ್ಲ. ಈಗೀಗ ತೀರ ‘ಕುಟುಕು ಕಾರ್ಯಾಚರಣೆ’ ಗಳಿಗೆ ಹೆಸರಾಗ್ತಾ ಇರೋ ಚಾನಲ್ ಗಳಿಗಾದ್ರು ಇದರ ಸುಳಿವು ಸಿಕ್ಕಿ ಹೋಗಿರುತ್ತೆ ಅಂತಂದುಕೊಂಡು ನೋಡಿದರೆ ಅವುಗಳಲ್ಲೂ ಏನೂ ಇಲ್ಲ.

ಅಂಕಲ್ ಗೆ ಯಾರೋ ಏನೋ ಸುಳ್ಳು ಹೇಳಿರಬೇಕು. ಹೀಗೊಂದು ವದಂತಿ ಹಬ್ಬಿರಬೇಕು ಅಂದುಕೊಂಡೆ. ಈ ಬಗ್ಗೆ ಯಾರನ್ನಾದರೂ ಕೇಳಲು ಮುಜುಗರ ಅಂತನಿಸಿ ಸುಮ್ಮನಾದೆ.

ಅದಾದ ಎರಡು ದಿನಗಳ ನಂತರ, ಮತ್ತದೇ ಚಾನಲ್ಲುಗಳಲ್ಲಿ ವೆಂಕಟರಾಮನ್ ನಿಧನ ವಾರ್ತೆ ಪ್ರಸಾರ ಆಗ್ತಾ ಇತ್ತು. ಶ್ರದ್ಧಾಂಜಲಿ ಶುರುವಾಗಿತ್ತು. ಅಧಿಕೃತ ಪ್ರಕಟಣೆಯಂತೆ, ಆರ್. ವೆಂಕಟರಾಮನ್ ಜನವರಿ ೨೭ರ ಮಧ್ಯಾಹ್ನ ೨.೩೦ ವೇಳೆಗೆ ಅನಾರೋಗ್ಯದಿಂದ ನಿಧನ ಹೊಂದಿದ್ದರು.

ಅವತ್ತು ಸಂಜೆ ಒಬ್ಬರೊಡನೆ ಹೀಗೇ ಮಾತನಾಡುತ್ತಿರುವಾಗ, ‘ಸರ್ ಹೀಗೊಂದು ಸುದ್ದಿ ಹಬ್ಬಿತ್ತು ಅದು ನಿಜವಾ’ ಅಂತ ಕೇಳಿದರೆ, ‘ಹೌದು ನಂಗೂ ಈ ಸುದ್ದಿ ಶನಿವಾರನೇ ಕಿವಿಗೆ ಬಿದ್ದಿತ್ತು’ ಅಂದವರ ಮಾತಿಗೆ ಏನು ಹೇಳಬೇಕೋ ತೋಚದೆ ಸುಮ್ಮನಾಗಿದ್ದೆ.

ನಿನ್ನೆ, ಇಲ್ಲಿ ಮೈಸೂರಲ್ಲಿ ವಾಜಪೇಯಿ ಸತ್ತೇ ಹೋದ್ರು ಅಂತ ತಿಳಿದುಕೊಂಡ ಒಂದಿಷ್ಟು ಜನ ಸಭೆ ಸೇರಿ ಶ್ರದ್ಧಾಂಜಲಿ ಕೂಡ ಅರ್ಪಿಸಿದ್ದರಂತೆ! ಹಾಗಂತ ಈಗಷ್ಟೆ ತಿಳಿದುಬಂತು.

ಇಷ್ಟಕ್ಕೂ ಈ ಸುದ್ದಿಗಳೆಲ್ಲ ಹೀಗೆ ಹಬ್ಬೋದು ಹೇಗೆ? ವಯಸ್ಸಾದವರು ಆಸ್ಪತ್ರೆ ಸೇರಿದ್ರು ಅಂದ್ರೆ ಸತ್ತೇ ಹೋದ್ರು ಅಂತ ಅರ್ಥಾನ? ಇನ್ಯಾರೋ ಹೇಳ್ತಿದ್ರು, ಹೀಗೆ ಆಸ್ಪತ್ರೆ ಸೇರಿದ್ದನ್ನೇ ನ್ಯೂಸ್ ಚಾನಲ್ ಗಳು ರೋಚಕವಾಗಿ ಪದೇ ಪದೇ ತೋರಿಸ್ತಾ ಇರೋದ್ರಿಂದ ನಿಜಕ್ಕೂ ಅವರಿಗೆ ಏನೋ ಆಗಿಹೋಗಿದೆ ಅಂತ ಸಾಮಾನ್ಯ ಜನ ಯೋಚನೆ ಮಾಡ್ತಾರೆ ಅಂತ.

