ನನ್ನೂರಿನಲ್ಲಿ ದಸರೆಯ ಸಂಭ್ರಮ

ಅಕ್ಟೋಬರ್ 1, 2008 at 2:46 ಅಪರಾಹ್ನ 1 comment

ಈಗಂತೂ ಇಲ್ಲಿನ ಬೀದಿಗಳಲ್ಲಿ ನಡೆಯುವುದೆಂದರೆ ಬಲು ಮಜವಾದ ಸಂಗತಿ. ಮೈ ತುಂಬ ಬೆಳಕಿನ ಬಲ್ಬುಗಳನ್ನು ಹೊದ್ದು ನಿಂತ ಅರಮನೆ, ಹಬ್ಬಕ್ಕೆಂದು ಹೊಸಲಂಗ ತೊಟ್ಟ ಹುಡುಗಿಯಂತೆ ಬಣ್ಣ ಬಳಿಸಿಕೊಂಡು ಸಿಂಗರಿಸಿ ನಿಂತ ಸರ್ಕಾರಿ ಕಟ್ಟಡಗಳು, ರಾತ್ರಿ ಹೊತ್ತಲ್ಲಿ ಹಸಿರು ಬೆಳಕಿನ ಹೊಂಬೆಳಕಲ್ಲಿ ಅದ್ದು ನಿಂತಂತೆ ಕಾಣುವ ಕಾರ್ಪೋರೇಷನ್, ಚೆಲುಂವಂಬಾ , ಆಯುರ್ವೇದಾ ಆಸ್ಪತ್ರೆ, ಟೌನ್ ಹಾಲ್, ಕ್ರಾಫರ್ಡ್ ಹಾಲ್ ಮುಂತಾದ ಬಿಲ್ಡಿಂಗು, ಮಿರಮಿರನೆ ಹೊಳೆಯುವ ಕೆ ಆರ್ ವೃತ್ತ, ಕೆ ಆರ್ ಆಸ್ಪತ್ರೆ ವೃತ್ತಗಳು, ಕತ್ತಲಲ್ಲಿ ಥೇಟ್ ರಥ ಬೀದಿಯಂತೆ ಕಾಣಿಸೋ ಅರಸು ರಸ್ತೆ, ಗಿಜಿಗುಡುವ ಸಯ್ಯಾಜಿರಾವ್- ಮಾರ್ಕೆಟ್ ರಸ್ತೆ, ಹೀಗೆ ಸುಮ್ಮನೆ ಇಲ್ಲೆಲ್ಲ ಅಡ್ಡಾಡುವುದೆಂದರೆ ಖುಷಿಯೋ ಖುಷಿ.

ಬೆಳಗಾಗುವುದೇ ತಡ ಅಲ್ಲಿ ಅರಮನೆಯ ಮುಂಬಾಗ ಆನೆಗಳ ಕಸರತ್ತು ಆರಂಭವಾಗುತ್ತದೆ. ಬಲರಾಮನಂತೂ ತಣ್ಣನೆಯ ನೀರ ಹೊಂಡದಲ್ಲಿ ಮೈ ಅದ್ದಿ ಮತ್ತೆಮ್ಮೊ ನಿದ್ದೆಗೆ ಜಾರುವವನಂತೆ ಮಲಗಿ ಬಿಡುತ್ತಾನೆ. ಮಾವುತರು ಅವನ ಮೈಯೇರಿ ತಿಕ್ಕಿ ತೊಳೆಯುವಾಗ ದೂರಕ್ಕೆ ಇರುವೆಗಳಂತೆಯೇ ಕಾಣುತ್ತಿರುತ್ತಾರೆ. ಪಕ್ಕಕ್ಕೆ ಹೋದರೆ ಅಲ್ಲಿನ ತುಂಟ ಗಜೇಂದ್ರ, ಅಭಿಮನ್ಯು ಕಸರತ್ತು ಮಾಡುತ್ತಿರುವವರಂತೆ ಫೋಸು ಕೊಡುತ್ತಿರುತ್ತಾರೆ. ವಯಸ್ಸಿನಲ್ಲಿ ತನಗಿಂತಲೂ ದೊಡ್ಡವರಾದ ಹೆಣ್ಣಾನೆಗಳಿಗೆ ಲೈನು ಹೊಡೆಯುತ್ತಾ ನಿಂತಿರುತ್ತಾರೆ. ಮಾವುತರ ಮಕ್ಕಳೂ ನಿಧಾನಕ್ಕೆ ಎದ್ದು ಆನೆಗಳೊಂದಿಗೆ ಆಟ ಆಡುತ್ತಾ ನಿಂತಿರುತ್ತಾರೆ.

ದಸರಾ ಆರಂಭಗೊಂಡಿದ್ದರೂ ಇಲ್ಲಿನ ರಸ್ತೆಗಳ ರಿಪೇರಿ ನಿಂತಿಲ್ಲ. ಕಪ್ಪನೆಯ ಟಾರು ಜಲ್ಲಿ ಚೆಲ್ಲಿ ಡಾಂಬರು ಹಾಕುವ ಕಾರ್ಯ ಸಾಗುತ್ತಲೇ ಇದೆ. ತರಾತುರಿಯಲ್ಲಿ ಮಾಡುತ್ತಿರುವ ಕೆಲಸವಾದ್ದರಿಂದ ಯಾವುದೂ ಪೂರ್ಣ ಎನ್ನುವ ಹಾಗಿಲ್ಲ. ಡಾಂಬರು ಮೆತ್ತಿಕೊಂಡ ರಸ್ತೆಗಳು ಅಂಗಿಯ ಮೇಲಿನ ತೇಪೆಗಳಂತೆ ಅಸಹ್ಯವಾಗಿ ಕಾಣುತ್ತಿದ್ದರೂ ಮೈಸೂರಿನ ಅಂದಕ್ಕೆ ಕುತ್ತೇನೂ ಇಲ್ಲ. ಅಂತೆ ಫುಟ್ ಪಾತಿನಲ್ಲಿದ್ದ ಕಲ್ಲು ಕಿತ್ತು ಟೈಲ್ಸ್ ಹಾಕುವ ಹೆಂಗಸರು ಮುಖ ಮೈಗೆಲ್ಲ ಬಿಳಿ ಪುಡಿ ಚೆಲ್ಲಿಕೊಂಡು ಅಂದ ಕಾಣದಂತೆ ಮರೆಮಾಚಿಕೊಂಡಿದ್ದಾರೆ. ಬೀದಿಬದಿಯಲ್ಲಿ ಓಡಾಡುವ ಪಾದಚಾರಿಗಳೂ ಅದರ ಘಾಟು ಗ್ರಹಿಸುತ್ತಿದ್ದಾರೆ.

ವ್ಯಾಪಾರಿಗಳಿಗಂತೂ ಇದು ಸುಗ್ಗಿಯ ಕಾಲ. ನಾನಾ ಆಫರ್ ನೀಡಿ ಅದಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ , ಭಾರೀ (!) ಡಿಸ್ ಕೌಂಟ್ ಸೇಲ್ ಅಂತ ಬೋರ್ಡು ಬರೆಸಿ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ದೇವರಾಜ ಮಾರ್ಕೆಟ್ಟಿನಲ್ಲಂತೂ ಎಂದಿನ ಗಿಜಿಗಿಜಿ ಸದ್ದು. ಈಗಲೇ ಹೀಗಾದರೆ ಇನ್ನು ಆಯುಧಪೂಜೆಯ ಹಿಂದಿನ ದಿನ ಇಲ್ಲಿ ಕಾಲಿಡಲು ಜಾಗವಿರುವುದಿಲ್ಲ. ಈಗಾಗಲೇ ಬಹುತೇಕ ಹೋಟೆಲ್ಲುಗಳು ಬುಕ್ ಆಗಿಹೋಗಿವೆ. ಟಾಂಗಾವಾಲಗಳಿಗಂತೂ ಇಂಥ ಸಮಯ ಬಿಟ್ಟರೆ ಸಿಗದು.

ಮಧ್ಯಾಹ್ನ ಬಿಸಿಲು ಕಡಿಮೆಯಾಗುತ್ತಿದ್ದಂತೆ ರಸ್ತೆಯ ಸಾಲುದೀಪಗಳು ಹೊತ್ತಿಕೊಳ್ಳುತ್ತವೆ. ಎಲ್ಲ ಸರಿಯಿದೆಯಾ ಅಂತ ಇನ್ನೊಮ್ಮೆ ಪರೀಕ್ಷಿಸುವ ಕಾರ್ಯ ನಡೆಯುತ್ತದೆ. ಈ ಸಲವಂತೂ ಈ ದೀಪಸಿಂಗಾರಕ್ಕೆ ಕೋಟಿಗಟ್ಟಲೆ ಖರ್ಚು ಮಾಡಲಾಗಿದೆ. ಅರಮನೆ ಅಂಗಳದಿಂದ ಹಿಡಿದು ಬನ್ನಿಮಂಟಪದ ವರೆಗೆ ಸಾಲಾಗಿ ದೀಪ ಜೋಡಿಸಲಾಗಿದೆ. ಸಂಜೆಯಾಗುತ್ತಲೇ ಅವು ತಮ್ಮೆಲ್ಲ ಶಕ್ತಿ ಮೀರುತ್ತಾ ಬೆಳಕು ಚೆಲ್ಲುತ್ತಾ ನಿಲ್ಲುತ್ತಿವೆ. ಸಿಟಿ ಬಸ್ ಸ್ಟಾಂಡಿನ ಪಕ್ಕದ ವನದಲ್ಲಿ, ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆಗಳ ಏರಿಗಳಲ್ಲಿ ರಾಶಿ ಹೂವುಗಳು ಅರಳಿ ನಿಂತಿವೆ.  ಅತ್ತ ಚಾಮುಂಡಿ ಬೆಟ್ಟದಲ್ಲೂ ಇದೇ ಖುಷಿ.