February 8, 2009 at 4:51 pm 2 comments

ಹೀಗೆ ಸುಮ್ಮನೆ ಒಂದು ಹನಿ

teertha-halli-230

ಯಾಕೋ ಗೊತ್ತಾಗುತ್ತಿಲ್ಲ

ಬೇಡವೆಂದರೂ ತನ್ ತಾನೇ
ಸುರಿಯುತ್ತಿದೆ ಕಣ್ಣೀರು
ನೆನಪುಗಳ ತೋಯಿಸುತ್ತಾ.

ರೆಪ್ಪೆ ತೆರೆದಿಟ್ಟರೆ
ತೊಟ್ಟಿಕ್ಕುವ ಜಲಪಾತ
ಮುಚ್ಚಿದರೆ,
ಒಳಗೆ ಜಲಪ್ರಳಯ.
ಹರಿವ ನೀರೊಳಗೂ
ಕೆಂಡದಷ್ಟು ಕಾವು.

ಒಮ್ಮೆ
ಮುಗಿಲೇ ಅಪ್ಪಳಿಸುವಷ್ಟು
ಅಥವಾ
ನೆಲ ಕಚ್ಚುವಷ್ಟು
ಮಳೆ ಬಂದು

ಈ ರಾಡಿಯನ್ನೆಲ್ಲ ತೊಳೆದು
ಶುದ್ಧಮಾಡಬಾರದೇ
ಅನ್ನುವ ತವಕ.

[ಚಿತ್ರ- ಪ್ರವೀಣ್ ಬಣಗಿ, ಚಿತ್ರಕುಲುಮೆ ]

February 4, 2009 at 11:47 am 6 comments

ಇನ್ನು ಮುಂದಾದರೂ ಬರೆಯಬೇಕು ಅಂತ….

ತಿಂಗಳಿಂದ ಏನನ್ನೂ ಬರೆಯಲಾಗಿಲ್ಲ. ಬರೆಯಬೇಕು ಅಂತ ಅನ್ನಿಸಲಿಲ್ಲ. ಅನ್ನಿಸಿದರೂ ಅದಕ್ಕೆ ಮನಸ್ಸು, ಮನಸೇ ಮಾಡಲಿಲ್ಲ. ಮೈ ಮನಸ್ಸಿಗೂ ರಿಸೆಷನ್ನಿನ ಗರ ಬಡಿದಂತಾಗಿ ಇನ್ನಿಲ್ಲದ ಜಡತ್ವ ಬಂದು ಕುಂತಿದೆ. ಸುಮ್ಮನೆ ಏನೇನೋ ನೆಪ ಹೇಳುವ ಬದಲು, ಕನಿಷ್ಟ ಹೊಸ ವರ್ಷದಿಂದಾದರೂ ಹೊಸದಾಗಿ ಬರೆಯಬೇಕು ಅಂದುಕೊಂಡಿದ್ದೇನೆ. ಶಾಸ್ತ್ರಕ್ಕೆ ಹೇಳಬೇಕು ಅಂದರೆ,  ಬಹುಶಃ ಇದೇ ನನ್ನ ಈ ವರ್ಷದ ಪ್ರತಿಜ್ಝೆ !

ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.

December 31, 2008 at 2:17 pm 2 comments

Older Posts


ಕಾಲಮಾನ

January 2012
M T W T F S S
« Oct    
 1
2345678
9101112131415
16171819202122
23242526272829
3031  

ಈಚೆಗೆ ಬರೆದಿದ್ದು

ಮುಗಿಲು ಮುಟ್ಟಿದವರು

  • 4,867 hits

ನೀವು ಮೆಚ್ಚಿದ್ದು- ಹೆಚ್ಚಿಗೆ ನೋಡಿದ್ದು

  • None

ಪಕ್ಷಿ ನೋಟ

Feeds


Follow

Get every new post delivered to your Inbox.