ಇಷ್ಟು ವರ್ಷ ಬರೀ ಕನ್ನಡದ ಭಾವುಟ, ಗಂಡಭೇರುಂಡದ ಭಾವುಟಗಳಷ್ಟನ್ನೇ ನೋಡುತ್ತಿದ್ದೆ. ಈ ಸಲ ಬಣ್ಣಬಣ್ಣದ ತರಾವರಿ ಭಾವುಟಗಳು ಎಲ್ಲೆಂದರಲ್ಲಿ ಸರ್ಕಲ್ಲುಗಳಲ್ಲಿ ನೆಟ್ಟಗೆ ನಿಂತಿವೆ. ಇದೇನು ಸ್ವಾಗತದ ಹೊಸ ವಿಧಾನವೋ ಇಲ್ಲ ಖಾಸಗೀಕರಣದ ಸಂಕೇತವೋ… ಇರಲಿ.

ವಸ್ತು ಪ್ರದರ್ಶನ ಕೂಡ ಸಿದ್ಧಗೊಂಡಿದೆ. ಅದರ ಆವರಣದಲ್ಲೇ ನಾನಾ ಸಾಹಸ ಕ್ರೀಡೆಗಳ ಏರ್ಪಾಟು ಆಗಿದೆ. ಕತ್ತಲಾಗುತ್ತಲೇ ಇಲ್ಲಿನ ಟೌನ್ ಹಾಲ್ , ಜನನ್ಮೋಹನ ಅರಮನೆ, ಅರಮನೆಯ ಮುಂಭಾಗ ಮುಂತಾದ ಕಡೆ ನಾನಾ ಕಾರ್ಯಕ್ರಮಗಳು ನಡೆಯುತ್ತವೆ. ಅತ್ತ ನಮ್ಮ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಅರ್ಥಾತ್ ನಮ್ಮಂಥ ಪಡ್ಡೆ ಐಕಳ ಸಂಭ್ರಮ. ಮೊದಲೆಲ್ಲ ಗಂಗೋತ್ರಿಯ ಓಪನ್ ಏರ್ ಥಿಯೇಟರಿನಲ್ಲಿ ನಡೆಯುತ್ತಿದ್ದ ಕಳೆದೆರಡು ವರ್ಷದಿಂದ ಇಲ್ಲಿ ನಡೆಯುತ್ತಿದೆ. ಈ ಸಲ ಕೈಲಾಸ್ ಖೇರ್ , ಶಂಕರ್ ಮಹದೇವನ್ ರ ಗಾನಸುಧೆಯಿಂದ ಹಿಡಿದು ಶಿವಮಣಿ -ಪ್ರವೀಣ್ ಗೋಡ್ಕಿಂಡಿ ಜುಗಲ್ ಬಂದಿಯೂ ಇದೆಯಂತೆ. ಒಂದು ದಿನವಾದರೂ ಹೋಗಬೇಕು. ಯಾರು ಬರಲಿ ಬಿಡಲಿ ನಮ್ಮ ಮಹಾರಾಜ ಕಾಲೇಜು- ಹಾಸ್ಟೆಲ್ಲಿನ ಹುಡುಗರು ತಪ್ಪದೇ ಬರುತ್ತಾರೆ. ಏಕೆಂದರೆ… ಅಲ್ಲಿಗೆ ಮಸ್ತ್ ಹುಡ್ಗೀರು ಬರ್ತಾರೆ.

ಇನ್ನು ನಮ್ಮ ರಂಗಾಯಣ- ಕಲಾಮಂದಿರಗಳು ಹೇಗೆ ಸಿಂಗರಿಸಿಕೊಂಡಿವೆಯೋ ಎನೋ? ತಿಂಗಳಾಯಿತು ಅತ್ತ ಹೋಗಿ. ಅಲ್ಲಿ ಒಂದಿಷ್ಟು ಹೊತ್ತು ಕೂತು ಟೀ ಹೀರುವುದೇ ಒಂದು ಖುಷಿ. ಈ ಬಾರಿ ಒಂದೆರಡು ನಾಟಕವಾದರೂ ನೋಡಬೇಕು.

ಇತಿಹಾಸದ ಪುಸ್ತಕಗಳಲ್ಲಿ ಹಬ್ಬಹರಿದಿನಗಳ ಆಚರಣೆ ಬಗ್ಗೆ ಓದಿದ್ದು ಉಂಟು. ವಿಜಯನಗರದಲ್ಲೂ ದಸರಾ ಆಚರಿಸುತ್ತಿದ್ದರಂತೆ. ಅದೂ ಹೀಗೆ ಇರಬಹುದಾ? ಗೊತ್ತಿಲ್ಲ. ಸ್ವರೂಪಗಳು ಏನೇ ಬದಲಾಗಿದ್ದರೂ ಆಚರಣೆ ಮತ್ತದರ ಸಂಭ್ರಮ ಮಾತ್ರ ಬದಲಾಗಿಲ್ಲ ಅನಿಸುತ್ತಿದೆ.

ಕಳೆದ ಬಾರಿ ಅಂಬಾರಿ ನೋಡಲು ಕೆ ಆರ್ ವೃತ್ತದಲ್ಲಿ ನಿಂತಿದ್ದೆ. ಅಂಬಾರಿ ಆನೆ ಹೊರಬರುವ ಹೊತ್ತಿಗೆ ಮೈಯೆಲ್ಲ ಬೆವರಿನಲ್ಲಿ ಅದ್ದಿಹೋಗಿತ್ತು. ಅಷ್ಟು ನೂಕುನುಗ್ಗಲು. ಈ ಬಾರಿ ನನ್ನ ದುರಾದೃಷ್ಟಕ್ಕೆಂಬಂತೆ ಬಲಗಾಲು ಸ್ವಲ್ಪ ಮುರಿದು ಊದಿಕೊಂಡಿದೆ. ಸದ್ಯ ಕುಂಟುತ್ತಲೇ ನಡೆಯುತ್ತಿದ್ದೇನೆ. ಡಾಕ್ಟರ್  ಮಾತ್ರ ಏನೂ ಆಗೋದಿಲ್ಲ ಬಿಡಯ್ಯ ಅಂತ ಧೈರ್ಯ ತುಂಬಿದ್ದಾರೆ. ಏನಾಗುವುದೋ ಕಾದು ನೋಡಬೇಕು.

(ಪೋಸ್ಟರ್ ಚಿತ್ರ- ಪ್ರವೀಣ್ ಬಣಗಿ)

Entry filed under: ಕಂಡಿದ್ದು-ಕೇಳಿದ್ದು.

ನಿಮ್ಮ ಸಹಾಯ-ಸಲಹೆ ಬೇಕಿದೆ ಜೋಕೆ ಜಾಣೆ ಇದು ಜಾಹಿರಾ…ಥೂ!

1 ಟಿಪ್ಪಣಿ Add your own

 • 1. sushmasindhu  |  ಅಕ್ಟೋಬರ್ 6, 2008 ರಲ್ಲಿ 8:44 ಫೂರ್ವಾಹ್ನ

  ಚೆ೦ದದ ಬರಹ. ಎಲ್ಲಿಂದಲೋ ಬಂದು ಸ೦ಭ್ರಮವನ್ನು ಕಣ್ತು೦ಬಿಕೊ೦ಡು ಹೋಗೋದಕ್ಕೂ .ದಿನವೂ ಓಡಾಡ್ತಾ ನೋಡೋ ಜಾಗ ದಸರೆಯ ಸ೦ದರ್ಭದಲ್ಲಿ ಸಿಂಗರಿಸಿಕೊಳ್ಳೋದನ್ನು ನೋಡಿ ಆನ೦ದಿಸೋದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಅಂತ ಅನ್ನಿಸಿತು.
  ~ಸುಷ್ಮ ಸಿಂಧು
  visit my blog,
  http://kandenanondhukanasu.blogspot.com/

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Trackback this post  |  Subscribe to the comments via RSS Feed


ಕಾಲಮಾನ

ಅಕ್ಟೋಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12345
6789101112
13141516171819
20212223242526
2728293031  

ಮುಗಿಲು ಮುಟ್ಟಿದವರು

 • 9,243 hits

ಪಕ್ಷಿ ನೋಟ

Feeds


%d bloggers like this: